ಅಧಿವೇಶನದಲ್ಲಿ ರೈತರ ಸಂಕಷ್ಟ ಸೇರಿ ಉತ್ತರ ಕರ್ನಾಟಕದ ಸಮಸ್ಯೆ ಚರ್ಚಿಸಿ : ವಿಜಯೇಂದ್ರ

ವಿಜಯೇಂದ್ರ
ಬೆಂಗಳೂರು : ಅಧಿವೇಶನದಲ್ಲಿ ರಾಜ್ಯದ ಜ್ವಲಂತ ಸಮಸ್ಯೆಗಳ ಕುರಿತು ಸಮಗ್ರವಾಗಿ ಚರ್ಚಿಸಬೇಕು. ಸರಕಾರದ ವೈಫಲ್ಯಗಳನ್ನು ಗಮನ ಸೆಳೆಯಬೇಕು, ವಿಶೇಷವಾಗಿ ಉತ್ತರ ಕರ್ನಾಟಕದ ಸಮಸ್ಯೆ, ರೈತರ ಸಂಕಷ್ಟ, ನೀರಾವರಿ ಸಮಸ್ಯೆ ಬಗ್ಗೆ ಚರ್ಚಿಸಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆಗ್ರಹಿಸಿದ್ದಾರೆ.
ಶನಿವಾರ ಬಿಜೆಪಿ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಬೆಳಗಾವಿಯ ಚಳಿಗಾಲದ ಅಧಿವೇಶನದ ಕುರಿತು ನಾನು, ವಿಪಕ್ಷ ನಾಯಕರು, ಬಿಜೆಪಿ-ಜೆಡಿಎಸ್ ಮುಖಂಡರು ಒಟ್ಟಿಗೆ ಕೂತು ಸವಿಸ್ತಾರವಾಗಿ ಚರ್ಚಿಸಿದ್ದೇವೆ. ಪ್ರತಿಬಾರಿ ಬೆಳಗಾವಿ ಅಧಿವೇಶನದಲ್ಲಿ ನಾಮಕಾವಾಸ್ತೆ ಒಂದು ದಿನ ಚರ್ಚೆ ನಡೆಯುತ್ತಿದೆ. ಹಿಂದೆ ಯಡಿಯೂರಪ್ಪ ಸಿಎಂ ಆಗಿದ್ದಾಗ ಬೆಳಗಾವಿಯಲ್ಲಿ ಸುವರ್ಣಸೌಧ ನಿರ್ಮಿಸಿದ್ದು, ಅಲ್ಲಿನ ಸಮಸ್ಯೆಗಳಿಗೆ ಉತ್ತರ ಕಂಡುಕೊಳ್ಳಬೇಕೆಂಬ ಆಶಯ ಅವರದಾಗಿತ್ತು. ಆದು ಆಗುತ್ತಿಲ್ಲ ಎಂದು ಟೀಕಿಸಿದರು.
ಸುವರ್ಣಸೌಧಕ್ಕೆ ಮುತ್ತಿಗೆ: ಡಿ.9ರಂದು ಸುಮಾರು 15ರಿಂದ 20 ಸಾವಿರ ರೈತರ ಜೊತೆ ಸುವರ್ಣಸೌಧಕ್ಕೆ ಮುತ್ತಿಗೆ ಹಾಕಲು ಬಿಜೆಪಿ ತೀರ್ಮಾನಿಸಿದೆ. ರೈತ ವಿರೋಧಿ ಕಾಂಗ್ರೆಸ್ ಸರಕಾರವನ್ನು ಬಡಿದೆಬ್ಬಿಸಲು ಮುಂದಾಗುತ್ತೇವೆ. ನಂತರ ಸದನದಲ್ಲೂ ಚರ್ಚಿಸುತ್ತೇವೆ. ತುಂಗಭದ್ರಾ ಜಲಾಶಯ ವ್ಯಾಪ್ತಿಯಲ್ಲಿನ ರೈತರಿಗೆ ಎಕರೆಗೆ 25ಸಾವಿರ ರೂ. ಪರಿಹಾರ ನೀಡಬೇಕು ಎಂದು ಅವರು ಆಗ್ರಹಿಸಿದರು.
ಕ್ಲೀನ್ಚಿಟ್ ಕೊಟ್ಟುಕೊಳ್ಳುವಿರಾ?: ಸಿಎಂ ಸಿದ್ದರಾಮಯ್ಯ ಭ್ರಷ್ಟಾಚಾರದ ವಿಚಾರದಲ್ಲಿ ತಮ್ಮ ಸರಕಾರಕ್ಕೆ ಕ್ಲೀನ್ಚಿಟ್ ನೀಡುವ ಕೆಲಸ ಮಾಡಿದ್ದಾರೆ. ಬಿಜೆಪಿ ಸರಕಾರ ಇದ್ದಾಗ ಶೇ.40ರಷ್ಟು ಭ್ರಷ್ಟಾಚಾರದ ಆರೋಪ ಮಾಡಿದ್ದರು. ಕಾಂಗ್ರೆಸ್ ಸರಕಾರವೇ ರಚಿಸಿದ ತನಿಖಾ ಆಯೋಗ ಬಳಿಕ ಕ್ಲೀನ್ಚಿಟ್ ಕೊಟ್ಟಿದೆ. ನೀವು ಭ್ರಷ್ಟಾಚಾರದ ವಿಚಾರದಲ್ಲಿ ಸರಕಾರಕ್ಕೆ ಕ್ಲೀನ್ಚಿಟ್ ಕೊಟ್ಟುಕೊಳ್ಳುವಿರಾ? ಎಂದು ಅವರು ಪ್ರಶ್ನಿಸಿದರು.







