ಚೀನಾದ ಕಮ್ಯುನಿಸ್ಟ್ ಪಕ್ಷದೊಂದಿಗೆ ಆರೆಸ್ಸೆಸ್ ಮುಖಂಡರ ಭೇಟಿ ಯಾವ ಉದ್ದೇಶಕ್ಕಾಗಿ : ಸಚಿವ ಪ್ರಿಯಾಂಕ್ ಖರ್ಗೆ ಪ್ರಶ್ನೆ

ಪ್ರಿಯಾಂಕ್ ಖರ್ಗೆ
ಬೆಂಗಳೂರು: ಚೀನಾದ ಕಮ್ಯುನಿಸ್ಟ್ ಪಾರ್ಟಿ (ಸಿಪಿಸಿ) ಪ್ರತಿನಿಧಿಗಳನ್ನು ನೋಂದಾಯಿತವಲ್ಲದ ಸಂಸ್ಥೆಯಾದ ಆರೆಸ್ಸೆಸ್ ಮುಖಂಡರ ಭೇಟಿ ಯಾವ ಉದ್ದೇಶಕ್ಕಾಗಿ’ ಎಂದು ರಾಜ್ಯ ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದ್ದಾರೆ.
ಈ ಕುರಿತು ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ವಿಷಯ ಹಂಚಿಕೊಂಡಿರುವ ಅವರು, ‘ಎರಡೂ ಪಕ್ಷಗಳ ನಡುವಿನ ಸಂವಹನದಲ್ಲಿ ಚೀನಾದ ಪಕ್ಷದೊಂದಿಗೆ ಒಂದು ಎನ್ಜಿಒಗೆ ಯಾವ ರೀತಿಯ ಕೆಲಸ? ಈ ಘಟನೆಯಿಂದ ಕೇಂದ್ರ ಸರ್ಕಾರವನ್ನು ಯಾರು ಮುನ್ನಡೆಸುತ್ತಿದ್ದಾರೆ ಎಂಬುದು ಅರ್ಥವಾಗುತ್ತದೆ’ ಎಂದಿದ್ದಾರೆ.
‘ಆರೆಸ್ಸೆಸ್ ಹಿಂದೆಯೂ ರಾಜಕಾರಣದಲ್ಲಿತ್ತು. ಈಗಲೂ ಇದೆ, ಮುಂದೆಯೂ ಇರಲಿದೆ. ಪ್ರಧಾನಿ ಮೋದಿ ಅವರ ಕೆಂಗಣ್ಣಿನಿಂದ ಕೆಂಪು ಹಾಸು ನೀತಿ ಬಯಲಾಗಿದೆ. ಅದರಲ್ಲೂ ವಾಸ್ತವಿಕ ನಿಯಂತ್ರಣ ರೇಖೆಯ ವಿಷಯದಲ್ಲಿ ಬೀಜಿಂಗ್ನ ನಿರಂತರ ಹಸ್ತಕ್ಷೇಪವನ್ನು ಸಹಿಸಿಕೊಳ್ಳುತ್ತಿರುವ ಕೇಂದ್ರದ ನಿಲುವನ್ನು ಗಮನಿಸಿದರೆ, ಇವರು ವಿದೇಶಾಂಗ ನೀತಿಯ ಹೆಸರಲ್ಲಿ ಸರ್ಕಸ್ ನಡೆಸುತ್ತಿದ್ದಾರೆ’ ಎಂದು ಆಕ್ಷೇಪಿಸಿದ್ದಾರೆ.
ಸಚಿವ ಖರ್ಗೆ ಅವರ ಪೋಸ್ಟ್ಗೆ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಅನೇಕ ಬಳಕೆದಾರರು 2008ರಲ್ಲಿ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿದ್ದ ರಾಹುಲ್ ಗಾಂಧಿ ಅವರು ಚೀನಾದ ಸಿಪಿಸಿ ಜತೆಗೆ ಮಾಡಿಕೊಂಡಿದ್ದ ಒಪ್ಪಂದದ ಫೋಟೋಗಳನ್ನು ಹಂಚಿಕೊಂಡಿದ್ದಾರೆ.







