ಗ್ರೇಟರ್ ಬೆಂಗಳೂರು ತೀರ್ಮಾನ ಕೈಬಿಡದಿದ್ದರೆ ‘ಬೆಂಗಳೂರು ಬಂದ್’ : ವಾಟಾಳ್ ನಾಗರಾಜ್ ಎಚ್ಚರಿಕೆ

ವಾಟಾಳ್ ನಾಗರಾಜ್
ಬೆಂಗಳೂರು : ರಾಜ್ಯ ಸರಕಾರ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯನ್ನು, ಗ್ರೇಟರ್ ಬೆಂಗಳೂರು ಮಾಡಲು ಹೊರಟಿರುವುದು ಕೆಂಪೇಗೌಡರ ಆದರ್ಶಗಳಿಗೆ ತದ್ವಿರುದ್ಧವಾಗಿದೆ. ಸರಕಾರ ಕೂಡಲೇ ಈ ಆದೇಶವನ್ನು ಹಿಂಪಡೆಯದಿದ್ದರೆ, ಬೆಂಗಳೂರು ಬಂದ್ಗೆ ಕರೆ ಕೊಡಲಾಗುವುದು ಎಂದು ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಎಚ್ಚರಿಕೆ ನೀಡಿದ್ದಾರೆ.
ಶನಿವಾರ ನಗರದ ಪ್ರೆಸ್ಕ್ಲಬ್ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರದಲ್ಲಿ ಇದಕ್ಕೂ ಮೊದಲು ಬಿಬಿಎಂಪಿ ಎಂದಿತ್ತು, ಅದಕ್ಕೂ ಮೊದಲು ಬೆಂಗಳೂರು ನಗರಸಭೆ ಎಂದಿತ್ತು. ಸರಕಾರ ಇದೀಗ ಗ್ರೇಟರ್ ಬೆಂಗಳೂರನ್ನು ಯಾವ ಉದ್ದೇಶಕ್ಕಾಗಿ ಮಾಡಿದ್ದಾರೆ ಎನ್ನುವುದರ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತೊಮ್ಮೆ ಗಂಭೀರವಾಗಿ ಯೋಚನೆ ಮಾಡಬೇಕು. ಈಗಾಗಲೇ ಆದೇಶ ಹೊರಡಿಸಿರುವುದಿರಿಂದ ಯೋಚನೆ ಮಾಡುತ್ತಾರೆನ್ನುವ ನಂಬಿಕೆಯೂ ಇಲ್ಲವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಗ್ರೇಟರ್ ಬೆಂಗಳೂರು ಎಂಬ ತೀರ್ಮಾನದಿಂದ ನಗರದ ಜನರಿಗೆ ಅಪಶಕುನವಾಗಿದೆ. ಇದರಿಂದ ಪಾಳೇಗಾರಿಕೆ ಬೆಳೆದು ಕೆಟ್ಟ ಸಂಪ್ರದಾಯ ಮುಂದುವರೆಯುತ್ತದೆ. ಬಿಬಿಎಂಪಿ ಚುನಾವಣೆಗಳನ್ನು ಮುಂದೂಡುವ ತಂತ್ರಗಾರಿಕೆಯಿಂದಾಗಿ ಇದನ್ನು ಮಾಡಿದ್ದಾರೆ. ಬಿಡಿಎ, ಜಲಮಂಡಳಿ, ವಿದ್ಯುತ್ ಸೇರಿದಂತೆ ಎಲ್ಲವಲಯಕ್ಕೂ ಸೇರಿ ಕೇವಲ 50 ಜನ ಮಾತ್ರ ಸರಕಾರಿ ಅಧಿಕಾರಿಗಳು ಇರುತ್ತಾರೆ. ಇದು ಸರಕಾರಕ್ಕೆ ನಾಚಿಕೆಗೇಡು ಎಂದು ವಾಟಾಳ್ ನಾಗರಾಜ್ ಆಕ್ರೋಶ ವ್ಯಕ್ತಪಡಿಸಿದರು.
ಯಾವುದೇ ಪಕ್ಷ ಅಧಿಕಾರಕ್ಕೆ ಬರುವುದರಿಂದ ನಮಗೇನು ಸಮಸ್ಯೆ ಇಲ್ಲ. ಆದರೆ, ಬೆಂಗಳೂರು ಬೆಳವಣಿಗೆಗೆ ವಾರ್ಡ್ಗೊಬ್ಬ ಸದಸ್ಯರನ್ನು ಆಯ್ಕೆ ಮಾಡಬೇಕು, ನಂತರ ಅವರಿಗೆ ಸಂಪೂರ್ಣ ಅಧಿಕಾರ ಕೊಡಬೇಕು. ಆಗ ಮಾತ್ರ ಬೆಂಗಳೂರು ಅಭಿವೃದ್ಧಿ ಆಗುವುದಕ್ಕೆ ಸಾಧ್ಯ. ನಗರದ ಜನರಿಗೆ ಮೊದಲು ಮೂಲಭೂತ ಸೌಲಭ್ಯಗಳನ್ನು ಕೊಡಿ, ಅದು ಬಿಟ್ಟು ಗ್ರೇಟರ್ ಬೆಂಗಳೂರು ಮಾಡುವುದಲ್ಲ. ನಗರಕ್ಕೆ ಮೂರು ಮೇಯರ್ಗಳನ್ನು ಮಾಡುವುದರಿಂದ ಒಂದೇ ರೀತಿಯ ತೀರ್ಮಾನಗಳನ್ನು ತೆಗೆದುಕೊಳ್ಳುವುದಕ್ಕೆ ಸಾಧ್ಯವಿಲ್ಲ ಎಂದು ಅವರು ವಿವರಿಸಿದರು.
ಗ್ರೇಟರ್ ಬೆಂಗಳೂರು ನಂತಹ ಪಾಳೇಗಾರಿಕೆಯ ತೀರ್ಮಾನವನ್ನು ನಾಗರಿಕರಾದ ನಾವು ತೀವ್ರವಾಗಿ ವಿರೋಧಿಸುತ್ತೇವೆ. ಸರಕಾರದ ವಿರುದ್ಧ ಬೀದಿಬೀದಿಗಳಲ್ಲಿ ಹೋರಾಟ ರೂಪಿಸುತ್ತೇವೆ. ಕೆಂಪೇಗೌಡರ ಐತಿಹಾಸಿಕ ಇತಿಹಾಸಕ್ಕೆ ಅಪಚಾರ ಮಾಡುವುದನ್ನು ಬಿಟ್ಟು, ಅನುಕೂಲವಾಗುವ ಕಾರ್ಯಕ್ರಮಗಳನ್ನು ರೂಪಿಸಿಬೇಕು. ಕೂಡಲೇ ಗ್ರೇಟರ್ ಬೆಂಗಳೂರು ತೀರ್ಮಾನವನ್ನು ಹಿಂಪಡೆದುಕೊಳ್ಳಿ ಎಂದು ನಾಗರಾಜ್ ಒತ್ತಾಯಿಸಿದರು.







