ಮಾರಕಾಸ್ತ್ರ ಹಿಡಿದು ವ್ಹೀಲಿಂಗ್ ಪ್ರಕರಣ | 11 ಯುವಕರು ರೌಡಿಪಟ್ಟಿಗೆ : ದಯಾನಂದ್

ಪೊಲೀಸ್ ಆಯುಕ್ತ ದಯಾನಂದ್
ಬೆಂಗಳೂರು : ಮಧ್ಯರಾತ್ರಿ ನಡುರಸ್ತೆಯಲ್ಲಿ ಮಾರಕಾಸ್ತ್ರ ಹಿಡಿದು ವ್ಹೀಲಿಂಗ್ ಮಾಡಿದ ಆರೋಪದಡಿ 11 ಯುವಕರನ್ನು, ಈ ಪ್ರಕರಣ ಸಂಬಂಧ ಎಲ್ಲ ಆರೋಪಿಗಳ ವಿರುದ್ಧ ರೌಡಿಪಟ್ಟಿ ತೆರೆಯಲಾಗುವುದು ಎಂದು ನಗರ ಪೊಲೀಸ್ ಆಯುಕ್ತ ದಯಾನಂದ್ ಹೇಳಿದ್ದಾರೆ.
ಶುಕ್ರವಾರ ನಗರದ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಪೂರ್ವ ವಿಭಾಗದ ಪೊಲೀಸರು ಸಾಹಿಲ್ ಹುಸೈನ್, ನಝ್ಮದ್, ಅದ್ನಾನ್ ಪಾಷಾ, ಸೇರಿದಂತೆ ಒಟ್ಟು 11 ಆರೋಪಿಗಳನ್ನು ಬಂಧಿಸಿದ್ದು, ಇವರಿಂದ 7 ದ್ವಿಚಕ್ರ ವಾಹನಗಳನ್ನ ಜಪ್ತಿ ಮಾಡಲಾಗಿದೆ ಎಂದು ಹೇಳಿದರು.
ಫೆ.13ರಂದು ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೊ ಹಾಕಲು ಮಾರಕಾಸ್ತ್ರಗಳನ್ನು ಹಿಡಿದು, ವ್ಹೀಲಿಂಗ್ ಮಾಡುತ್ತಾ ಕೆ.ಜಿ ಹಳ್ಳಿಯಿಂದ, ಡಿ.ಜೆ ಹಳ್ಳಿ, ರಾಮಮೂರ್ತಿ ನಗರ ಮಾರ್ಗವಾಗಿ ಹೊಸಕೋಟೆ ಟೋಲ್ವರೆಗೂ ಆರೋಪಿಗಳು ಹೋಗಿದ್ದರು. ಅದೇ ರೀತಿ ಕೆ.ಜಿ ಹಳ್ಳಿಗೆ ವಾಪಸಾಗಿದ್ದರು. ಹಬ್ಬದ ಹಿನ್ನೆಲೆಯಲ್ಲಿ ಪೂರ್ವ ವಿಭಾಗದಲ್ಲಿ ಪೊಲೀಸರ ಬಿಗಿ ಬಂದೋಬಸ್ತ್ ಕಲ್ಪಿಸಿದ್ದರ ಮಧ್ಯೆಯೂ ಇಂತಹ ಕೃತ್ಯವೆಸಗಿದ್ದರು.
ಈ ಸಂಬಂಧ ಕಾರ್ಯಾಚರಣೆ ನಡೆಸಿದ ಪೊಲೀಸರು ಆರೋಪಿಗಳ ವಿರುದ್ಧ ಶಸ್ತ್ರಾಸ್ತ್ರ ಕಾಯ್ದೆಯಡಿ ಡಿ.ಜೆ.ಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು. ಸದ್ಯ 11 ಆರೋಪಿಗಳನ್ನ ಪತ್ತೆಹಚ್ಚಿ ಬಂಧಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.







