Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ನೆಲದನಿ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಲಂಡನ್ ಡೈರಿ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ಪುಸ್ತಕ ಸಾಂಗತ್ಯ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಮಾಹಿತಿ ಮಾರ್ಗದರ್ಶನ
    • ಆರೋಗ್ಯ
    • ಓ ಮೆಣಸೇ
    • ಕೃತಿ ಪರಿಚಯ
    • ಝಲಕ್
    • ಬುಡಬುಡಿಕೆ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಅಂಕಣಗಳು
  4. ಬಯಲ ಬುತ್ತಿ
  5. ಬಸವಾದಿ ಶರಣರ ಮೇಲೆ ದುರ್ದಾಳಿ

ಬಸವಾದಿ ಶರಣರ ಮೇಲೆ ದುರ್ದಾಳಿ

ಡಾ. ಮೀನಾಕ್ಷಿ ಬಾಳಿಡಾ. ಮೀನಾಕ್ಷಿ ಬಾಳಿ24 Nov 2026 11:50 AM IST
share
ಬಸವಾದಿ ಶರಣರ ಮೇಲೆ ದುರ್ದಾಳಿ

ಸನಾತನವಾದಿಗಳು ಬಸವಾದಿ ಶರಣ ಸಂಕುಲವನ್ನು ಗುರಿ ಮಾಡಿಕೊಂಡು ಲಿಂಗಾಯತ ತತ್ವಗಳನ್ನು ವಿಕಾರಗೊಳಿಸುವ, ತನ್ಮೂಲಕ ಲಿಂಗಾಯತರನ್ನು ತಮ್ಮ ಕರ್ಮಸಿದ್ಧಾಂತದ ಹಿತ್ತಲಿಗೆ ತಂದು ದನಗಳಾಗಿ ಕಟ್ಟುವ ಪಯತ್ನ ಮಾಡುತ್ತಿದ್ದಾರೆ. ಸನಾತನಿಗಳ ದೃಷ್ಟಿಯಲ್ಲಿ ಶೂದ್ರರೆನಿಸಿಕೊಂಡಿರುವ ಕೆಲವು ಲಿಂಗಾಯತ ಸ್ವಾಮಿಗಳು, ಸ್ವಾರ್ಥಿ ರಾಜಕಾರಣಿಗಳು, ದಿಕ್ಕು ತಪ್ಪಿದ ಯುವಕರು ಸಂಘಿಗಳ ಕಟ್ಟಾಳುಗಳಾಗಿ ಜೀತ ಮಾಡುತ್ತಿದ್ದಾರೆ.

ಕರ್ನಾಟಕ ಸರಕಾರವು ಮಹಾಮಾನವತಾವಾದಿ ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕ ಎಂದು ಘೋಷಿಸಿದಂದಿನಿಂದ ಸನಾತನವಾದಿ ಕರ್ಮಠರಿಗೆ ಬೆಂಕಿ ಬಿದ್ದಿದೆ. ಚಾತುರ್ವರ್ಣ ವ್ಯವಸ್ಥೆಯನ್ನು ಪ್ರತಿಪಾದಿಸಿಕೊಂಡ ಶ್ರೇಣೀಕೃತ ಸಮಾಜ ವ್ಯವಸ್ಥೆಯು ದೈವೀ ನಿರ್ಮಿತ ಎಂದು ನಂಬಿಸಿಕೊಂಡು ಬಂದಿರುವ ಮನುವಾದಿಗಳಿಗೆ ಬಸವಾದಿ ಶರಣ ತತ್ವಗಳು ನುಂಗಲಾರದ ತುತ್ತಾಗಿವೆ.

ಬಸವಾದಿ ಶರಣರ ಸಮಾನತೆಯ ವಿಚಾರಗಳು ಪ್ರಚುರಗೊಂಡಷ್ಟು ತಮಗೆ ಅಪಾಯ ಕಟ್ಟಿಟ್ಟ ಬುತ್ತಿ ಎಂಬುದನ್ನು ಮನವರಿಕೆ ಮಾಡಿಕೊಂಡ ವರ್ಗ, ಬಸವಾದಿ ಶರಣರ ವಿರುದ್ಧ ಪ್ರತಿ ದಂಗೆ ಸಾರಿದರು. ಬಸವಣ್ಣನವರನ್ನು ಕಲ್ಯಾಣದಿಂದ ಹೊರ ಹಾಕಿದರೆ ಅನೇಕ ಶರಣರ ಕಗ್ಗೊಲೆ ಮಾಡಲಾಯಿತು. ಅದೆಲ್ಲಕ್ಕೂ ಹೆಚ್ಚಾಗಿ ಶರಣರು ರಚಿಸಿದ ಅಸಂಖ್ಯಾತ ವಚನಗಳನ್ನು ಶಾಶ್ವತವಾಗಿ ನಿರ್ನಾಮಿಸುವ ಗುರಿಯಿಟ್ಟುಕೊಂಡರು. ಬಸವಣ್ಣನವರ ಕಾಲದಿಂದಲೂ ಈ ಪುರೋಹಿತ ವರ್ಗ ಬಸವಣ್ಣನವರ ವಿರುದ್ಧ ಪಿತೂರಿ ಮಾಡುತ್ತಲೇ ಬರುತ್ತಿದೆ. ಇತಿಹಾಸದಲ್ಲಿ ಇದಕ್ಕೆ ನೂರಾರು ಪುರಾವೆಗಳಿವೆ.

ಸದ್ಯ ರವಿ ಹಂಜ್‌ನೆಂಬ ವ್ಯಕ್ತಿಯಿಂದ ಇದೇ ಪುರೋಹಿತಶಾಹಿ ತನ್ನ ಕುಟಿಲ ಕಾರಸ್ಥಾನವನ್ನು ಮುಂದುವರಿಸುತ್ತಿದೆ. ಅನಿವಾಸಿ ಭಾರತೀಯರಾಗಿರುವ ರವಿ ಹಂಜ್ ಕಳೆದ ಹಲವು ವರ್ಷಗಳಿಂದ ಬಸವಾದಿ ಶರಣರ ವಚನ ತತ್ವಗಳನ್ನು ಅಪವ್ಯಾಖ್ಯಾನಕ್ಕೆ ಒಳಪಡಿಸುತ್ತಲೇ ಬರುತ್ತಿದ್ದಾರೆ. ಲಿಂಗಾಯತ ತತ್ವ ಸಿದ್ಧಾಂತಗಳನ್ನು ತಿರುಚುವ, ಅಪಮೌಲೀಕರಿಸುವ ಕೆಲಸವನ್ನು ವಿಶ್ವವಾಣಿ ಎಂಬ ಪತ್ರಿಕೆಯಲ್ಲಿ ಅಂಕಣ ಬರೆಯುವ ಮೂಲಕ ಮಾಡುತ್ತಿರುವುದನ್ನು ಜನತೆ ಗಮನಿಸಿದ್ದಾರೆ. ಆಗಾಗ ಸಾಮಾಜಿಕ ಜಾಲತಾಣದಲ್ಲಿ, ಅದೇ ಪತ್ರಿಕೆಗಳಲ್ಲಿ ಲೇಖನಗಳನ್ನು ಬರೆಯುವ ಮೂಲಕ ರವಿಯವರಿಗೆ ಉತ್ತರ ಕೊಡುವ ಪ್ರಯತ್ನ ಮಾಡುತ್ತಲೇ ಬರುತ್ತಿದ್ದಾರೆ. ತನ್ನ ಪೂರ್ತಿ ಹೆಸರಾಗಿರುವ ರವಿ ಹಂಜಗಿಮಠ ಎಂದು ಹೇಳಿಕೊಳ್ಳಲು ಹೆದರುವ ಇವರು ತಮ್ಮ ಕೊಳಕು ಲೇಖನಗಳನ್ನು ಕ್ರೋಡೀಕರಿಸಿ ಇದೀಗ ‘ಬಸವ ಮಂಟಪ’ ಎಂಬ ಕೃತಿಯನ್ನು ಪ್ರಕಟಿಸಿ ತನ್ಮೂಲಕ ಬಸವಾದಿ ಶರಣ ತತ್ವಗಳ ಬಗೆಗೆ ತನಗಿರುವ ಅಜ್ಞಾನ, ದ್ವೇಷ, ಸೊಕ್ಕು ಮುಂತಾದವುಗಳನ್ನು ಪ್ರದರ್ಶಿಸಿದ್ದಾರೆ. ಅಷ್ಟೇ ಅಲ್ಲದೆ ಟಿ.ವಿ. ವಾಹಿನಿಗೆ ಸಂದರ್ಶನ ನೀಡುತ್ತ, ‘‘ಬಸವಣ್ಣನವರು ಬಿಜ್ಜಳನ ಖಜಾನೆ ಲೂಟಿ ಮಾಡಿದ್ದರು, ಸುಳ್ಳುಗಾರರಾಗಿದ್ದರು. ಬಸವಣ್ಣನವರೇ ಬಿಜ್ಜಳನ ಕೊಲೆ ಮಾಡಿಸಿದರು. ಶರಣರಲ್ಲಿ ಅನೇಕ ವಿರೋಧಾಭಾಸಗಳಿವೆ’’ ಎಂದು ಗಳುಹಿದ್ದಾರೆ. ಇವರನ್ನು ಪ್ರಚೋದಿಸುತ್ತ ಟಿ.ವಿ. ಆ್ಯಂಕರ್ ಓಹೋ! ಆಹಾ! ನೀವೊಬ್ಬ ದೊಡ್ಡ ವಿದ್ವಾಂಸರು. ನಿಮ್ಮಂಥವರು ನ ಭೂತೋ ಭವಿಷ್ಯತಿ ಎಂದು ಫರಾಕು ಹೊಡೆಯುತ್ತಲೇ ಹೋಗಿದ್ದಾರೆ.

ಈ ಮೊದಲು ಕೂಡ ಇವರು ಫೇಸ್‌ಬುಕ್ ಮೂಲಕ ವಸ್ತುನಿಷ್ಠ ಸಂಶೋಧಕರಾಗಿದ್ದ ಹುತಾತ್ಮ ಕಲಬುರ್ಗಿಯವರನ್ನು ಕುರಿತೂ ಹಗುರವಾಗಿ ಮಾತನಾಡಿದ್ದಾರೆ. ಕಲಬುರ್ಗಿಯವರು ಸಂಶೋಧಕರೇ ಅಲ್ಲ; ತಾನೇ ಬಹುದೊಡ್ಡ ಸಂಶೋಧಕ ಎಂದು ಬಿಂಬಿಸಿಕೊಳ್ಳಲು ಪ್ರಯತ್ನಿಸಿದ್ದಾರೆ. ನಾರ್ಮಲ್ ಮನುಷ್ಯರು ಹೀಗೆ ಮೈಮೇಲೆ ಪ್ರಜ್ಞೆ ಇಲ್ಲದಂತೆ ಮಾತಾಡಲು ಸಾಧ್ಯವೇ ಇಲ್ಲ. ಶೋಷಿತ ಸಮುದಾಯಗಳ ವಿಮೋಚಕ ಬಸವಣ್ಣನವರನ್ನು ಕುರಿತು ಇಷ್ಟು ಅಸಹ್ಯವಾಗಿ ಕಿರುಚುತ್ತಿರಬೇಕಾದರೆ ಒಂದೋ ಅವರು ಬುದ್ಧಿಭ್ರಮಿಷ್ಟರಾಗಿರಬೇಕು. ಇಲ್ಲವೇ ಅವರ ಹಿಂದೆ ದೊಡ್ಡ ಗುಂಪೊಂದು ಷಡ್ಯಂತ್ರ ಹೂಡಿರಬೇಕು.

ಈ ಹಿಂದೆ ಇದೇ ವಿಶ್ವವಾಣಿಯ ವಿಶ್ವೇಶ್ವರ ಭಟ್ಟರು ಕಲಬುರಗಿಯವರು ಹತ್ಯೆಗೆ ಪ್ರಚೋದಿಸುವಂತಹ ಬರಹಗಳನ್ನು ಮಾಡಿದ್ದರು. ಕಲಬುರಗಿಯವರು ಸಾಂದರ್ಭಿಕವಾಗಿ ಇನ್ನೊಬ್ಬರು ಹೇಳಿದ್ದನ್ನು ಉಲ್ಲೇಖ ಮಾಡಿದ್ದರು. ಅನ್ಯ ಹೇಳಿಕೆಯನ್ನು ತಿರುಚಿ ಕಲಬುರಗಿಯವರೇ ಈ ರೀತಿ ಹೇಳಿದ್ದಾರೆ ಎಂದು ಪ್ರಕಟಿಸಿದ್ದು ಅವರ ಕೊಲೆಗೆ ಪರೋಕ್ಷ ಪ್ರೇರಣೆಯಾಗಿರಬಹುದೇ ಎಂಬುದು ಇನ್ನೂ ಸಾಬೀತಾಗಬೇಕಿದೆ. ಈಗ ಮತ್ತದೇ ಪಟಾಲಂ ಹಂಜ್ ಎಂಬ ಮುಖೇಡಿಯಿಂದ ಬಸವಣ್ಣನವರ ತೋಜೋವಧೆ ಮಾಡಿಸುತ್ತಿದೆ. ಈ ಎಲ್ಲ ಸಂಚಿನ ಹಿಂದೆ ಕ್ರೊನಾಲಜಿ ಅಂದರೆ ಕಾಲಾನುಕ್ರಮವಿದೆ.

ಹಲವು ವರ್ಷಗಳ ಹಿಂದೆ ಶಿವಮೊಗ್ಗ ವಿಶ್ವವಿದ್ಯಾನಿಲಯದಲ್ಲಿ ಫ್ಯಾಶಿಸ್ಟ್ ವಿದ್ವಾಂಸರ ಗುಂಪೊಂದು ಸ್ಥಳೀಯ ಸಂಸ್ಕೃತಿ ಕುರಿತು ಸಂಶೋಧನೆ ನಡೆಸುವ ನೆಪದಲ್ಲಿ (ಸಿಎಸ್‌ಎಲ್‌ಸಿ-ಸೆಂಟರ್ ಫಾರ್ ದಿ ಸ್ಟಡಿ ಆಫ್ ಲೋಕಲ್ ಕಲ್ಚರ್) ಶಿವಮೊಗ್ಗ ವಿಶ್ವವಿದ್ಯಾನಿಲಯದಲ್ಲಿ ಬೆಲ್ಜಿಯಮ್ ಘೆಂಟ್ ವಿಶ್ವವಿದ್ಯಾನಿಲಯದ ಸಹಯೋಗದೊಂದಿಗೆ ಹಲವು ಪುಸ್ತಕಗಳನ್ನು ಪ್ರಕಟಿಸಿತ್ತು. ಡಂಕಿನ್ ಝಳಕಿ, ಎಸ್.ಎನ್. ಬಾಲಗಂಗಾಧರ, ರಾಜಾರಾಮ ಹೆಗಡೆ ಮುಂತಾದವರು ಭಾರತದಲ್ಲಿ ಜಾತಿ ವ್ಯವಸ್ಥೆ ಎಂಬುದೇ ಇಲ್ಲ. ಇದು ಯುರೋಪಿಯನ್‌ರ ಸೃಷ್ಟಿ ಎಂದು ಸಾಬೀತು ಮಾಡುವ ಕಸರತ್ತು ನಡೆಸಿ ತಮ್ಮದು ಉಚ್ಛಸ್ಥರದ ಸಂಶೋಧನೆ ಎಂದು ಬಿಂಬಿಸಿ ಅನೇಕ ಪುಸ್ತಕಗಳನ್ನು ಇಂಗ್ಲೀಷ್‌ನಲ್ಲಿ ಪ್ರಕಟಿಸಿದರು.

ಎಸ್.ಎನ್. ಬಾಲಗಂಗಾಧರ ಅವರು ಬರೆದ ಪುಸ್ತಕಗಳನ್ನು ರಾಜಾರಾಮ ಹೆಗಡೆ ಅವರು ಕನ್ನಡಕ್ಕೆ ತಂದಿದ್ದಾರೆ. ಅವುಗಳ ಪೈಕಿ ‘ಭಾರತದಲ್ಲಿ ಜಾತಿ ವ್ಯವಸ್ಥೆ ಇದೆಯೇ?’ ಎಂಬ ಪುಸ್ತಕದಲ್ಲಿ ಅವರು ಭಕ್ತಿ ಚಳವಳಿ ಮತ್ತು ವಚನ ಚಳವಳಿಗಳನ್ನು ಉದಾಹರಿಸುತ್ತ ‘‘ವಚನಗಳನ್ನು ಕೇವಲ ಒಂದು ಶಿಸ್ತಬದ್ಧ ಪುನರ್ ಓದಿಗೆ ಹಚ್ಚುವ ಮೂಲಕ ಇನ್ನಷ್ಟು ನಿರ್ಣಾಯಕವಾಗಿ ಸ್ಪಷ್ಟಪಡಿಸಬಹುದು. ಅವು ಜಾತಿ ವ್ಯವಸ್ಥೆಯ ಕುರಿತು ಮಾತನಾಡುವುದಿಲ್ಲ. ಇಲ್ಲಿ ಜಾತಿ ವ್ಯವಸ್ಥೆಯನ್ನು ನಾವು ಏನೆಂದುಕೊಂಡರೂ ಸರಿ.( ಅದು ನಿಜವಾಗಿಯೂ ಇದೆ, ಅದೊಂದು ವಸಾಹತುಶಾಹಿ ಉತ್ಪನ್ನ. ಸ್ಟೀರಿಯೋಟೈಪ್‌ಗಳ ಸಂಗ್ರಹ ಇತ್ಯಾದಿ) ವಚನಗಳು ಜಾತಿ ವ್ಯವಸ್ಥೆಯ ಕುರಿತು ಮಾತಾಡುವುದಿಲ್ಲವೆಂದು ತೋರಿಸಬಹುದು’’ ಎಂದು ಷರಾ ಬರೆದಿದ್ದರು. ಈ ಹೇಳಿಕೆಗೆ ಅವರು ಕೊಡುವ ಪುರಾವೆ ‘‘ಈಗ ಲಭ್ಯವಿರುವ ಸುಮಾರು 21,778 ವಚನಗಳಲ್ಲಿ ಕೇವಲ 465 ವಚನಗಳಲ್ಲಿ ಮಾತ್ರ ಜಾತಿ ಅಥವಾ ಕುಲ ಎಂಬ ಪದಗಳ ಬಳಕೆ ಇದೆ. ಅವುಗಳಲ್ಲಿ 101 ವಚನಗಳಲ್ಲಿ ಸುಮ್ಮನೆ ಈ ಪದಗಳ ಬಳಕೆ ಇದೆಯೇ ಹೊರತು ಆ ವಿಚಾರದ ಕುರಿತು ಅವು ಏನನ್ನೂ ಹೇಳುವುದಿಲ್ಲ’’ ಎಂದು ಜಾತಿ ಪದ ಬಳಕೆಯ ಸಂಖ್ಯೆಯ ಮೇಲೆ ವಾದ ಮಂಡಿಸುತ್ತಾರೆ.

ಹಾಗೆ ಮುಂದುವರಿದ ಅವರ ವಾದ ಸರಣಿಯ ಸಾರಾಂಶವೆಂದರೆ 12ನೇ ಶತಮಾನದ ವಚನಕಾರರು ಜಾತಿ ವ್ಯವಸ್ಥೆ ವಿರುದ್ಧ ದಂಗೆ ಎದ್ದಿರಲಿಲ್ಲ ಎಂದು. ‘‘ವಚನಕಾರರು ಹಾಗೂ ಲಿಂಗಾಯತ/ಜಾತಿವಿರೋಧಿ ಚಳವಳಿ ನಡುವಿನ ಸಂಬಂಧವು ಯಾವುದೇ ವೈಜ್ಞಾನಿಕ ಮತ್ತು ಸ್ವತಂತ್ರ ಸಂಶೋಧನೆಯನ್ನಾಧರಿಸಿ ರೂಪುಗೊಂಡದಿಲ್ಲ, ಅದೇನಿದ್ದರೂ ಯುರೋಪಿಯನ್ನರು ಉದ್ದೇಶಪೂರ್ವಕವಾಗಿ ಹುಟ್ಟು ಹಾಕಿದ ಸಂಕಥನ’’ ಎಂದು ಸತ್ಯದ ತಲೆಯ ಮೇಲೆ ಹೊಡೆದಂತೆ ವಾದ ಸರಣಿ ಹರಿ ಬಿಟ್ಟಿದ್ದಾರೆ. ಈ ಕುರಿತು ಅವರು ಹಿಂದೊಮ್ಮೆ ಪತ್ರಿಕೆಯೊಂದರಲ್ಲಿ ಲೇಖನಗಳನ್ನು ಬರೆದಿದ್ದರು. ಅದಕ್ಕೆ ಪುಂಖಾನುಪುಂಖವಾಗಿ ಉತ್ತರ ರೂಪಿ ಲೇಖನಗಳು ಪ್ರಕಟವಾದೊಡನೆ ಒಂದಷ್ಟು ಮೌನ ವಹಿಸಿದರು. ವಚನಗಳನ್ನು ತಿರುಚುವ ಮತ್ತು ವಚನಕಾರರನ್ನು ನಗಣ್ಯಗೊಳಿಸುವ ಅವರ ಕುಚೇಷ್ಟೆ ಮಾತ್ರ ನಿಲ್ಲಲಿಲ್ಲ.

ಹೊಸ ಹೊಸ ಕುತಂತ್ರಗಳೊಂದಿಗೆ ಸನಾತನಿ ಪ್ರಬೋಧಿತ ಆರೆಸ್ಸೆಸ್‌ನ ಕಟ್ಟಾಳುಗಳು ವಿದ್ವತ್ ವೇಷ ತೊಟ್ಟುಕೊಂಡು ಬರತೊಡಗಿದರು. 2024 ರಲ್ಲಿ ಅಯೋಧ್ಯಾ ಪಬ್ಲಿಕೇಷನ್ ವತಿಯಿಂದ ‘ವಚನ ದರ್ಶನ’ ಎಂಬ ವಿಕೃತ ಕೃತಿಯನ್ನು ಸದಾಶಿವಾನಂದ ಸ್ವಾಮಿ ಎಂಬವರ ಸಂಪಾದಕತ್ವದಲ್ಲಿ ಇದೇ ಸಂಘಿಗಳು ಹೊರ ತಂದರು. ಅದರಲ್ಲಿಯೂ ವಚನಗಳು ವೇದ, ಆಗಮಗಳಲ್ಲಿನ ತತ್ವಗಳನ್ನು ಕನ್ನಡದಲ್ಲಿ ಭಟ್ಟಿ ಇಳಿಸಿದ್ದಾರೆ. ವಚನಕಾರರು ಕ್ರಾಂತಿಕಾರಿಗಳಲ್ಲ. ಕ್ರಾಂತಿ ಎಂಬ ಪರಿಕಲ್ಪನೆಯೇ ಭಾರತೀಯರದ್ದಲ್ಲ ಎಂದೆಲ್ಲಾ ಬೊಗಳೆ ಬಿಟ್ಟರು. ಈ ಪುಸ್ತಕವನ್ನು ಸಂಘ ಗ್ಯಾಂಗಿನ ದತ್ತಾತ್ರೇಯ ಹೊಸಬಾಳೆ, ಬಿ.ಎಲ್. ಸಂತೋಷ್ ಮುಂತಾದವರಿಂದ ಕರ್ನಾಟಕದುದ್ದಕ್ಕೂ ಬಿಡುಗಡೆ ಮಾಡಲು ಮುಂದಾಗಿದ್ದರು.

ಕಲಬುರಗಿ ಒಳಗೊಂಡಂತೆ ಹಲವೆಡೆ ಆ ಪುಸ್ತಕಕ್ಕೆ ವಿರೋಧ ಬಂದಾಗ ಹಿಂದೆ ಸರಿದರಾದರೂ, ಈ ನಡುವೆ ವೀಣಾ ಬನ್ನಂಜೆ ಎಂಬ ಸ್ವಯಂಘೋಷಿತ ವಿದ್ವನ್ಮಣಿಯೊಬ್ಬರು 12ನೇ ಶತಮಾನದಲ್ಲಿ ಕಲ್ಯಾಣದಲ್ಲಿ ಅನುಭವ ಮಂಟಪವೇ ಇರಲಿಲ್ಲ; ಅದೊಂದು ಕಟ್ಟುಕತೆ ಎಂದು ಉದ್ದಾಮ ವೀಡಿಯೋಗಳನ್ನು ಹರಿಬಿಟ್ಟರು. ಅದಕ್ಕೂ ಬಸವಾನುಯಾಯಿಗಳಿಂದ ಆಧಾರ ಸಮೇತ ಉತ್ತರಗಳು ಬಂದಾಗ ಕ್ಷಮೆಯಾಚಿಸಿದರು. ಇತ್ತೀಚೆಗೆ ಕನ್ನೇರಿ ಸ್ವಾಮಿಯೆಂಬ ಅಲ್ಪಜ್ಞಾನಿಯನ್ನು ಮುಂದಿಟ್ಟುಕೊಂಡು ಎಲ್ಲೆಡೆ ‘ಬಸವಾದಿ ಶಿವಶರಣರ ಹಿಂದೂ ಸಮಾವೇಶ’ ಎಂಬ ಹಳಸಲು ಸೋಗಿನೊಂದಿಗೆ ಜಾತಿ ಲಿಂಗಾಯತ ಬಿಜೆಪಿ ರಾಜಕಾರಣಿಗಳನ್ನು ಬಳಸಿಕೊಂಡು ವಚನಕಾರರು ಸನಾತನ ಧರ್ಮದ ವಿರೋಧಿಗಳಲ್ಲ. ಲಿಂಗಾಯತರು ಹಿಂದೂಗಳೇ. ವಚನಗಳು ಉಪನಿಷತ್ತಿನ ಮುಂದುವರಿದ ಭಾಗ ಎಂದು ಕೆಲವು ಅಬ್ಬೆಪಾರಿ ಸ್ವಾಮಿಗಳಿಂದ ಹೇಳಿಸುತ್ತ ಹೊರಟರು. ಅದಕ್ಕೂ ವಚನ ಪ್ರೇಮಿಗಳು ಸೊಪ್ಪು ಹಾಕಲಿಲ್ಲ. ಕನ್ನೇರಿ ಸ್ವಾಮಿಗಳಿಗೆ ಹೋದಲ್ಲೆಲ್ಲ ವಿರೋಧ ಬಂದಿತು. ಕೋರ್ಟ್ ಈ ಮಠಾಧೀಶರಿಗೆ ನೀವೊಬ್ಬ ಒಳ್ಳೆಯ ಪ್ರಜೆಯಲ್ಲ. ಸ್ವಾಮಿಯಂತೂ ಮೊದಲೇ ಅಲ್ಲ ಎಂದು ಛೀಮಾರಿ ಹಾಕಿತ್ತಲ್ಲದೆ ಹಲವು ಜಿಲ್ಲೆಗಳಲ್ಲಿ ಪ್ರವೇಶ ನಿರಾಕರಿಸಿತು. ಕೆಲವೆಡೆ ಮಾತಾಡದಂತೆ ನಿರ್ಬಂಧಿಸಿತು.

ಇದರ ಮುಂದುವರಿದ ಭಾಗವೇ ರವಿ ಹಂಜ್ ಎಂಬ ಅವಿವೇಕಿಯಿಂದ ‘ಬಸವ ಮಂಟಪ’ ಎಂಬ ಪುಸ್ತಕ ಬರೆಸಿದೆ. ತನ್ಮೂಲಕ ರವಿ ಹಂಜಗಿಮಠ ಎಂಬ ಸ್ವಯಂಘೋಷಿತ ಲೇಖಕ ಬಸವಣ್ಣನವರ ಮೇಲೆ ನಂಜು ಕಾರಿದ್ದಾರೆ. ನಿಜವಾದ ಅರ್ಥದಲ್ಲಿ ಅವರು ಬರೆದ ಪುಸ್ತಕ ಬಸವ ಮಂಟಪವಲ್ಲ. ಅದು ಬಸವ ಕಂಟಕ ಎಂದೇ ಹೇಳಬೇಕು.

ಅನಿವಾಸಿ ಭಾರತೀಯರಾದ ಹಂಜ್ ಅವರಿಗೆ ಧೈರ್ಯದಿಂದ ತಮ್ಮ ನಾಮಧೇಯ ಹಂಜಗಿಮಠ ಎಂಬುದನ್ನು ಬಳಸಿಕೊಳ್ಳಲಾಗಿಲ್ಲ. ಈ ಮಹಾಶಯರು ತಾವೊಬ್ಬ ಮಹಾನ್ ಸಂಶೋಧಕರು ಎಂದು ಸ್ವಯಂ ಘೋಷಿಸಿಕೊಂಡು ಆತ್ಮರತಿಗೆ ಬಿದ್ದು ಟಿ.ವಿ. ಚಾನೆಲ್‌ಗೆ ಸಂದರ್ಶನ ನೀಡುತ್ತ, ಮಾತಿನ ಓಘದಲ್ಲಿ ತಮ್ಮೊಳಗಿನ ನಂಜು ಕಾರಿಕೊಂಡು ಬಸವಣ್ಣನವರು ಲೂಟಿಕೋರರು. ಬಿಜ್ಜಳನ ಭಂಡಾರವನ್ನು ಜಂಗಮ ದಾಸೋಹಕ್ಕೆಂದು ಬಳಸಿಕೊಂಡು ಸುಳ್ಳು ಹೇಳಿದನು. ಅಷ್ಟೇ ಅಲ್ಲ ಬಿಜ್ಜಳನ ಕೊಲೆ ಮಾಡಿಸಿದನು. ಶರಣರ ವಚನಗಳು ವಿರೋಧಾಭಾಸಗಳಿಂದ ಕೂಡಿವೆ. ಬಸವಣ್ಣ ಆಂಡ್ ಕಂಪೆನಿ ಹೀಗೆ ಮಾಡಿದರು, ಹಾಗೆ ಮಾಡಿದರು ಎಂದು ತೀರ ಹಗುರವಾಗಿ ಮಾತಾಡಿದ್ದಾರೆ. ರವಿಯವರಿಗೆ ಇಂಥ ಲೇಖನಗಳನ್ನು ಬರೆಯಲು ಹಚ್ಚಿದವರು ವಿಶ್ವವಾಣಿ ಪತ್ರಿಕೆಯ ಸಂಪಾದಕ ವಿಶ್ವೇಶ್ವರ ಭಟ್ಟರು. ಇವರೇ 2014ರಲ್ಲಿ ವಿಜಯವಾಣಿ ಪತ್ರಿಕೆಯಲ್ಲಿ ದಿವಂಗತ ಎಂ.ಎಂ. ಕಲಬುರ್ಗಿಯವರು ಸಾಂದರ್ಭಿಕವಾಗಿ ಯು.ಆರ್. ಅನಂತಮೂರ್ತಿಯವರು ತಮ್ಮ ಆತ್ಮ ಚರಿತ್ರೆ ‘ಸುರಗಿ’ಯಲ್ಲಿ ಬರೆದ ಸಾಲುಗಳನ್ನು ಉದ್ಧರಿಸಿ, ಅದನ್ನು ಕಲಬುರ್ಗಿಯವರೇ ಹೇಳಿದ್ದಾರೆ ಎನ್ನುವಂತೆ ಸುದ್ದಿಮಾಡಿದ್ದರು. ಭಟ್ಟರು ಕಲಬುರ್ಗಿ ಸರ್ ಹೇಳದೆ ಇರುವ ವಿಷಯವನ್ನು ಅವರು ಹೇಳಿದ್ದಾರೆ ಎಂದು ಬರೆದುದಲ್ಲದೆ ಪದೇ ಪದೇ ಟಿ.ವಿ. ಮಾಧ್ಯಮಗಳಲ್ಲಿ ಹರಿಬಿಟ್ಟು ಅವರ ಕೊಲೆಗೆ ಪ್ರಚೋದನೆ ಆಗಿರಬಹುದಾದ ಸಂಗತಿಯನ್ನು ಜನತೆ ಮರೆತಿಲ್ಲ.

ಇಂದು ಅವರು ಮತ್ತೆ ಮುಳ್ಳನ್ನು ಮುಳ್ಳಿನಿಂದಲೇ ತೆಗೆಯಬೇಕೆಂಬ ತಮ್ಮ ಸನಾತನ ಶೈಲಿಯನ್ನು ಮುಂದುವರಿಸಿ ಶೂದ್ರ ವ್ಯಕ್ತಿಯೊಬ್ಬನನ್ನು ಉಬ್ಬಿಸಿ, ಪುಸಲಾಯಿಸಿ ಆತನಿಂದ ತೀರ ಅಸಂಬದ್ಧ, ಆಘಾತಕಾರಿ ಲೇಖನಗಳನ್ನು ವರ್ಷದುದ್ದಕ್ಕೂ ಬರೆಸಿ ಪ್ರಕಟಿಸುತ್ತ ಬಂದಿದ್ದಾರೆ. ಅದೇ ದ್ವೇಷಾಸೂಯೆ ಭರಿತ ಅಪ್ರಬುದ್ಧ ಲೇಖನಗಳನ್ನು ಪುಸ್ತಕ ರೂಪದಲ್ಲಿ ಪ್ರಕಟಿಸಿ ಬಿಡುಗಡೆ ಮಾಡಿಸುತ್ತ ತನ್ನ ಸೊಕ್ಕು ಮೆರೆದಿದ್ದಾರೆ. ಒಟ್ಟಾರೆ ಸನಾತನವಾದಿಗಳು ಬಸವಾದಿ ಶರಣ ಸಂಕುಲವನ್ನು ಗುರಿ ಮಾಡಿಕೊಂಡು ಲಿಂಗಾಯತ ತತ್ವಗಳನ್ನು ವಿಕಾರಗೊಳಿಸುವ, ತನ್ಮೂಲಕ ಲಿಂಗಾಯತರನ್ನು ತಮ್ಮ ಕರ್ಮಸಿದ್ಧಾಂತದ ಹಿತ್ತಲಿಗೆ ತಂದು ದನಗಳಾಗಿ ಕಟ್ಟುವ ಪಯತ್ನ ಮಾಡುತ್ತಿದ್ದಾರೆ. ಸನಾತನಿಗಳ ದೃಷ್ಟಿಯಲ್ಲಿ ಶೂದ್ರರೆನಿಸಿಕೊಂಡಿರುವ ಕೆಲವು ಲಿಂಗಾಯತ ಸ್ವಾಮಿಗಳು, ಸ್ವಾರ್ಥಿ ರಾಜಕಾರಣಿಗಳು, ದಿಕ್ಕು ತಪ್ಪಿದ ಯುವಕರು ಸಂಘಿಗಳ ಕೈಯಲ್ಲಿ ಕಟ್ಟಾಳುಗಳಾಗಿ ಜೀತ ಮಾಡುತ್ತಿದ್ದಾರೆ.

ರವಿ ಹಂಜ್ ತನ್ನ ಕೃತಿಯಲ್ಲಿ ಬಳಸಿಕೊಂಡಿರುವ ಎಲ್ಲ ಆಕರಗಳು ಒಂದೋ ಬಸವ ವಿರೋಧಿಗಳಿಂದ ರಚಿತವಾದವುಗಳು. ಇಲ್ಲವೋ ಕಾವ್ಯಗಳ ಧ್ವನಿ ಗ್ರಹಿಸದೇ ಹಂಜ್ ಮಾಡಿದ ಅಪವ್ಯಾಖ್ಯಾನಗಳಾಗಿವೆ. ಬಸವಣ್ಣನವರು ಲೂಟಿಕೋರರು ಎಂಬುದಕ್ಕೆ ತಾನು ಹರಿಹರ ಕವಿಯ ‘ಬಸವೇಶ್ವರದೇವರ ರಗಳೆ’ಯನ್ನು ಆಧಾರವಾಗಿಟ್ಟುಕೊಂಡಿದ್ದೇನೆ ಎನ್ನುತ್ತಾರೆ. ಬಸವೇಶ್ವರದೇವರ ರಗಳೆಯ 8ನೇ ಸ್ಥಲದಲ್ಲಿ ಬರುವ ಪ್ರಸಂಗ ಹೀಗಿದೆ. ಬಸವಾದಿ ಶಿವಶರಣರ ಏಳ್ಗೆಯನ್ನು ಕಂಡು ಕರುಬುವ ‘‘ಬಿಜ್ಜಳನ ಗುರುವಪ್ಪ ನಾರಣಕ್ರಮಿತಂ ಸೌರಿಭಟ್ಟಂ ವಿಷ್ಣುಪೆದ್ದಿಗಳುಂ ಮೊದಲಾದ ವೈಷ್ಣವರೆಲ್ಲಂ’’ ಬಿಜ್ಜಳನನ್ನು ಕಂಡು ‘‘ಬಸವಂಗೆ ಮರುಳಾದೆ, ಭಂಡಾರಂ ಸುರೆವೋದುದು, ರಾಜದೆಳ್ತರಂ ಭಕ್ತರ್ಗೆ ಬರಿದಾಯ್ತು, ಭಕ್ತರುರವಣೆ ಪಿರಿದಾಯ್ತು’’ ಎಂದು ಕಿವಿ ಚುಚ್ಚುತ್ತಾರೆ.

ಇವರ ಮಾತನ್ನು ನಂಬಿದ ಬಿಜ್ಜಳ ಬಸವಣ್ಣನವರನ್ನು ಕರೆಸಿ ‘‘ನಿಮ್ಮ ನಂಬಿ ಭಂಡಾರಮಂ ಕೊಟ್ಟಡೆನ್ನನಿಂತು ಕೆಡಿಸುವರೆ? ಶಿವ ಭಕ್ತರ್ಗಿತ್ತು ರಾಜ್ಯಮಂ ನೀರೊಳದ್ದುವರೆ? ಹಲವು ಮಾತೇನು ನಿಂದ ಹೊನ್ನಿಗೆ ನಿರ್ಣಯಮಂ ಕೊಡುವುದೆಂದು’’.. ಎಂದು ಝಂಕಿಸುತ್ತಾನೆ. ಒಟ್ಟು ಹದಿನೆಂಟು ಕೋಟಿ ಹಣಕ್ಕೆ ಆರೋಪ ಹೊರಿಸುತ್ತಾನೆ. ಶಾಂತಚಿತ್ತದಿಂದ ಇವರ ಮಾತು ಆಲಿಸಿದ ಬಸವಣ್ಣನವರು ಬಿಜ್ಜಳರ ಸಮೇತ ಎಲ್ಲ ಚಾಡಿಕೋರರನ್ನು ಕರೆದುಕೊಂಡು ಭಂಡಾರಕ್ಕೆ ಹೋಗುತ್ತಾನೆ. ಅಲ್ಲಿ ಕರಣಿಕರಿಂದ ಭಂಡಾರವನ್ನು ತಪಾಸಿಸಲು ಹಚ್ಚುತ್ತಾನೆ. ಲೆಕ್ಕ ಮಾಡಲಾಗಿ ‘‘ನಿಲವಿನ ಪದಿನೆಂಟು ಕೋಟಿಗೆ ಛತ್ತೀಸಕೋಟಿ ಬಾಹತ್ತರ ಕೋಟಿಗಳಿಂ ಮಿಗಿಲೆನಿಸಿದಿಮ್ಮಡಿ ನೂರ್ಮಡಿ, ಸಾಸಿರ್ಮಡಿ, ಲಕ್ಷ ಮಡಿ ಕೋಟಿ ಮಡಿಯಾಗಿ ಪೆರ್ಚುತ್ತಿರೆ’’ ಹೀಗೆ ಅವರು ಆರೋಪಿಸಿದ ಹಣಕ್ಕೆ ಕೋಟಿ ಪಟ್ಟು ಹಣ ಹೆಚ್ಚಾಗಿ ಲೆಕ್ಕಿಗರು ಎಣಿಸಲಾಗದೆ ಕೊನೆಗೆ ಕೈ ಚೆಲ್ಲಿ ಕುಳಿತರು ಎಂದು ವಿವರಿಸುತ್ತಾನೆ.

ಈ ವಿವರಣೆಯಲ್ಲಿ ಬಸವಣ್ಣನವರು ಕಳ್ಳತನ ಮಾಡಿದರು ಎಂದು ಹೇಳಲಾಗಿದೆಯೇ? ಅಂದು ವಿರೋಧಿಗಳು ಕಳ್ಳತನದ ಅಪವಾದ ಹೊರಿಸಿದ್ದನ್ನು ಸಂಭ್ರಾಂತಿಸುವ ರವಿ ಹಂಜ್ ಈ ಕಾಲದಲ್ಲಿಯೂ ಅದನ್ನು ಪ್ರಾಂಪ್ಟ್ ಮಾಡಲು ಹೊರಟಿದ್ದಾರೆ. ಆತ ಮತ್ತೆ ಮುಂದುವರಿದು ಹೇಳಿದ್ದೇನೆಂದರೆ ಹಣ ಎಲ್ಲಿ ಹೋಯಿತು ಎಂದು ಬಿಜ್ಜಳ ಕೇಳಲು ಅಲ್ಲಿ ಖರ್ಚಾಯಿತು, ಇಲ್ಲಿ ಖರ್ಚಾಯಿತು ಎಂದು ಸುಳ್ಳು ಹೇಳಿದ್ದಾನೆ ಬಸವಣ್ಣ ಎಂದು ವಿಷ ಕಕ್ಕಿದ್ದಾರೆ. ಇದೇ ಬಸವರಾಜ ದೇವರ ರಗಳೆಯಲ್ಲಿ ಹರಿಹರನು ಬಸವಣ್ಣನವರ ದಿನಚರಿಯನ್ನು ವಿವರಿಸುತ್ತ ‘‘ ಪೇರೋಲಗಮಂ ಪರೆಯವೇಳ್ದೆಲ್ಲರಂ ಕಳುಪಿ ಬಿಜ್ಜಳರಾಯನೊಡನಾಪ್ತ ವಚನರಚಿತ ಮಂತ್ರಾಳೋಚನಯಿಂದಿನಿತು ಬೇಗಮಿರ್ದರ ಮನೆಯಂ ಪೊರಮಟ್ಟು ತನ್ನ ಮಹಾಮನೆಗೆ ಬಪ್ಪಲ್ಲಿ’’ಎಂದು ಬರೆದಿದ್ದಾನೆ. ಅಂದರೆ ಬಸವಣ್ಣನವರು ನಿತ್ಯವು ಬಿಜ್ಜಳನೊಂದಿಗೆ ಮಂತ್ರಾಲೋಚನೆ ನಡೆಸಿ ಆತನ ಸಹಮತವಿಲ್ಲದೆ ಪ್ರಭುತ್ವದೊಳಗಡೆ ಅಡಿ ಇಡಲಿಲ್ಲವೆಂದು ನಮೂದಿಸುತ್ತಾರೆ. ಹೀಗಿರುವಾಗಲೂ ರವಿ ಹಂಜಗಿಮಠ ಮಹಾನುಭಾವರು ಕಾವ್ಯಗಳನ್ನು ತಲಸ್ಪರ್ಶಿ ಅಧ್ಯಯನ ಮಾಡದೆ ಎಲ್ಲಿಂದಲೋ ಅರ್ಧಮಧರ್ ವಿವರಗಳನ್ನು ಹೆಕ್ಕಿ ಪೂರ್ವಾಗ್ರಹ ಪೀಡಿತರಾಗಿ ಬರೆದುದನ್ನೇ ಸಂಶೋಧನೆ ಎಂದು ಹೇಳಿಕೊಳ್ಳುತ್ತಿರುವುದು ಅವರ ಉದ್ಧಟತನವಾಗಿದೆ.

ಬಸವಣ್ಣನವರ ಮೇಲೆ ಕೊಲೆ, ಸುಲಿಗೆ, ವಂಚನೆಗಳ ಆಪಾದನೆ ಮಾಡುವ ಹುನ್ನಾರ ಅವರು ಬದುಕಿದ್ದ ಕಾಲದಿಂದಲೂ ನಡೆದುಕೊಂಡು ಬಂದಿವೆ. ಅದಕ್ಕೆ ಸಾಕಷ್ಟು ಚಾರಿತ್ರಿಕ ಅಪಸವ್ಯಗಳನ್ನು ಪರವಾದಿಗಳು ಸೃಷ್ಟಿಸಿಕೊಂಡು ಬರುತ್ತಿದ್ದಾರೆ. ಇದಕ್ಕೆ ಮಧ್ಯಕಾಲೀನ ಕಾವ್ಯಗಳ ಸರಣಿಯೇ ಇದೆ. ಈತ ತನ್ನ ‘ಬಸವ ಮಂಟಪ’ ಪುಸ್ತಕದಲ್ಲಿ ಕೊಟ್ಟಿದ್ದೇನೆಂದು ಹೇಳುತ್ತಿರುವ ಒಂದೇ ಆಕರವನ್ನು ಪರಿಶೀಲಿಸಿದರೆ ಅವುಗಳ ಧರ್ಮ ದ್ವೇಷದ ಮರ್ಮ ಅರಿವಿಗೆ ಬರದೆ ಇರದು. ಕ್ರಿ.ಶ. 1650ರಲ್ಲಿ ಬದುಕಿದ್ದನೆಂಬ ಧರಣಿ ಪಂಡಿತ ಎಂಬ ಜೈನ ಕವಿ ಬರೆದ ‘ಬಿಜ್ಜಳರಾಯಚರಿತೆ’ ಕಾವ್ಯವು ಸಾಂಗತ್ಯದಲ್ಲಿದ್ದು ಅದರಲ್ಲಿ ಆತ ‘‘ಬಿಜ್ಜಳನು ತನ್ನ ಜೋಯಿಸನಾದ ಮಾದಿರಾಜನ ಮಗಳಾದ ಪದ್ಮಿನಿಯನ್ನು ಮದುವೆಯಾದನು. ಅವಳ ಅಣ್ಣನಾದ ಬಸವನಿಗೆ ಸೇನಾಪತಿ ಪಟ್ಟ ಕಟ್ಟಿದನು. ಆದರೆ ಬಸವನು ಒಮ್ಮೆ ಇದಿರುಬಿದ್ದಾಗ ಬಿಜ್ಜಳ ಅವನನ್ನು ಸೋಲಿಸಿದನು. ಮಡುವಿನಲ್ಲಿ ಬಿದ್ದ ಬಸವನನ್ನು ಬಿಜ್ಜಳ ಹೊರಕ್ಕೆ ತೆಗೆಯಿಸಿ, ಮನ್ನಿಸಿ ಮತ್ತೆ ಪದವಿಯಿತ್ತನು. ಕೃತಘ್ನನಾದ ಬಸವನು ವಿಷದ ಮಾವಿನ ಹಣ್ಣನ್ನು ದೊರೆಗೆ ಕಳಿಸಿದ, ಬಿಜ್ಜಳ ಅದನ್ನು ಮೂಸಿ ಸತ್ತ. ಹೆದರಿದ ಬಸವ ಓಡಿ ಹೋಗಿ ಒಂದು ಬಾವಿಯಲ್ಲಿ ಮುಳುಗಿ ಸತ್ತ’’ ಎಂದು ಬರೆಯಲಾಗಿದೆ.

ಇದೇ ಅಂಶವನ್ನು ಇನ್ನೊಬ್ಬ ಜೈನ ಕವಿ ಚಂದ್ರಸಾಗರ ವರ್ಣಿಯು ತನ್ನ ಬಿಜ್ಜಳರಾಯ ಪುರಾಣದಲ್ಲಿ ಪುನರ್ ಪ್ರತಿಷ್ಠಾಪಿಸಲು ಮುಂದಾಗುತ್ತಾನೆ. ಈ ಎರಡೂ ಕಾವ್ಯಗಳನ್ನು ಅವಲೋಕಿಸಿದ ವಿದ್ವಾಂಸ ಡಾ. ಹಂಪ ನಾಗರಾಜಯ್ಯನವರು ‘‘ಈ ವಿವರಗಳನ್ನು ಪೋಷಿಸುವ ಚಾರಿತ್ರಿಕ ಸಂಗತಿಗಳು ದೊರಕಿಲ್ಲ. ಈ ಕಾವ್ಯ ಪರಮತ ಅವಹೇಳನದಿಂದ ಕೂಡಿರುವುದರಿಂದ ರುಚಿಸುವುದಿಲ್ಲ. ಇಂಥ ಕಾವ್ಯಗಳನ್ನು ಕೆಲವು ವೀರಶೈವ ಕವಿಗಳೂ ಬರೆದಿದ್ದಾರೆ. ಸಮಕಾಲೀನ ಮತವೈಷಮ್ಯದಿಂದ ಮೂಡಿ ಬಂದ ಇಂಥ ಕೃತಿಗಳಿಗೆ ನಾವು ಮಾನ್ಯತೆ ನೀಡುವ ಅಗತ್ಯವಿಲ್ಲ’’ ಎಂದು 1975ರಲ್ಲಿಯೇ ತಮ್ಮ ‘ಸಾಂಗತ್ಯ ಕೃತಿಗಳು’ ಸ್ಪಷ್ಟಪಡಿಸಿರುವಾಗ, ರವಿ ಹಂಜರೆಂಬ ಆಷಾಢಭೂತಿಗೆ ಇವೇ ಕಾವ್ಯಗಳು ಪ್ರಮಾಣವೆನಿಸಲು ಕಾರಣವೇನು? ಮಧ್ಯಕಾಲೀನ ಕನ್ನಡ ಕಾವ್ಯಗಳಲ್ಲಿ ಸ್ವಮತ ಮಂಡನೆ ಪರಮತ ವಿಡಂಬನೆ ಎಂಬುದು ಒಂದು ಕಾವ್ಯ ಧರ್ಮವೇ ಆಗಿತ್ತು.

ಹರಿಹರ ವಿರಚಿತ ಬಸವೇಶ್ವರ ರಗಳೆಯಲ್ಲಿಯೂ ಕೊನೆಯದಾದ 13ನೇ ಸ್ಥಲದಲ್ಲಿ ‘‘ ಶಿವದ್ರೋಹವಂ ಗೈದ ಬಿಜ್ಜಳನಂ ಕೊಲಿಸುತಂ’’ ಎಂಬ ಸಾಲುಗಳು ಬರುತ್ತವೆ. ಆದರೆ ಹರಿಹರನ ರಗಳೆಗಳ ಅಧಿಕೃತತೆ ಕುರಿತು ಸಂಶೋಧನೆ ಮಾಡುವಾಗ ಬಸವೇಶ್ವರ ರಗಳೆಯಲ್ಲಿ ಕಾಣಿಸಿಕೊಂಡಿರುವ 13ನೇ ಸ್ಥಲದ ಕುರಿತು ಅದರ ಶೈಲಿ, ಅವಸರ, ಅಪ್ರಾಸಂಗಿಕತೆಯನ್ನು ಗಮನಿಸಿ ಕೊನೆಯ ಸಂಧಿ ನಂತರದಲ್ಲಿ ಸೇರಿದಂತಿದೆ ಎಂದು ಊಹಿಸಿದ್ದಾರೆ. ಈಗಾಗಲೇ ಇಂಥ ಸಂದಿಗ್ಧ ಅಂಶಗಳನ್ನು ಕುರಿತು ಅನೇಕ ಚರ್ಚೆಗಳು ನಡೆದು, ಇವೆಲ್ಲವೂ ಬಸವಣ್ಣನವರ ಚಾರಿತ್ರ್ಯವನ್ನು ಮಸಳಿಸಲೆಂದು ಕಟ್ಟಿದ ಕಟ್ಟು ಕಥೆಗಳು. ಎಲ್ಲಕ್ಕಿಂತ ಹೆಚ್ಚಾಗಿ ಇತಿಹಾಸದಲ್ಲಿ ಗತಿಸಿದ ಮಹಾಪುರುಷರನ್ನು ಕೇಂದ್ರವಾಗಿಸಿಕೊಂಡು ಆ ಕಾಲದ ಒತ್ತಡಕ್ಕೆ ಒಳಗಾಗಿ ಅಪದ್ಧ ಕೃತಿಗಳು ರಚನೆಯಾಗಿರುವುದಕ್ಕೆ ವೆಗ್ಗಳ ಉದಾರಣೆಗಳಿವೆ.

ಅದು ರಾಜಪ್ರಭುತ್ವದ ಯುಗ. ಪ್ರಭುತ್ವ ಮತ್ತು ಪೌರೋಹಿತ್ಯ ಕಾಲಕಾಲಕ್ಕೂ ತನ್ನ ಹಿತಾಸಕ್ತಿ ಕಾಪಾಡುವಂಥ ಕೃತಿಗಳನ್ನು ಬರೆಸಿಕೊಂಡು ಬಂದಿದೆ. ಆದ್ದರಿಂದಲೇ ಇಂಥ ಕಪೋಲಕಲ್ಪಿತ ಕೃತಿಗಳನ್ನು ಚಾರಿತ್ರಿಕ ಆಧಾರಗಳೆಂದು ಪರಿಗಣಿಸಲಾಗದು. ಸಂಶೋಧನೆಗೆ ಆಕರವಾಗಬಲ್ಲ ವಸ್ತುಸತ್ಯ ಇಂಥ ಕಾವ್ಯಗಳಲ್ಲಿ ದೊರೆಯದು. ಆದ್ದರಿಂದಲೇ ಅಂದೇ ಶರಣರು ‘‘ಪುರಾಣವೆಂಬುದು ಪುಂಡರ ಗೋಷ್ಠಿ’’ಎಂದು ಜರೆದಿದ್ದರಷ್ಟೇ. ಹೀಗಿರುವಾಗಲೂ ಹಂಜ್ ಮಹಾಶಯನಂಥವರು ಬಸವಣ್ಣನವರನ್ನು ವಿಲನ್ ಮಾಡಲೆಂದೇ ಸಂದಿ ಗೊಂದಿಗಳನ್ನು ತಡಕಾಡಿ ಕಿಲ್ಪಿಷವನ್ನು ಹೆಕ್ಕಿ ಹೆಕ್ಕಿ ಅಪ್ರಬುದ್ಧ ಕೃತಿಯೊಂದನ್ನು ರಚಿಸಿ ಫಜೀತಿಗೆ ಬಿದ್ದಿದ್ದಾರೆ.

ಈ ಎಲ್ಲ ನಡೆಗಳ ಹಿಂದೆ ದೊಡ್ಡ ವೈದಿಕಶಾಹಿ ಪಡೆಯೊಂದು ನಿತ್ಯ ನಿರಂತರ ಕೆಲಸ ಮಾಡುತ್ತಿದೆ. ಬಸವಾದಿ ಶರಣರ ಒಟ್ಟು ಸಿದ್ಧಾಂತವನ್ನು ಜನಮಾನಸದಿಂದ ಅಳಿಸಬೇಕೆಂಬುದೇ ಅವರ ಪರಮ ಗುರಿಯಾಗಿದೆ. ತಮ್ಮ ಉದ್ದೇಶ ಸಾಧನೆಗಾಗಿ ರವಿ ಹಂಜ್, ಕನ್ನೇರಿ ಸ್ವಾಮಿ, ಸದಾಶಿವಾನಂದ ಮುಂತಾಗಿ ಶೂದ್ರ ಸಂತಾನಗಳನ್ನು ದಾಳವಾಗಿ ಉರುಳಿಸುತ್ತಲೇ ಇರುತ್ತಾರೆ. ಬಸವಣ್ಣನವರು ಮತ್ತು ವಚನ ಸಾಹಿತ್ಯದ ಮೇಲಿನ ದಾಳಿ ಇಲ್ಲಿಗೆ ನಿಲ್ಲದು. ಹೊಸ ಹೊಸ ವರಸೆಗಳೊಂದಿಗೆ ಇನ್ನೂ ಉಗ್ರವಾಗಲಿದೆ ಎಂಬ ಎಚ್ಚರ ನಮಗಿರಬೇಕಿದೆ.

(ಲೇಖಕರು: ಪ್ರಾಧ್ಯಾಪಕರು ಮತ್ತು ಸಾಮಾಜಿಕ ಹೋರಾಟಗಾರರು)

Tags

Basavadi SharanasLingayatShudraBasavanna
share
ಡಾ. ಮೀನಾಕ್ಷಿ ಬಾಳಿ
ಡಾ. ಮೀನಾಕ್ಷಿ ಬಾಳಿ
Next Story
X