ಜಲಮಂಡಳಿ ಬ್ಲೂ ಫೋರ್ಸ್ ಕಾರ್ಯಾಚರಣೆ: 55 ಕೋಟಿ ರೂ.ಸಂಗ್ರಹ

ಬೆಂಗಳೂರು, ಮೇ 8: ವಿಶೇಷ ಕಾರ್ಯಾಚರಣೆ ಪಡೆಯಾದ ‘ಬ್ಲೂ ಫೋರ್ಸ್’ ಮೂಲಕ ಐದು ತಿಂಗಳಲ್ಲಿ 1,000 ಮಿಲಿಯನ್ ಲೀಟರ್ ಕುಡಿಯುವ ನೀರು ಉಳಿತಾಯವಾಗಿದ್ದು, ಶುಲ್ಕ, ನೀರಿನ ಮೌಲ್ಯ ಸೇರಿ ಒಟ್ಟಾರೆ 55 ಕೋಟಿ ರೂ.ಗಳ ಹೆಚ್ಚುವರಿ ಆದಾಯ ಹರಿದುಬಂದಿದೆ ಎಂದು ಬೆಂಗಳೂರು ಜಲಮಂಡಳಿ ತಿಳಿಸಿದೆ.
ನಗರದ ನಾಲ್ಕೂ ವಲಯಗಳಲ್ಲಿ ಒಟ್ಟು 54,625 ಕಟ್ಟಡಗಳ ಭೌತಿಕ ತಪಾಸಣೆ ನಡೆಸಲಾಗಿದೆ. ಒಟ್ಟು 11,217 ಸಂಪರ್ಕಗಳ ಕಡಿತ ಮಾಡಲಾಗಿದ್ದು, ಇದರಲ್ಲಿ 9,751 ಕುಡಿಯುವ ನೀರಿನ ಸಂಪರ್ಕಗಳು ಹಾಗೂ 1,466 ಒಳಚರಂಡಿ ಸಂಪರ್ಕಗಳು ಸೇರಿವೆ ಎಂದು ತಿಳಿಸಿದೆ.
ಜಲಮಂಡಳಿಯ ನಿರಂತರ ಹಾಗೂ ಕಟ್ಟುನಿಟ್ಟಿನ ಕಾರ್ಯಾಚರಣೆಯಿಂದಾಗಿ ಬೃಹತ್ ಪ್ರಮಾಣದ ಆದಾಯ ಸೋರಿಕೆ ನಿಂತಿದೆ. ಅಕ್ರಮ ಸಂಪರ್ಕ ಹೊಂದಿದ್ದ ಕಟ್ಟಡಗಳ ವಿರುದ್ಧ ಕೈಗೊಂಡ ನಿರ್ದಾಕ್ಷಿಣ್ಯ ಕ್ರಮಗಳಿಂದಾಗಿ, ಆ ಸಂಪರ್ಕಗಳನ್ನು ಕಡಿತಗೊಳಿಸುವ ಹಾಗೂ ನಂತರ ಅವುಗಳನ್ನು ಅಧಿಕೃತವಾಗಿ ಸಕ್ರಮಗೊಳಿಸುವ ಪ್ರಕ್ರಿಯೆ ಚುರುಕುಗೊಂಡಿದೆ. ಪರಿಣಾಮವಾಗಿ, ಜಲಮಂಡಳಿಯ ಬೊಕ್ಕಸಕ್ಕೆ ಶುಲ್ಕದ ರೂಪದಲ್ಲಿ ಬರೋಬ್ಬರಿ 50 ಕೋಟಿ ರೂ.ಗಳ ಬೃಹತ್ ಆದಾಯ ಸಂಗ್ರಹವಾಗಿದೆ ಎಂದು ಹೇಳಿದೆ.
ಅಕ್ರಮವಾಗಿ ಉಪಯೋಗಿಸಲಾಗುತ್ತಿದ್ದ 1,000 ಮಿಲಿಯನ್ ಲೀಟರ್ ಪ್ರಮಾಣದ ನೀರನ್ನು ಇದೀಗ ಜಲಮಂಡಳಿಯ ಅಧಿಕೃತ ಬಿಲ್ಲಿಂಗ್ ವ್ಯಾಪ್ತಿಗೆ ಸೇರ್ಪಡಿಸಲಾಗಿದ್ದು, ಇದರಿಂದ ಪ್ರತಿ ತಿಂಗಳು ಸುಮಾರು 5 ಕೋಟಿ ರೂ.ಗಳ ಹೆಚ್ಚುವರಿ ಆದಾಯ ಸಂಗ್ರಹವಾಗುತ್ತಿದೆ ಎಂದು ಬೆಂಗಳೂರು ಜಲಮಂಡಳಿಯ ಅಧ್ಯಕ್ಷ ಡಾ. ರಾಮ್ ಪ್ರಸಾತ್ ಮನೋಹರ್ ಪ್ರಕಟನೆಯಲ್ಲಿ ಹೇಳಿದ್ದಾರೆ.






