ವಿದ್ಯಾರ್ಥಿಗಳ ಆತಂಕ, ಮತ ಕಳ್ಳತನದ ಬಗ್ಗೆ ಆರೆಸ್ಸೆಸ್ ಮೌನವೇಕೆ? : ಪ್ರಿಯಾಂಕ್ ಖರ್ಗೆ

ಪ್ರಿಯಾಂಕ್ ಖರ್ಗೆ
ಬೆಂಗಳೂರು : ರೈತರ ಸಂಕಷ್ಟ, ವಿದ್ಯಾರ್ಥಿಗಳ ಆತಂಕ ಅಥವಾ ಮತ ಕಳ್ಳತನದ ಆರೋಪಗಳ ಬಗ್ಗೆ ಆರೆಸ್ಸೆಸ್ ಮೌನವೇಕೆ? ಅಲ್ಲದೆ, ಇಂತಹ ವಿಷಯ ಬಂದಾಗ, ಅವರ ಉಪನ್ಯಾಸಗಳು ಇದ್ದಕ್ಕಿದ್ದಂತೆ ನಿಂತು ಹೋಗುತ್ತವೆ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ಈ ಸಂಬಂಧ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಅವರು, ಆರೆಸ್ಸೆಸ್ನವರು ಭಾರತದ ಆರ್ಥಿಕತೆ, ವಿದೇಶಾಂಗ ನೀತಿ, ಧರ್ಮ, ಸಾಮಾಜಿಕ ಮೌಲ್ಯಗಳು, ವಿಜ್ಞಾನದ ವ್ಯಾಖ್ಯೆ ಮತ್ತು ಭಾರತೀಯರು ಎಷ್ಟು ಮಕ್ಕಳನ್ನು ಹೊಂದಿರಬೇಕು ಎಂಬ ವಿಷಯಗಳವರೆಗೂ ಅಭಿಪ್ರಾಯಗಳಿವೆ ಎಂದಿದ್ದಾರೆ.
ಅಲ್ಲದೆ ಗೋಮೂತ್ರವು ಕ್ಯಾನ್ಸರ್ ಅನ್ನು ಗುಣಪಡಿಸಬಲ್ಲದು ಎಂಬ ಪ್ರತಿಪಾದನೆಗಳನ್ನು ಪ್ರಚಾರ ಮಾಡುವುದರಿಂದ ಹಿಡಿದು, ಪೌರಾಣಿಕ ಕಥೆಗಳನ್ನು ವೈಜ್ಞಾನಿಕ ಸತ್ಯಗಳೆಂದು ಬಿಂಬಿಸುವವರೆಗೆ ಆರೆಸ್ಸೆಸ್ನವರ ಪರಿಣತಿಗೆ ಮೀರಿದ ವಿಷಯವೇ ಇಲ್ಲದಂತಿದೆ ಎಂದು ಅವರು ಹೇಳಿದ್ದಾರೆ.
ಮೋಹನ್ ಭಾಗವತ್ ಈಗ ಎಲ್ಲಿದ್ದಾರೆ? ಚುನಾವಣಾ ಪಾರದರ್ಶಕತೆ ಮತ್ತು ಹೊಣೆಗಾರಿಕೆಗೆ ಸಂಬಂಧಿಸಿದ ಪ್ರಶ್ನೆಗಳು ಎದುರಾದಾಗ ಈ ರೀತಿಯ ಕಿವುಡು ಮಾಡುವಂತಹ ಮೌನವೇಕೆ ಎಂದು ಅವರು ಪ್ರಶ್ನಿಸಿದ್ದಾರೆ.




