Bengaluru | ತಾಯಿ, ಸಹೋದರಿಯನ್ನು ಕೊಲೆಗೈದು ವ್ಯಕ್ತಿ ಆತ್ಮಹತ್ಯೆಗೆ ಯತ್ನ: ಇಬ್ಬರ ಸ್ಥಿತಿ ಗಂಭೀರ

ಮೋಹನ್ ಗೌಡ | ಆಶಾ | ವರ್ಷಿತಾ
ಬೆಂಗಳೂರು: ಸಾಲಗಾರರ ಕಾಟಕ್ಕೆ ಬೇಸತ್ತು ವ್ಯಕ್ತಿಯೊಬ್ಬ ತನ್ನ ತಾಯಿ ಹಾಗೂ ಸಹೋದರಿಯನ್ನು ಕೊಲೆಗೈದು, ಅಕ್ಕನ ಮಗನ ಕುತ್ತಿಗೆ ಕುಯ್ದು ತಾನು ಕೂಡಾ ಆತ್ಮಹತ್ಯೆಗೆ ಯತ್ನಿಸಿದ ಬೆಚ್ಚಿ ಬೀಳಿಸುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ಆನೇಕಲ್ ತಾಲೂಕಿನ ಮಲ್ಲೇನಹಳ್ಳಿಯಲ್ಲಿ ನಡೆದಿದೆ.
ಮೋಹನ್ ಗೌಡ(27) ಕೃತ್ಯ ಎಸಗಿದ ಆರೋಪಿಯಾಗಿದ್ದಾನೆ. ಈತನ ತಾಯಿ ಆಶಾ(55), ಅಕ್ಕ ವರ್ಷಿತಾ(34) ಕೊಲೆಯಾದವರು. ಅಕ್ಕನ ಮಗ ಮಯಾಂಕ್(11)ನ ಕೊಲೆಗೂ ಆರೋಪಿ ಯತ್ನಿಸಿದ್ದು, ಆತನ ಸ್ಥಿತಿಯೂ ಗಂಭೀರವಾಗಿದೆ. ಜೊತೆಗೆ ಆತ್ಮಹತ್ಯೆಗೆ ಯತ್ನಿಸಿರುವ ಮೋಹನ್ ಗೌಡನ ಸ್ಥಿತಿಯೂ ಗಂಭೀರವಾಗಿದೆ ಎಂದು ತಿಳಿದುಬಂದಿದೆ.
ಚೀಟಿ ವ್ಯವಹಾರದಿಂದ ಸಾಲ ಹೊಂದಿದ್ದ ಮೋಹನ್ ಗೌಡ ಸಾಲಗಾರರ ಕಾಟದಿಂದ ತೀವ್ರವಾಗಿ ಬೇಸತ್ತಿದ್ದ ಎನ್ನಲಾಗಿದೆ. ಈ ಸಂಬಂಧ ಕಳೆದ ರಾತ್ರಿ ತಾವು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ವೀಡಿಯೋ ಮಾಡಿ ತನ್ನ ಸಂಬಂಧಿಕರಿಗೆ ಕಳುಹಿಸಿದ್ದ. ಈ ವೀಡಿಯೋ ನೋಡಿ ಆತಂಕಗೊಂಡ ಸಂಬಂಧಿಕರು ತಕ್ಷಣ ಮನೆ ಬಳಿ ಧಾವಿಸಿದಾಗ ಕೃತ್ಯ ಬೆಳಕಿಗೆ ಬಂದಿದೆ.
ಈ ವೇಳೆ ಮನೆಯ ಬಾಗಿಲು ಲಾಕ್ ಆಗಿತ್ತು. ಬಳಿಕ ಹಿಂಬಾಗಿಲನ್ನು ಒಡೆದು ಒಳಗೆ ಪ್ರವೇಶಿಸಿದಾಗ ಎರಡು ಮೃತದೇಹಗಳು ಪತ್ತೆಯಾಗಿವೆ. ಜೊತೆಗೆ ಕುತ್ತಿಗೆ ಕುಯ್ದ ಸ್ಥಿತಿಯಲ್ಲಿ ಮೋಹನ್ ಮತ್ತು ಮಯಾಂಕ್ ನೆಲದ ಮೇಲೆ ಒದ್ದಾಡುತ್ತಿರುವುದನ್ನು ಕಂಡ ಸಂಬಂಧಿಕರು ಕೂಡಲೇ ಅವರಿಬ್ಬರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.
ಸ್ಥಳಕ್ಕೆ ಬೆಂಗಳೂರು ಗ್ರಾಮಾಂತರ ಎಸ್ಪಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಅತ್ತಿಬೆಲೆ ಪೋಲಿಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.
ಘಟನೆ ಬಗ್ಗೆ ಬೆಂಗಳೂರು ಗ್ರಾಮಾಂತರ ಎಸ್ಪಿ ಚಂದ್ರಕಾತ್ ಮಾಹಿತಿ ನೀಡಿದ್ದು, ಶನಿವಾರ ರಾತ್ರಿ 10:30ರ ಸುಮಾರಿಗೆ ಘಟನೆ ಬಗ್ಗೆ ಮಾಹಿತಿ ಸಿಕ್ಕಿದೆ. ಕೂಡಲೇ ಅತ್ತಿಬೆಲೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಪ್ರಾಥಮಿಕ ತನಿಖೆಯಲ್ಲಿ ಅತಿಯಾದ ಸಾಲ ಕೃತ್ಯಕ್ಕೆ ಕಾರಣ ಎಂಬುದು ಗೊತ್ತಾಗಿದೆ. ಗಾಯಾಳು ಮೋಹನ್ ಚೀಟಿ ವ್ಯವಹಾರದಲ್ಲಿ ಸಾಲ ಮಾಡಿಕೊಂಡಿದ್ದ. ಜೊತೆಗೆ ಐಷಾರಾಮಿ ಜೀವನಕ್ಕೆಂದು ದುಂದು ವೆಚ್ಚ ಮಾಡಿದ್ದು, ಸಾಲ ತೀರಿಸಲಾಗದೆ ಇಡೀ ಕುಟುಂಬ ಆತ್ಮಹತ್ಯೆಗೆ ನಿರ್ಧರಿಸಿರುವುದು ಅವರು ಮಾಡಿಕೊಂಡಿರುವ ವೀಡಿಯೊದಲ್ಲಿದೆ. ಗಾಯಾಳು ಮೋಹನ್ ತನ್ನ ತಾಯಿ, ಅಕ್ಕ ಮತ್ತು ಅಕ್ಕನ ಮಗನ ಕುತ್ತಿಗೆ ಸೀಳಿ ಬಳಿಕ ತಾನು ಕುತ್ತಿಗೆ ಸೀಳಿಕೊಂಡು ಆತ್ಮಹತ್ಯೆಗೆ ಯತ್ನಿಸಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಮುಂದಿನ ತನಿಖೆ ವೇಳೆ ನಿಖರ ಕಾರಣ ತಿಳಿಯಲಿದೆ ಎಂದಿದ್ದಾರೆ.






