ದೇವನಹಳ್ಳಿ ಚಲೋ | ಜೈಲಿಗೆ ಹಾಕುವುದಾದರೆ ಹಾಕಿ, ಜಾಮೀನು ಕೂಡ ತೆಗೆದುಕೊಳ್ಳುವುದಿಲ್ಲ : ಪ್ರಕಾಶ್ ರಾಜ್

ಬೆಂಗಳೂರು : ನಾವು ಸೇರಿರುವುದು ಒಬ್ಬರನೊಬ್ಬರು ಉದ್ದೇಶಿಸಿ ಮಾತನಾಡುವುದಕ್ಕಲ್ಲ. ನಮ್ಮ ಮಾತುಗಳು ಕಾಂಗ್ರೆಸ್ ಸರಕಾರಕ್ಕೆ. ಸಿಎಂ, ಎಂ.ಬಿ.ಪಾಟೀಲರೇ ಏನು ಮಾಡುತ್ತಿದ್ದೀರಿ?, ಒಬ್ಬ ಮನುಷ್ಯನಿಗೆ ಒಂದು ಸರಿ, ಎರಡು ಸರಿ ಹೇಳಬಹುದು. ನಾವು ನಿಮ್ಮ ವಿರುದ್ಧ ಮೂರು ವರ್ಷ ಬಾಯಿ ಬಡ್ಕೊಬೇಕಾ? ಎಂದು ನಟ ಪ್ರಕಾಶ್ ರಾಜ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ʼಸಂಯುಕ್ತ ಹೋರಾಟ ಕರ್ನಾಟಕ'ದ ನೇತೃತ್ವದಲ್ಲಿ ಇಂದು ನಡೆಯುತ್ತಿರುವ 'ದೇವನಹಳ್ಳಿ ಚಲೋ'ದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಭಾರತದ ರಾಜಕಾರಣದಲ್ಲಿ ನೀವು, ಪಕ್ಷದ ನಾಯಕರು ಗೆದ್ದಿಲ್ಲ. ನಿಮ್ಮನ್ನು ಜನ ಗೆಲ್ಲಿಸುತ್ತಾರೆ. ನೀವು ಆಳ್ವಿಕೆ ಮಾಡಲು ಬಂದಿಲ್ಲ. ಬದಲಾಗಿ ಪ್ರತಿನಿಧಿಸುವುದಕ್ಕೆ ಬಂದಿದ್ದೀರಿ. 13 ಹಳ್ಳಿಯ ಹೆಣ್ಣು ಮಕ್ಕಳು ಅಲ್ಲಿನ ಮಣ್ಣನ್ನು ತಂದು ಗಿಡಕ್ಕೆ ಹಾಕಿ, ನಾವು ಮಣ್ಣನ್ನು ಮಾರುವುದಿಲ್ಲ ಎಂದು ಹೇಳುತ್ತಿದ್ದಾರೆ. ತುಂಬಾ ಸೂಕ್ಷ್ಮವಾಗಿ ನಿಮಗೆ ಧಿಕ್ಕಾರ ಹಾಕುವ ಸಮಯ ತುಂಬಾ ದೂರಿ ಇಲ್ಲ ಎಂದು ಎಚ್ಚರಿಕೆ ನೀಡಿದರು.
ನಿಮಗೆ ಕಿವಿ, ಹೃದಯ, ಮನಸ್ಸಾಕ್ಷಿ ಇಲ್ಲವೇ?. ಅಹಿಂದ, ಜನಪರ, ರೈತರ ಪರ ಅಂತೀರಿ, ಇದೇ ಹೋರಾಟದ ಮಧ್ಯ ವಿರೋಧ ಪಕ್ಷದ ನಾಯಕರಾಗಿದ್ದಾಗ ಬೆಂಬಲ ಸೂಚಿಸಿದ್ದೀರಿ. ಮಾತು ಕೊಟ್ಟಿದ್ದೀರಿ? ಮಾತಿಗೆ ನಿಲ್ಲುತ್ತೀರಾ? ಮಾತು ತಪ್ಪುತ್ತೀರಾ? ಎಂದು ಪ್ರಶ್ನಿಸಿದರು.
ದಯವಿಟ್ಟು ಸಿದ್ದರಾಮಯ್ಯನವರೇ, ಇನ್ನೊಂದು ಹೋರಾಟ ಆಗುವುದು, ನಿಮ್ಮನ್ನು ಇಳಿಸುವುದಕ್ಕೆ ಕಾರಣ ಆಗುವುದು ಬೇಡ. ಮನಸ್ಸಾಕ್ಷಿಯಿಂದ ಜನರ ಆವೇದನೆಯನ್ನು ಅರ್ಥ ಮಾಡಿಕೊಳ್ಳಿ, ರೈತರನ್ನು ಅರ್ಥ ಮಾಡಿಕೊಳ್ಳಿ. ನಾವು ಮಾರುವುದಿಲ್ಲ ಎಂದರೆ ಮಾರುವುದಿಲ್ಲ. ನಮ್ಮ ಬದುಕನ್ನು ಬಿಡುವುದಿಲ್ಲ. ಹಾಗೇನಾದರೂ ಆದರೆ, ಈ ರೈತರ ಜೊತೆಗೆ ಇಲ್ಲೇ ಮಲಗುತ್ತೇನೆ. ಜೈಲಿಗೆ ಹಾಕುವುದಾದರೆ ಹಾಕಿ, ಜಾಮೀನು ಕೂಡ ತೆಗೆದುಕೊಳ್ಳುವುದಿಲ್ಲ. ಯಾವ ರಾಜಕಾರಣ ನಡೀತಿದೆ. ಜನರನ್ನು ನಿಲ್ಲಿಸ್ತೀರಾ? ಪೊಲೀಸರನ್ನು ಉಪಯೋಗಿಸುತ್ತೀರಾ? ಯಾವ ಸರ್ವಾಧಿಕಾರ ನಡೆಯುತ್ತಿದೆ. ನಿಮ್ಮ ಮೇಲೆ ತುಂಬಾ ಗೌರವ ಇದೆ. ಜನರಿಗೆ ಸ್ಪಂಧಿಸುವ ನೀವು, ದಯವಿಟ್ಟು ಸ್ಪಂದಿಸಿ ಎಂದು ಒತ್ತಾಯಿಸಿದರು.