Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ನೆಲದನಿ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಲಂಡನ್ ಡೈರಿ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ಪುಸ್ತಕ ಸಾಂಗತ್ಯ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಮಾಹಿತಿ ಮಾರ್ಗದರ್ಶನ
    • ಆರೋಗ್ಯ
    • ಓ ಮೆಣಸೇ
    • ಕೃತಿ ಪರಿಚಯ
    • ಝಲಕ್
    • ಬುಡಬುಡಿಕೆ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಅಂಕಣಗಳು
  4. ಬಯಲ ಬುತ್ತಿ
  5. ಬಸವ ತತ್ವ ಮತ್ತು ಮಠಾಧೀಶರು

ಬಸವ ತತ್ವ ಮತ್ತು ಮಠಾಧೀಶರು

ಡಾ. ಮೀನಾಕ್ಷಿ ಬಾಳಿಡಾ. ಮೀನಾಕ್ಷಿ ಬಾಳಿ17 Nov 2026 2:51 PM IST
share
ಬಸವ ತತ್ವ ಮತ್ತು ಮಠಾಧೀಶರು

ಇಂದಿನ ಮಠಗಳ ವ್ಯವಸ್ಥೆಗೂ ಶರಣ ತತ್ವಗಳಿಗೂ ಯಾವುದೇ ತಾತ್ವಿಕ ಅಥವಾ ತಾರ್ಕಿಕ ಸಂಬಂಧವಿಲ್ಲ. ಕೋಮುವಾದಿಗಳು ಇತ್ತೀಚಿನ ದಿನಗಳಲ್ಲಿ ಮಠಾಧೀಶರಿಗೆ ಆಸೆ ಆಮಿಷಗಳನ್ನೊಡ್ಡಿ ತತ್ವಗಳನ್ನು ಅಪಭ್ರಂಶಗೊಳಿಸುತ್ತಿರುವುದನ್ನೂ ಸಹ ಕಾಣುತ್ತಿದ್ದೇವೆ. ಆಸ್ತಿ-ಪಾಸ್ತಿ ಮಾಡಿಕೊಳ್ಳುವಲ್ಲಿಯೇ ವ್ಯಸ್ತರಾಗಿರುವ ಇಂದಿನ ಮಠಾಧೀಶರು, ಕೋಮುವಾದಿ ಅಪಸವ್ಯಗಳೊಂದಿಗೆ ಗುರುತಿಸಿಕೊಂಡಿರುವ ಕಾವಿಧಾರಿಗಳಿಗೂ ವಚನ ತತ್ವಗಳಿಗೂ ಸಂಬಂಧವಿಲ್ಲ. ಶರಣ ಚಳವಳಿಯ ತರುವಾಯ ವಚನ ತತ್ವಗಳನ್ನು ಹೈಜಾಕ್ ಮಾಡಿಕೊಂಡದ್ದೇ ಈ ಮಠಗಳ ಚರಿತ್ರೆಯಾಗಿದೆ. ಆದ್ದರಿಂದ ಈಗಿನ ಮಠ ಮತ್ತು ಮಠಾಧೀಶರ ಮೂಲಕ ಶರಣ ತತ್ವಗಳನ್ನು ಅರಿವಾಗಿಸಿಕೊಳ್ಳಲಾಗದು. ಮಠಗಳ ಧಾರ್ಮಿಕ ರೆಜಿಮೆಂಟ್‌ಗೂ ಬಯಲಿಗೆ ಬಯಲಾಗಿ ಪಸರಿಸಿದ ವಚನ ತತ್ವಗಳಿಗೂ ಎಣ್ಣೆ ಸಿಗೇಕಾಯಿ ಸಂಬಂಧವಿದೆಯಷ್ಟೆ.

‘‘ಬರು ಸಠಗನ ಭಕ್ತಿ ದಿಟವೆಂದು ನಂಬಬೇಡ

ಮಠದೊಳಗಣ ಬೆಕ್ಕು ಇಲಿಯ ಕಂಡು

ಪುಟ ನೆಗೆದಂತಾಯಿತ್ತು ಕಾಣಾ ರಾಮನಾಥ’’

ಆದಿ ವಚನಕಾರನೆಂದು ಗುರುತಿಸುವ ಜೇಡರ ದಾಸಿಮಯ್ಯನ ಈ ವಚನ ಮಠ ಸಂಸ್ಕೃತಿಯಲ್ಲಿನ ದೌರ್ಬಲ್ಯಗಳನ್ನು ಕುರಿತು ಹೇಳುತ್ತದೆ. ಭಾರತದಲ್ಲಿ ಮಠ ಸಂಸ್ಕೃತಿಗೆ ಪ್ರಾಚೀನ ಪರಂಪರೆ ಇದೆ. ವಿವಿಧ ಧಾರ್ಮಿಕ ಕೇಂದ್ರಗಳಂತೆ ಕಾರ್ಯ ನಿರ್ವಹಿಸಿಕೊಂಡು ಬರುತ್ತಿರುವ ಮಠಗಳು ರಾಜಪ್ರಭುತ್ವದೊಂದಿಗೆ ಮೇಳೈಸಿಕೊಂಡು ಅಧಿಕಾರವನ್ನು ಚಲಾಯಿಸಿಕೊಂಡು ಬರುತ್ತಿವೆ. ಅತ್ಯಂತ ಪ್ರಾಚೀನ ಕಾಲದಲ್ಲಿ ಶೈವ ಮಠಗಳ ಪಾರಮ್ಯವಿದ್ದರೆ ನಂತರದ ಕಾಲಘಟ್ಟದಲ್ಲಿ ಬೌದ್ಧರಲ್ಲಿಯೂ ವಿಹಾರ ಮತ್ತು ಸಂಘರಾಮಗಳೊಂದಿಗೆ ಮಠಗಳು ಅಸ್ತಿತ್ವಗೊಂಡಿದ್ದವು.

ಕರ್ನಾಟಕದಲ್ಲಿಯಂತೂ 12ನೇ ಶತಮಾನದ ಪೂರ್ವದಲ್ಲಿಯೇ ಪ್ರಾಚೀನ ಕಾಳಾಮುಖ ಮತ್ತು ಪಾಶುಪತ ಶೈವಮಠಗಳು ಅಸ್ತಿತ್ವದಲ್ಲಿದ್ದವು. ಶರಣ ಚಳವಳಿಯೊಂದಿಗೆ ಗುರುತಿಸಿಕೊಂಡ ಅನೇಕ ಶೈವ ಮಠಗಳು ನಂತರ ವೀರಶೈವ ಮಠಗಳಾಗಿ ಪರಿವರ್ತನೆಗೊಂಡದ್ದನ್ನು ಶಾಸನಗಳು ತಿಳಿಸುತ್ತವೆ. ಹಾವೇರಿ ಜಿಲ್ಲೆಯ ಅಬ್ಬಲೂರಿನ ಶಾಸನದಲ್ಲಿ ತಿಳಿಸಿರುವಂತೆ ಅಬ್ಬಲೂರಿನ ಬ್ರಹ್ಮೇಶ್ವರ ದೇವಾಲಯ ಮತ್ತು ಮಠವು ಮೊದಲು ಕಾಳಾಮುಖ ಆಚಾರ್ಯರ ಅಧೀನದಲ್ಲಿತ್ತು. ಏಕಾಂತ ರಾಮಯ್ಯನ ಪ್ರಭಾವದಿಂದ ಅದು ನಂತರ ವೀರಶೈವ ಮಠವಾಗಿ ಪರಿವರ್ತನೆಗೊಂಡದ್ದನ್ನು ಅಬ್ಬಲೂರಿನ ಶಾಸನ ತಿಳಿಸುತ್ತದೆ. ಇದರಂತೆ ಬಳ್ಳಿಗಾವೆಯ ಕೋಡಿಮಠ, ಬೆಳಗಾವಿಯ ಹೂಲಿ ಮಠ ಹೀಗೆ ಅನೇಕ ಶೈವಮಠಗಳು ವೀರಶೈವ ಮಠಗಳಾಗಿಯೂ ನಂತರದ ಕಾಲಘಟ್ಟದಲ್ಲಿ ಬಸವಾದಿ ಶರಣ ಚಳವಳಿಯಿಂದ ಪ್ರಭಾವಿತವಾಗಿ ವಿರಕ್ತ ಮಠಗಳು ಹುಟ್ಟಿಕೊಂಡದ್ದು ಇದೆ.

ವಚನಕಾರರ ತರುವಾಯದಲ್ಲಿ ನೂರೊಂದು ವಿರಕ್ತ ಪಡೆಯೊಂದು ಕಾಣಿಸಿಕೊಂಡು ಪ್ರೌಢದೇವರಾಯನ ಆಶ್ರಯದಲ್ಲಿ ವಚನಗಳ ಸಂಗ್ರಹ, ಪರಿಷ್ಕರಣೆ, ಲಿಪಿಕರಣ, ಸ್ಥಲಕಟ್ಟಿಗನುಸಾರವಾದ ವಿಂಗಡಣೆ ಇತ್ಯಾದಿ ಕೆಲಸಗಳು ಮಿಷನರಿಯೋಪಾದಿಯಲ್ಲಿ ನಡೆದದ್ದು ಕಂಡು ಬರುತ್ತದೆ. ಇದೇ ಅವಧಿಯಲ್ಲಿ ಕಾಣಿಸಿಕೊಂಡಿದ್ದ ತೋಂಟದ ಸಿದ್ಧಲಿಂಗೇಶ್ವರ, ಅದೃಶ್ಯ ಕಾಡಸಿದೇಶ್ವರದಂಥ ಪರಂಪರೆಗಳು ಮುನ್ನೆಲೆಗೆ ಬಂದು ಸ್ವಯಂ ವಚನಗಳನ್ನು ರಚಿಸಿದ್ದಲ್ಲದೆ ಶಿವಶರಣರ ವಚನಗಳ ಸಂಪಾದನೆ, ಸ್ಥಲಕಟ್ಟಿಗನುಸಾರ ವಿವೇಚನೆ ಮತ್ತೂ ಮುಂದುವರಿದು ಬಸವಾದಿ ಶಿವಶರಣರ ಕುರಿತು ಚರಿತ್ರೆ, ಪುರಾಣಗಳನ್ನು ರಚಿಸುವ ಕೆಲಸಗಳು ನಡೆದದ್ದು ಕಾವ್ಯಗಳಲ್ಲಿ ಉಲ್ಲೇಖಗೊಂಡಿವೆ. ಒಟ್ಟಾರೆ ಬೌದ್ಧ, ಜೈನ, ವೈಷ್ಣವ, ವೀರಶೈವ ಮತಗಳಲ್ಲಿ ಮಠಗಳು ಧಾರ್ಮಿಕ ಶ್ರದ್ಧಾಕೇಂದ್ರಗಳಾಗಿ ಅನೂಚಾನವಾಗಿ ಬೆಳೆದುಕೊಂಡು ಬರುತ್ತಿರುವುದನ್ನು ಕಾಣುತ್ತಿದ್ದೇವೆ.

ಮಠಗಳು ಆಯಾ ಧರ್ಮಗಳ ತಾತ್ವಿಕತೆಗಿಂತ ಧಾರ್ಮಿಕ ವಿಧಿ-ವಿಧಾನ, ಆಚರಣೆಗಳಿಗೆ ಹೆಚ್ಚು ಒತ್ತುಕೊಂಡು ಮುನ್ನಡೆಯುತ್ತಿವೆಯಷ್ಟೇ. ಮಠಕ್ಕೆ ಒಬ್ಬ ಅಧಿಕಾರಿ ನೇಮಿಸಲ್ಪಟ್ಟು ಆತ ಸನ್ಯಾಸಿಯಾಗಿದ್ದು ನೈಷ್ಠಿಕಾಚರಣೆಗಳನ್ನು ಅಂದರೆ ಪೂಜೆ, ತಪಸ್ಸು, ಅಧ್ಯಯನ, ಜಪ-ತಪಗಳನ್ನು ನಡೆಸಿಕೊಂಡು ಬರಬೇಕು. ಪರಾತ್ಪರ ಶಕ್ತಿಯೊಂದಿಗೆ ಅನುಸಂಧಾನ ನಡೆಸಿ ತಮಗಾದ ಅನುಭವವನ್ನು ಶಿಷ್ಯಕೋಟಿಗೆ ಹಂಚಿ ಅವರನ್ನು ಕೃತಾರ್ಥರನ್ನಾಗಿ ಮಾಡಬೇಕೆಂಬ ನಿರೀಕ್ಷೆಗಳನ್ನು ಅನುಯಾಯಿಗಳು ಬೆಳೆಸಿಕೊಂಡು ಬಂದರು. ಮಠಗಳು ಹುಟ್ಟುವಾಗಿನ ಮೂಲ ಉದ್ದೇಶ, ಆಶಯಗಳು ಏನೇ ಇರಲಿ, ಆದರೆ ಪ್ರಾಯೋಗಿಕವಾಗಿ ಮಠ-ಬ್ರಹ್ಮಚರ್ಯೆ, ಸನ್ಯಾಸತ್ವ ಎಂಬ ಪರಿಕಲ್ಪನೆಗಳು ಹತ್ತು ಹಲವು ಹಳವಂಡಗಳಲ್ಲಿ ಹೂತು ಹೋದವು ಎಂಬುದನ್ನು ಜನತೆ ಈ ಕ್ಷಣಕ್ಕೂ ಗಮನಿಸುತ್ತಿದ್ದಾರೆ.

ಮೂಲತಃ ಆಧ್ಯಾತ್ಮಿಕ ಅನ್ವೇಷಣೆಯ ತಾಣಗಳಾಗಬೇಕಿದ್ದ ಮಠಗಳು ಪ್ರಭುತ್ವದೊಂದಿಗೆ ಬೆರೆತು ಎಲ್ಲ ಬಗೆಯ ಶೋಷಣೆಗೆ ನಾಂದಿ ಹಾಡಿದವು. ಒತ್ತಾಯದ ಬ್ರಹ್ಮಚರ್ಯೆ ಅದನ್ನು ಪಾಲಿಸುವ ವ್ಯಕ್ತಿಗಳನ್ನು ವಿಕಾರಿ, ವಿಕೃತರನ್ನಾಗಿ ಮಾಡಿತು. ಮಠಾಧೀಶರು ಪ್ರಕೃತಿ ಸಹಜ ಬಯಕೆಗಳಿಂದ ಬಿಡಿಸಿಕೊಳ್ಳಲಾಗದೆ ಒದ್ದಾಡುತ್ತ ತಮಗೆ ತಾವೇ ಮೋಸ ಮಾಡಿಕೊಳ್ಳುವ ಅನಿವಾರ್ಯತೆಗೆ ಸಿಲುಕಿದರು. ಮರೆ ಮೋಸದ ಅನೈತಿಕ ಸಂಬಂಧಗಳು, ರಕ್ತ ಸಂಬಂಧಿಗಳ ಮೇಲಿನ ಮೋಹ, ಆಸ್ತಿ-ಅಂತಸ್ತಿನ ದಾಹ ಮಠಾಧೀಶರನ್ನು ಡಂಭಾಚಾರಿಗಳನ್ನಾಗಿ ಮಾಡಿದವು. ಇದಕ್ಕೆ ಅಪವಾದಗಳು ಇಲ್ಲದಿಲ್ಲ. ಅನೇಕ ನೈಷ್ಠಿಕ ಸನ್ಯಾಸಿಗಳು ಗತಿಸಿ ಹೋಗಿದ್ದಾರೆ. ಸರ್ವಸಂಗ ಪರಿತ್ಯಾಗ ಅಥವಾ ಬ್ರಹ್ಮಚರ್ಯೆಯು ವ್ಯಕ್ತಿಗಳೊಳಗಿನ ಒತ್ತಡವಾಗಿ, ಅವರ ಸಹಜ ಸ್ವಭಾವವಾಗಿ ಆವಿರ್ಭವಿಸಿದರೆ ಅದು ಸಮಾಜಕ್ಕೆ ಪೂರಕ ಶಕ್ತಿಯಾಗಿ ಒದಗಿ ಬಂದೀತು. ಅಂಥ ಅಪರೂಪದ ನಡೆಗಳು ಚರಿತ್ರೆಯ ಉದ್ದಕ್ಕೂ ಕಾಣಿಸಿಕೊಂಡಿವೆ. ವಿಪರ್ಯಾಸವೆಂದರೆ ಮಠಗಳ ಅಸ್ತಿತ್ವ ಮತ್ತು ಅವುಗಳು ರೂಢಿಸಿಕೊಂಡು ಬಂದಿರುವ ಶಕ್ತಿ ರಾಜಕಾರಣದಿಂದಾಗಿ ಮಠಾಧೀಶರು ಶಿಷ್ಯ ಬದುಕಿಗೆ ವರದಾನವಾಗುವ ಬದಲು ಕಂಟಕವಾದದ್ದೆ ಹೆಚ್ಚು. ಇಂದಿಗೂ ಮಠದ ಆಸ್ತಿ-ಪಾಸ್ತಿಗಳ ಕುರಿತು ಹತ್ತಾರು ವ್ಯಾಜ್ಯಗಳು ಕೋರ್ಟಿನಲ್ಲಿ ಇರುವುದನ್ನು ಗಮನಿಸಬಹುದು. ಇನ್ನು ಮಠಾಧೀಶರ ಲೈಂಗಿಕ ಹಗರಣಗಳ ಕುರಿತು ಮಾತನಾಡದಿರುವುದೇ ಹೆಚ್ಚು ಶ್ರೇಯಸ್ಕರ.

ಮಠ-ಮಠಾಧೀಶರ ಬಗೆಗೆ ಸಮಾಜದಲ್ಲಿ ಮನೆ ಮಾಡಿಕೊಂಡಿರುವ ಅಪಾರ ಭಕ್ತಿ, ಮುಗ್ಧ ಶ್ರದ್ಧೆ ಮತ್ತು ಅಧಿಕಾರದೊಂದಿಗಿನ ಸಖ್ಯಗಳೇ ಮಠಾಧಿಪತಿಗಳ ದಿಕ್ಕು ತಪ್ಪಿಸಿವೆ. ದುಡಿಯದೆ ತಿನ್ನುವ ಅವಕಾಶ, ಅನಾಯಾಸವಾಗಿ ಒದಗಿ ಬರುವ ಐಷಾರಾಮಿ ಬದುಕು, ಆಯಾಚಿತವಾಗಿ ದೊರೆಯುವ ಗೌರವ ಮುಂತಾಗಿ ಅಲಭ್ಯ ಲಭ್ಯತೆಯು ಉಚ್ಚಜಾತಿಯ ವಟುಗಳನ್ನು ಆಕರ್ಷಿಸುತ್ತಿವೆ. ಆದರೂ ತಮ್ಮೆಲ್ಲ ಬಯಕೆ-ಭಾವನೆಗಳನ್ನು ಕದ್ದು ಮುಚ್ಚಿಯೇ ಪೂರೈಸಿಕೊಳ್ಳಬೇಕಾದ ಧಾವಂತಕ್ಕೆ ಬಲಿಯಾಗುವ ಕಷ್ಟವಂತೂ ಅವರಿಗೂ ಇದೆ. ವಿಶೇಷವಾಗಿ ದೈಹಿಕ ಕಾಮನೆಗಳನ್ನು ಭರಿಸಿಕೊಳ್ಳುವ ಅವರ ಕಸರತ್ತಂತೂ ಅವರನ್ನು ಹೈರಾಣಾಗಿಸುವುದು ನಿತ್ಯದ ಗೋಳು.

ಕಲಬುರಗಿಯ ಜಿಲ್ಲೆಯ ಮಠಾಧೀಶರೊಬ್ಬರು ಕೆಲವು ವರ್ಷಗಳ ಹಿಂದೆ ಈ ಕುರಿತು ‘ಗುಲಾಮಗಿರಿಯ ಸ್ವಾಮಿತ್ವಕ್ಕಿಂತ ಸ್ವಾತಂತ್ರ್ಯದ ಗೃಹಸ್ಥಾಶ್ರಮವೆ ಲೇಸು’ ಎಂಬ ಪುಸ್ತಕವನ್ನು ಬರೆದು ಬಹು ದೊಡ್ಡ ವಿವಾದಕ್ಕೆ ಒಳಗಾಗಿದ್ದರಂತೆ. ತತ್ಕಾರಣವಾಗಿ ಕೋರ್ಟ್‌ಗೆ ಅಲೆಯಬೇಕಾಯಿತು. ಕೊನೆಗೂ ಆ ಮಠಾಧೀಶರು ಆತ್ಮಹತ್ಯೆ ಮಾಡಿಕೊಳ್ಳಬೇಕಾಯಿತು. ಮಠಾಧೀಶರ ಇಂಥ ಭಾರಾ ಭಾನಗಡಿಗಳು ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇವೆಯಾದರೂ ಜನಸಾಮಾನ್ಯರಿಗೆ ಮಾತ್ರ ಕಾವಿಧಾರಿ ಮಠಾಧೀಶರ ಬಗೆಗೆ ವಿಚಿತ್ರ ನಂಬಿಕೆಯೊಂದು ಇದ್ದೇ ಇದೆ.

ಮಠಾಧಿಪತಿಗಳ ಇಂಥ ಅನಾಹುತಕಾರಿ ನಡೆಗಳನ್ನು ಕಂಡೇ ಜೇಡರ ದಾಸಿಮಯ್ಯನವರು ಈ ಮೇಲಿನ ವಚನ ರಚಿಸಿದಂತಿದೆ.

ಬಹುತೇಕ ಮಠಾಧೀಪತಿಗಳು ಸಟೆ ಭಕ್ತಿಯುಳ್ಳವರು. ಕದ್ದು ಮುಚ್ಚಿ ಹಾಲು ಕುಡಿಯುವ ಬೆಕ್ಕಿನಂತೆ ಕಳ್ಳಹೆಜ್ಜೆಯನ್ನಿಡುವುದು ಸ್ವಭಾವವೇ ಆಗುತ್ತದೆ. ಮಠೀಯ ವ್ಯವಸ್ಥೆಯು ಅವರನ್ನು ಮರೆ ಮೋಸದ ಬದುಕಿಗೆ ಪಕ್ಕಾಗಿಸುತ್ತದೆ. ತಮಗೆ ತಾವೇ ವಂಚಿಸಿಕೊಳ್ಳುವ ಪ್ರವೃತ್ತಿಯೂ ಮೈಗೂಡುತ್ತದೆ. ಬೆಕ್ಕಿಗೆ ಲಿಂಗ ದೀಕ್ಷೆ ಕೊಟ್ಟು ವಿಭೂತಿ ಹಚ್ಚಿ ಅದನ್ನು ಸದಾ ತನ್ನ ಬಳಿಯಿಟ್ಟುಕೊಂಡು ದಿನಾಲೂ ತುಪ್ಪ ಬೋನವನ್ನು ಉಣಿಸಿದರೂ ಅದು ಇಲಿಯನ್ನು ಕಂಡೊಡನೆ ಚಕ್ಕನೆ ಹಾರಿ ಬೇಟೆಯಾಡುತ್ತದೆ. ಇಲಿ ತಿಂದಲ್ಲದೆ ಅದರ ಬಯಕೆ ತೀರದು. ಹಾಗೆಯೇ ಮನುಷ್ಯ ಪ್ರಾಣಿಗೂ ತನ್ನದೇ ನೈಸರ್ಗಿಕ ಸ್ವಭಾವ ಇದೆಯಲ್ಲದೆ ಅನೂಚಾನವಾಗಿ ಕಸಿ ಮಾಡಿಕೊಂಡಿರುವ ಸಾಮಾಜಿಕ ನಂಬಿಕೆಗಳು ಇರುತ್ತವೆ. ಬೆಕ್ಕು ಮಠದಲ್ಲಿಯೇ ಬೆಳೆದಿರಲಿ; ಬೇಟೆಗಾರನ ಮನೆಯಲ್ಲಿಯೇ ಬೆಳೆದಿರಲಿ. ಅದು ತನ್ನ ಸ್ವಭಾವ ಬಿಡದು. ಹಾಗೆಯೇ ಮನುಷ್ಯರು ಕಾವಿಯೇ ಧರಿಸಿರಲಿ, ಬಿಳಿ ಬಟ್ಟೆಯೇ ಧರಿಸಿರಲಿ. ನಿಸರ್ಗದ ಕಾಮನೆಗಳನ್ನು ನಿವಾರಿಸಿಕೊಳ್ಳಲಾಗದು. ಅಷ್ಟಕ್ಕೂ ಬ್ರಹ್ಮಚರ್ಯೆ ಶ್ರೇಷ್ಠ, ಸಾಂಸಾರಿಕ ಬದುಕು ಕನಿಷ್ಠ ಎಂದು ಪ್ರತಿಪಾದಿಸಿದ್ದ ಧಾರ್ಮಿಕ ಸಂಕಥನಗಳೇ ಇಷ್ಟೆಲ್ಲಾ ಅನರ್ಥಗಳಿಗೆ ಕಾರಣವಾಗಿವೆ.

ಸ್ತ್ರೀಯನ್ನು ಮಾಯೆಯೆಂದು ಜರಿದು ಅವಳ ಸಂಗ ಸುಖವನ್ನು ನರಕ ಎಂದು ಬಿಂಬಿಸಿದ್ದ ಬಾಲಿಶ ತತ್ವಶಾಸ್ತ್ರಗಳನ್ನು ದಾರ್ಶನಿಕರು ಖಂಡಿಸುತ್ತಲೇ ಬಂದಿದ್ದಾರೆ. ಈ ದಿಸೆಯಲ್ಲಿ 12ನೇ ಶತಮಾನದ ಶರಣರು ಅಗ್ರ ಪಂಕ್ತಿಯಲ್ಲಿ ನಿಲ್ಲುತ್ತಾರೆ. ಅದ್ವೈತಿಗಳ ‘ಬ್ರಹ್ಮ ಸತ್ಯ ಜಗನ್ಮಿಥ್ಯ’ ಎಂಬ ವಾದವನ್ನು ಸಾರಾಸಗಟಾಗಿ ಅವರು ಅಲ್ಲಗಳೆದರು. ನಾವು ಬದುಕುತ್ತಿರುವ ಜಗತ್ತು ಮತ್ತು ಅದರೊಂದಿಗಿನ ನಮ್ಮ ಸಂಬಂಧ ಮಿಥ್ಯಾಭ್ರಾಂತಿಯಲ್ಲ; ಅಂತೆಯೇ ಅವೇ ಪರಮ ಸತ್ಯವೂ ಶಾಶ್ವತವೂ ಅಲ್ಲ. ಶಾಶ್ವತವಲ್ಲವಾದ್ದರಿಂದ ಅದು ಸುಳ್ಳು ಎನ್ನಬೇಕಿಲ್ಲ. ಅನುಭವಿಸುತ್ತಿರುವ ಕಾಲದಲ್ಲಿ ಅದು ಸತ್ಯಶಃ ಸತ್ಯವೆ. ಅದು ನಿರಂತರ ಬದಲಾವಣೆಗೆ ಒಡ್ಡಿಕೊಳ್ಳುತ್ತ ಪ್ರಕ್ರಿಯಾತ್ಮಕವಾಗಿರುತ್ತದೆ. ಇದ್ದ ಸ್ಥಿತಿಯಲ್ಲಿಯೇ ಎಲ್ಲವೂ ಸ್ಥಿತವಾಗಿರುವುದಿಲ್ಲ. ನಿರಂತರ ಚಲನೆ; ತತ್ಕಾರಣವಾಗಿ ನಿರಂತರ ಬದಲಾವಣೆ ಅದರ ಸ್ವಭಾವವೇ ಆಗಿರುತ್ತದೆ. ವಸ್ತು ಶಾಶ್ವತವಲ್ಲ. ಬದಲಾವಣೆಯೊಂದೇ ಶಾಶ್ವತ.

ಹರಿಯುವ ನದಿಯಲ್ಲಿ ನಿಂತಿರುವ ನಾವು ಒಮ್ಮೆ ಸೋಂಕಿದ ನೀರನ್ನು ಇನ್ನೊಮ್ಮೆ ಸೋಂಕುವುದಿಲ್ಲ. ‘ಹರಿಯುವ ನದಿಗೆ ಮೈಯೆಲ್ಲಾ ಕಾಲು’ ಎಂದು ಅಲ್ಲಮಪ್ರಭು ತನ್ನೊಂದು ವಚನದಲ್ಲಿ ಹೇಳಿರುವಂತೆ. ಜಗತ್ತು ಹೀಗೆ ಕ್ಷಣ ಕ್ಷಣಕ್ಕೂ ಬದಲಾಗುತ್ತಲೇ ಇರುತ್ತದೆ. ಇದಕ್ಕೆ ನಾವು ಸಾಕ್ಷಿಯಾಗುತ್ತಲೇ ಇರುತ್ತೇವೆ. ಆದ್ದರಿಂದ ನಾನು ಮತ್ತು ಜಗತ್ತು ಎರಡೂ ನನ್ನ ಅನುಭವಕ್ಕೆ ಬರುವವರೆಗೂ ಅದು ಸತ್ಯವೆ. ನಾನಿಲ್ಲದಿರುವ ಕಾಲಕ್ಕೆ ಅದು ಇಲ್ಲವಾಗಿರಬಹುದು. ಆದರೆ ಅದು ಇಲ್ಲ ಎಂಬುದಿಲ್ಲ. ಬೌದ್ಧ ತಾತ್ವಿಕರು ಅದ್ವೈತರ ಮಿಥ್ಯಾವಾದವನ್ನು ಪ್ರಾಯೋಗಿಕವಾಗಿ ನಿರಾಧಾರವೆಂದು ನಿರೂಪಿಸಿದರು. ಬಸವಾದಿ ಶಿವಶರಣರು ಬೌದ್ಧರ ಶೂನ್ಯವಾದದಿಂದ ಪ್ರಭಾವಿತರಾಗಿ ಜಗತ್ತನ್ನು ನಿರಾಕರಿಸದೆ ಸಮಭಾವದಿಂದ ಇದಿರುಗೊಳ್ಳುವುದನ್ನು ಪ್ರತಿಪಾದಿಸಿದರು.

ಶಿವಶರಣರು ಸಾಂಸಾರಿಕ ಬದುಕನ್ನು ತುಚ್ಛೀಕರಿಸಲಿಲ್ಲ. ಅಂತೆಯೇ ಸಾಂಸಾರಿಕ ಮೋಹದಲ್ಲಿ ಬಿದ್ದು ಒದ್ದಾಡಲಿಲ್ಲ. ನಿಸರ್ಗ ಬದುಕನ್ನು ಅದು ಇರುವಂತೆಯೇ ಅನುಭವಿಸುವುದನ್ನು ಕಲಿತುಕೊಂಡರು. ಬ್ರಹ್ಮಚರ್ಯೆ ಮೌಲ್ಯವಲ್ಲ. ಸನ್ಯಾಸತ್ವ ಆದರ್ಶವಲ್ಲ. ಸಿದ್ಧರಾಮನಂತೂ ‘‘ಭಕ್ತನ ಮನ ಹೆಣ್ಣಿನೊಳಗಾದಡೆ ವಿವಾಹವಾಗಿ ಕೂಡುವುದು, ಭಕ್ತನ ಮನ ಮಣ್ಣಿನೊಳಗಾದಡೆ ಆಲಯವ ಮಾಡುವುದು, ಭಕ್ತನ ಮನ ಹೊನ್ನಿನೊಳಗಾದಡೆ ಬಳಲಿ ದೊರಕಿಸುವುದು ನೋಡಾ, ಕಪಿಲಸಿದ್ಧ ಮಲ್ಲಿಕಾರ್ಜುನಾ’’ ಎನ್ನುತ್ತಾನೆ. ಅಂದರೆ ಮನದಲ್ಲಿ ಕಾಮವಾಂಛೆ ಮೂಡುವುದು ಸಹಜ. ಅದು ನಿಸರ್ಗಧರ್ಮ. ಅನುರೂಪಳಾದ ವಧುವಿನೊಂದಿಗೆ ವಿವಾಹವಾಗಿ ಬದುಕು ಸಾಗಿಸುವುದರಲ್ಲಿ ಸಾರ್ಥಕ್ಯವಿದೆ. ಅಂತೆಯೇ ಕಷ್ಟಪಟ್ಟು ದುಡಿದು ಮನೆಯೊಂದನ್ನು ಕಟ್ಟಿಕೊಳ್ಳುವುದು. ಬದುಕಿಗೆ ಅವಶ್ಯವೆನಿಸುವ ಯಾವುದೇ ವಸ್ತು ಬೇಕಿದ್ದಲ್ಲಿ ಅದನ್ನು ಕಷ್ಟಪಟ್ಟು ದುಡಿದು ಸಂಪಾದಿಸಬೇಕು. ಅವಶ್ಯವಿದ್ದಷ್ಟು ಮಾತ್ರ ಪಡೆಯಬೇಕು. ಬೇಡವಾದುದನ್ನು ಗುಡ್ಡೆ ಹಾಕಿಕೊಳ್ಳಬೇಕಿಲ್ಲ ಎಂದು ಹೇಳಿದ್ದ.

ಇದೇ ಮಾತನ್ನು ಬಸವಣ್ಣನವರು ‘‘ಇಂದ್ರಿಯ ನಿಗ್ರಹವ ಮಾಡಿದಡೆ ಹೊಂದುವವು ದೋಷಂಗಳು, ಮುಂದೆ ಬಂದು ಕಾಡುವವು ಪಂಚೇಂದ್ರಿಯಗಳು, ಸತಿಪತಿರತಿ ಸುಖವ ಬಿಟ್ಟರೆ ಸಿರಿಯಾಳ ಚಂಗಳೆಯರು? ಸತಿಪತಿರತಿ ಸುಖಭೋಗೋಪ ಭೋಗವ, ವಿಳಾಸವ ಬಿಟ್ಟನೆ ಸಿಂಧುಬಲ್ಲಾಳನು? ನಿಮ್ಮ ಮುಟ್ಟಿ ಪರಧನ, ಪರಸತಿಯರಿಗೆಳಸಿದಡೆ ನಿಮ್ಮಾಚರಕ್ಕೆ ದೂರ, ಕೂಡಲಸಗಮದೇವಾ’’ ಎನ್ನುತ್ತಾರೆ. ಪರಮ ಸಾಧನೆ ಮಾಡುವವರೆಲ್ಲರೂ ಲೋಕ ಬದುಕಿನಿಂದ ದೂರವಾಗಬೇಕಿಲ್ಲ. ‘‘ಉಣಬಂದ ಭೋಗ ಉಂಡಲ್ಲದೆ ಹರಿಯದು’’ ಎಂಬುದು ಶರಣರ ಅಚಲವಾದ ಗ್ರಹಿಕೆ. ಅಧ್ಯಾತ್ಮವಾದಿಗಳು ಹೇಳುವ ಮುಕ್ತಿ, ಮೋಕ್ಷ ಎಂಬ ಸ್ಥಿತಿಯನೈದಲು ದೈಹಿಕ ಕಾಮನೆಗಳಿಂದ ವಿಮುಖರಾಗಬೇಕಿಲ್ಲ. ಇಂದ್ರಿಯ ಬಯಕೆಗಳನ್ನು ಅದುಮಿ ಹಿಡಿದಷ್ಟು ಒತ್ತರಿಸಿ ಬರುತ್ತವೆ. ನಿಸರ್ಗ ಧರ್ಮದ ವಿರುದ್ಧ ಸೆಣಸಾಡುವ ಮೂರ್ಖತನ ಬೇಕಿಲ್ಲ. ಒತ್ತಾಯದ ಬಂಧನ ಮನೋವಿಕಾರಕ್ಕೆ ದಾರಿ ಮಾಡುತ್ತದೆ. ವಿಕೃತಿ, ವಿಕಾರಕ್ಕೆ ಒಳಗಾಗಿ ಸಾಧಿಸಬೇಕಾದುದು ಏನೂ ಇಲ್ಲ. ಪಂಚೇಂದ್ರಿಯಗಳನ್ನು ನಿಗ್ರಹಿಸುವುದು ಅನವಶ್ಯಕವಲ್ಲದೆ ಅನರ್ಥಕಾರಿಯು ಹೌದು.

ನಿಸರ್ಗ ವಿವೇಕವನ್ನು ರೂಢಿಸಿಕೊಂಡು ಸಮಚಿತ್ತದಲ್ಲಿ ಬಯಕೆಗಳನ್ನು ಸಾಧಾರಣೀಕರಣಗೊಳಿಸಬೇಕು. ಹೀಗೆ ಲೋಕ ಮೋಹದಿಂದ ಹಂತ ಹಂತವಾಗಿ ಬಿಡಿಸಿಕೊಂಡು ಪ್ರಜ್ಞೆಯ ಉನ್ನತ ಸ್ಥರಕ್ಕೇರುವುದನ್ನೇ ಶರಣರು ಷಟ್ಸ್ಥಲ ಸಿದ್ಧಾಂತವಾಗಿಸಿದರು. ಹೀಗಾಗಿ ಶರಣ ಸಿದ್ಧಾಂತದಲ್ಲಿ ಸನ್ಯಾಸ್ಯತ್ವ ಅಥವಾ ಬ್ರಹ್ಮಚರ್ಯೆ ಇತ್ಯಾದಿಗಳಿಗೆ ಪ್ರಾಶಸ್ತ್ಯವಿಲ್ಲ. ಶರಣ ಕ್ರಾಂತಿಯು ಕನ್ನಡ ಜನಮಾನಸವನ್ನು ಇನ್ನಿಲ್ಲದಂತೆ ಪ್ರಭಾವಿಸಿತು. ಶೂದ್ರಾದಿ ದುಡಿಯುವ ಜನತೆ ಶರಣ ಸಿದ್ಧಾಂತದತ್ತ ಹರಿದು ಬಂದಿತು. ಈವರೆಗೆ ದುಡಿಯುವ ಜನತೆಯನ್ನು ತಮ್ಮ ಧಾರ್ಮಿಕ ಛವಿಯಿಂದ ಅಡಿಯಾಳಾಗಿಸಿಕೊಂಡು ಹೊಟ್ಟೆ ಹೊರೆಯುತ್ತಿದ್ದ ಮಠಾಧೀಶರಿಂದ ಜನರು ದೂರವಾಗಿ ಶರಣ ತತ್ವದೊಂದಿಗೆ ಗುರುತಿಸಿಕೊಳ್ಳತೊಡಗಿದರು.

ಭಕ್ತ ವರ್ಗ ತಮ್ಮಿಂದ ದೂರವಾಗುತ್ತಿರುವುದನ್ನು ಗಮನಿಸಿ ಶೈವ ಮಠಾಧೀಶರು ವೀರಶೈವ ಮಠಗಳಾಗಿ ಪರಿವರ್ತನೆಗೊಂಡವು. ಇದರಲ್ಲಿ ಅನೇಕ ಮಠಾಧೀಶರು ಬಸವಾದಿ ಶರಣ ತತ್ವಗಳಿಂದ ಪ್ರಭಾವಿತರಾಗಿ ಮನಸಾಪೂರ್ವಕವಾಗಿಯೇ ಲಿಂಗವಂತ ಧರ್ಮ ಸ್ವೀಕರಿಸಿದ್ದರು. ದುರಂತವೆಂದರೆ ಹೀಗೆ ಪರಿವರ್ತನೆಗೊಂಡ ಮಠ ಮತ್ತು ಮಠಾಧೀಶರು ನೈಜಾರ್ಥದಲ್ಲಿ ಬಸವಾನುಯಾಯಿಗಳಾಗದೆ ಅಲ್ಲಿಯೂ ತಮ್ಮ ಯಜಮಾನಿಕೆ ಸ್ಥಾಪಿಸತೊಡಗಿದರು. ಮೂಲದಲ್ಲಿ ಮುಕ್ತವಾಗಿದ್ದ ಶರಣ ತತ್ವಗಳನ್ನು ಧಾರ್ಮಿಕ ವಿಧಿ ಆಚರಣೆಗಳಲ್ಲಿ ಸಂಗತಗೊಳಿಸ ತೊಡಗಿದರು. 12ನೇ ಶತಮಾನದ ಶರಣ ಧರ್ಮ ಕಟ್ಟಿ ಬೆಳೆಸಿದವರೆಲ್ಲ ಬಹುತೇಕವಾಗಿ ಸಂಸಾರೊಂದಿಗರು. ಹಡಪದ ಅಪ್ಪಣ-ಲಿಂಗಮ್ಮ, ಆಯ್ದಕ್ಕಿ ಲಕ್ಕಮ್ಮ-ಮಾರಯ್ಯ, ಮೋಳಿಗೆ ಮಾರಯ್ಯ-ಮಹಾದೇವಮ್ಮ, ಜೇಡರ ದಾಸಿಮಯ್ಯ-ದುಗ್ಗಳೆ, ಬಸವಣ್ಣ-ಗಂಗಾಂಬಿಕೆ, ನೀಲಾಂಬಿಕೆ ಹೀಗೆ ಜೋಡಿಯಾಗಿಯೆ ಅಣಿನೆರೆದು ಅನುಭವ ಮಂಟಪ ಕಟ್ಟಿದರು. ಅವರಲ್ಲಿ ಕೆಲವರು ಅವಿವಾಹಿತರು, ಪರಿತ್ಯಕ್ತರು ಇದ್ದರಾದರೂ ಅವರ್ಯಾರೂ ತಮ್ಮ ಆ ಸ್ಥಿತಿಯನ್ನು ವೈಭವೀಕರಿಸಲೂ ಇಲ್ಲ. ಅನುಕಂಪ ಗಿಟ್ಟಿಸಲೂ ಇಲ್ಲ. ಅಸಲಿಗೆ ಸಾಂಸಾರಿಕ ಬದುಕನ್ನು ಅವರು ಬಂಧನವೆಂದು ಪರಿಭಾವಿಸಲಿಲ್ಲ.

ಶಿವಯೋಗಿ ಸಿದ್ಧರಾಮ, ಅಲ್ಲಮಪ್ರಭು, ಅಕ್ಕಮಹಾದೇವಿ ಮುಂತಾದವರು ದಾಂಪತ್ಯ ಜೀವನದಲ್ಲಿ ಗುರುತಿಸಿಕೊಂಡಿರಲಿಲ್ಲವಾದರೂ ಸಾಂಸಾರಿಕ ಬದುಕನ್ನು ತುಚ್ಛೀಕರಿಸಲಿಲ್ಲ. ಹೀಗಾಗಿಯೇ ಸಿದ್ಧರಾಮನಂಥವರು ಶಿವಯೋಗಿ ಎನಿಸಿಕೊಂಡಿದ್ದರೂ ಯಾವುದೇ ಮಠದ ಅಧಿಕಾರಿಗಳಾಗಿರಲಿಲ್ಲ. ಅವರಲ್ಲೊಬ್ಬರೂ ಷಟ್ಸ್ಥಲ ಬ್ರಹ್ಮ ಸ್ವರೂಪಿ, ಮನ್ನಿರಂಜನ ಪ್ರಣಮ ಸ್ವರೂಪಿ ಅಥವಾ ಘನಲಿಂಗ ಚಕ್ರವರ್ತಿ ಎಂಬ ಪಟ್ಟ ಪದವಿಗಳನ್ನು ಹೊಂದಿರಲಿಲ್ಲ. ಯಾವುದೇ ಧಾರ್ಮಿಕ ಉಪಾಧಿಗಳು, ಸ್ಥಾವರ ಮಠ. ಸ್ಥಿರ ಚರ ಪಟ್ಟಗಳ ಹಂಗಿಗೆ ಅವರು ಬಿದ್ದವರಲ್ಲ. ಈಗಾಗಲೇ ಜಡಗೊಂಡಿದ್ದ ಮಠೀಯ ಝಂಝಾವಾತದ ವಿರುದ್ಧ ಅವರು ದಂಗೆ ಎದ್ದು ಮಠ ಸಂಸ್ಕೃತಿಯನ್ನು ಧಿಕ್ಕರಿಸಿದ್ದರು. ಮಠ-ಮಂದಿರಗಳ ಭಯದಿಂದ ಜನರನ್ನು ಮುಕ್ತಗೊಳಿಸುವುದೇ ಅವರ ಹೋರಾಟದ ಕೇಂದ್ರವಾಗಿತ್ತು.

ಹೀಗಾಗಿಯೇ ಇಂದಿನ ಮಠಗಳ ವ್ಯವಸ್ಥೆಗೂ ಶರಣ ತತ್ವಗಳಿಗೂ ಯಾವುದೇ ತಾತ್ವಿಕ ಅಥವಾ ತಾರ್ಕಿಕ ಸಂಬಂಧವಿಲ್ಲ. ಕೋಮುವಾದಿಗಳು ಇತ್ತೀಚಿನ ದಿನಗಳಲ್ಲಿ ಮಠಾಧೀಶರಿಗೆ ಆಸೆ ಆಮಿಷಗಳನ್ನೊಡ್ಡಿ ತತ್ವಗಳನ್ನು ಅಪಭ್ರಂಶಗೊಳಿಸುತ್ತಿರುವುದನ್ನೂ ಸಹ ಕಾಣುತ್ತಿದ್ದೇವೆ. ಆಸ್ತಿ-ಪಾಸ್ತಿ ಮಾಡಿಕೊಳ್ಳುವಲ್ಲಿಯೇ ವ್ಯಸ್ತರಾಗಿರುವ ಇಂದಿನ ಮಠಾಧೀಶರು, ಕೋಮುವಾದಿ ಅಪಸವ್ಯಗಳೊಂದಿಗೆ ಗುರುತಿಸಿಕೊಂಡಿರುವ ಕಾವಿಧಾರಿಗಳಿಗೂ ವಚನ ತತ್ವಗಳಿಗೂ ಸಂಬಂಧವಿಲ್ಲ. ಶರಣ ಚಳವಳಿಯ ತರುವಾಯ ವಚನ ತತ್ವಗಳನ್ನು ಹೈಜಾಕ್ ಮಾಡಿಕೊಂಡದ್ದೇ ಈ ಮಠಗಳ ಚರಿತ್ರೆಯಾಗಿದೆ. ಆದ್ದರಿಂದ ಈಗಿನ ಮಠ ಮತ್ತು ಮಠಾಧೀಶರ ಮೂಲಕ ಶರಣ ತತ್ವಗಳನ್ನು ಅರಿವಾಗಿಸಿಕೊಳ್ಳಲಾಗದು. ಮಠಗಳ ಧಾರ್ಮಿಕ ರೆಜಿಮೆಂಟ್‌ಗೂ ಬಯಲಿಗೆ ಬಯಲಾಗಿ ಪಸರಿಸಿದ ವಚನ ತತ್ವಗಳಿಗೂ ಎಣ್ಣೆ ಸಿಗೇಕಾಯಿ ಸಂಬಂಧವಿದೆಯಷ್ಟೆ.

(ಲೇಖಕರು: ಪ್ರಾಧ್ಯಾಪಕರು ಮತ್ತು ಸಾಮಾಜಿಕ ಹೋರಾಟಗಾರರು)

Tags

Basava
share
ಡಾ. ಮೀನಾಕ್ಷಿ ಬಾಳಿ
ಡಾ. ಮೀನಾಕ್ಷಿ ಬಾಳಿ
Next Story
X