Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ಪುಸ್ತಕ ಸಾಂಗತ್ಯ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಅಂಕಣಗಳು
  4. ಬಯಲ ಬುತ್ತಿ
  5. ಮರೆಗೆ ಸಂದ ಅಭಿಜಾತ ಪ್ರತಿಭೆ

ಮರೆಗೆ ಸಂದ ಅಭಿಜಾತ ಪ್ರತಿಭೆ

ಡಾ. ಮೀನಾಕ್ಷಿ ಬಾಳಿಡಾ. ಮೀನಾಕ್ಷಿ ಬಾಳಿ25 Aug 2026 10:45 AM IST
share
ಮರೆಗೆ ಸಂದ ಅಭಿಜಾತ ಪ್ರತಿಭೆ

ಮೀರಾ ಸಾಬರು ಸಾವಿರಕ್ಕೂ ಹೆಚ್ಚು ಲಾವಣಿ ಪದಗಳನ್ನು ಬರೆದಿದ್ದರಲ್ಲದೆ ಶರಣ ಪರಿಸರದಿಂದ ಪ್ರಭಾವಿತನಾಗಿ ತತ್ವಪದಗಳನ್ನೂ ಬರೆದಿದ್ದಾರೆ. ಸೋಭಾನೆ ಪದಗಳು, ಜೋಗುಳ ಪದಗಳು, ಕೋಲಾಟದ ಪದಗಳು, ಹಂತಿ ಪದಗಳು ಹೀಗೆ ಆ ಕಾಲಕ್ಕೆ ಪ್ರಚಲಿತವಿದ್ದ ಎಲ್ಲ ಜನಪದ ಪ್ರಕಾರಗಳಲ್ಲಿ ಈತ ಕೃಷಿ ಮಾಡಿದ್ದಾರೆ. ಸೃಷ್ಟಿಸಿದ ಸಾಹಿತ್ಯ ರಾಶಿ ಅಪಾರವಾಗಿದ್ದರೂ ದಾಖಲಾದದ್ದು ಕಡಿಮೆ. ಕಳೆದು ಹೋದದ್ದೇ ಜಾಸ್ತಿ. ಪ್ರಕಟಣೆ, ಪ್ರಕಾಶನ, ದಾಖಲೀಕರಣದಂಥ ಅಕಾಡಮಿಕ್ ಚಟುವಟಿಕೆಗಳಿಂದ ಅವಜ್ಞೆಗೆ ಒಳಗಾಗಿದ್ದ ಇಂಥ ಅಭಿಜಾತ ಪ್ರತಿಭೆಗಳನ್ನು ಗುರುತಿಸುವ ಐತಿಹಾಸಿಕ ದೃಷ್ಟಿ ನಮ್ಮವರಲ್ಲಿ ಇರಲೇ ಇಲ್ಲ. ಅದರಲ್ಲಿಯೂ ಬದುಕಿರುವಾಗ ಈ ಸದ್ಭಾವಿಗಳನ್ನು ಗುರುತಿಸುವ ಸಾಧ್ಯತೆ ಇರಲೇ ಇಲ್ಲ.


ಯಾರ ಹೊಲ ಯಾರ ಮನಿ

ಮೆಚ್ಚಿ ಕುಂತಿದಿ ಸುಳ್ಳೆ ಎಲ್ಲಾ

ನಾನು ನನ್ನದು ಅನ್ನುತಿ ಎಲ್ಲಾ

ನೀ ಹೋಗದು ಗೊತ್ತೇ ಇಲ್ಲ ॥ ಪ ॥

ದಾನ ಧರ್ಮ ಮೊದಲೇ ಇಲ್ಲ

ರೊಕ್ಕಾ ಗಳಿಸಿ ಇಟ್ಟಿದಿ ತೋಲ

ಒದಗಿ ಬಂತೋ ಮರಣದ ಕಾಲ

ನೀ ಸತ್ತು ಹೋದ ಮ್ಯಾಲ ಇದು ಯಾರ ಹೊಲ ॥ 1 ॥

ಮನುಷ್ಯ ಜನ್ಮ ದೊಡ್ಡದೈತಿ

ಪಾಪದಲ್ಲಿ ಬಿದ್ದು ಸಾಯಿತಿ

ಹಗಲು ಇರುಳು ದುಡಿದು ಮನೆ ಕಾಯ್ತಿ

ನೀ ಹೋಗುವಾಗ ಸಂಗಾಟ ಏನೋಯ್ತಿ ॥ 2 ॥

ಹಣವು ಗಳಿಸಿ ಇಟ್ಟಿದಿ ಹೆಚ್ಚ

ಸಾಯುತನಕ ತಿಂದಿದಿ ನುಚ್ಚ

ಬಾಯಿ ಮಾತ್ರ ಬೆಲ್ಲದ ಅಚ್ಚ

ಪರೋಪಕಾರ ಮಾಡಲಿಲ್ಲ ಹುಚ್ಚ ॥ 3 ॥

ಪುಣ್ಯದಿಂದ ಪದವಿಗಿ ಬಂದು

ಸಾರ್ಥಕವಾಗಲಿಲ್ಲ ಜನ್ಮ ನಿಂದು

ಸತ್ಯ ಮಾರ್ಗ ಹಿಡಿಯಪ್ಪ ಒಂದು

ಮತ್ತೆ ಹುಟ್ಟಿ ಬರುವುದೆಂದು ॥ 4 ॥

ಹುಟ್ಟಿದವರು ಉಳಿಯುವುದಿಲ್ಲ

ತಿರುಗಿ ತಿರುಗಿ ಬರುವುದಿಲ್ಲ

ಪಂಚಾಕ್ಷರಿ ಹೇಳ್ಯಾನ ಖುಲ್ಲಾ

ಪರಶಿವನ ಹೊರತು ಗತಿ ಯಾರಿಲ್ಲ ॥ 5 ॥

ಯುಟ್ಯೂಬ್‌ನಲ್ಲಿ ವ್ಯಾಪಕವಾಗಿ ಕೇಳಿ ಬರುತ್ತಿರುವ ತತ್ವಪದವಿದು. ಅತ್ಯಂತ ಸರಳ ಮತ್ತು ನೇರವಾದ ಅರ್ಥ ನೀಡುವ ಇದು ಪ್ರಾಪಂಚಿಕ ಬದುಕಿನ ಮಿತಿಯನ್ನು, ಮನುಷ್ಯರ ಅಸಹಾಯಕತೆಯನ್ನು ದಿಗ್ದರ್ಶಿಸುತ್ತದೆ. ಲೌಕಿಕ ಮೋಹಗಳ ನಿಸ್ಸಾರತೆ, ಸ್ವಾರ್ಥಪರತೆಯನ್ನು ರೋಚಕವಾಗಿ ವಿವರಿಸುತ್ತದೆ. ಹಾಡುಗಾರಿಕೆಗೆ ಸುಲಲಿತವಾಗಿ ಒದಗಿ ಬರುವ ಈ ಪದವನ್ನು ಕಲ್ಯಾಣ ಕರ್ನಾಟಕ ಭಾಗದ ಭಜನೆಗಳಲ್ಲಿ ಅನೂಚಾನವಾಗಿ ಹಾಡಿಕೊಂಡು ಬರಲಾಗುತ್ತಿದೆ. ಇತ್ತೀಚೆಗೆ ನವಯುವಕರು ತಮ್ಮದೇ ಧಾಟಿಯಲ್ಲಿ ಹಾಡಿ ಪ್ರಸಿದ್ಧಿಗೊಳಿಸಿದ್ದಾರೆ. ವಿವಿಧ ಹಾಡುಗಾರಿಕೆ ಶೈಲಿಯಲ್ಲಿಯೂ ಇದನ್ನು ಪ್ರಯೋಗಿಸಿದ್ದಾರೆ. ಅನೇಕ ಪಾಠಾಂತರಗಳು ಕಾಣಿಸಿಕೊಂಡಿವೆ. ಯುಟ್ಯೂಬರ್‌ಗಳು ಇದನ್ನು ಜಾನಪದ ಹಾಡು ಎಂದೋ; ಅಜ್ಞಾತ ತತ್ವಪದವೆಂದೋ ಜನಪ್ರಿಯಗೊಳಿಸಿದ್ದಾರೆ. ವಿಷಾದದ ಸಂಗತಿ ಎಂದರೆ ಈ ಪದದ ರಚನೆಕಾರರ ಬಗೆಗೆ ಎಲ್ಲೆಲ್ಲೂ ಪ್ರಸ್ತಾಪವಿಲ್ಲ.

ಇದನ್ನು ರಚಿಸಿದ ಕವಿಯ ಹೆಸರು ‘ಮಹಾಗಾಂವ ಮೀರಾಸಾಬ’. ಕಲಬುರಗಿಯಿಂದ ಕೇವಲ 25 ಕಿ.ಮೀ. ಫಾಸಲೆಯಲ್ಲಿರುವ ಗ್ರಾಮ ಮಹಾಗಾಂವ. ಪಕ್ಕದ ‘ವಾಡಿ’ಯ ಬಡ ಮುಸ್ಲಿಮ್ ಕುಟುಂಬದಲ್ಲಿ ಜನಿಸಿದ್ದ ಮೀರಾಸಾಬ ಬಡತನವನ್ನೇ ಹಾಸುಂಡು ಬದುಕಿದ್ದರು. ಮುಸ್ಲಿಮರಲ್ಲಿಯೇ ಅವಜ್ಞೆಗೆ ಒಳಗಾದ ‘ಜಾತಗಾರ’ ಉಪಕುಲದಲ್ಲಿ ಕ್ರಿ.ಶ. 1917ರಲ್ಲಿ ಜನಿಸಿದ್ದನು. ತಾಯಿ; ಹುಸೇನಬೀ. ತಂದೆ; ಕಮಲಸಾಬ. ವೇಷಗಾರರ ಕುಟುಂಬ. ಅಂದರೆ ಪೌರಾಣಿಕ ವೇಷಗಳನ್ನು ಹಾಕಿಕೊಂಡು ಊರೂರು ಭಿಕ್ಷೆ ಬೇಡುತ್ತ ಹೊಟ್ಟೆ ಹೊರೆಯುವ ಕಾಯಕ ಇವರದು. ಮೀರಾ ಪಾಲಕರಿಂದ ವೇಷ ಹಾಕುವುದನ್ನು ಬಳುವಳಿಯಾಗಿ ಪಡೆದು ಊರೂರು ಅಲೆಯುತ್ತಿದ್ದರಂತೆ. ತುಂಬಾ ಚುರುಕಾಗಿದ್ದ ಹುಡುಗನನ್ನು ಗಮನಿಸಿ ಮಹಾಗಾಂವದ ಬಸವಣ್ಣೆಪ್ಪ ಮಾಸ್ತರರು ಈತನಿಗೆ ಆ ಕಾಲದ ಗಾಂವಠಿ ಶಾಲೆಗೆ ಸೇರಿಸುತ್ತಾರೆ. ಆಗ ಕಲಬುರಗಿಯು ನೈಜಾಂ ಪ್ರಾಂತವಾಗಿದ್ದು ತಾಲೂಕು ಕೇಂದ್ರವಾಗಿತ್ತು. 18-19ರ ದಶಕಗಳಲ್ಲಿ ಅದ್ಭುತವಾದ ಸಾಹಿತ್ಯಕ ವಾತಾವರಣವಿತ್ತು. ಗುರುಲಿಂಗಸಿದ್ಧ ಕವಿ ಶರಣಬಸವೇಶ್ವರ ಪುರಾಣವನ್ನು ಭಾಮಿನಿ ಷಟ್ಪದಿಯಲ್ಲಿ ಬರೆದರೆ, ಶಾಸ್ತ್ರಿಗಳ ಮನೆತನದಿಂದ ಪ್ರಕಟವಾಗುತ್ತಿದ್ದ ‘ಮಹಾಗಾಂವ ಪಂಚಾಂಗ’ ಜನಜನಿತವಾಗಿದೆ. ಲಾವಣಿ, ಗೀಗೀ ಪದಗಳು, ಹಂತಿ ಹಾಡುಗಳು, ಮುಹರಂ ಪದಗಳು ಹೀಗೆ ಹತ್ತಾರು ಜಾನಪದೀಯ ರಚನೆಗಳಿಗೆ ಮಹಾಗಾಂವ ಹೆಸರುವಾಸಿಯಾಗಿದೆ. ಇಂಥ ವಾತಾವರಣದಲ್ಲಿ ಹುಟ್ಟಿದ ಮೀರಾಸಾಬನಿಗೆ ಸಹಜವೆಂಬಂತೆ ಕಾವ್ಯ ಪ್ರತಿಭೆ ಸಿದ್ಧಿಸಿತ್ತು.

ಮೀರಾಸಾಬರಿಗೆ ಬಸವಣ್ಣೆಪ್ಪ ಮಾಸ್ತರರು ತಕ್ಕ ಮಟ್ಟಿನ ಕನ್ನಡ, ಉರ್ದು, ಅರಬಿ ಮತ್ತು ಮೋಡಿ ಭಾಷೆಗಳನ್ನು ಕಲಿಸಿದ್ದರು. ಮೊಗಲಾಯಿ ಸರಕಾರಿ ಶಾಲೆಯಲ್ಲಿ ನಾಲ್ಕನೇ ಇಯತ್ತೆವರೆಗೆ ಕಲಿತು ಬಡತನ ಕಾರಣವಾಗಿ ಮುಂದೆ ಕಲಿಯಲು ಸಾಧ್ಯವಾಗಲಿಲ್ಲ. ಹೊಟ್ಟೆಪಾಡಿಗಾಗಿ ಮತ್ತದೇ ವೇಷಗಾರರ ವೃತ್ತಿಯನ್ನು ಮುಂದುವರಿಸಿಕೊಂಡು ಪೌರಾಣಿಕ ಸೀತೆ, ಸಾವಿತ್ರಿ, ಹೇಮರಡ್ಡಿ ಮಲ್ಲಮ್ಮನ ಪಾತ್ರಗಳನ್ನು ಹಾಕಿಕೊಂಡು ಬೀದಿ ನಾಟಕವಾಡುತ್ತಿದ್ದರೆ ಜನರು ಈತನನ್ನು ನಿಜವಾದ ಹೆಣ್ಣೆಂದು ಭಾವಿಸಿ ಬೆನ್ನು ಹತ್ತುತ್ತಿದ್ದರಂತೆ. ಮೋಡಿಕಾರ ಮೀರಾನಲ್ಲಿ ಸ್ಮರಣ ಶಕ್ತಿ ಅಪಾರವಾಗಿತ್ತಂತೆ. ಪ್ರವಚನ, ಪುರಾಣಗಳಲ್ಲಿ ಒಮ್ಮೆ ಕಥೆಗಳನ್ನು ಕೇಳಿದರೂ ಸಾಕು; ಅವುಗಳನ್ನಿಟ್ಟುಕೊಂಡು ಪದ ಕಟ್ಟುವ ಕಲೆ ಸಿದ್ಧಿಸಿತ್ತು. ಹರದೇಸಿ-ನಾಗೇಶಿ ಪದಗಳ ಭರಾಟೆ ಅಂದು ಜೋರಾಗಿತ್ತು. ಚೆನ್ನಪ್ಪ ಪಾರಾ ಎಂಬ ಲಾವಣಿ ಹಾಡುಗಾರನ ಬಳಿಯಲ್ಲಿ ನಾಗೇಶಿ ಪದಗಳನ್ನು ಕಲಿತು; ಊರೂರು ಪಂಥ ಕಟ್ಟಲು ಹೋಗುತ್ತಿದ್ದರು. ಹಾಡೆಕ್ಕಿ ಎಂದು ಕರೆಸಿಕೊಳ್ಳುತ್ತಿದ್ದ ಈ ಕಲೆಯು ಕಲ್ಯಾಣ ಕರ್ನಾಟಕದಲ್ಲಿ ತುಂಬಾ ಪ್ರವರ್ಧಮಾನಕ್ಕೆ ಬಂದ ಕಾಲ ಅದಾಗಿತ್ತು. ಹರದೇಸಿ ಎಂದರೆ ಗಂಡು ಜಾತಿಯೇ ಶ್ರೇಷ್ಠವೆಂದು; ನಾಗೇಶಿ ಎಂದರೆ ಹೆಣ್ಣು ಜಾತಿಯೇ ಶ್ರೇಷ್ಠವೆಂದು ವಾದಿಸಿ ಹಾಡುವ ಕಲೆಯದು. ಹಳ್ಳಿಗಳಲ್ಲಿ ಜಾತ್ರೆ, ಉತ್ಸವ, ಶ್ರಾವಣ ಮಾಸದ ಖಾಂಡಗಳಲ್ಲಿ ಬೆಳ್ಳಂಬೆಳಗಿನವರೆಗೆ ಇಂಥ ಗೀಗೀ ಪದಗಳ ಭರಾಟೆ ಇರುತ್ತಿತ್ತು. ಹರದೇಸಿ-ನಾಗೇಶಿ ತಂಡದವರ ನಡುವೆ ಸ್ಪರ್ಧೆಗಳು ಏರ್ಪಡುತ್ತಿದ್ದವು. ಗೆದ್ದವರಿಗೆ ಬಂಗಾರದ ಖಡ್ಗ ಆಹೇರಿ ಮಾಡುವುದಿತ್ತು. ಕೆಲವೊಮ್ಮೆ ಸೋತವರು ತಾವು ಹಾಡುವುದನ್ನೇ ನಿಲ್ಲಿಸುವಷ್ಟರ ಮಟ್ಟಿಗೆ ಈ ಸ್ಪರ್ಧೆಗಳು ತುರುಸಿಗೆ ಬೀಳುತ್ತಿದ್ದವು.

ಮೀರಾಸಾಬರು ಇಂಥ ಪರಿಸರದಲ್ಲಿ ನಾಗೇಶಿ ಪಂಥದ ಹಾಡುಗಾರನಾಗಿ ಅರಳಿದ್ದೇ ಒಂದು ಪವಾಡವಾಗಿತ್ತು. ಏಕೆಂದರೆ ಮುಸ್ಲಿಮರಲ್ಲಿಯೇ ಅಸ್ಪಶ್ಯರಂತೆ ನಡೆಸಿಕೊಂಡು ಬರಲಾಗುತ್ತಿದ್ದ ತಳ ವರ್ಗದಲ್ಲಿ ಜನಿಸಿದ್ದರಿಂದ ಇವರಿಗೆ ಬಡತನ ಬಿಟ್ಟರೆ ಬೇರೆ ಆಸರೆಯೇ ಇರಲಿಲ್ಲ. ಮಡಿವಂತರು ಇವರನ್ನು ಸಮೀಪ ಬರಲೂ ಬಿಡುತ್ತಿರಲಿಲ್ಲವಂತೆ. ಈತನಿಗೆ ಮಾತ್ರ ಭಜನೆ, ಲಾವಣಿ, ಬಯಲಾಟಗಳೆಂದರೆ ಎಲ್ಲಿಲ್ಲದ ಆಸ್ಥೆ. ಮನೆತನದ ವೇಷ ಹಾಕುವುದನ್ನೇ ನೆಚ್ಚಿ ಕೂಡದೆ ಇವರು ನಾಗೇಶಿ ತಂಡ ಕಟ್ಟಿಕೊಂಡು ಹಾಡಲು ಮುಂದಾಗುತ್ತಾರೆ. ಅಷ್ಟರಲ್ಲಿ ಪಾಲಕರು ವಯಸ್ಸಿಗೆ ಬಂದ ಮಗನಿಗೆ ಮದುವೆ ಮಾಡುತ್ತಾರೆ. ಕಮಾಲುದ್ದೀನ್, ಲಾಲಮಹ್ಮದ್ ಎಂಬ ಇಬ್ಬರು ಗಂಡು ಮಕ್ಕಳು; ಮಸ್ತಾನಬಿ, ಮುಕ್ತುಂಬಿ, ಹಾಜರಾಬಿ ಮತ್ತು ಅಮೀನಾಬಿ ಎಂಬ ನಾಲ್ಕು ಹೆಣ್ಣುಮಕ್ಕಳು; ಅವರಿಗೆ ಮಕ್ಕಳು, ಮೊಮ್ಮಕ್ಕಳು ಹೀಗೆ ದೊಡ್ಡ ಕುಟುಂಬ. ಇರಲು ಒಂದು ಜೋಪಡಿಯೂ ಇಲ್ಲ. ಊರ ಹೊರಗಿನ ಗೋಮಾಳದಲ್ಲಿ ಗುಡಿಸಲು ಹಾಕಿಕೊಂಡಿದ್ದರಂತೆ. ಊರೂರು ಅಲೆದು ಹಾಡುವುದನ್ನು ಬಿಟ್ಟಿರಲಿಲ್ಲ.

ವರ್ಷದ ಎಂಟು ತಿಂಗಳೂ ಕಾಲ್ನಡಿಗೆಯಲ್ಲಿಯೇ ಕಲ್ಯಾಣ ಕರ್ನಾಟಕ ಮಾತ್ರವಲ್ಲದೆ ಪಕ್ಕದ ಮಹಾರಾಷ್ಟ್ರ, ಆಂಧ್ರಪ್ರದೇಶವನ್ನು ಈತ ಸುತ್ತಾಡುತ್ತಾರೆ. ಪದ ಕಟ್ಟುವುದು ಮತ್ತು ಹಾಡುವುದು ಈತನ ಉಸಿರಾಗಿತ್ತು. ಸಾವಿರಕ್ಕೂ ಹೆಚ್ಚು ಲಾವಣಿ ಪದಗಳನ್ನು ಬರೆದಿದ್ದರಲ್ಲದೆ ಶರಣ ಪರಿಸರದಿಂದ ಪ್ರಭಾವಿತನಾಗಿ ತತ್ವಪದಗಳನ್ನೂ ಬರೆದಿದ್ದಾರೆ. ಸೋಭಾನೆ ಪದಗಳು, ಜೋಗುಳ ಪದಗಳು, ಕೋಲಾಟದ ಪದಗಳು, ಹಂತಿ ಪದಗಳು ಹೀಗೆ ಆ ಕಾಲಕ್ಕೆ ಪ್ರಚಲಿತವಿದ್ದ ಎಲ್ಲ ಜನಪದ ಪ್ರಕಾರಗಳಲ್ಲಿ ಈತ ಕೃಷಿ ಮಾಡಿದ್ದಾರೆ. ಸೃಷ್ಟಿಸಿದ ಸಾಹಿತ್ಯ ರಾಶಿ ಅಪಾರವಾಗಿದ್ದರೂ ದಾಖಲಾದದ್ದು ಕಡಿಮೆ. ಕಳೆದು ಹೋದದ್ದೇ ಜಾಸ್ತಿ. ಪ್ರಕಟಣೆ, ಪ್ರಕಾಶನ, ದಾಖಲೀಕರಣದಂಥ ಅಕಾಡಮಿಕ್ ಚಟುವಟಿಕೆಗಳಿಂದ ಅವಜ್ಞೆಗೆ ಒಳಗಾಗಿದ್ದ ಇಂಥ ಅಭಿಜಾತ ಪ್ರತಿಭೆಗಳನ್ನು ಗುರುತಿಸುವ ಐತಿಹಾಸಿಕ ದೃಷ್ಟಿ ನಮ್ಮವರಲ್ಲಿ ಇರಲೇ ಇಲ್ಲ. ಅದರಲ್ಲಿಯೂ ಬದುಕಿರುವಾಗ ಈ ಸದ್ಭಾವಿಗಳನ್ನು ಗುರುತಿಸುವ ಸಾಧ್ಯತೆ ಇರಲೇ ಇಲ್ಲ.

ಇಷ್ಟೆಲ್ಲ ಪ್ರತಿಭೆ ಇದ್ದರೂ ಬಡತನ ಮಾತ್ರ ಬೆನ್ನು ಬಿಟ್ಟಿರಲಿಲ್ಲ. ಉದ್ಭೋದಕ ಕಂಠದಿಂದ ಹೊರಹೊಮ್ಮತ್ತಿದ್ದ ಹಾಡುಗಳನ್ನು ಕೇಳಿದವರೂ ತಲೆದೂಗಿ ಅಷ್ಟಿಷ್ಟು ಪುಡಿಗಾಸು ನೀಡುತ್ತಿದ್ದದ್ದು ಬಿಟ್ಟರೆ ಮತ್ತೇನೂ ಸಿಗುವಂತಿರಲಿಲ್ಲ. ಉಳ್ಳವರ ದನದ ಕೊಟ್ಟಿಗೆಯಲ್ಲಿ ಕುಳಿತು, ನೀಡಿದ ಊಟ ಮಾಡುವುದು ಅನಿವಾರ್ಯವಾಗಿತ್ತು. ಒಮ್ಮೆ ಕಲಬುರಗಿ ಭಾಗದಲ್ಲಿ ಅನಾವೃಷ್ಟಿ ಕಾಣಿಸಿಕೊಂಡು ಜನರು ನೀರು-ಅನ್ನಕ್ಕಾಗಿ ಹಾಹಾಕಾರ ನಡೆಸಿದ್ದರು. ಮಳೆಯ ಬರುವಿಕೆಗಾಗಿ ಹಳ್ಳಿಗಳಲ್ಲಿ ಸಪ್ತ ಭಜನೆಗಳು ನಡೆಯತೊಡಗಿದವು. ಮಹಾಗಾಂವದಲ್ಲಿಯೂ ಸಪ್ತ ಭಜನೆ ಸುರುವಾಯಿತು. ಸಪ್ತ ಭಜನೆ ಅಥವಾ ಶರ್ತ್‌ಭಜನೆ ಎಂದರೆ ವಾರಗಟ್ಟಲೆ ಅಥವಾ ಮಳೆ ಬರುವವರೆಗೆ ಊರಿನ ಪ್ರಮುಖ ದೇವಸ್ಥಾನಗಳಲ್ಲಿ ಎಡೆಬಿಡದೆ ತತ್ವಪದಗಳ ಭಜನೆ ಮಾಡುವುದು. ಭಜನೆ ಒಂದು ಕ್ಷಣವೂ ನಿಲ್ಲಿಸುವಂತಿಲ್ಲ.

ಊರಿನ ಪ್ರತೀ ಮನೆಯಿಂದ ಸರದಿಯಂತೆ ಹಾಡಲು ಜನರು ಬರಬೇಕು. ದೇವಸ್ಥಾನಗಳ ಪೌಳಿಯಲ್ಲಿ ಸುತ್ತ ತಿರುಗುತ್ತ ಮಡಿಯಿಂದ ನಿರಂತರ ಪದಗಳನ್ನು ಹಾಡುತ್ತಲೇ ಇರಬೇಕು. ಒಮ್ಮೊಮ್ಮೆ ಹಾಡುಗಾರರ ನಡುವೆ ಸ್ಪರ್ಧೆ ಏರ್ಪಡುವುದು ಇತ್ತಂತೆ. ಮಹಾಗಾಂವದಲ್ಲಿ ಹೀಗೆ ಸಪ್ತ ಭಜನೆ ನಡೆಯುವಾಗ ಮೀರಾಸಾಬ ಪಾಲ್ಗೊಳ್ಳುತ್ತಿದ್ದರು. ಆದರೆ ಜಾತಿ ಕಾರಣವಾಗಿ ಈತ ದೇವಸ್ಥಾನದ ಮೇಲೆ ಬರುವಂತಿರಲಿಲ್ಲ. ಕಟ್ಟೆಯ ಕೆಳಗೆ ನಿಂತು ಸ್ನಾನ ಮಾಡಿಕೊಂಡು ಹಸಿ ಬಟ್ಟೆಯಲ್ಲಿಯೇ ಹಾಡುತ್ತಿದ್ದರು. ಈತನ ಹಾಡುಗಾರಿಕೆ ಕೇಳಲು ಊರವರೆಲ್ಲ ನೆರೆಯುತ್ತಿದ್ದರಂತೆ. ಆ ಊರಿನ ಮುಖಂಡರು, ಸ್ವಾತಂತ್ರ್ಯ ಹೋರಾಟಗಾರರೂ ಆಗಿದ್ದ ದಿವಂಗತ ಚಂದ್ರಶೇಖರ ಪಾಟೀಲರು ದೇವಸ್ಥಾನದತ್ತ ಬಂದು ಭಜನೆ ಆಲಿಸುತ್ತಾರೆ. ಮೀರಾಸಾಬರ ಸ್ವಯಂ ರಚಿತ ತತ್ವಪದಗಳನ್ನು ಕೇಳಿ ಸ್ತಂಭೀಭೂತರಾಗುತ್ತಾರೆ. ಓಡುತ್ತ ಹೋಗಿ ಮೀರಾಸಾಬರನ್ನು ಅಪ್ಪಿಕೊಂಡು ‘‘ಕೆಳಗ ಯಾಕ್‌ನಿಂತ್ ಹಾಡ್ತಿಯಪ್ಪಾ! ಮ್ಯಾಗ ಬಾ’’ ಎನ್ನುತ್ತಾರೆ. ಅದಕ್ಕೆ ವಿನೀತನಾದ ಮೀರಾಸಾಬ ‘‘ಇಲ್ ರೀ ಬಾಬಾ ನಾ ಹ್ಯಾಂಗ್ ಮ್ಯಾಗ್ ಬರ್ಲಾಕ್ ಆಗತಾದ? ನಾ ಹೇಳಿ, ಕೇಳಿ ಮುಸಲರ್ ಮನಷಾ’’ ಎಂದರಂತೆ. ಅದಕ್ಕೆ ಪಾಟೀಲರು ‘‘ಅದಕ್ಕೇನಾಯಿತು? ನೀನು ಶರಣ ಇದ್ದೀ ಬಾರಪಾ’’ ಎನ್ನುತ್ತಾರೆ. ಅದಕ್ಕೆ ಮೀರಾ ‘‘ಛೇ ಛೇ ಯಪ್ಪಾ ನನ್ನ ಬಲ್ಲಿ ಲಿಂಗಾಯತ ತತ್ವ ಅದಾ ಖರೇ! ಆದ್ರ್‌ಲಿಂಗಾ ಇಲ್ಲಲ್ಲಾ!’’ ಎಂದರೆ; ಪಾಟೀಲರು ‘‘ಏ ನಿನಕ್ಕಿಂತ್ ದೊಡ್ಡ ಲಿಂಗಾಯತ್ ಯಾರ ಹರಾ ! ಬಾರಪಾ! ನಿನಗ್ ನಾನೇ ಲಿಂಗಾ ಕಟ್ಟತೀನಿ ಬಾ’’ ಎಂದವರೇ ಮಠಪತ್ತಿ ಅಯ್ಯನಿಂದ ಲಿಂಗವೊಂದನ್ನು ತರಿಸಿ ಕಟ್ಟಿ; ಕಿವಿಯಲ್ಲಿ ಪಂಚಾಕ್ಷರಿ ಮಂತ್ರ ಹೇಳಿದರಂತೆ. ಇದರಿಂದ ರೋಮಾಂಚಿತನಾದ ಮೀರಾಸಾಬ ಅಂದಿನಿಂದ ತಾನೂ ಲಿಂಗವಂತನೆಂದು ಹೇಳಿಕೊಂಡು ‘ಪಂಚಾಕ್ಷರಿ’ ಅಂಕಿತದಿಂದಲೇ ನೂರಾರು ಪದಗಳನ್ನು ರಚಿಸುತ್ತಾರೆ. ತಾನು ಲಿಂಗಧಾರಣೆ ಮಾಡಿಕೊಂಡದ್ದಲ್ಲದೆ ಸ್ವತಃ ಅನೇಕರಿಗೆ ಲಿಂಗಧಾರಣೆಯನ್ನೂ ಮಾಡಿದ್ದರಂತೆ. ಈ ಭಾಗದ ಮಠ, ಮಂದಿರ, ಜಾತ್ರೆ, ಪುರಾಣ, ಉತ್ಸವ, ಶ್ರಾವಣ ಮಾಸದ ಕಾರ್ಯಕ್ರಮಗಳಲ್ಲಿ ಮೀರಾನ ಹಾಡುಗಾರಿಕೆ ಇದ್ದೇ ಇರುತ್ತಿತ್ತು.

ತನ್ನ ಮೂವತೈದನೇ ವಯಸ್ಸಿನಲ್ಲಿ ಪಕ್ಕದ ನೀಲೂರು ಗ್ರಾಮದ ‘ಶೇಕ್‌ಸಯ್ಯದ್‌ಶಾ ಇಸ್ಮಾಯೀಲ್ ಖಾದ್ರಿ’ ಎಂಬ ಸೂಫಿಗಳಿಂದಲೂ ಬೋಧನೆ ಪಡೆದುಕೊಳ್ಳುತ್ತಾರೆ. ಕೇಳಿದವರಿಗೆ ಈತ ತನಗೆ ಲಿಂಗಪೂಜೆ ಮತ್ತು ನಮಾಝ್ ಎರಡೂ ಒಂದೇ ಎನ್ನುತ್ತಿದ್ದರಂತೆ. ದೇವಿ ಆರಾಧಕರಿಂದ ಪ್ರಭಾವಿತನಾಗಿ ದಿನಾಲೂ 1001 ಸಲ ದೇವಿ ಸ್ತೋತ್ರ ಪಠಿಸುತ್ತಿದ್ದರಂತೆ. ಶರಣ, ಶೂಫಿ, ಶಾಕ್ತ ಹೀಗೆ ಮೂರು ಪಂಥಗಳ ಮುಪ್ಪುರಿ ಜೋಡಿಸಿಕೊಂಡು ಬಾಳಿದ್ದ ಮೀರಾನ ಪ್ರತಿಭೆಗಿಂತಲೂ ವ್ಯಕ್ತಿತ್ವ ದೊಡ್ಡದಾಗಿತ್ತು. ಬಡತನದ ಬೇಗೆ ಆತನನ್ನು ಯಾವತ್ತೂ ಧೃತಿಗೆಡಿಸಿರಲಿಲ್ಲ. ಸಂಸಾರದ ಖಬರು ಇಲ್ಲದೆ ಊರೂರು ಅಲೆಯುತ್ತ ತಿರುಗುತ್ತಿದ್ದ ಈತನನ್ನು ಛೇಡಿಸಲೆಂದು ಕುಹಕಿ ಜನರು ‘‘ಏನೋ ಮೀರಾ ಬರೇ ಹಾಡಕೊಂತ್ ತಿರಗದರ್ ಹ್ಯಾಂಗ್! ಮನಿ ಮಾಡಲಿಲ್, ಹೊಲಾ ಮಾಡಲಿಲ್! ಆದ್ರ್‌ಮಾತ್ರ ಕಂಡಾಪಟಿ ಹಾಡತಿ ನೋಡ್‌‘‘ ಎಂದು ಕಾಲೆಳೆಯುತ್ತಾರೆ. ಆಗ ಮೀರಾಸಾಬ್ ಅಷ್ಟೇ ಸಮಾಧಾನ ಚಿತ್ತದಿಂದ ನಿಂತಲ್ಲಿಯೇ ‘‘ಯಾರ ಹೊಲಾ ಯಾರ ಮನಿ’’ ಎಂಬ ಪದ ಕಟ್ಟಿ ಹಾಡುತ್ತಾರೆ.

ಸೂಫಿತ್ವ ಮತ್ತು ಶರಣತ್ವವನ್ನೂ ಮೇಳೈಸಿಕೊಂಡು ಬದುಕಿದ್ದ ಮೀರಾಸಾಬ ತನ್ನ ಸಾಹಿತ್ಯದ ಮೂಲಕ ಜನಮಾನಸದಲ್ಲಿ ಅದನ್ನು ಅಚ್ಚೊತ್ತುವ ಕೈಂಕರ್ಯವನ್ನು ವೃತದಂತೆ ಪಾಲಿಸಿಕೊಂಡು ಬಂದಿದ್ದರು.

ಕಟ್ಟು ಫಕೀರನ ಗೆಳೆತಾನ

ಬಿಟ್ಟುಬಿಡು ಸುಳ್ಳತಾನ

ಹೊಟ್ಟಿಗೆ ಅನ್ನ ಹಾಕತಾನ

ಸಾಕಷ್ಟು ಸರಿಯಾಗಿ ಊಟ ಮಾಡಿಕೊ

ಕಷ್ಟ ಬಂದಾಗ ಅವನಿಗಿ ಬೇಡಿಕೊ ॥ ಪ ॥

ಪಂಚ ಪರುಷು ಜೋಳಿಗೆಯಲ್ಲಿ

ಪಂಚ ತತ್ವ ದೇಹದಲ್ಲಿ

ಪಂಚಾಂಗದ ಘಟದಲ್ಲಿ

ಪಂಚಾಮೃತ ಸೇವನ

ಶೀಘ್ರದಲ್ಲಿ ಮಾಡಿಕೋ ॥ 1 ॥

ಫಕೀರ ಕಾನೂನ ಬಿಕ್ಕಟ

ಬೇಫಿಕೀರರು ಮಾಡತಾರ ಊಟಾ

ಆಖ್ರಿ ಮಾತ ಇಡು ತರ್ಕಾ

ಲೆಖ್ಖ ಸರಿಯಾಗಿ ಕೊಡಬೇಕೋ

ಮುಕ್ಕಣ್ಣನ ಗುಡಾ ಒಡಗೂಡಬೇಕೋ ॥ 2 ॥

ಫಕೀರ ಆದಾಯವು ಆಲಿಶಾ

ನೀಲೂರು ಗುರುಗಳು ತೊಡಿಸ್ಯಾರ ಮೇಫ್

ಹಿಂದಿನ ಜನ್ಮದು ತಿಳಿದು ಭವಿಷ್ಯಾ

ತರ್ಕ ಕೊಟ್ಟು ಅಂದ್ರು ಊರಾಗ ಬೇಡಿಕೋ

ಗರೀಬ ಮೀರಾನ ಗೆಳತನ ಹಿಡಿಕೋ ॥ 3 ॥

ತಾವು ನೀಲೂರಿನ ಸೂಫಿಗಳಿಂದ ಪ್ರಭಾವಿತನಾದದ್ದನ್ನು ವಿವರಿಸುತ್ತ; ಇನ್ನೊಂದು ಪದದಲ್ಲಿ

ಲಿಂಗ ಪೂಜೆಯ ಮಾಡೋ ಮನುಜಾ

ಲಿಂಗ ಪೂಜೆಯ ಮಾಡೋ|

ಲಿಂಗದೊಳು ಐಕ್ಯ ಆಗಿ ಕೂಡೋ॥

ಎಂದು ಹೇಳುತ್ತ ಮುಂದಿನ ನಾಲ್ಕು ನುಡಿಗಳಲ್ಲಿ ಶರಣ ತತ್ವದ ಅನುಸಂಧಾನಿ ತಾನೆಂದು ಹೆಮ್ಮೆ ಪಡುತ್ತಾರೆ. ಫಕೀರತನ ಮತ್ತು ಶರಣತನಗಳಲ್ಲಿನ ಸಾಮ್ಯತೆಗಳನ್ನು ಎತ್ತಿ ತೋರಿಸುತ್ತ; ಫಕೀರರಲ್ಲಿ ಬಾ-ಷರಾ ಸೂಫಿ, ಬೇ-ಷರಾ ಎರಡೂ ಪ್ರಕಾರಗಳ ಲಕ್ಷಣಗಳನ್ನು ಹೇಳುತ್ತಾರೆ. ಬಾ-ಷರಾ ಸೂಫಿ ಆಚರಣೆಯು ತುಂಬಾ ಕಟ್ಟುನಿಟ್ಟಾಗಿದ್ದು, ಬೇ-ಷರಾ ಸೂಫಿತನವು ಸ್ವತಂತ್ರವಾಗಿದೆ; ಅವರಿಗೆ ಯಾವ ನಿರ್ಬಂಧಗಳಿಲ್ಲ; ಶೂನ್ಯತ್ವದಲ್ಲಿ ವಿರಮಿಸುತ್ತಾರೆ ಎಂದು ಹೇಳುತ್ತಾರೆ.

ಮಾರಿಫತ್ ಎಂದರೆ ‘ಆಧ್ಯಾತ್ಮಿಕ ಜ್ಞಾನ’ ಅಥವಾ ‘ದೈವಿ ಸಾಕ್ಷಾತ್ಕಾರ’ ಎಂದರ್ಥ. ಈ ಆತ್ಮಜ್ಞಾನವನ್ನು ತನಗೆ ನೀಲೂರಿನ ಸಯ್ಯದ್‌ಶಾ ಖಾದ್ರಿ ಗುರುಗಳು ನೀಡಿದ್ದಾರೆ. ಅವರು ನೀಡಿದ ಫಕೀರತ್ವದಿಂದ ಆಲಿಶಾ ಪ್ರಾಪ್ತವಾಗಿದೆಯಂತೆ. ಅಲಿ+ಈಶ= ಆಲಿಶ ಆಲಿಶಾ ಅಂದರೆ ಅಲಿ ಮತ್ತು ಈಶ ಇಬ್ಬರ ಕೃಪೆ ತನಗಾಗಿದೆ ಎಂದೂ ಇನ್ನೊಂದೆಡೆ ಆಲಿ ಎಂದರೆ ಉನ್ನತವಾದ, ಶಾ ಎಂದರೆ ರಾಜ ಅರ್ಥಾತ್ ಅಧ್ಯಾತ್ಮದಲ್ಲಿ ಅತ್ಯಂತ ಉನ್ನತ ಸ್ಥಾನದಲ್ಲಿರುವ ಸಂತ ಎಂದೂ ಆಗುತ್ತದೆ. ಅವಧೂತನಂತೆ ಬದುಕಿದ್ದ ಈತ ಅಂಕಿತದಲ್ಲಿ ಪಂಚಾಕ್ಷರಿಯನ್ನು ನೀಲೂರಿನ ಸೂಫಿಯನ್ನು ಅಭೇದ್ಯವಾಗಿ ಸ್ಮರಿಸುತ್ತಾರೆ. ನಮಗೆ ಅವಧೂತ ಮೀರಾಸಾಬನಂಥವರೇ ಆದರ್ಶವಾಗಬೇಕಿದೆ. ಧರ್ಮ ದ್ವೇಷವನ್ನು ವಿಷಾನಿಲದಂತೆ ಹಬ್ಬಿಸುತ್ತಿರುವ ಪ್ರಸಕ್ತ ವಾತಾವರಣದಲ್ಲಿ ಮೀರಾಸಾಬರ ಆನುಭಾವಿಕ ಪದಗಳನ್ನು ಪ್ರಾಂಜಲ ಮನಸ್ಸಿನಿಂದ ಅನುಸಂಧಾನಿಸಬೇಕಿದೆ.

share
ಡಾ. ಮೀನಾಕ್ಷಿ ಬಾಳಿ
ಡಾ. ಮೀನಾಕ್ಷಿ ಬಾಳಿ
Next Story
X