ಬಿಡದಿ ಟೌನ್‍ಶಿಪ್ ವಿರೋಧಿಸಿ ಪಾದಯಾತ್ರೆ | ಬಿಜೆಪಿ-ಜೆಡಿಎಸ್ ನಡುವೆ ಗೊಂದಲ ಇಲ್ಲ : ವಿಜಯೇಂದ್ರ

ಬೆಂಗಳೂರು : ‘ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಮನೆ ಗೇಟ್ ಕಾಯುವ ಬದಲಾಗಿ ಸಚಿವರಿಗೆ ಕೂಡಲೇ ಖಾತೆ ಕೊಡುವ ಕುರಿತು ತೀರ್ಮಾನ ಮಾಡಲಿ’ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಸಲಹೆ ನೀಡಿದ್ದಾರೆ.
ಸೋಮವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಸಿಎಂ ಡಿ.ಕೆ.ಶಿವಕುಮಾರ್ ದಿಲ್ಲಿಗೆ ಹೋಗಿ ರಾಜ್ಯಕ್ಕೆ ದ್ರೋಹ ಬಗೆಯುತ್ತಿದ್ದಾರೆ. ರಾಜ್ಯದಲ್ಲಿ ಭೀಕರ ಬರ ಆವರಿಸಿದೆ, ಮತ್ತೊಂದೆಡೆ ನೆರೆ ಹಾವಳಿಯೂ ಇದೆ. ಇಂತಹ ಸಂದರ್ಭದಲ್ಲಿ ಕೃಷಿ, ತೋಟಗಾರಿಕೆ ಸಚಿವರು ಯಾರೆಂದು ಗೊತ್ತಿಲ್ಲ. ಕಂದಾಯ ಸಚಿವರು ಕಾಣುತ್ತಿಲ್ಲ. ಇನ್ನೂ ಕೆಲವರು ಖಾತೆ ರಹಿತ ಸಚಿವರು ಜಿಲ್ಲಾ ಪ್ರವಾಸ ಮಾಡಿದರೆ ಅದರಿಂದ ಪರಿಹಾರ ಸಿಗಲು ಸಾಧ್ಯವಿಲ್ಲ ಎಂದು ಟೀಕಿಸಿದರು.
ಬಿಡದಿ ಟೌನ್‍ಶಿಪ್ ವಿರೋಧಿಸಿ ಪಾದಯಾತ್ರೆ ವಿಷಯದಲ್ಲಿ ಬಿಜೆಪಿ-ಜೆಡಿಎಸ್ ನಡುವೆ ಗೊಂದಲ ಇಲ್ಲ. ಬಿಜೆಪಿ ಈ ಪಾದಯಾತ್ರೆಗೆ ಸಾಂಕೇತಿಕವಾಗಿ ಬೆಂಬಲ ನೀಡಿದ್ದೇವೆ. ನಮ್ಮ ಪಕ್ಷದಿಂದ ವಿಪಕ್ಷ ನಾಯಕ ಆರ್. ಅಶೋಕ್ ಪಾಲ್ಗೊಂಡಿದ್ದಾರೆ. ನಾವು ರೈತರ ಪರವಾಗಿದ್ದು, ಸದನದಲ್ಲೂ ಹೋರಾಟ ನಡೆಸಲಿದ್ದೇವೆ ಎಂದು ತಿಳಿಸಿದರು.
ಬಿಡದಿ ವಿಚಾರ, ವಿಮಾನ ನಿಲ್ದಾಣದ ವಿಷಯದಲ್ಲಿ ರೈತರ ಸಮಸ್ಯೆಗಳು ಬಂದಾಗ ಬಿಜೆಪಿ ರೈತರ ಪರವಾಗಿ ಇರುತ್ತದೆ. ವಾಲ್ಮೀಕಿ ನಿಗಮದ ನೂರಾರು ಕೋಟಿ ರೂ.ಭ್ರಷ್ಟಾಚಾರದ ಆರೋಪಕ್ಕೆ ಸಿಲುಕಿದ್ದ ವ್ಯಕ್ತಿಯನ್ನು ಸಿಎಂ ಸಂಪುಟಕ್ಕೆ ಸೇರ್ಪಡೆ ಮಾಡಿಕೊಂಡಿದ್ದು, ಅಂತಹ ಒತ್ತಡ ಏನಿತ್ತು. ನಾಗೇಂದ್ರ ಕಾಂಗ್ರೆಸ್ ಹೈಕಮಾಂಡನ್ನೂ ಬ್ಲ್ಯಾಕ್‍ಮೇಲ್ ಮಾಡಿದ್ದಾರೆ ಎಂಬ ಚರ್ಚೆ ನಡೆಯುತ್ತಿದೆ ಎಂದು ಅವರು ದೂರಿದರು.






