ʼಸುಮಾರಣ್ಣನ ಪೆನ್ಡ್ರೈವ್ ಪೂಜೆʼ; ಆಯುಧ ಪೂಜೆಯಂದು ಯುವ ಕಾಂಗ್ರೆಸ್ ವ್ಯಂಗ್ಯ

Photo credit : X@IYCKarnataka
ಬೆಂಗಳೂರು : ಮಾಜಿ ಮುಖ್ಯಮಂತ್ರಿ ಹಾಗೂ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಮತ್ತು ಅವರ ಪುತ್ರ ನಿಖಿಲ್ ಕುಮಾರಸ್ವಾಮಿ ಆಯುಧ ಪೂಜೆಯಂದು ತಮ್ಮ ಆಯುಧಗಳಾದ ಪೆನ್ಡ್ರೈವ್ಗಳಿಗೆ ಪೂಜೆ ಸಲ್ಲಿಸುತ್ತಿರುವಂತೆ ಬಿಂಬಿಸುವ ಚಿತ್ರವನ್ನು ಬಿಡುಗಡೆ ಮಾಡಿರುವ ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ಸಮಿತಿ, ಜೆಡಿಎಸ್ ನಾಯಕತ್ವದ ವಿರುದ್ಧ ವ್ಯಂಗ್ಯಭರಿತ ಟೀಕಾಪ್ರಹಾರ ನಡೆಸಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಕೆಪಿವೈಸಿಸಿ ರಾಜ್ಯಾಧ್ಯಕ್ಷ ಎಚ್.ಎಸ್.ಮಂಜುನಾಥ್ ಗೌಡ, ರಾಜ್ಯದಲ್ಲಿ ಉದ್ಯೋಗ, ಅಭಿವೃದ್ಧಿ ಹಾಗೂ ಜನರ ಸಮಸ್ಯೆಗಳ ಕುರಿತು ಚರ್ಚಿಸಬೇಕಾದ ನಾಯಕರು ಪೆನ್ಡ್ರೈವ್ ರಾಜಕಾರಣದ ಸುತ್ತಲೇ ಸಾರ್ವಜನಿಕ ಗಮನ ಸೆಳೆಯಲು ಯತ್ನಿಸುತ್ತಿರುವುದು ದುರದೃಷ್ಟಕರ. ರಾಜಕೀಯದಲ್ಲಿ ಆರೋಪ-ಪ್ರತ್ಯಾರೋಪಗಳಿಗಿಂತ ಜನರಿಗೆ ನೀಡುವ ಉತ್ತರಗಳು ಮತ್ತು ಜನಪರ ಕೆಲಸಗಳು ಮುಖ್ಯ ಎಂದು ಹೇಳಿದ್ದಾರೆ.
ಪೆನ್ಡ್ರೈವ್ಗಳನ್ನು ರಾಜಕೀಯ ಅಸ್ತ್ರಗಳಂತೆ ಬಿಂಬಿಸುವುದರಿಂದ ಯುವಜನರ ಭವಿಷ್ಯ ರೂಪುಗೊಳ್ಳುವುದಿಲ್ಲ. ನಿರುದ್ಯೋಗಿ ಯುವಕರಿಗೆ ಉದ್ಯೋಗ, ರೈತರಿಗೆ ಭದ್ರತೆ ಮತ್ತು ಜನರಿಗೆ ನೆಮ್ಮದಿ ಒದಗಿಸುವುದೇ ರಾಜಕಾರಣದ ನಿಜವಾದ ಧರ್ಮ. ಪೆನ್ ಡ್ರೈವ್, ಸಿಡಿಗಳ ಜಪ ಮತ್ತು ಪೂಜೆಗಿಂತ ಜನಸೇವೆಯ ಸಂಕಲ್ಪಕ್ಕೆ ಆದ್ಯತೆ ನೀಡಲಿ ಎಂದು ಅವರು ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.






