ದೊಡ್ಡಬಳ್ಳಾಪುರದಲ್ಲಿ 3.0 ತೀವ್ರತೆಯ ಲಘು ಭೂಕಂಪನ

ಸಾಂದರ್ಭಿಕ ಚಿತ್ರ (AI)
ಬೆಂಗಳೂರು : ಇಲ್ಲಿನ ಬೆಂಗಳೂರು ಹೊರವಲಯದ ದೊಡ್ಡಬಳ್ಳಾಪುರ ವ್ಯಾಪ್ತಿಯ ತಿಮ್ಮೋಜನಹಳ್ಳಿಯಲ್ಲಿ ಶುಕ್ರವಾರ ಲಘು ಭೂಕಂಪನವಾಗಿದೆ.
ಅಕ್ಟೋಬರ್ 23ರಂದು ಬೆಳಗ್ಗೆ 9:01ನಿಮಿಷಕ್ಕೆ ಈ ಭೂಕಂಪನ ಸಂಭವಿಸಿದೆ. ರಿಕ್ಟರ್ ಮಾಪಕದಲ್ಲಿ 3.0 ರಷ್ಟು ತೀವ್ರತೆಯ ಕಂಪನ ದಾಖಲಾಗಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ತಿಳಿಸಿದೆ.
ದೊಡ್ಡಬಳ್ಳಾಪುರ ತಾಲೂಕಿನ ತೂಬಗೆರೆ ಗ್ರಾಮ ಪಂಚಾಯತಿ ವ್ಯಾಪ್ತಿಯ ತಿಮ್ಮೋಜನಹಳ್ಳಿ ಗ್ರಾಮದಿಂದ ಉತ್ತರಕ್ಕೆ ಸುಮಾರು 0.5 ಕಿ.ಮೀ ದೂರದಲ್ಲಿ ಹಾಗೂ ಭೂಮಿಯ ಆಳದಲ್ಲಿ 10 ಕಿ.ಮೀ ಪ್ರದೇಶದಲ್ಲಿ ಕಂಪನದ ಕೇಂದ್ರ ಬಿಂದು ಪತ್ತೆಯಾಗಿದೆ.
ಭೂಕಂಪನದ ತೀವ್ರತೆಯು ತೀರಾ ಕಡಿಮೆ ಇದೆ. ಕೇಂದ್ರಬಿಂದುವಿನಿಂದ ಸುಮಾರು 20 ರಿಂದ 30 ಕಿ.ಮೀ ಸುತ್ತಳತೆ ಪ್ರದೇಶದಲ್ಲಿ ಸಣ್ಣ ಪ್ರಮಾಣದ ಕಂಪನ ಅಥವಾ ಕಂಪನಗಳ ಅನುಭವವಾಗಿರಬಹುದು. ಈ ರೀತಿಯ ಭೂಕಂಪನದಿಂದ ಸ್ಥಳೀಯ ಸಾರ್ವಜನಿಕರಿಗೆ ಅಥವಾ ಆಸ್ತಿಪಾಸ್ತಿಗೆ ಯಾವುದೇ ಹಾನಿ ಉಂಟಾಗುವುದಿಲ್ಲ. ಈ ಪ್ರದೇಶವು ಸೆಸ್ಮಿಕ್ ಝೋನ್ II ವ್ಯಾಪ್ತಿಗೆ ಬರಲಿದ್ದು, ಸಾರ್ವಜನಿಕರು ಯಾವುದೇ ರೀತಿಯ ಆತಂಕಪಡುವ ಅಗತ್ಯವಿಲ್ಲ ಎಂದು ಕೆಎಸ್ಎನ್ಡಿಎಂಸಿಯ ನಿರ್ದೇಶಕರು ಸ್ಪಷ್ಟಪಡಿಸಿದ್ದಾರೆ.
ತಿಮ್ಮಾಜನಹಳ್ಳಿಯ ಸಮೀಪ ಇರುವ ಲಘುಮೇನಹಳ್ಳಿಯಲ್ಲಿ ಭೂಕಂಪನದ ಅನುಭವ ಆಗಿದೆ. ಮನೆಯ ಮೇಲ್ಚಾವಣಿ ಕಂಪಿಸಿದೆ ಎಂದು ಗ್ರಾಮಸ್ಥರು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.






