ಸಿ.ಟಿ.ರವಿ ವಿರುದ್ಧ ಕೇಸು ಹಾಕದಿದ್ದರೆ ಪೊಲೀಸರ ವಿರುದ್ಧ ನಾನೇ ಹೋರಾಟ ಮಾಡುವೆ: ಬಿ.ಕೆ.ಹರಿಪ್ರಸಾದ್

ಬೆಂಗಳೂರು, ಜು.27: ದ್ವೇಷ ಭಾಷಣ ಆರೋಪಕ್ಕೆ ಸಂಬಂಧಿಸಿ ಎಫ್ಐಆರ್ ಆಗಿರುವುದರಿಂದ ವಿಚಾರಣೆಗೆ ಹಾಜರಾಗಲು ನೋಟಿಸ್ ನೀಡಲು ತೆರಳಿದ್ದ ಪೊಲೀಸರ ಕರ್ತವ್ಯಕ್ಕೆ ಬಿಜೆಪಿ ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಅಡ್ಡಿಪಡಿಸಿದ್ದಾರೆ. ಆದ್ದರಿಂದ ಅವರ ವಿರುದ್ಧ ಪೊಲೀಸರು ಕೇಸು ದಾಖಲಿಸಬೇಕು. ಇಲ್ಲವಾದಲ್ಲಿ ಪೊಲೀಸರ ವಿರುದ್ಧ ಖುದ್ದು ತಾನೇ ಹೋರಾಟ ಮಾಡಬೇಕಾಗುತ್ತದೆ ಎಂದು ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ ಎಚ್ಚರಿಸಿದ್ದಾರೆ.
ನಗರದಲ್ಲಿಂದು ಸುದ್ದಿಗಾರರ ಜೊತೆ ಮಾತನಾಡಿದ ಅವರು, ಪೊಲೀಸರಿಗೆ ಅಡ್ಡಿಪಡಿಸಿದರೆ ಸರಕಾರಿ ನೌಕರರ ಕರ್ತವ್ಯಕ್ಕೆ ಅಡ್ಡಿಪಡಿಸಿದ ವಿಚಾರದಲ್ಲಿ ಕೇಸು ದಾಖಲಿಸಲು ಅವಕಾಶ ಇದೆ. ಆದ್ದರಿಂದ ಸಿ.ಟಿ.ರವಿ ವಿರುದ್ಧ ಕೇಸು ದಾಖಲಿಸದಿದ್ದಲ್ಲಿ ಪೊಲೀಸರು ವಿರುದ್ಧ ನಾನೇ ಹೋರಾಟ ಮಾಡಬೇಕಾಗೊತ್ತೆ ಎಂದು ಹೇಳಿದರು.
ಮಾಧ್ಯಮದವರ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿ ಬಿ.ಕೆ.ಹರಿಪ್ರಸಾದ್, ಸಿ.ಟಿ.ರವಿಗೆ ಮುಸ್ಲಿಮ್, ಪಾಕಿಸ್ತಾನ್, ಮಟನ್, ಮಚ್ಲಿ ಅನ್ನೋದನ್ನು ಬಿಟ್ಟು, ದೇಶದ ಬಗ್ಗೆ, ರಾಜ್ಯ ಬಗ್ಗೆ ಏನೂ ಬೇರೆ ಗೊತ್ತಿಲ್ಲ ಎಂದು ಟೀಕಿಸಿದರು.
FIR ಆದಾಗ ಅದನ್ನ ಸ್ವೀಕಾರ ಮಾಡಿ, ನ್ಯಾಯಾಲಯದಲ್ಲಿ ವಾದ ವಿವಾದ ಮಾಡಲು ತಯಾರಿರ ಬೇಕು, ಅವರಿಗೆ ಆ ಸಿದ್ದಾಂತದಲ್ಲಿ ನಂಬಿಕೆ ಇದ್ದರೆ FIR ಆದರೂ ಪರವಾಗಿಲ್ಲ ಹೋರಾಟ ಮಾಡ್ತೇವೆ ಎನ್ನಬೇಕು ಎಂದು ಬಿ.ಕೆ.ಹರಿಪ್ರಸಾದ್ ಸವಾಲು ಹಾಕಿದರು.




