ಆಣೀ ಪಿಣೀ ಜಾಂದೋ ಸೇರ ಖೊಬ್ರಿ ಭಿರಾಂಜೋ

ನಾಡಾಡಿಗರು ಯಾವತ್ತೂ ಪಶುಗಳಲ್ಲಿ ಕನಿಷ್ಠ, ಶ್ರೇಷ್ಠವೆಂದು ತಾರತಮ್ಯ ಮಾಡಲಿಲ್ಲ. ಹಬ್ಬಗಳಿಗೆ ಜಾತಿ, ಧರ್ಮಗಳ ಕಿಲ್ಬಿಷವನ್ನು ಅಂಟಿಸಲಿಲ್ಲ. ಹಬ್ಬಗಳು ಸಾಮರಸ್ಯ, ಸೌಹಾರ್ದದ ಅನುಸಂಧಾನವಾಗಿ ಪರಿಸರಕ್ಕೆ ಪೂರಕವಾಗಿ ಆಚರಣೆಗೊಳ್ಳಬೇಕೇ ಹೊರತು ಪಟಾಕಿ ಸಿಡಿಸಿ ಪರಿಸರ ಮಾಲಿನ್ಯ ಮಾಡುವುದಲ್ಲ.
ಆದಿಮ ಕಾಲದಿಂದಲೂ ಹಬ್ಬಗಳನ್ನು ಜನತೆ ಬದುಕಿನುದ್ದಕ್ಕೂ ಅವಿಭಾಜ್ಯವಾಗಿ ಆಚರಿಸಿಕೊಂಡು ಬರುತ್ತಿದ್ದಾರೆ. ಹಬ್ಬಗಳಿಲ್ಲದ ಸಮಾಜವನ್ನು ಊಹಿಸಿಕೊಳ್ಳಲು ಸಾಧ್ಯವಿಲ್ಲ. ಇವುಗಳಿಗೆ ಆಯಾ ಪ್ರದೇಶ ಮತ್ತು ಜನಾಂಗಕ್ಕೆ ಅವರ ಸಂಸ್ಕೃತಿಗೆ ಅನುಸರಿಸಿ ಧಾರ್ಮಿಕ, ಪರಿಸರಾತ್ಮಕ ವಿಧಿ ವಿಧಾನಗಳು ನಡೆದುಕೊಂಡು ಬರುತ್ತಿವೆ. ಮೂಲದಲ್ಲಿ ಜೀವ ಜಾಲದ ಬೆಳವಣಿಗೆಯನ್ನು ಅನುಸರಿಸಿ ಮಾನಸೂನ್ ವಿದ್ಯಮಾನಗಳಾಗಿ, ರಸವಂತಿಕೆಯ ಪಲಕುಗಳಾಗಿ ಮೈದಳೆದಿದ್ದ ಹಬ್ಬಗಳು ಕ್ರಮೇಣ ಧಾರ್ಮಿಕ ರೆಜಿಮೆಂಟ್‌ಗಳಾಗಿ ಪರಿವರ್ತನೆ ಹೊಂದಿದ್ದು, ಕೋಮುವಾದದ ವಾಹಕಗಳಾಗಿ ಮಾರ್ಪಾಡಾಗಿದ್ದು ದುರಂತ. ಅದೇನೆ ಇರಲಿ ಜನಸಾಮಾನ್ಯರು ಮಾತ್ರ ಹಬ್ಬಗಳನ್ನು ಈ ಕ್ಷಣಕ್ಕೂ ರಸಮಯವಾಗಿ ಸಂಭ್ರಮಿಸುತ್ತ ಬರುತ್ತಿದ್ದಾರೆ.
ಉತ್ತರ ಕರ್ನಾಟಕದಲ್ಲಿ ಹಬ್ಬಗಳ ಪರಿಷೆಯೇ ನೆರೆದಿರುತ್ತದೆ. ಯುಗದ ಆದಿ ಅಂದರೆ ದೇಸಿ ಕ್ಯಾಲೆಂಡರ್ ಹಾಗೂ ಒಕ್ಕಲುತನದ ವಿದ್ಯಮಾನಗಳನ್ನು ಅನುಸರಿಸಿ ವರ್ಷದ ಆದಿಯಲ್ಲಿ ಯುಗಾದಿಯಿಂದ ಹಬ್ಬಗಳು ಪ್ರಾರಂಭವಾದರೆ ಸರಣಿಯಲ್ಲಿ ಕಾರ ಹುಣ್ಣಿಮೆ, ಪಂಚಮಿ, ಗಣೇಶಚೌತಿ, ದಸರೆ, ದೀಪಾವಳಿ, ಎಳ್ಳಾಮಾಸೆ, ಸಂಕ್ರಾಂತಿ, ಶಿವರಾತ್ರಿ ಇತ್ಯಾದಿ ಹಬ್ಬಗಳು ಒಂದರ ಚುಂಗ್ಹಿಡಿದು ಇನ್ನೊಂದರಂತೆ ಬರುತ್ತವೆ. ಪ್ರತೀ ಹಬ್ಬಕ್ಕೂ ವಿಶೇಷ ಆಚರಣೆ, ನಂಬಿಕೆ, ಶ್ರದ್ಧೆ ಎಲ್ಲಕ್ಕಿಂತ ಹೆಚ್ಚಾಗಿ ಅನ್ಯೋನ್ಯ ಸಂಭ್ರಮವು ಮೈಗೂಡಿರುತ್ತದೆ. ಹೊಸ ಬಟ್ಟೆ, ವಿವಿಧ ಭಕ್ಷ್ಯ ಭೋಜನ, ನೆಂಟರಿಷ್ಟರು, ಸ್ನೇಹಿತರನ್ನು ಭೇಟಿಯಾಗುವ ಅವಕಾಶ ದೊರೆತು ಧಾವಂತದ ಬದುಕಿನಲ್ಲಿ ಚೂರಾದರೂ ರಿಲೀಫ್ ಸಿಕ್ಕಂತಾಗುತ್ತದೆ. ನಮ್ಮ ನಾಡವರಿಗೆ ಹಬ್ಬಗಳೆಂದರೆ ಅದೇನೋ ಸಂಭ್ರಮ, ಸಂತಸ. ಕಾರಣ ತನ್ನನ್ನು ಒಳಗೊಂಡಂತೆ ಇಡೀ ಪರಿಸರವನ್ನು ಗೌರವಿಸುವ, ಪೂಜಿಸುವ ಸುಸಂಧಿಯ ಕಾಲವದು. ದೀಪಾವಳಿ ಹಬ್ಬವನ್ನೇ ಗಮನಿಸುವುದಾದರೆ ಪರಂಪರಾಗತ ನಂಬಿಕೆಗಳ ಪ್ರಕಾರ ಅದು ಬೆಳಕಿನ ಹಬ್ಬ. ತಮಂಧದಿಂದ ಜ್ಯೋತಿಯೆಡೆಗೆ ಪಯಣಿಸುವ ಪ್ರಸಂಗ. ವಾರಗಟ್ಟಲೆ ಆಚರಿಸುವ ಇದಕ್ಕೆ ಪೌರಾಣಿಕ ಕಥನಗಳು ಸೇರಿಕೊಂಡಿವೆ.
ಇತ್ತೀಚೆಗಷ್ಟೇ ಆಚರಿಸಿದ ದೀಪಾವಳಿಯು ನೀರು ತುಂಬಿಸುವ ಸಂಭ್ರಮದಿಂದ ಪ್ರಾರಂಭವಾಗುತ್ತದೆ. ಮನೆ, ಅಂಗಡಿಗಳನ್ನೆಲ್ಲ ಝಾಡಿಸಿ ಗುಡಿಸಿ, ಸುಣ್ಣ-ಬಣ್ಣ ಬಳಿದು ಚೊಕ್ಕವಾಗಿಸಿದ ನಂತರ ಪಾತ್ರೆ ಪಗಡೆ ತೊಳೆದು ತಾಜಾ ನೀರು ತುಂಬಿದ ಮಡಕೆ, ಕೊಡಗಳನ್ನು ಪೂಜಿಸಲಾಗುತ್ತದೆ. ಎಲ್ಲದಕ್ಕೂ ಮೊದಲು ನೀರು ಬೇಕಷ್ಟೆ. ಆರ್ಯರು ಬೆಂಕಿಯನ್ನು ಪೂಜಿಸಿದರೆ ದ್ರಾವಿಡರು ನೀರನ್ನು ಪೂಜಿಸುತ್ತಾರೆ. ಎರಡನೇ ದಿನ ಚತುರ್ದಶಿ ಮನೆಯ ಗಂಡು ಮಕ್ಕಳಿಗೆ ಸಹೋದರಿಯರೆಲ್ಲ ಆರತಿ ಬೆಳಗಿ ಅವರ ಆಯುರಾರೋಗ್ಯ ಮತ್ತು ದೀರ್ಘಾಯುಷ್ಯಕ್ಕಾಗಿ ಹರಕೆ ಕೊಡುವ ದಿನ. ನಂತರ ಅಮಾವಾಸ್ಯೆ. ಅಂಗಡಿ ಮುಂಗಟ್ಟುಗಳನ್ನು ಸಿಂಗರಿಸಿ ಲಕ್ಷ್ಮೀ ಪೂಜೆ ಮಾಡುತ್ತಾರೆ. ಮರುದಿವಸ ಪಾಡ್ಯ ಅಂದರೆ ಕೃಷ್ಣ ಪಕ್ಷ ಮುಗಿದು ಶುಕ್ಲ ಪಕ್ಷಕ್ಕೆ ಅಡಿಯಿಡುವ ಕಾಲಘಟ್ಟ. ಪಾಡ್ಯ ಅಥವಾ ಪಾಡವಾ ಇದು ವ್ಯಾಪಾರಿಗಳು ಹಳೆಯ ವರ್ಷದ ಲೆಕ್ಕ ಚುಕ್ತಾ ಮಾಡಿ ಹೊಸ ಕಿರ್ದಿ (ಲೆಕ್ಕದ ಪುಸ್ತಕ) ಪ್ರಾರಂಭಿಸುವ ಮೂಲಕ ಮುಹೂರ್ತ ವ್ಯಾಪಾರ ಮಾಡುವ ದಿನ.
ಈ ಹಬ್ಬಗಳು ವಣೀಕರಷ್ಟೇ ಕೃಷಿಕರಿಗೂ ಉತ್ಸಾಹದಾಯಕವೆ. ವಿಶೇಷವಾಗಿ ದನಗಾಹಿಗಳಿಗೆ ತಮ್ಮ ದನಕರುಗಳ ಆರೋಗ್ಯ ಸಮೃದ್ಧಿಯನ್ನು ಕಾಯುವ ಹಬ್ಬ. ಉತ್ತರ ಕರ್ನಾಟಕದಲ್ಲಿ ಇದನ್ನು ಹಟ್ಟಿಹಬ್ಬ ಅಥವಾ ಕೊಟ್ಟಿಗೆ ಹಬ್ಬವೆಂತಲೂ ಕರೆಯುತ್ತಾರೆ. ದನಕರುಗಳ ಆಶ್ರಯತಾಣವಾದ ಕೊಟ್ಟಿಗೆಯನ್ನು ಸಿಂಗರಿಸಿ ಸೆಗಣಿಯಿಂದ ಸಾರಣೆ ಮಾಡಿ ರಂಗೋಲಿ ಹಾಕಿ, ದನಗಳನ್ನೂ ಮೀಯಿಸಿ ಅವುಗಳಿಗೂ ಶೃಂಗಾರ ಮಾಡಿ ದನಗಾಹಿಗಳು ಆರತಿ ಬೆಳಗಿ ಹಾಡುಗಳನ್ನು ಹಾಡುವ ಹಬ್ಬವಿದು. ನಮ್ಮಲ್ಲಿ ಈ ಹಾಡುಗಳಿಗೆ ಆಣೀ ಪಿಣೀ ಹಾಡುಗಳೆಂದರೆ ಮಲೆನಾಡಿನ ಶಿವಮೊಗ್ಗ ಮುಂತಾದೆಡೆ ಇವುಗಳಿಗೆ ಅಂಟಿಗೆ ಪಂಟಿಗೆ ಹಾಡು ಎಂದು ಕರೆಯುತ್ತಾರೆ. ಈ ಹಾಡುಗಳಿಗೆ ಸಾಂಸ್ಕೃತಿಕ ಮಹತ್ವವಿದೆ. ಪ್ರತೀ ಹಾಡಿನ ಕೊನೆಯಲ್ಲಿ ಆಣೀ ಪಿಣೀ ಜಾನಂದೋ ಅಂದರೆ ಇಲ್ಲಿಯವರೆಗೆ ಮಾಡಿದ ತಂಟೆ ತಕರಾರು, ಆಣೆ ಪ್ರಮಾಣ ಎಲ್ಲ ಹೋಗಲಿ. ಸೇರು ತುಂಬ ಖೊಬ್ರಿ ಕೊಟ್ಟು ಹರಸಿರಿ ಎಂಬ ಸೊಲ್ಲು ಪುನರಾವರ್ತನೆಯಾಗುತ್ತದೆ.
ಕಲ್ಯಾಣ ಕರ್ನಾಟಕದುದ್ದಕ್ಕೂ ದನ ಬೆಳಗುವ ಸತ್ಪರಂಪರೆ ಇದೆ. ದನಗಾಹಿ ಹುಡುಗರು ದೀಪಾವಳಿ ಬಂತೆಂದರೆ ನಸುಕಿನಲ್ಲೆದ್ದು ಹೊಳೆ, ಹಳ್ಳಗಳಿಗೆ ಹೋಗಿ ದಂಡೆಯಲ್ಲಿ ಬೆಳೆದ ಆಪ, ಜೇಕಿ, ಬೊತಾಳೆ, ಗಣಜಿಗನ ಇತ್ಯಾದಿ ಜಾತಿಯ ಹುಲ್ಲು ಕಡ್ಡಿಗಳನ್ನು ತಂದು ಅವುಗಳಿಂದ ಒಂದರಿಂದ ಏಳರ ವರೆಗಿನ ನಾಗರ ಹಾವಿನ ಹೆಡೆಗಳನ್ನು ಹೋಲುವ ಬುಟ್ಟಿಗಳನ್ನು ಸಿದ್ಧಪಡಿಸಿ ಅದರಲ್ಲಿ ಖಸಕ್ ಸೀತಾಫಲ ಅಥವಾ ತೆಂಗಿನ ಪರಟೆಯಿಂದ ಮಾಡಿದ ಹಣತೆಯಲ್ಲಿ ಬತ್ತಿಯಿಟ್ಟು ದೀಪ ಹಚ್ಚಿಕೊಂಡು ಮನೆಮನೆಗೂ ದನಗಳಿಗೆ ಆರತಿ ಬೆಳಗಲು ಬರುತ್ತಾರೆ. ಗುಂಪು ಗುಂಪಾಗಿ ಬರುವ ಈ ಹುಡುಗರು ಖುಷಿಯಿಂದ ಆರತಿ ಬೆಳಗುವಾಗ ತರಹೇವಾರಿ ಗೀತೆಗಳನ್ನು ಅವರದೇ ದೇಸಿ ಮಟ್ಟುಗಳಲ್ಲಿ ಹಾಡುತ್ತಾರೆ. ಹೀಗೆ ಹಾಡಿ ಹರಸುವ ಮೂಲಕ ದನಗಳಿಗೆ ರೋಗ-ರುಜಿನ ಬರದಂತೆ ಮತ್ತು ಅವುಗಳ ಸಂತಾನ ಹೆಚ್ಚಾಗುವಂತೆ ನೋಡಿಕೊಳ್ಳುವುದಾಗಿ ನಂಬುತ್ತಾರೆ. ಎತ್ತು, ಎಮ್ಮೆ, ಹೋರಿ, ಕೋಣ, ಆಡು, ಟಗರು, ಆಕಳು, ಕರು, ಮಣಕ, ಕುದುರೆಗಳನ್ನೂ ಬೆಳಗುವ ಹಾಡುಗಳು ರಚನೆಯಾಗಿವೆ. ಇಲ್ಲಿ ಜನಪದರ ಅಭಿಜಾತ ಪ್ರತಿಭೆಯು ಪ್ರಾಯೋಗಿಕ ಬದುಕಿಗೆ ಉಪಷ್ಟಂಭಕವಾಗಿ ಗರಿಗೆದರಿ ನಿಂತಿದೆ. ತಮ್ಮ ಬದುಕಿಗೆ ವರದಾನವಾಗಿ ಒದಗಿ ಬಂದಿರುವ ಪಶು, ಪಕ್ಷಿ, ಪರಿಸರ ಪ್ರತಿಯೊಂದನ್ನು ಆರಾಧಿಸುವ ಅವರು ಪ್ರಕೃತಿ ಇದಿರು ನತಮಸ್ತಕರಾಗುತ್ತಾರೆ. ಕೃಷಿಗೆ, ಹೈನಕ್ಕೆ ಒದಗಿ ಬರುವ ದನಗಳನ್ನು ಪೂಜಿಸುವ ಹಂಬಲದಿಂದ ದೀಪಾವಳಿಯಲ್ಲಿ ಹಟ್ಟಿ ಹಬ್ಬ ಆಚರಿಸಿಕೊಂಡು ಬರುತ್ತಿದ್ದಾರೆ. ತುಂಬು ಉತ್ಸಾಹದಲ್ಲಿ ಬದುಕನ್ನು ಇದಿರುಗೊಳ್ಳುವ ಕಾಯಕಜೀವಿಗಳು ಆಕಳಿನಷ್ಟೇ ಎತ್ತು, ಎಮ್ಮೆ, ಕೋಣ, ಆಡು, ಮೇಕೆ ಎಲ್ಲವುಗಳಿಗೆ ಪ್ರಾಮುಖ್ಯತೆ ನೀಡುತ್ತಾರೆ. ಕಾರಣ ಈ ಎಲ್ಲ ಪಶುಗಳನ್ನು ಸಾಕಿ ಅವುಗಳನ್ನು ಜೀವನೋಪಾಯಕ್ಕಾಗಿ ಬಳಸಿಕೊಳ್ಳುವ ಜನರಿಗೆ ಅವುಗಳೊಂದಿಗೆ ಭಾವನಾತ್ಮಕ ಸಂಬಂಧವಿದೆ. ಆದರೆ ಕುರುಡು ನಂಬಿಕೆಗಳಿಲ್ಲ. ಆದ್ದರಿಂದಲೇ ಅವರು ಆಕಳಿನಷ್ಟೇ ಎಮ್ಮೆಯನ್ನು ಪವಿತ್ರವೆಂದು ಪೂಜಿಸಿಕೊಂಡು ಬರುತ್ತಾರೆ.
ಆ ಗುಡ್ಡ ನೋಡ ಈ ಗುಡ್ಡ ನೋಡ
ಗುಡ್ಡದ ಮ್ಯಾಲ ಆನಿಯಂಥ ಎಮ್ಮಿ ನೋಡ
ಆನಿ ಮ್ಯಾಲ ಅಂಬಾರಿ ನೋಡ
ಅಂಬಾರಿದಾಗ ಅರಸಗ ನೋಡ
ಅರಸನ ಕೈಯಾಗ ಕುಡಗೀಲ ನೋಡ
ಮೂರ್ ಮೂರ್ ಹುಲ್ಲ ನೋಡ
ಕೆಸರಿನಂಥ ಮೊಸರ ನೋಡ
ಕಲ್ಲಿನಂಥ ಬೆಣ್ಣಿ ನೋಡ
ವರ್ಷಕ್ಕೊಮ್ಮೆ ಹಬ್ಬಾ ನೋಡ
ಸೇರ ಖೊಬ್ರಿ ಬಿರಾಂಜೋ ॥
ದನಗಾಹಿಯೊಬ್ಬ ಎಮ್ಮೆಯ ಗುಣಗಾನ ಮಾಡಿದ ಈ ಪದ ಜನಪದರ ಸಮಚಿತ್ತವನ್ನು ಎತ್ತಿ ತೋರಿಸುತ್ತದೆ. ಎಮ್ಮೆ ಆನೆಗಿಂತ ಕಡಿಮೇನಿಲ್ಲ. ಸಿಕ್ಕಲ್ಲಿ ಮೇಯ್ದು ಡಬರಿ ತುಂಬ ಹಾಲು ನೀಡಿದರೆ, ಮನೆ ಮಂದಿಯೆಲ್ಲ ಕುಡಿದು ಕಣ್ಣಿ ಕಣ್ಣಿ ಮೊಸರು ಮಾಡಿ, ಮೊಸರ ಹೊಸೆದು ಕಲ್ಲಿನಂಥ ಬೆಣ್ಣೆ ತೆಗೆಯುವುದಾಗಿ ಹೇಳುತ್ತಿದ್ದಾರೆ. ಎಮ್ಮೆ ಹೈನು ಭರ್ತಿ ಸಮೃದ್ಧಿ ತರುತ್ತದೆ. ಎಮ್ಮೆ ಹೈನಿಗಾದರೆ ಕೋಣವೇನು ಕಡಿಮೆಯೇ ಅದು ಕೂಡ ದುಡಿಸಿಕೊಳ್ಳುವವರಿಗೆ ವರದಾನವೆ ಸರಿ.
ಥುತ್ ನಿನ್ನ ಕೋಣ
ಹೊರಿ ಹುಲ್ಲ ತಿಂತೀ
ಕೊಡ ನೀರ ಕುಡಿತಿ
ಫದ್ ಅಂತ ಒದ್ದರ್
ಥಪ್ ಅಂತ ಬೀಳ್ತಿ
ಧೊರಿಗಿ ಬಂದ್ ಒಡ್ಡು
ನನ್ಗ ಬಂತು ದುಡ್ಡು ಚಕೋತ್ರೆ ॥
ಕೋಣವನ್ನು ಕೆಲವು ಜನಾಂಗ ಕೃಷಿಗೆ ಬಳಸುವುದು ಇದೆ. ಅತಿ ಭಾರವಾದ ಬಂಡೆಗಳನ್ನು ಎಳೆಯಲು ಕೋಣಗಳನ್ನು ಬಳಸಲಾಗುತ್ತದೆ. ಅದು ಆನೆಯಂಥ ದೈತ್ಯ ಪ್ರಾಣಿ. ದಂಡಿಯಾಗಿ ಹುಲ್ಲು ತಿಂದರೂ ಪಳಗಿಸಿದರೆ ತಿಂದಷ್ಟು ಕೆಲಸವನ್ನು ಮಾಡುತ್ತದೆ. ಸಾಕಿದವನಿಗೆ ಅದು ಯಾವತ್ತೂ ಹಾನಿಯಾದುದಿಲ್ಲ. ಮಾರಿಕೊಂಡರೂ ಕೈತುಂಬಾ ದುಡ್ಡು ತರುತ್ತದೆ ಎನ್ನುತ್ತಾರೆ ಗೌಳಿಗರು. (ಪಶುಪಾಲಕರು).
ಕೃಷಿಕನಿಗೆ ಆಕಳಿಗಿಂತ ಎತ್ತು ಉಪಯೋಗಕಾರಿ. ಅವರಿಗೆ ಎತ್ತಿನೊಂದಿಗೆ ಭಾವನಾತ್ಮಕ ಸಂಬಂಧವಿದೆ. ಎಷ್ಟೋ ಸಲ ರೈತರು ತಾವು ಉಪವಾಸ ಬಿದ್ದರೂ ಎತ್ತಿಗೆ ಮೇವು ಖರೀದಿಸಿ ಪೂರೈಸುತ್ತಾರೆ.
ಹಂಡೆತ್ತೊ ಬಂಡೆತ್ತೊ ಮುತ್ತಿನಂಥ ಮೂರೆತ್ತೊ
ಕಲಬುರಗಿ ದಾರ್ಯಾಗ ಕಳ್ಳರು ಹಿಡದಾರ
ಮಟ್ಟ ಹಾಕಿ ನಿಂತಾರ
ಸಂಗಯ್ಯನ ಗುಡಿ ಮುಂದ ಸರ್ ಸರದು ನಿಂತಾರ
ನಿಂಗಯ್ಯನ ಗುಡಿ ಮುಂದ ನಿಗ್ರಿ ನಿಗ್ರಿ ನಿಂತಾರ
ಆಣೀಗೊ ಪಿಣೀಗೋ ಸೇರ ಖೊಬ್ರಿ ಬಿರಾಂಜೋ ॥
ದನಗಳನ್ನು ಕೃಷಿಗೆ ಬಳಸುವುದಲ್ಲದೆ ಎತ್ತುಗಳನ್ನು ತಯಾರು ಮಾಡಿ ಮಾರಿಕೊಳ್ಳುವುದು ಉಂಟು. ಹೀಗೆ ಹೋರಿ ಕರುವನ್ನು ಮೇಯಿಸಿ ಮನಗಂಡ ತಯಾರಿ ಮಾಡಿದ ರೈತನೊಬ್ಬ ತನ್ನ ಹಂಡ ಬಂಡ ಹೋರಿಗಳನ್ನು ಮಾರಲೆಂದು ಕಲಬುರಗಿ ಸಂತೆಗೆ ತರುವಲ್ಲಿ ನಡುದಾರಿಯಲ್ಲಿ ಕಳ್ಳನು ಎತ್ತುಗಳನ್ನು ಲಪಟಾಯಿಸಿಕೊಂಡು ಹೋಗುತ್ತಿದ್ದನಂತೆ. ಕಟ್ಟುಮಸ್ತು ಆಳಾಗಿದ್ದ ಕೃಷಿಕ ಸಂಗಯ್ಯ, ನಿಂಗಯ್ಯರ ಗುಡಿ ಮುಂದೆ ಕಳ್ಳನನ್ನು ತಡೆದು ತನ್ನ ಎತ್ತುಗಳನ್ನು ಬಿಡಿಸಿಕೊಂಡದ್ದನ್ನು ಸ್ಮರಿಸಿದ್ದಾನೆ. ರೈತರಿಗೆ ದನಗಳು ಸಂಪತ್ತಿನ ಭಾಗವಾಗಿದ್ದವು. ಅದರಂತೆ ಕರು, (ಆಕಳಿಂದ ಜನಿಸಿದ ಹೆಣ್ಗರು) ಮಣಕ, (ಎಮ್ಮೆಯಲ್ಲಿ ಜನಿಸಿದ ಹೆಣ್ಣು ಸಂತತಿ) ಹೋರಿ, (ಆಕಳಿನ ಗಂಡು ಸಂತಾನ) ಗೂಳಿ (ಕೃಷಿಗೆ ಹೂಡದೆ ದೇವರ ಹೆಸರಿನಲ್ಲಿ ಹರಕೆ ಬಿಟ್ಟ ಹೋರಿ)ಗಳಲ್ಲದೆ ಆಡು, ಕುದುರೆಗಳ ಕುರಿತು ಹಾಡುಗಳನ್ನು ರಚಿಸಿದ್ದಾರೆ.
ಹೊಟ್ಟಿ ಡುಮ್ ಕಾಲ್ ಸಣ್ಣ ಮ್ಯಾಂ ಮ್ಯಾಂ/ಆಣೀ ಪಿಣೀ ಜಾಂದೇ ಸೇರ್ ಖೊಬ್ರಿ ಬಿರಾಂಜೋ ॥ ಎಂಬುದು ಆಡಿನ ವರ್ಣನೆಯಾದರೆ ಕುದುರೆಯನ್ನು ಲಕ್ಯಾ ಲಕ್ಯಾ ಲಾಲೋ ಟೆಂಕಿ ರೊಕ್ಕಾ ಸಾಲೋ ಎಂದು ವರ್ಣಿಸಲಾಗಿದೆ. ಜನಪದರ ಸಾಂಸ್ಕೃತಿಕ ಲೋಕ ಅನಾವರಣಗೊಳ್ಳುವ ಪದವೊಂದು
ನಮ್ ಮನ್ಯಾಗ್ ದೊಡ್ಡ ಆಕೂಳ್
ಕೈ ತುಂಬಾ ಕೆಚ್ಚಿ.
ಯಾಕೋ ಪಾರಾ ದನಾ ಯಾಕ್ ಬಿಡಲಿಲ್ಲ
ನಾ ಏನ್ ಮಾಡ್ಲಿ ಆಯಿ ಅಚ್ಚಿ ಕೊಟ್ಟಿಲ್ಲ.
ಆಯೀ, ಆಯೀ ಅಚ್ಚಿ ಯಾಕ್ ಕೊಟ್ಟಿಲ್ಲ
ನಾ ಏನ್ ಮಾಡ್ಲಿ ಮುತ್ಯಾ ಜೋಳ ತಂದಿಲ್ಲ.
ನಾ ಏನ್ ಮಾಡ್ಲೀ ಹೊಲ ಬೆಳ್ದಿಲ್ಲ.
ಹೊಲ ಹೊಲ ನೀ ಯಾಕ್ ಬೆಳ್ದಿಲ್ಲ
ನಾ ಏನ್ ಮಾಡ್ಲಿ ನೊಗ ಮುರದಾದ.
ನೊಗ, ನೊಗ ನೀ ಯಾಕ್ ಒಜ್ಜಿ ಆಗೀದಿ
ನಾ ಏನ್ ಮಾಡ್ಲಿ ಬಡಗ್ಯಾ ಕೆತ್ತಿಲ್ಲ.
ಬಡಗ್ಯಾ ಬಡಗ್ಯಾ ನೀ ಯಾಕ್ ಕೆತ್ತಿಲ್ಲ
ನಾ ಏನ್ ಮಾಡ್ಲಿ ಬಾಚಿ ಮಂಡಾದ.
ಬಾಚಿ ಬಾಚಿ ನೀ ಯಾಕ್ ಮಂಡಾದಿ
ನಾ ಏನ್ ಮಾಡ್ಲಿ ಕಂಬಾರ ಮಸದಿಲ್ಲ.
ಕಂಬಾರ ಕಂಬಾರ ನೀ ಯಾಕ್ ಮಸದಿಲ್ಲ
ನಾ ಏನ್ ಮಾಡ್ಲಿ ಕೊಳಸಿ ಸಿಕ್ಕಿಲ್ಲ.
ಕೊಳಸಿ ಕೊಳಸಿ ನೀ ಯಾಕ್ ಸಿಕ್ಕಿಲ್ಲ
ನಾ ಏನ್ ಮಾಡ್ಲಿ ಗಿಡ ಬೆಳದಿಲ್ಲ.
ದನಗಾಹಿಯೊಬ್ಬ ದನಗಳನ್ನು ಮೇಯಿಸುತ್ತಿಲ್ಲ. ಏಕೆಂದರೆ ಆಯಿ (ಅಜ್ಜಿ) ಅಚ್ಚಿ ಅಂದರೆ ರೊಟ್ಟಿ ಕೊಟ್ಟಿಲ್ಲ. ರೊಟ್ಟಿ ಕೊಡಲು ಮುತ್ಯಾ (ಅಜ್ಜ) ಜೋಳ ತಂದಿಲ್ಲ. ಕಾರಣ ಬಿತ್ತನೆ ಮಾಡುವ ನೊಗ ಮುರಿದಿದೆ. ಬಡಿಗ ನೊಗವನ್ನು ರಿಪೇರಿ ಮಾಡಿ ಕೊಟ್ಟಿಲ್ಲ. ಕಂಬಾರ ಬಡಿಗನ ನೊಗವನ್ನು ಬಾಚಿಯಿಂದ (ಉಳಿ) ಕೆತ್ತಿ ಕೊಟ್ಟಿಲ್ಲ. ಕಂಬಾರನ ಆವಿಗಿಗೆ ಕೊಳಸಿ (ಇದ್ದಿಲು) ಸಿಕ್ಕಿಲ್ಲ. ಕಾರಣ ಗಿಡ ಮರಗಳು ಬೆಳೆದಿಲ್ಲ. ಆತ್ಯಂತಿಕವಾಗಿ ಪರಿಸರ ನಾಶವಾದರೆ ಪಶುಗಳು ಇಲ್ಲ. ಕೃಷಿಯೂ ಇಲ್ಲ ಎನ್ನುತ್ತಾರೆ ಜನಪದರು. ದನಕರುಗಳಾದಿಯಾಗಿ ಪರಿಸರವನ್ನು ಪೂಜಿಸುವ ಹಬ್ಬವೇ ದೀಪಾವಳಿ. ನಾಡಾಡಿಗರು ಯಾವತ್ತೂ ಪಶುಗಳಲ್ಲಿ ಕನಿಷ್ಠ, ಶ್ರೇಷ್ಠವೆಂದು ತಾರತಮ್ಯ ಮಾಡಲಿಲ್ಲ. ಹಬ್ಬಗಳಿಗೆ ಜಾತಿ, ಧರ್ಮಗಳ ಕಿಲ್ಬಿಷವನ್ನು ಅಂಟಿಸಲಿಲ್ಲ. ಹಬ್ಬಗಳು ಸಾಮರಸ್ಯ, ಸೌಹಾರ್ದದ ಅನುಸಂಧಾನವಾಗಿ ಪರಿಸರಕ್ಕೆ ಪೂರಕವಾಗಿ ಆಚರಣೆಗೊಳ್ಳಬೇಕೇ ಹೊರತು ಪಟಾಕಿ ಸಿಡಿಸಿ ಪರಿಸರ ಮಾಲಿನ್ಯ ಮಾಡುವುದಲ್ಲ.







