ಹೊಸಕೋಟೆ ಹೆದ್ದಾರಿಯಲ್ಲಿ ಭೀಕರ ಸರಣಿ ಅಪಘಾತ: ಏಳು ಮಂದಿ ಮೃತ್ಯು

ಬೆಂಗಳೂರು: ಹೊಸಕೋಟೆ-ದಾಬಸ್‍ಪೇಟೆ ನಡುವಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಭವಿಸಿದ ಭೀಕರ ಸರಣಿ ಅಪಘಾತದಲ್ಲಿ ಸ್ಥಳದಲ್ಲೇ ಏಳು ಮಂದಿ ಮೃತಪಟ್ಟಿರುವ ಘಟನೆ ಶುಕ್ರವಾರ ನಡೆದಿದೆ.
ಮೃತಪಟ್ಟವರೆಲ್ಲರೂ 20 ವರ್ಷದೊಳಗಿನವರಾಗಿದ್ದಾರೆ. ಹೊಸಕೋಟೆ ತಾಲೂಕಿನ ಎಂ.ಸತ್ಯವಾರ ಗ್ರಾಮದ ಬಳಿ ಶುಕ್ರವಾರ ಬೆಳಗಿನ ಜಾವ ಒಂದು ದ್ವಿಚಕ್ರ ವಾಹನ, ಎರಡು ಕಾರು ಮತ್ತು ಕ್ಯಾಂಟರ್ ನಡುವೆ ಸಂಭವಿಸಿದ ಸರಣಿ ಅಪಘಾತದಲ್ಲಿ ಕಾರಿನಲ್ಲಿದ್ದ 6 ಮಂದಿ ಯುವಕರು ಮತ್ತು ದ್ವಿಚಕ್ರ ವಾಹನದಲ್ಲಿದ್ದ ಓರ್ವ ಸೇರಿದಂತೆ 7 ಜನ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಮೃತರನ್ನು ದೇವನಹಳ್ಳಿ ನಿವಾಸಿ ದ್ವಿಚಕ್ರ ವಾಹನ ಸವಾರ ಗಗನ್(20) ಹಾಗೂ ಕಾರಿನಲ್ಲಿದ್ದ ಅಶ್ವಿನ್ ನಾಯರ್(17), ಎಥಾನ್ ಜಾರ್ಜ್ (17), ಭರತ್(18), ಅರ್ಹಾನ್ ಷರೀಫ್(17), ಅಯಾನ್ ಅಲಿ(17), ಅಜೀತ್ ಬಾಬಿ(17) ಎಂದು ಗುರುತಿಸಲಾಗಿದೆ.
ವೇಗವಾಗಿದ್ದ ಯುವಕರಿದ್ದ ಕಾರು ನಿಯಂತ್ರಣ ಕಳೆದುಕೊಂಡು ಮೊದಲಿಗೆ ತನ್ನ ಮುಂದೆ ಚಲಿಸುತ್ತಿದ್ದ ದ್ವಿಚಕ್ರ ವಾಹನಕ್ಕೆ ಢಿಕ್ಕಿ ಹೊಡೆದಿದೆ. ಬಳಿಕ ಡಿವೈಡರ್‍ಗೆ ಢಿಕ್ಕಿಯಾಗಿ ಪಕ್ಕದಲ್ಲಿ ಬರುತ್ತಿದ್ದ ಕ್ಯಾಂಟರ್‍ಗೆ ಗುದ್ದಿದೆ. ಬಳಿಕ ಮತ್ತೊಂದು ಕಾರಿಗೂ ಗುದ್ದಿದೆ. ಢಿಕ್ಕಿ ರಭಸಕ್ಕೆ ಕ್ಯಾಂಟರ್‍ನ ಚಕ್ರಗಳು ತುಂಡಾಗಿವೆ. ಅಪಘಾತದ ರಭಸಕ್ಕೆ ಯುವಕರಿದ್ದ ಕಾರು ಸಂಪೂರ್ಣ ಜಖಂಗೊಂಡಿದೆ.
ಮೃತ ದ್ವಿಚಕ್ರ ವಾಹನ ಸವಾರನನ್ನು ಗಗನ್ ತನ್ನದಲ್ಲದ ತಪ್ಪಿಗೆ ಪ್ರಾಣ ಕಳೆದುಕೊಂಡಿದ್ದು, ಇದ್ದ ಒಬ್ಬನೇ ಮಗನನ್ನು ಕಳೆದುಕೊಂಡು ಕುಟುಂಬದಲ್ಲಿ ಆಕ್ರಂದನ ಮುಗಿಲು ಮುಟ್ಟಿದೆ. ದೇವರನಾಯಕಹಳ್ಳಿ ಗ್ರಾಮದ ಗಗನ್ ಓದಿನ ಬಳಿಕ ಹಾಪ್ ಕಾಮ್ಸ್ ನಲ್ಲಿ ಕೆಲಸ ಮಾಡುತ್ತಿದ್ದ. ಕಣ್ಣು ಕಾಣದ ತಾಯಿಗೆ ಆಸರೆಯಾಗಿದ್ದ. ಪ್ರತಿದಿನ ಸಂಜೆ 5 ಗಂಟೆಗೆ ಕೆಲಸಕ್ಕೆ ಹೋಗುತ್ತಿದ್ದ ಗಗನ್, ಮುಂಜಾನೆ 3 ಗಂಟೆ ಸಮಯದಲ್ಲಿ ಮನೆಗೆ ಬರುತ್ತಿದ್ದ. ಕೆಲಸ ಮುಗಿಸಿಕೊಂಡು ವಾಪಸ್ ಬರುತ್ತಿದ್ದ ಸಮಯದಲ್ಲಿ ಈ ದುರಂತ ಸಂಭವಿಸಿದೆ.
ಇನ್ನು, ಕಾರಿನಲ್ಲಿದ್ದ ಯುವಕರು ಎಚ್‍ಬಿಆರ್ ಲೇಔಟ್, ಫ್ರೇಜರ್‍ಟೌನ್, ಹೆಣ್ಣೂರು ಹಾಗೂ ಕೊತ್ತನೂರು ಸುತ್ತಮುತ್ತ ಪ್ರದೇಶದಲ್ಲಿ ವಾಸಿಸುತ್ತಿದ್ದರು. ಇವರೆಲ್ಲರೂ ಆರ್‍ವಿ ಹಾಗೂ ಸಿಎಮ್‍ಆರ್ ಕಾಲೇಜಿನಲ್ಲಿ ಎಸೆಸೆಲ್ಸಿ, ಪಿಯುಸಿ ವ್ಯಾಸಂಗ ಮಾಡುತ್ತಿದ್ದರು. ಶುಕ್ರವಾರ ಬೆಳಗಿನ ಜಾವ 2 ಗಂಟೆ ಸುಮಾರಿನಲ್ಲಿ ಇವರೆಲ್ಲರೂ ಜಾಲಿರೇಡ್‍ಗಾಗಿ ಕಾರಿನಲ್ಲಿ ತೆರಳಿದ್ದಾಗ ಹೊಸಕೋಟೆಯಿಂದ ದೇವನಹಳ್ಳಿಗೆ ಬರುತ್ತಿದ್ದ ವೇಳೆ ಈ ಘಟನೆ ಸಂಭವಿಸಿದೆ ಎಂದು ತಿಳಿದುಬಂದಿದೆ.
ಈ ಸಂಬಂಧ ಸೂಲಿಬೆಲೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನಾ ಸ್ಥಳಕ್ಕೆ ಐಜಿ ಲಾಭೂರಾವ್, ಎಸ್ಪಿ ಚಂದ್ರಕಾರ್, ಡಿವೈಎಸ್ಪಿ ಮಲ್ಲೇಶ್, ಸೂಲಿಬೆಲೆ ಠಾಣೆ ಪೊಲೀಸರು ಸೇರಿದಂತೆ ಅಧಿಕಾರಿಗಳು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.
‘ಸೂಲಿಬೆಲೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಎಕ್ಸ್‍ಯುವಿ 700 ಕಾರು ದ್ವಿಚಕ್ರ ವಾಹನಕ್ಕೆ ಢಿಕ್ಕಿ ಹೊಡೆದಿದೆ, ಅನಂತರ ಮತ್ತೊಂದು ಕಾರಿಗೆ ಢಿಕ್ಕಿಯಾಗಿದೆ. ಬಳಿಕ ನಿಯಂತ್ರಣ ತಪ್ಪಿದ ಕಾರು ಕ್ಯಾಂಟರ್‍ಗೆ ಢಿಕ್ಕಿ ಹೊಡೆದಿದೆ. ಓರ್ವ ದ್ವಿಚಕ್ರ ವಾಹನ ಸವಾರ ಹಾಗೂ ಕಾರಿನಲ್ಲಿದ್ದ 6 ಮಂದಿ ಸಾವನ್ನಪ್ಪಿದ್ದಾರೆ. ಅವರ ಕುಟುಂಬಸ್ಥರಿಗೆ ಮಾಹಿತಿ ನೀಡಲಾಗಿದೆ. ಮೃತದೇಹಗಳನ್ನು ಹೊಸಕೋಟೆಯ ಸರಕಾರಿ ಆಸ್ಪತೆಗೆ ಮರಣೋತ್ತರ ಪರೀಕ್ಷೆಗಾಗಿ ರವಾನಿಸಿ ಈ ಬಗ್ಗೆ ಪ್ರಕರಣ ದಾಖಲಿಸಲಾಗಿದ್ದು, ಘಟನೆ ಕುರಿತು ತನಿಖೆ ಮುಂದುವರೆಸಲಾಗಿದೆ’ ಎಂದು ಐಜಿ ಲಾಭೂರಾಮ್ ತಿಳಿಸಿದರು.







