ಶಾಸಕ ಹರೀಶ್ ಪೂಂಜ ವಿರುದ್ಧ ಎಫ್‍ಐಆರ್ | ಜನಪ್ರತಿನಿಧಿಗಳಿಗೆ ರಕ್ಷಣೆ ಇಲ್ಲದ ಸ್ಥಿತಿ : ವಿಜಯೇಂದ್ರ

ಬೆಂಗಳೂರು: ‘ಪೊಲೀಸರ ನಡೆ, ರಾಜ್ಯ ಸರಕಾರದ ಧೋರಣೆ ಇದೇ ರೀತಿ ಮುಂದುವರೆದರೆ ಬಿಜೆಪಿಯ ಜನಪರವಾದ ಹೋರಾಟ ಮತ್ತಷ್ಟು ತೀವ್ರ ಸ್ವರೂಪ ಪಡೆಯಲಿದೆ’ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಇಂದಿಲ್ಲಿ ಎಚ್ಚರಿಕೆ ನೀಡಿದ್ದಾರೆ.
ಸೋಮವಾರ ಎಕ್ಸ್ ನಲ್ಲಿ ಪೋಸ್ಟ್ ಹಾಕಿರುವ ಅವರು, ನಾಡಿನ ಕರಾವಳಿ ಪ್ರದೇಶದಲ್ಲಿ ಹಿಂದೂಗಳಿಗೆ ಆತಂಕ, ದುಗುಡ ತಪ್ಪುತ್ತಿಲ್ಲ. ಮಂಗಳೂರಿನ ಸುಹಾಸ್ ಶೆಟ್ಟಿ ಕಗ್ಗೊಲೆಯ ಪ್ರಕರಣ ದಕ್ಷಿಣ ಕನ್ನಡ ಜಿಲ್ಲೆಯ ಜನತೆಯನ್ನು ದಿಗ್ಭ್ರಮೆಗೊಳಿಸಿದೆ, ರಾಜ್ಯದ ಜನರು ಮತೀಯ ಶಕ್ತಿಗಳ ಅಟ್ಟಹಾಸದಿಂದ ಆತಂಕದಲ್ಲಿದ್ದಾರೆ. ಇದರ ನಡುವೆಯೇ ಮತ್ತೊಬ್ಬ ಕಾರ್ಯಕರ್ತ ಭರತ್ ಕುಮ್ಡೇಲು ಅವರಿಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮೂಲಕ ಜೀವ ಬೆದರಿಕೆ ಹಾಕಿದ್ದಾರೆ’ ಎಂದು ಉಲ್ಲೇಖಿಸಿದ್ದಾರೆ.
‘ಕಾಂಗ್ರೆಸ್ ಸರಕಾರ ಮಾತ್ರ ತನ್ನ ನೈತಿಕ ಜವಾಬ್ದಾರಿಯನ್ನು ಮರೆತು ವರ್ತಿಸುತ್ತಿದೆ. ಕಾನೂನು ಸುವ್ಯವಸ್ಥೆಯನ್ನು ಹತೋಟಿಗೆ ತೆಗೆದುಕೊಳ್ಳಲು ಯಾವುದೇ ಕಾನೂನು ಕ್ರಮಕ್ಕೆ ಮುಂದಾಗುತ್ತಿಲ್ಲ, ಗೃಹ ಇಲಾಖೆ ಸಂಪೂರ್ಣ ನಿಷ್ಕ್ರಿಯವಾಗುವಂತೆ ಕಾಣದ ಪ್ರಭಾವಿ ‘ಕೈ'ಗಳು ಕೆಲಸ ಮಾಡುತ್ತಿರುವುದು ಸುಹಾಸ್ ಕೊಲೆ ಹಾಗೂ ನಂತರದ ಬೆದರಿಕೆಗಳ ಪ್ರಕರಣಗಳಿಂದ ಸ್ಪಷ್ಟವಾಗುತ್ತಿದೆ’ ಎಂದು ಬಿಜಯೇಂದ್ರ ದೂರಿದ್ದಾರೆ.
‘ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಅವರು ತೆಕ್ಕಾರು ಗೋಪಾಲಕೃಷ್ಣ ದೇವಸ್ಥಾನ ಹಾಗೂ ಬ್ರಹ್ಮ ಕಲಶೋತ್ಸವದ ಕುರಿತು ಭಾವುಕವಾಗಿ ಮಾತನಾಡಿರುವುದನ್ನೇ ಆಧರಿಸಿ ನೀಡಲಾಗಿರುವ ದೂರಿಗೆ ಎಫ್‍ಐಆರ್ ದಾಖಲಿಸಲಾಗಿದೆ, ಈ ಮೂಲಕ ಸರಕಾರ ಯಾರ ಪರ ಇದೆ ಎನ್ನುವುದು ಸ್ಪಷ್ಟವಾಗುತ್ತಿದೆ. ಕರಾವಳಿ ಪ್ರದೇಶದಲ್ಲಿ ಜನಪ್ರತಿನಿಧಿಗಳಿಗೇ ರಕ್ಷಣೆ ಇಲ್ಲದ ಸ್ಥಿತಿ ನಿರ್ಮಾಣವಾಗುತ್ತಿದೆ ಎಂದು ವಿಜಯೇಂದ್ರ ವಾಗ್ದಾಳಿ ನಡೆಸಿದ್ದಾರೆ.
"ನಾಡಿನ ಕರಾವಳಿ ಪ್ರದೇಶದಲ್ಲಿ ಹಿಂದೂಗಳಿಗೆ ಆತಂಕ, ದುಗುಡ ತಪ್ಪುತ್ತಿಲ್ಲ"
— Vijayendra Yediyurappa (@BYVijayendra) May 5, 2025
ಮಂಗಳೂರಿನ ನಮ್ಮ ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಕಗ್ಗೊಲೆಯ ಪ್ರಕರಣ ದಕ್ಷಿಣ ಕನ್ನಡ ಜಿಲ್ಲೆಯ ಜನತೆಯನ್ನು ದಿಗ್ಭ್ರಮೆಗೊಳಿಸಿದೆ, ರಾಜ್ಯದ ಜನರು ಮತೀಯ ಶಕ್ತಿಗಳ ಅಟ್ಟಹಾಸದಿಂದ ಆತಂಕದಲ್ಲಿದ್ದಾರೆ. ಇದರ ನಡುವೆಯೇ ಮತ್ತೊಬ್ಬ ಹಿಂದೂ ಕಾರ್ಯಕರ್ತ ಭರತ್ ಕುಮ್ಡೇಲು… pic.twitter.com/nXBozWUQiN







