‘ಮಳೆ ಕೊರತೆ’ ರೈತರ ಸಂಕಷ್ಟಕ್ಕೆ ಸ್ಪಂದಿಸಲು ವಿಜಯೇಂದ್ರ ಆಗ್ರಹ

ಬೆಂಗಳೂರು : ರಾಜ್ಯದ ವಿವಿಧ ಭಾಗದಲ್ಲಿ ಮಳೆಯ ತೀವ್ರ ಕೊರತೆ ಎದುರಾಗಿದೆ. ಇದರಿಂದ ಅನ್ನದಾತರು ತೊಂದರೆಗೆ ಸಿಲುಕಿದ್ದಾರೆ. ರೈತರ ಸಂಕಷ್ಟಕ್ಕೆ ಸ್ಪಂದಿಸಬೇಕಾದ ಮಹತ್ವದ ಜವಾಬ್ದಾರಿ ಸರಕಾರದ ಮೇಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದ್ದಾರೆ.
ಬುಧವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ರೈತರ ಸಾಲಮನ್ನಾ ಕುರಿತ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿಕೆಯನ್ನು ಗಮನಿಸಿದ್ದೇನೆ. ರೈತರಿಗೆ ಈ ಸರಕಾರ ಪ್ರಾಮಾಣಿಕವಾಗಿ ಸ್ಪಂದಿಸುತ್ತದೋ ಇಲ್ಲವೋ ಎಂಬುದನ್ನು ನೋಡುತ್ತೇವೆ. ಈ ಬಗ್ಗೆ ಸದನದಲ್ಲಿ ಚರ್ಚೆ ಮಾಡುತ್ತೇವೆ ಎಂದರು.
ಮುಖ್ಯಮಂತ್ರಿ ಸಾಲಮನ್ನಾದ ಹೇಳಿಕೆ ನೀಡಿ ಮೊಸಳೆ ಕಣ್ಣೀರು ಹಾಕುತ್ತಾರೋ ಇಲ್ಲವೇ ನಿಜವಾಗಿ ರೈತರಿಗೆ ನೆರವಿಗೆ ಮುಂದಾಗುತ್ತಾರೋ ನೋಡಬೇಕು. ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ಮೂರು ವರ್ಷದಲ್ಲಿ ರೈತರ ಸಂಕಷ್ಟಕ್ಕೆ ಮಿಡಿಯಲಿಲ್ಲ. ಬರ ಬಂದಾಗ ಸೂಕ್ತ ಪರಿಹಾರ ನೀಡಿಲ್ಲ. ಎಲ್ಲಕ್ಕೂ ಕೇಂದ್ರ ಸರಕಾರವನ್ನು ದೂರುವುದು ಬಿಟ್ಟರೆ ಬೇರೆ ಏನೂ ಮಾಡಲಿಲ್ಲ ಎಂದರು.
ಅಡ್ಡಮತದಾನ ವರಿಷ್ಠರ ಗಮನಕ್ಕೆ: ವಿಧಾನ ಪರಿಷತ್ ಚುನಾವಣೆಯಲ್ಲಿ ನಡೆದ ಅಡ್ಡ ಮತದಾನದ ಬಗ್ಗೆ ಈಗಾಗಲೇ ಕೇಂದ್ರದ ವರಿಷ್ಠರ ಗಮನಕ್ಕೆ ತಂದಿದ್ದೇವೆ. ಅವರು ಸೂಕ್ತ ಸಂದರ್ಭದಲ್ಲಿ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ಅವರು ತಿಳಿಸಿದರು.
ಆಯೋಗದ ಮೇಲೆ ವಿಶ್ವಾಸ ಇಡಲಿ: ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ (ಎಸ್‍ಐಆರ್) ಅನ್ನು ಕೇಂದ್ರ ಸರಕಾರ ನಡೆಸುತ್ತಿಲ್ಲ. ಚುನಾವಣಾ ಆಯೋಗ ನಡೆಸುತ್ತಿದೆ. ರಾಜ್ಯ ಸರಕಾರಕ್ಕೆ ಮರ್ಯಾದೆ ಇದ್ದರೆ ಸಾಂವಿಧಾನಿಕ ಸಂಸ್ಥೆಯಾದ ಚುನಾವಣಾ ಆಯೋಗದ ಮೇಲೆ ವಿಶ್ವಾಸ ಇಟ್ಟು ಎಸ್‍ಐಆರ್‍ಗೆ ಸಹಕಾರ ನೀಡಲಿ ಎಂದು ಅವರು ಆಗ್ರಹಿಸಿದರು.






