ವಿಪ್ರೋ ಬೆಂಗಳೂರು ಮ್ಯಾರಥಾನ್ 2026: ಬುಗಾಥಾ ಶ್ರೀನು ಮತ್ತು ಭಾಗೀರಥಿ ಚಾಂಪಿಯನ್

ಬೆಂಗಳೂರು : ವಿಪ್ರೋ ಬೆಂಗಳೂರು ಮ್ಯಾರಥಾನ್‌ನ 13ನೇ ಆವೃತ್ತಿಯು ರವಿವಾರ ಜರುಗಿತು. ವಿಶ್ವದ ಟಾಪ್ 50 ಮ್ಯಾರಥಾನ್‌ಗಳಲ್ಲಿ ಒಂದಾಗಿ ಗುರುತಿಸಿಕೊಂಡಿರುವ ಈ ಓಟದಲ್ಲಿ ದೇಶದ ವಿವಿಧ ಭಾಗಗಳಿಂದ ಬಂದಿದ್ದ 45,000ಕ್ಕೂ ಹೆಚ್ಚು ಓಟಗಾರರು ಭಾಗವಹಿಸಿದರು. ಎನ್‌ಇಬಿ ಸ್ಪೋರ್ಟ್ಸ್, ಕರ್ನಾಟಕ ಅಥ್ಲೆಟಿಕ್ಸ್ ಅಸೋಸಿಯೇಷನ್, ವಿಪ್ರೋ ಬೆಂಗಳೂರು ಹಾಗೂ ಶ್ರೀರಾಮ್ ಪ್ರಾಪರ್ಟೀಸ್ ಸಹಯೋಗದಲ್ಲಿ ಈ ಕ್ರೀಡಾಕೂಟವನ್ನು ಆಯೋಜಿಸಲಾಗಿತ್ತು.
ಎಲೈಟ್ ಪೂರ್ಣ (ಫುಲ್) ಮ್ಯಾರಥಾನ್‌ನ ಪುರುಷರ ವಿಭಾಗದಲ್ಲಿ ಭಾರತೀಯ ಸೇನೆಯ ಬುಗಾಥಾ ಶ್ರೀನು 2 ಗಂಟೆ 22 ನಿಮಿಷ 53 ಸೆಕೆಂಡ್‌ಗಳಲ್ಲಿ ಗುರಿ ತಲುಪಿ ಚಾಂಪಿಯನ್ ಪ್ರಶಸ್ತಿ ಮುಡಿಗೇರಿಸಿಕೊಂಡರು. ಮಹಿಳೆಯರ ವಿಭಾಗದಲ್ಲಿ ಭಾಗೀರಥಿ 3 ಗಂಟೆ 18 ಸೆಕೆಂಡ್‌ಗಳಲ್ಲಿ ಓಟ ಮುಗಿಸಿ ಅಗ್ರಸ್ಥಾನ ಪಡೆದರು. ಪುರುಷರ ವಿಭಾಗದಲ್ಲಿ ಕರ್ನಾಟಕದ ಬೆಳಗಾವಿ ಮೂಲದ ಅಮಿತ್ ಪಾಟೀಲ್ ದ್ವಿತೀಯ ಸ್ಥಾನ ಪಡೆದರೆ, ಮಹಿಳೆಯರ ವಿಭಾಗದಲ್ಲಿ ಉತ್ತರಾಖಂಡದ 21 ವರ್ಷದ ಯುವ ಓಟಗಾರ್ತಿ ಮೀನಾಕ್ಷಿ ನೇಗಿ ರನ್ನರ್-ಅಪ್ ಪ್ರಶಸ್ತಿ ತಮ್ಮದಾಗಿಸಿಕೊಂಡರು.
ಹಾಫ್ ಮ್ಯಾರಥಾನ್‌ನ ಪುರುಷರ ವಿಭಾಗದಲ್ಲಿ ಅಂಕಿತ್ ಗುಪ್ತಾ (1 ಗಂಟೆ 9 ನಿಮಿಷ 12 ಸೆಕೆಂಡ್) ಮತ್ತು ಮಹಿಳೆಯರ ವಿಭಾಗದಲ್ಲಿ ಸುಗಂಧಾ ಶರ್ಮಾ (1 ಗಂಟೆ 34 ನಿಮಿಷ 55 ಸೆಕೆಂಡ್) ಪ್ರಥಮ ಸ್ಥಾನ ಗಳಿಸಿ ವಿಜೇತರಾದರು. ಚುಟುಕು ಓಟದ ಮಾದರಿಯಾದ 10ಕೆ ವಿಭಾಗದ ಪುರುಷರಲ್ಲಿ ಲಕ್ಷ್ಮೀಶ ಸಿ.ಎಸ್. (33 ನಿಮಿಷ 54 ಸೆಕೆಂಡ್) ಮತ್ತು ಮಹಿಳೆಯರಲ್ಲಿ ಎಲಿನಾ ಭಟ್ (52 ನಿಮಿಷ 7 ಸೆಕೆಂಡ್) ಪ್ರಶಸ್ತಿ ಜಯಿಸಿದರು. ಇದೇ ವಿಭಾಗದಲ್ಲಿ 9ನೇ ತರಗತಿಯ ವಿದ್ಯಾರ್ಥಿ ಕೌಶಿಕ್ ನಾಯಕ್ ಮೂರನೇ ಸ್ಥಾನ ಪಡೆದು ಎಲ್ಲರ ಗಮನ ಸೆಳೆದರು.
ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಕ್ರೀಡಾಪಟುಗಳನ್ನು ಪ್ರೋತ್ಸಾಹಿಸಿದರು. ಮುಂಜಾನೆ 3.50ಕ್ಕೆ ಆರಂಭವಾದ ಪೂರ್ಣ ಮ್ಯಾರಥಾನ್‌ಗೆ ವಿಪ್ರೋ ಸಂಸ್ಥೆಯ ರಂಜಿತಾ ಘೋಷ್ ಮತ್ತು ಎನ್‌ಇಬಿ ಸ್ಪೋರ್ಟ್ಸ್'ನ ನಾಗರಾಜ್ ಆಡಿಗಾ ಚಾಲನೆ ನೀಡಿದರು. ಉಳಿದಂತೆ ಫಿಟ್ನೆಸ್ ತಾರೆ ಮಂದಿರಾ ಬೇಡಿ, ಸಂಸದ ತೇಜಸ್ವಿ ಸೂರ್ಯ, ಶಾಸಕ ಎನ್.ಎ. ಹಾರಿಸ್ ಮತ್ತು ವಿಪ್ರೋ ಸಿಇಒ ಸಂಜೀವ್ ಜೈನ್ ಸೇರಿದಂತೆ ಹಲವು ಗಣ್ಯರು ವಿವಿಧ ವಿಭಾಗಗಳ ಓಟಕ್ಕೆ ಹಸಿರು ನಿಶಾನೆ ತೋರಿದರು.
ಪೂರ್ಣ ಮತ್ತು ಹಾಫ್ ಮ್ಯಾರಥಾನ್ ಸ್ಪರ್ಧೆಗಳು ವಿಧಾನಸೌಧ ಮತ್ತು ಕಬ್ಬನ್ ಪಾರ್ಕ್ ಸೇರಿದಂತೆ ಬೆಂಗಳೂರಿನ ಪ್ರಮುಖ ಐತಿಹಾಸಿಕ ತಾಣಗಳ ಮೂಲಕ ಸಾಗಿದವು. ಈ ವರ್ಷದ ಓಟದ ಮಾರ್ಗದಲ್ಲಿ ಬೆಂಗಳೂರಿನ ಪ್ರಸಿದ್ಧ ಹಲಸೂರು ಕೆರೆಯ ರಸ್ತೆಯನ್ನು ಹೊಸದಾಗಿ ಸೇರಿಸಲಾಗಿತ್ತು. ಹಿರಿಯ ನಾಗರಿಕರು, ರಕ್ಷಣಾ ಸಿಬ್ಬಂದಿ ಹಾಗೂ ಕಾರ್ಪೊರೇಟ್ ಉದ್ಯೋಗಿಗಳಿಗೆ ಈ ಆವೃತ್ತಿಯು ಅತ್ಯುತ್ತಮ ಕ್ರೀಡಾ ಅನುಭವವನ್ನು ನೀಡಿತು.






