ಮಧುಕರ್ ಶೆಟ್ಟಿಯಂತಹ ಅಧಿಕಾರಿ ನಮ್ಮ ನಡುವೆ ಇದ್ದರು ಎಂಬುದೇ ನಮಗೆ ಹೆಮ್ಮೆ: ಪ್ರೊ.ಎಂ.ದತ್ತಾತ್ರೇಯ
ಮಧುಕರಶೆಟ್ಟಿ 52ನೇ ಜಯಂತಿ ಆಚರಣೆ

ಬೆಂಗಳೂರು : ದಕ್ಷ ಹಾಗೂ ನಿಷ್ಠ ಪೊಲೀಸ್ ಅಧಿಕಾರಿಯಾಗಿದ್ದ ಡಾ.ಕೆ.ಮಧುಕರಶೆಟ್ಟಿ ಅವರ ಚಿಂತನೆಗಳನ್ನು ಎಲ್ಲರೂ ತಮ್ಮ ಬದುಕಿನಲ್ಲಿ ಅಳವಡಿಸಿಕೊಂಡಾಗ ಸಮಾಜದಲ್ಲಿ ಒಳ್ಳೆಯದನ್ನು ಸಾಧಿಸಲು ಸಾಧ್ಯ ಎಂದು ಕುವೆಂಪು ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕ ಹಾಗೂ ಮಧುಕರ ಶೆಟ್ಟಿಯವರ ಆಪ್ತ ಸ್ನೇಹಿತ ಪ್ರೊ.ಎಂ.ದತ್ತಾತ್ರೇಯ ಅಭಿಪ್ರಾಯಪಟ್ಟಿದ್ದಾರೆ.
ರವಿವಾರ ನಗರದ ಬೆಂಗಳೂರು ವಿವಿಯ ಜ್ಞಾನಭಾರತಿ ಆವರಣದಲ್ಲಿರುವ ಎಚ್.ಎನ್.ಸಭಾಂಗಣದಲ್ಲಿ ಡಾ.ಕೆ.ಮಧುಕರಶೆಟ್ಟಿ ಅವರ ಅಭಿಮಾನಿ ಬಳಗದ ವತಿಯಿಂದ ನಡೆದ ಮಧುಕರಶೆಟ್ಟಿ ಅವರ 52ನೇ ಜಯಂತಿ ಆಚರಣೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಮಧುಕರಶೆಟ್ಟಿ ಅವರು ಬಹುದೊಡ್ಡ ಫಿಲಾಸಫರ್ ಆಗಿದ್ದರು. ಅವರು ತಮ್ಮ ವೈಯಕ್ತಿಕ ಹಾಗೂ ಸಾಮಾಜಿಕ ಬದುಕಿನಲ್ಲಿ ಮಾದರಿಯಾಗುವಂತೆ ಜೀವಿಸಿದ್ದರು ಎಂದು ನೆನಪಿಸಿಕೊಂಡರು.
ಮಧುಕರಶೆಟ್ಟಿ ಅವರ ಸ್ಫೂರ್ತಿದಾಯಕ ಮಾತುಗಳಿಗೆ ಒಬ್ಬರು, ಇಬ್ಬರಲ್ಲ, ಇಡೀ ಜನಾಂಗವೇ ಮನಸೋಲುತ್ತಿತ್ತು. ಸಭೆ, ಸಂವಾದಗಳಲ್ಲಿ ಯುವಜನತೆಗೆ ಅವರು ನೀಡುತ್ತಿದ್ದ ಸಲಹೆ, ಸೂಚನೆಗಳು ಸಾಧಿಸುವ ಛಲವನ್ನು ಹುಟ್ಟಿಸುವಂತಿರುತ್ತಿತ್ತು. ಯಾವುದೇ ವಿಚಾರದಲ್ಲಿಯೂ ಅವರು ಪ್ರಖರ ಪಾಂಡಿತ್ಯವನ್ನು ಹೊಂದಿದ್ದರು. ಅದು ಅವರ ತಂದೆಯಿಂದ ಬಂದ ಬಳುವಳಿಯೂ ಆಗಿತ್ತು. ಎಲ್ಲ ಸವಲತ್ತುಗಳಿದ್ದರಷ್ಟೇ ಸಾಧನೆ ಸಾಧ್ಯ ಎಂಬುದನ್ನು ಸುಳ್ಳು ಮಾಡಿದ ಮಧುಕರಶೆಟ್ಟಿ, ಸಾಕಷ್ಟು ಕಷ್ಟ, ನೋವುಗಳ ನಡುವೆಯೇ ಐಪಿಎಸ್ ಎಂಬ ಬಹುದೊಡ್ಡ ಸಾಧನೆಯ ಶಿಖರವೇರಿದ್ದರು ಎಂದು ದತ್ತಾತ್ರೇಯ ಮೆಲುಕು ಹಾಕಿದರು.
ಈ ವ್ಯವಸ್ಥೆಯಲ್ಲಿ ಸೂಕ್ತವಾಗಿ ಅಧಿಕಾರಿಗಳನ್ನು ನೋಡಿಕೊಳ್ಳಲು ಸಾಧ್ಯವಾಗಲಿಲ್ಲ ಎಂಬುದಕ್ಕೆ ಮಧುಕರಶೆಟ್ಟಿ ಅವರ ಬದುಕೇ ಒಂದು ನಿದರ್ಶನ. ಸಾವಿನ ಕೊನೆ ಕ್ಷಣಗಳಲ್ಲಿ ಅವರ ಪ್ಯಾಕೇಟಿನಲ್ಲಿದ್ದದ್ದು, ಕೇವಲ ನೂರು ರೂಪಾಯಿಗಳು ಮಾತ್ರ. ಅದನ್ನು ಅವರ ಮಗಳು ಈಗಲೂ ಜೋಪಾನವಾಗಿರಿಸಿಕೊಂಡಿದ್ದಾಳೆ, ಅಷ್ಟೊಂದು ಸರಳ, ಸಜ್ಜನಿಕೆಯ ವ್ಯಕ್ತಿ ನಮ್ಮ ನಡುವೆ ಬದುಕಿದ್ದರು ಎನ್ನುವುದೇ ನಮ್ಮ ಹೆಮ್ಮೆ ಎಂದು ದತ್ತಾತ್ರೇಯ ಸ್ಮರಿಸಿದರು.
ಬೆಂಗಳೂರು ನಗರ ಪಶ್ಚಿಮ ವಿಭಾಗದ ಡಿಸಿಪಿ ಗಿರೀಶ್ ಮಾತನಾಡಿ, ಮಧುಕರಶೆಟ್ಟಿ ಅವರ ಬಗ್ಗೆ ಯೋಚಿಸಿದಷ್ಟೂ ನಮ್ಮೊಳಗೆ ದುಪ್ಪಟ್ಟು ವಿಚಾರ, ಚಿಂತನೆ, ತತ್ವಗಳು ಹೊರಹೊಮ್ಮುತ್ತವೆ. ಅವುಗಳನ್ನು ನಿಜ ಜೀವನದಲ್ಲಿ ಅಳವಡಿಸಿಕೊಳ್ಳುವುದನ್ನು ಕಲಿಯಬೇಕು. ನಾನು ಮಧುಕರಶೆಟ್ಟಿ ಅವರ ಜೀವನ ತತ್ವವನ್ನು ಅಬ್ದುಲ್ ಅಹದ್ ಅವರ ಜೀವನದಲ್ಲಿ ಅಳವಡಿಸಿಕೊಂಡಿರುವುದನ್ನು ಕಂಡಿದ್ದೇನೆ ಎಂದರು.
ಸರಳತೆ, ನೋವಿಗೆ ಸ್ಪಂದಿಸುವ ಗುಣ, ವಿನಯ, ಚಿಂತನೆ, ಚುರುಕುತನ, ಸೂಕ್ಷ್ಮತೆ ಸಹಿತ ಒಬ್ಬ ಪ್ರಾಮಾಣಿಕ ಪೊಲೀಸ್ ಅಧಿಕಾರಿಗೆ ಇರಬೇಕಾದ ಎಲ್ಲ ಗುಣಗಳೂ ಅವರಲ್ಲಿತ್ತು. ನ್ಯಾಯ-ಅನ್ಯಾಯವನ್ನು ಪರಾಮರ್ಶಿಸಿ ನೊಂದವರಿಗೆ ನ್ಯಾಯ ಒದಗಿಸುತ್ತಿದ್ದ ಅವರಲ್ಲಿನ ಶಕ್ತಿ ಎಲ್ಲ ಅಧಿಕಾರಿಗಳಿಗೂ ಸ್ಫೂರ್ತಿಯಾಗಬೇಕು ಎಂದು ಗಿರೀಶ್ ತಿಳಿಸಿದರು.
ಅವರಲ್ಲಿ ಅದ್ಭುತ ಪರಿವರ್ತನಾ ಗುಣವಿತ್ತು. ಎಂತಹ ಕಳ್ಳರನ್ನೂ ಒಳ್ಳೆಯವನನ್ನಾಗಿಸುವ ಗುಣವನ್ನು ಅವರು ಕರಗತ ಮಾಡಿಕೊಂಡಿದ್ದರು. ಎಷ್ಟೋ ಭ್ರಷ್ಟ ಅಧಿಕಾರಿಗಳು ಅವರ ಮಾತುಗಳಿಂದ ಪರಿವರ್ತನೆಗೊಂಡ ಉದಾಹರಣೆಗಳಿವೆ. ವೈಯಕ್ತಿಕ ಹಾಗೂ ಸಾಮಾಜಿಕ ಜೀವನದಲ್ಲಿ ಮಧುಕರಶೆಟ್ಟಿ ಅದ್ಭುತ ಮಾನವೀಯತೆವುಳ್ಳ ವ್ಯಕ್ತಿಯಾಗಿದ್ದರು ಎಂದು ಗಿರೀಶ್ ಸ್ಮರಿಸಿದರು.
ಮಧುಕರಶೆಟ್ಟಿ ಎಂದರೆ ಭ್ರಷ್ಟಾಚಾರದ ವಿರುದ್ಧ ಎಂದು ಹೇಳಲಾಗುತ್ತದೆ. ಅದಷ್ಟೇ ಅಲ್ಲ, ಅವರಲ್ಲಿ ಬೇರೆ ಬೇರೆ ಶಕ್ತಿ, ದಕ್ಷತೆ ಇತ್ತು. ನಾವು ಅವರ ತತ್ವಗಳನ್ನು ಶೇ.10ರಷ್ಟು ಅಳವಡಿಸಿಕೊಂಡರೆ ಸಾಕು ಸಮಾಜದಲ್ಲಿ ಒಳ್ಳೆಯದನ್ನು ಮಾಡಬಹುದು ಎಂದು ಗಿರೀಶ್ ತಿಳಿಸಿದರು.
ಸಿಸಿಬಿ ಡಿಸಿಪಿ ಅಬ್ದುಲ್ ಅಹದ್ ಮಾತನಾಡಿ, ಕಷ್ಟದಲ್ಲಿರುವವರು, ದೀನರು, ತುಳಿತಕ್ಕೊಳಗಾದವರಿಗೆ ನ್ಯಾಯವನ್ನು ಕೊಡಿಸಬೇಕೆನ್ನುವ ಚಿಂತನೆ ಮಧುಕರಶೆಟ್ಟಿ ಅವರಲ್ಲಿ ಗಾಢವಾಗಿತ್ತು. ಸಿದ್ಧಾಂತಗಳೆಲ್ಲ ಹೇಳಲು ಬಹಳ ಸುಲಭ, ಆದರೆ ಅದನ್ನು ಬದುಕಿ ತೋರಿಸುವುದು ಕಷ್ಟ, ಆದರೆ ಮಧುಕರಶೆಟ್ಟಿ ತಾನು ಹೇಳಿದ ಹಾಗೂ ನಂಬಿದ ತತ್ವಗಳ ಹಾಗೆಯೇ ಬದುಕಿದ್ದರು. ದುಡ್ಡಿಗೆ, ಕೀರ್ತಿಗಾಗಿ ಮಧುಕರಶೆಟ್ಟಿ ಎಂದೂ ಬದುಕಿದವರಲ್ಲ ಎಂದರು.
ಮಧುಕರಶೆಟ್ಟಿಯಂತಹ ಒಂದು ಚಿಂತನೆ ಈ ಸಮಾಜಕ್ಕೆ ಬೇಕಾಗಿದೆ. ಇಂದು ಸಮಾಜದೊಳಗೆ ಮೌಲ್ಯಯುತ ಚಿಂತನೆಗಳು ಕಡಿಮೆಯಾಗುತ್ತಿವೆ. ಒಡೆದು ತಿನ್ನುವ, ಮೋಸ ಮಾಡುವ, ವಂಚನೆ ಎಸಗುವ, ಜಾತಿ ರಾಜಕಾರಣ, ಧರ್ಮ ರಾಜಕಾರಣ ಹೀಗೆ ಕಲ್ಮಶವೇ ತುಂಬಿರುವ ಈ ಸಮಾಜದಲ್ಲಿ ಮಧುಕರಶೆಟ್ಟಿಯಂತಹ ಮಾನವೀಯತೆಯ ಚಿಂತನೆಯನ್ನು ಬಿತ್ತಬೇಕು. ಇಂದಿನ ಸಮಾಜ, ಪ್ರಪಂಚಕ್ಕೆ ಮಧುಕರಶೆಟ್ಟಿ ಅವರ ಚಿಂತನೆ ಅನಿವಾರ್ಯವಾಗಿದ್ದು, ನಾವೆಲ್ಲರೂ ಅದನ್ನು ಸಾಕಾರಗೊಳಿಸೋಣ. ಅವರ ನೆನಪಿಗಾಗಿ ಮುಂದಿನ ವರ್ಷದಿಂದ ಅವರ ಹೆಸರಿನಲ್ಲಿ ಪ್ರತೀ ವರ್ಷ ಪ್ರಶಸ್ತಿ ನೀಡಲಾಗುವುದು.
-ಅಬ್ದುಲ್ ಅಹದ್, ಡಿಸಿಪಿ, ಸಿಸಿಬಿ ಬೆಂಗಳೂರು







