ಯುವ ಕಾಂಗ್ರೆಸ್‍ನಿಂದ ‘ಭಾರತ್ ಜೋಡೋ ಯುವ ಸಂಘ’ ರಚನೆಗೆ ಜಿಲ್ಲಾ ಉಸ್ತುವಾರಿಗಳ ನೇಮಕ

ಬೆಂಗಳೂರು : ರಾಜ್ಯಾದ್ಯಂತ ಗ್ರಾಮ ಪಂಚಾಯಿತಿ ಹಾಗೂ ವಾರ್ಡ್ ಮಟ್ಟದಲ್ಲಿ ‘ಭಾರತ್ ಜೋಡೋ ಯುವ ಸಂಘ’ ರಚಿಸುವ ಕಾರ್ಯಕ್ಕೆ ವೇಗ ನೀಡುವ ಉದ್ದೇಶದಿಂದ ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ಸಮಿತಿ(ಕೆಪಿವೈಸಿಸಿ) ವತಿಯಿಂದ ಜಿಲ್ಲಾ ಉಸ್ತುವಾರಿಗಳನ್ನು ನೇಮಿಸಲಾಗಿದೆ.
ಕೆಪಿವೈಸಿಸಿ ರಾಜ್ಯಾಧ್ಯಕ್ಷ ಎಚ್.ಎಸ್.ಮಂಜುನಾಥ್ ಗೌಡ ಆದೇಶದ ಮೇರೆಗೆ ನಾಗೇಶ್ ಕರಿಯಪ್ಪ, ಸಿ.ಜಿ.ಮಧುಸೂದನ್ ಹಾಗೂ ಸಿದ್ದು ಹಳ್ಳೇಗೌಡ ಅವರನ್ನು ಭಾರತ್ ಜೋಡೋ ಯುವ ಸಂಘ ರಚನೆಯ ಉಸ್ತುವಾರಿಗಳನ್ನಾಗಿ ನೇಮಿಸಲಾಗಿದೆ.
ನಾಗೇಶ್ ಕರಿಯಪ್ಪ ಅವರಿಗೆ ಮೈಸೂರು ಗ್ರಾಮಾಂತರ, ರಾಮನಗರ, ಮಂಡ್ಯ, ಮೈಸೂರು ನಗರ, ತುಮಕೂರು, ಚಾಮರಾಜನಗರ, ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ಉತ್ತರ, ಬೆಂಗಳೂರು ದಕ್ಷಿಣ, ಬೆಂಗಳೂರು ಪೂರ್ವ, ಬೆಂಗಳೂರು ಪಶ್ಚಿಮ ಹಾಗೂ ಬೆಂಗಳೂರು ಕೇಂದ್ರ ಜಿಲ್ಲೆಗಳ ಉಸ್ತುವಾರಿ ನೀಡಲಾಗಿದೆ.
ಸಿ.ಜಿ.ಮಧುಸೂದನ್ ಅವರಿಗೆ ಶಿವಮೊಗ್ಗ, ಉತ್ತರ ಕನ್ನಡ, ಚಿಕ್ಕಮಗಳೂರು, ಹಾಸನ, ದಾವಣಗೆರೆ, ಹುಬ್ಬಳ್ಳಿ-ಧಾರವಾಡ, ಧಾರವಾಡ ಗ್ರಾಮಾಂತರ, ದಕ್ಷಿಣ ಕನ್ನಡ, ಉಡುಪಿ, ಕೊಡಗು ಹಾಗೂ ಚಿತ್ರದುರ್ಗ ಜಿಲ್ಲೆಗಳ ಉಸ್ತುವಾರಿ, ಸಿದ್ದು ಹಳ್ಳೇಗೌಡ ಅವರಿಗೆ ಬೀದರ್, ಗುಲ್ಬರ್ಗ, ಯಾದಗಿರಿ, ರಾಯಚೂರು, ಬಳ್ಳಾರಿ ಗ್ರಾಮಾಂತರ, ಬಳ್ಳಾರಿ ನಗರ, ವಿಜಯನಗರ, ಕೊಪ್ಪಳ, ಬಾಗಲಕೋಟೆ, ವಿಜಯಪುರ, ಚಿಕ್ಕೋಡಿ, ಬೆಳಗಾವಿ ನಗರ, ಬೆಳಗಾವಿ ಗ್ರಾಮಾಂತರ, ಹಾವೇರಿ ಹಾಗೂ ಗದಗ ಜಿಲ್ಲೆಗಳ ಉಸ್ತುವಾರಿ ನೀಡಿ ಆದೇಶಿಸಲಾಗಿದೆ.
ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ‘ಭಾರತ್ ಜೋಡೋ ಯುವ ಸಂಘ’ಗಳ ರಚನೆ ಹಾಗೂ ಯುವಕರ ನೋಂದಣಿ ಪ್ರಕ್ರಿಯೆಯನ್ನು ಪರಿಣಾಮಕಾರಿಯಾಗಿ ನಡೆಸುವ ಜವಾಬ್ದಾರಿಯನ್ನು ಉಸ್ತುವಾರಿಗಳಿಗೆ ನೀಡಲಾಗಿದ್ದು, ಗ್ರಾಮ ಪಂಚಾಯಿತಿ ಮತ್ತು ವಾರ್ಡ್ ಮಟ್ಟದಲ್ಲಿ ಯುವಕರನ್ನು ಸಂಘಟಿಸುವುದು, ಹೆಚ್ಚಿನ ಸಂಖ್ಯೆಯಲ್ಲಿ ಯುವಕರನ್ನು ‘ಭಾರತ್ ಜೋಡೋ ಯುವ ಸಂಘ’ದೊಂದಿಗೆ ಸಂಪರ್ಕಿಸುವುದು ಹಾಗೂ ಸಂಘಟನೆಯ ಚಟುವಟಿಕೆಗಳನ್ನು ಸ್ಥಳೀಯ ಮಟ್ಟದಲ್ಲಿ ಬಲಪಡಿಸುವುದು ಉಸ್ತುವಾರಿಗಳ ಪ್ರಮುಖ ಜವಾಬ್ದಾರಿಯಾಗಿರಲಿದೆ ಎಂದು ಪ್ರಕಟಣೆ ತಿಳಿಸಿದೆ.






