ಸಚಿವರ ಮಕ್ಕಳ ಒತ್ತಡಕ್ಕೆ ಈ ವಿಜಯೋತ್ಸವ ಆಚರಿಸಲಾಯಿತೇ: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ

ಬೆಂಗಳೂರು: ಆರ್.ಸಿ.ಬಿ. ಗೆಲುವಿನ ವಿಜಯೋತ್ಸವವು ಕ್ರಿಮಿನಲ್ ಕ್ರಮ ಎಂದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಸಚಿವರ ಮಕ್ಕಳ ಒತ್ತಡಕ್ಕೆ ಈ ವಿಜಯೋತ್ಸವ ಆಚರಿಸಲಾಯಿತೇ ಎಂದು ಪ್ರಶ್ನಿಸಿದ್ದಾರೆ.
ಗುರುವಾರ ಬೌರಿಂಗ್ ಆಸ್ಪತ್ರೆಗೆ ಭೇಟಿ ನೀಡಿದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಇದೊಂದು ಕೊಲೆಗಡುಕ ಸರಕಾರ. ಕಾಲ್ತುಳಿತದ ದುರಂತ, 11 ಜನರ ಸಾವಿಗೆ ಸಂಬಂಧಿಸಿ ಈ ರಾಜ್ಯ ಸರಕಾರ ತಕ್ಷಣ ರಾಜೀನಾಮೆ ಕೊಡಬೇಕು ಎಂದು ಆಗ್ರಹಿಸಿದರು.
ಗುಜರಾತಿನ ಸ್ಟೇಡಿಯಂನಲ್ಲಿ ನರೇಂದ್ರ ಮೋದಿಯವರ ಕಾರ್ಯಕ್ರಮಕ್ಕೆ ಐದು ಲಕ್ಷ ಜನರು ಸೇರಿದ್ದರು. ಏನೂ ಆಗಲಿಲ್ಲ; ಕರ್ನಾಟಕದಲ್ಲೂ ಇಂತಹ ದೊಡ್ಡ ಕಾರ್ಯಕ್ರಮಗಳಾಗಿದ್ದರೂ ಆಗ ಏನೂ ಆಗಿರಲಿಲ್ಲ ಎಂದು ಗಮನ ಸೆಳೆದರು.
ಅಲ್ಲು ಅರ್ಜುನ್ ಅವರ ಚಲನಚಿತ್ರದ ಪ್ರಮೋಷನ್ ಸಂದರ್ಭದಲ್ಲಿ ಒಬ್ಬರು ಮೃತಪಟ್ಟಾಗ ಅಲ್ಲಿನ ಸರಕಾರ ಅಲ್ಲು ಅರ್ಜುನ್ ಅವರನ್ನು ಮನೆಯಿಂದ ಎಳೆದುಕೊಂಡು ಬಂದಿತ್ತು. ನೀವು ಯಾರನ್ನು ಎಳೆದುಕೊಂಡು ಬಂದಿದ್ದೀರಿ ಎಂದು ಶೋಭಾ ಕರಂದ್ಲಾಜೆ ಪ್ರಶ್ನಿಸಿದರು.
ಉಪ ಮುಖ್ಯಮಂತ್ರಿ ಕಪ್ ಎತ್ತಿಕೊಂಡು ಚುಂಬಿಸಿಕೊಂಡು ಓಡಾಡುವ ಅಗತ್ಯ ಏನಿತ್ತು.
ಬೆಂಗಳೂರಿನ ಡಿ.ಸಿ. ಎಂದರೆ ಅವರು ಬೆಂಗಳೂರಿನ ಇನ್ ಚಾರ್ಜ್ ಅಧಿಕಾರಿ. ಅವರಿಂದ ಯಾವುದೇ ತನಿಖೆ ಮಾಡಲು ಆಗದು. ಇದೊಂದು ಮೋಸದ ಕ್ರಮ ಎಂದು ಆಕ್ಷೇಪಿಸಿದರು.
ಹೈಕೋರ್ಟಿನ ಕಾರ್ಯನಿರತ ಜಡ್ಜ್ ಮೂಲಕ ದುರ್ಘಟನೆಯ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.
ಜನರ ಪ್ರಾಣಕ್ಕೆ ಯಾರು ರಕ್ಷಕರಿದ್ದರು? ಎಂದ ಅವರು, ಆನ್ಲೈನ್ ಪಾಸ್ ನೀಡಿ ಬಳಿಕ ಅವನ್ನು ರದ್ದು ಮಾಡಿದ್ದರು. ಚಿನ್ನಸ್ವಾಮಿ ಸ್ಟೇಡಿಯಂ ಗೇಟನ್ನು ಮೊದಲೇ ತೆರೆದಿದ್ದರೆ ಇವರ್ಯಾರೂ ಸಾಯುತ್ತಿರಲಿಲ್ಲ ಎಂದರು.







