ಆಗ್ನೇಯ ಪದವೀಧರರ ಕ್ಷೇತ್ರ; ತುಮಕೂರು ಜಿಲ್ಲೆಯಲ್ಲಿ ಶೇ.71.56 ಮತದಾನ

ತುಮಕೂರು : ಜಿಲ್ಲೆಯಲ್ಲಿ ಶುಕ್ರವಾರ ನಡೆದ ಕರ್ನಾಟಕ ವಿಧಾನ ಪರಿಷತ್‌ನ ಕರ್ನಾಟಕ ಆಗ್ನೇಯ ಪದವೀಧರರ ಕ್ಷೇತ್ರದ ದ್ವೈವಾರ್ಷಿಕ ಚುನಾವಣೆಯಲ್ಲಿ ಶೇ.71.56ರಷ್ಟು ಮತದಾನವಾಗಿದೆ ಎಂದು ಸಹಾಯಕ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತಿಳಿಸಿದ್ದಾರೆ.
ಕರ್ನಾಟಕ ಆಗ್ನೇಯ ಪದವೀಧರರ ಕ್ಷೇತ್ರದ ದ್ವೈವಾರ್ಷಿಕ ಚುನಾವಣೆಯಲ್ಲಿ 21,226 ಪುರುಷ ಹಾಗೂ 14,599 ಮಹಿಳಾ ಮತದಾರರು ಸೇರಿ ಒಟ್ಟು 35,825 ಮತದಾರರು ಮತ ಚಲಾಯಿಸಿದ್ದು, ಜಿಲ್ಲೆಯಲ್ಲಿ ಶೇ.71.56ರಷ್ಟು ಮತದಾನವಾಗಿದೆ.
ಭಾರತ ಚುನಾವಣಾ ಆಯೋಗವು ಘೋಷಿಸಿದ್ದ ವೇಳಾಪಟ್ಟಿಯಂತೆ ಜಿಲ್ಲೆಯ 80 ಮತಗಟ್ಟೆಗಳಲ್ಲಿ ಶುಕ್ರವಾರ ಬೆಳಗ್ಗೆ 8 ರಿಂದ ಸಂಜೆ 4 ಗಂಟೆವರೆಗೆ ಮತದಾನಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಮತದಾನದಲ್ಲಿ ಮತದಾರರ ಎಡಗೈ ತೋರು ಬೆರಳಿಗೆ ಅಳಿಸಲಾಗದ ಶಾಹಿಯನ್ನು ಹಚ್ಚಲಾಯಿತು.
ಅಭ್ಯರ್ಥಿಗಳ ವಿವರ:ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ಪಕ್ಷದಿಂದ ಶಶಿ ಹುಲಿಕುಂಟೆಮಠ್,ಭಾರತೀಯ ಜನತಾ ಪಾರ್ಟಿಯಿಂದ ಕೆ.ಎಂ. ಸುರೇಶ(ಸೋಮೇಶ್ವರ), ಸರ್ವ ಜನತಾ ಪಾರ್ಟಿಯಿಂದ ಜಿ.ಸಿ. ಪಟೇಲ್, ಪಕ್ಷೇತರರಾಗಿ ಕಪನಿಗೌಡ, ಚಿಕ್ಕರಾಜು ಎಸ್.ಯಾದವ್, ಲಕ್ಷ್ಮಯ್ಯ ಆರ್.(ಆರ್.ಎಲ್.), ಲಕ್ಷ್ಮೀಕಾಂತ ಎಸ್. ಯಾದವ್, ಶಶಿ ಹುಲೀಕಟ್ಟಿ, ಸೈಯದ್ ಅಪಾಖ್ ಅಹ್ಮದ್, ಅಡ್ವೊಕೇಟ್ ಬರೀದ್ ಸೇರಿದಂತೆ 10 ಮಂದಿ ಚುನಾವಣಾ ಕಣದಲ್ಲಿದ್ದರು.
ಮುಕ್ತ ಹಾಗೂ ನ್ಯಾಯಸಮ್ಮತ ಚುನಾವಣೆ ನಡೆಸುವ ಉದ್ದೇಶದಿಂದ ಜಿಲ್ಲೆಯ ಎಲ್ಲಾ ಮತಗಟ್ಟೆಗಳಲ್ಲಿ ವೆಬ್‌ಕಾಸ್ಟಿಂಗ್ ವ್ಯವಸ್ಥೆ ಮಾಡಲಾಗಿತ್ತು. ಮತದಾನಕ್ಕಾಗಿ ಜಿಲ್ಲೆಯಲ್ಲಿ 57 ಮುಖ್ಯ, 23 ಆಕ್ಸಿಲರಿ ಸೇರಿದಂತೆ ಒಟ್ಟು 80 ಮತಗಟ್ಟೆಗಳನ್ನು ಸ್ಥಾಪಿಸಲಾಗಿತ್ತು. ಪ್ರತೀ ಮತಗಟ್ಟೆಗೆ ತಲಾ ಒಂದು ಪಿಆರ್‌ಒ., ಒಂದು ಎಪಿಆರ್‌ಒ, ಇಬ್ಬರು ಪಿಒ, ತಲಾ ಒಬ್ಬರು ಮೈಕ್ರೊಅಬ್ಸರ್‌ವರ್ ಸೇರಿದಂತೆ 400 ಸಿಬ್ಬಂದಿ ಹಾಗೂ ಅಗತ್ಯ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. ಅಲ್ಲದೆ, ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ಎಫ್‌ಎಸ್‌ಟಿ ಮತ್ತು ಸೆಕ್ಟರ್ ಅಧಿಕಾರಿಗಳ ತಂಡವನ್ನು ನೇಮಿಸಲಾಗಿತ್ತು.
ಚುನಾವಣೆಯ ಮತ ಎಣಿಕೆಯು ಅಕ್ಟೋಬರ್ 27ರಂದು ಬೆಂಗಳೂರಿನ ಡಾ.ಅಂಬೇಡ್ಕರ್ ವೀದಿಯಲ್ಲಿರುವ ಸರಕಾರಿ ಕಲಾ ಕಾಲೇಜಿನಲ್ಲಿ ನಡೆಯಲಿದೆ ಎಂದು ಅವರು ತಿಳಿಸಿದರು.






