ಸಂವಿಧಾನಕ್ಕಿಂತ ಹೆಚ್ಚಿನ ಹಕ್ಕುಗಳು ನಮಗೆ ಬೇಡ : ಆರ್ಚ್ ಬಿಷಪ್ ಡಾ.ಪೀಟರ್ ಮಚಾದೊ
ಬೆಂಗಳೂರು: ಕಾಂಗ್ರೆಸ್ ಸರಕಾರದ ಪ್ರಮುಖ ಭರವಸೆಗಳ ಈಡೇರಿಕೆಗೆ ಆಗ್ರಹಿಸಿ ಪ್ರತಿಭಟನಾ ಸಮಾವೇಶ

ಆರ್ಚ್ ಬಿಷಪ್ ಡಾ.ಪೀಟರ್ ಮಚಾದೊ
ಬೆಂಗಳೂರು: ಹಿಂದಿನ ಸರಕಾರ ತಂದ ಮತಾಂತರ ನಿಷೇಧ ಕಾಯ್ದೆಯು ಧಾರ್ಮಿಕ ಅಲ್ಪಸಂಖ್ಯಾತರ ಅಸ್ತಿತ್ವವನ್ನೇ ಅಪರಾಧೀಕರಿಸುತ್ತದೆ. ಇದು ಸಂವಿಧಾನದ 25ನೇ ವಿಧಿಯ ಆಶಯಗಳಿಗೆ ವಿರುದ್ಧವಾಗಿದೆ. ಸಂವಿಧಾನಕ್ಕಿಂತ ಹೆಚ್ಚಿನ ಹಕ್ಕುಗಳು ನಮಗೆ ಬೇಡ, ಸಂವಿಧಾನ ನೀಡಿದಷ್ಟೇ ಹಕ್ಕುಗಳು ಸಾಕು ಎಂದು ಬೆಂಗಳೂರು ಕ್ರೈಸ್ತ ಮಹಾಧರ್ಮಕ್ಷೇತ್ರದ ಆರ್ಚ್ ಬಿಷಪ್ ಡಾ.ಪೀಟರ್ ಮಚಾದೊ ಹೇಳಿದರು.
ಕಾಂಗ್ರೆಸ್ 2023ರ ವಿಧಾನಸಭಾ ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿದ್ದ ಭರವಸೆಗಳನ್ನು ಈಡೇರಿಸುವಂತೆ ಆಗ್ರಹಿಸಿ 'ಕರ್ನಾಟಕದ ಅಲ್ಪಸಂಖ್ಯಾತರು ಹಾಗೂ ಶೋಷಿತರ ಧ್ವನಿ' ವೇದಿಕೆಯ ನೇತೃತ್ವದಲ್ಲಿ ನಗರದ ಫ್ರೀಡಂ ಪಾರ್ಕ್ ನಲ್ಲಿ ಗುರುವಾರ ಆಯೋಜಿಸಿದ್ದ ಬೃಹತ್ ಸಾರ್ವಜನಿಕ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಇದೊಂದು ರಾಜಕೀಯ ಅಥವಾ ಧಾರ್ಮಿಕ ಸಭೆಯಲ್ಲ, ಬದಲಾಗಿ ಸಾಮಾಜಿಕವಾಗಿ ಶೋಷಿತರಾದ ಜನರ ಸಮಾವೇಶ ಎಂದರು.
ಹಿಂದಿನ ಸರಕಾರ ತಂದ ಮತಾಂತರ ನಿಷೇಧ ಕಾಯ್ದೆಯು ಸಂವಿಧಾನದ 25ನೇ ವಿಧಿಯ ಆಶಯಗಳಿಗೆ ವಿರುದ್ಧವಾಗಿದ್ದು, ಧಾರ್ಮಿಕ ಅಲ್ಪಸಂಖ್ಯಾತರ ಅಸ್ತಿತ್ವವನ್ನೇ ಅಪರಾಧೀಕರಿಸುತ್ತದೆ. ದೇಶದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಪೊಲೀಸ್ ಕಾಯ್ದೆಗಳಿರುವಾಗ ಪ್ರತ್ಯೇಕ ಕಾಯ್ದೆಯ ಅಗತ್ಯವಿಲ್ಲ ಎಂದವರು ಅಭಿಪ್ರಾಯಿಸಿದರು.
ನಾವು ಈ ದೇಶದ ಎರಡನೇ ದರ್ಜೆಯ ಪ್ರಜೆಗಳಲ್ಲ, ಶಾಲೆಗಳು ಹಾಗೂ ಆಸ್ಪತ್ರೆಗಳ ಮೂಲಕ ಸಮಾಜದ ಎಲ್ಲ ವರ್ಗಗಳಿಗೂ ಸೇವೆ ಸಲ್ಲಿಸುತ್ತಿದ್ದೇವೆ. ಚುನಾವಣೆಯಲ್ಲಿ ನೀಡಿದ ಆಶ್ವಾಸನೆಗಳನ್ನು ಈಡೇರಿಸಿದರೆ ಮಾತ್ರ ಮುಂದಿನ ಚುನಾವಣೆಯಲ್ಲಿ ಜನರು ನಿಮ್ಮನ್ನು ನಂಬುತ್ತಾರೆ ಎಂದು ಸರಕಾರಕ್ಕೆ ತಿಳಿಸಿದರು.






