ವಾರಕ್ಕೆ ಎರಡು ದಿನ ಗ್ರಾಮಗಳಿಗೆ ದಿಢೀರ್ ಭೇಟಿ ನೀಡಿ ಸಮಸ್ಯೆ ಬಗೆಹರಿಸಿ: ಜಿಪಂ ಸಿಇಒಗಳಿಗೆ ಸಚಿವ ಈಶ್ವರ್ ಖಂಡ್ರೆ ನಿರ್ದೇಶನ

ಈಶ್ವರ್ ಖಂಡ್ರೆ
ಬೆಂಗಳೂರು, ಸೆ.7: ರಾಜ್ಯದ ಎಲ್ಲ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು (ಸಿಇಒ) ವಾರದಲ್ಲಿ ಕನಿಷ್ಠ ಎರಡು ದಿನ ನಾಲ್ಕರಿಂದ ಐದು ಗ್ರಾಮಗಳಿಗೆ ಪೂರ್ವ ಸೂಚನೆ ನೀಡದೆ ದಿಢೀರ್ ಭೇಟಿ ನೀಡಿ ಅಭಿವೃದ್ಧಿ ಕಾಮಗಾರಿಗಳು ಹಾಗೂ ಸಾರ್ವಜನಿಕ ಸಮಸ್ಯೆಗಳನ್ನು ಖುದ್ದಾಗಿ ಪರಿಶೀಲಿಸಬೇಕು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ್ ಬಿ.ಖಂಡ್ರೆ ಸೂಚನೆ ನೀಡಿದ್ದಾರೆ.
ಈ ಸಂಬಂಧ ಇಲಾಖೆಯ ಕಾರ್ಯದರ್ಶಿಗೆ ಲಿಖಿತ ನಿರ್ದೇಶನ ನೀಡಿರುವ ಸಚಿವರು, ಸಿಇಒಗಳು ಗ್ರಾಮ ಪಂಚಾಯಿತಿಗಳಿಗೆ ಮುಂಚಿತ ಮಾಹಿತಿ ನೀಡದೆ ಭೇಟಿ ನೀಡಿ ಸಿಬ್ಬಂದಿಯ ಹಾಜರಾತಿ, ಪಿಡಿಒ ಹಾಗೂ ತಾಲೂಕು ಕಾರ್ಯನಿರ್ವಹಣಾಧಿಕಾರಿಗಳ ಕಾರ್ಯವೈಖರಿಯನ್ನು ಪರಿಶೀಲಿಸಬೇಕು. ಜೊತೆಗೆ ಗ್ರಾಮಸ್ಥರ ಅಹವಾಲುಗಳನ್ನು ಆಲಿಸಿ ಸಾಧ್ಯವಾದಷ್ಟು ಸಮಸ್ಯೆಗಳನ್ನು ಸ್ಥಳದಲ್ಲೇ ಪರಿಹರಿಸಬೇಕು ಎಂದು ತಿಳಿಸಿದ್ದಾರೆ.
ಗ್ರಾಮೀಣ ಅಭಿವೃದ್ಧಿಗೆ ಹೆಚ್ಚಿನ ಒತ್ತು :
ರಾಜ್ಯದಲ್ಲಿ 31 ಜಿಲ್ಲೆಗಳಲ್ಲಿ 5,900ಕ್ಕೂ ಹೆಚ್ಚು ಗ್ರಾಮ ಪಂಚಾಯಿತಿಗಳು ಮತ್ತು 26,589 ಹಳ್ಳಿಗಳಿದ್ದು, ಸುಮಾರು 4.45 ಕೋಟಿ ಜನರು ಗ್ರಾಮೀಣ ಪ್ರದೇಶಗಳಲ್ಲಿ ವಾಸಿಸುತ್ತಿದ್ದಾರೆ. ಹೀಗಾಗಿ ಗ್ರಾಮೀಣ ಅಭಿವೃದ್ಧಿಗೆ ಜಿಲ್ಲಾ ಪಂಚಾಯಿತಿಗಳು ಹೆಚ್ಚಿನ ಆದ್ಯತೆ ನೀಡಬೇಕು ಎಂದು ಸಚಿವರು ಹೇಳಿದ್ದಾರೆ.
ಗ್ರಾಮಗಳಲ್ಲಿ ಶುದ್ಧ ಕುಡಿಯುವ ನೀರು, ಉತ್ತಮ ರಸ್ತೆ, ನೈರ್ಮಲ್ಯ ಹಾಗೂ ವಿಬಿಜಿ ರಾಮ್ ಜಿ ಯೋಜನೆಯಡಿ ಸ್ಥಳೀಯ ಉದ್ಯೋಗ ಸೃಷ್ಟಿಗೆ ಒತ್ತು ನೀಡಿದರೆ ನಗರಗಳಿಗೆ ವಲಸೆ ಹೋಗುವಿಕೆ ಕಡಿಮೆಯಾಗುವುದರ ಜೊತೆಗೆ ಗ್ರಾಮಗಳ ಅಭಿವೃದ್ಧಿಗೂ ಉತ್ತೇಜನ ಸಿಗಲಿದೆ ಎಂದು ತಿಳಿಸಿದ್ದಾರೆ.
ಪ್ರಮುಖ ಯೋಜನೆಗಳ ಅನುಷ್ಠಾನ ಪರಿಶೀಲನೆ :
ಜಲ ಜೀವನ ಮಿಷನ್, ವಿಬಿಜಿ ರಾಮ್ ಜಿ, ಪ್ರಧಾನಮಂತ್ರಿ ಗ್ರಾಮೀಣ ವಸತಿ ಯೋಜನೆ, ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆ ಹಾಗೂ ಮುಖ್ಯಮಂತ್ರಿಗಳ ರಸ್ತೆ ಯೋಜನೆ ಸೇರಿದಂತೆ ವಿವಿಧ ಯೋಜನೆಗಳು ಸಮರ್ಪಕವಾಗಿ ಜಾರಿಯಾಗುತ್ತಿವೆಯೇ ಎಂಬುದನ್ನು ಸಿಇಒಗಳು ನಿಯಮಿತವಾಗಿ ಪರಿಶೀಲಿಸಬೇಕು ಎಂದು ನಿರ್ದೇಶನ ನೀಡಲಾಗಿದೆ.
ಕೆರೆಗಳ ಒತ್ತುವರಿ ತೆರವು, ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸ್ವಚ್ಛತೆ ಹಾಗೂ ಹಸಿ-ಒಣ ತ್ಯಾಜ್ಯ ನಿರ್ವಹಣೆಯ ಸ್ಥಿತಿಯನ್ನೂ ಪರಿಶೀಲಿಸಿದರೆ ಅಭಿವೃದ್ಧಿ ಕಾಮಗಾರಿಗಳಿಗೆ ಮತ್ತಷ್ಟು ವೇಗ ಸಿಗಲಿದೆ ಎಂದು ಸಚಿವ ಈಶ್ವರ ಖಂಡ್ರೆ ಅಭಿಪ್ರಾಯಪಟ್ಟಿದ್ದಾರೆ.






