Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ಪುಸ್ತಕ ಸಾಂಗತ್ಯ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಅಂಕಣಗಳು
  4. ಬಯಲ ಬುತ್ತಿ
  5. ವರದಕ್ಷಿಣೆಯು ಆಸ್ತಿಯ ಪಾಲುದಾರಿಕೆಗೆ...

ವರದಕ್ಷಿಣೆಯು ಆಸ್ತಿಯ ಪಾಲುದಾರಿಕೆಗೆ ಪರ್ಯಾಯವಲ್ಲ

ಡಾ. ಮೀನಾಕ್ಷಿ ಬಾಳಿಡಾ. ಮೀನಾಕ್ಷಿ ಬಾಳಿ30 Jun 2026 9:40 AM IST
share
ವರದಕ್ಷಿಣೆಯು ಆಸ್ತಿಯ ಪಾಲುದಾರಿಕೆಗೆ ಪರ್ಯಾಯವಲ್ಲ

ಈಗ ಹಣದ ರೂಪದಲ್ಲಿ ವರದಕ್ಷಿಣೆ ಪಡೆಯುವುದಿಲ್ಲ, ಸೈಟು, ಬಂಗಾರ, ಅದ್ದೂರಿ ಮದುವೆ, ವಾಹನ, ವಸ್ತುಗಳ ರೂಪದಲ್ಲಿ ಅದೂ ವಧುವಿನ ಕಡೆಯವರು ತಾವಾಗಿಯೇ ಪ್ರೀತಿಯಿಂದ ತಮ್ಮ ಮಗಳಿಗೆ ಉಡುಗೊರೆ ಕೊಡುತ್ತಿದ್ದಾರೆ ಎಂಬ ಸೋಗು ಶುರುವಾಗಿದೆ. ಒಳಗೊಳಗೆ ಅನೇಕ ಬೇಡಿಕೆಗಳನ್ನಿಟ್ಟು ಬಾಹ್ಯದಲ್ಲಿ ತಾವೇನೂ ವರದಕ್ಷಿಣೆಗೆ ಆಸೆ ಪಡುವವರಲ್ಲ ಎಂಬ ಮೋಸವೊಂದು ಚಾಲ್ತಿಯಲ್ಲಿದೆ. ಮಾರುಕಟ್ಟೆಯ ಹೊಸ ವರಸೆಗಳು ಜನರ ಮನೋಸ್ಥಿತಿಯನ್ನು ಧೂಳೀಪಟ ಮಾಡಿ ಬಿಟ್ಟಿವೆ. ಬಡವರಾದಿ ಶ್ರೀಮಂತರಲ್ಲಿ ಆದ್ದೂರಿತನದ ಅಮಲು ಏರಿಸಿ ಭರ್ಜರಿ ಮದುವೆ ಮಾಡಿಕೊಳ್ಳುವ ಮೂಲಕ ಹೆತ್ತವರ ಮನೆಯನ್ನು ದಿವಾಳಿ ಎಬ್ಬಿಸುವ ದಂಧೆ ಭರದಿಂದ ನಡೆದಿದೆ.

ಇತ್ತೀಚೆಗೆ ಪತ್ರಿಕೆಗಳಲ್ಲಿ ಪ್ರಕಟವಾದ ಸುದ್ದಿಯೊಂದು ಗಮನ ಸೆಳೆದಿದೆ. ಕರ್ನಾಟಕದ ಕೆಲವು ಲಂಬಾಣಿ ಅಥವಾ ಬಂಜಾರಾ ಸಮಾಜದ ಮುಖಂಡರು ಸಭೆ ಸೇರಿ ತಮ್ಮ ಸಮುದಾಯಗಳಲ್ಲಿ ಮಾರಣಾಂತಿಕ ಪಿಡುಗಾಗಿ ಪರಿಣಮಿಸಿರುವ ವರದಕ್ಷಿಣೆ ಪೃಥೆಯನ್ನು ಸಮೂಲವಾಗಿ ನಿರ್ನಾಮಿಸಲು ನಿರ್ಣಯ ಕೈಕೊಂಡಿದ್ದಾರೆ. ತಮ್ಮ ಸಮುದಾಯಗಳಲ್ಲಿ ಯಾರಾದರೂ ಮದುವೆ ಸಂದರ್ಭದಲ್ಲಿ ವರದಕ್ಷಿಣೆ ಕೊಟ್ಟು ಕೊಂಡು ಮಾಡಿದರೆ ಅಂಥವರ ವಿರುದ್ಧ ಸಮುದಾಯದ ಪರಂಪರೆಯಂತೆ ಕ್ರಮ ಕೈಕೊಳ್ಳುವುದಾಗಿಯೂ ಹೇಳಿಕೊಂಡಿದೆ. ಇದನ್ನು ಲಂಬಾಣಿ ಸಮುದಾಯದವರು ಸೇರಿದಂತೆ ಸಮಗ್ರ ಮಹಿಳಾ ಲೋಕ ಸ್ವಾಗತಿಸುತ್ತದೆ. ಇಂಥದ್ದೊಂದು ನಿರ್ಣಯ ತೆಗೆದುಕೊಳ್ಳುವುದರ ಹಿನ್ನೆಲೆ ಮುನ್ನೆಲೆಗಳು ಏನಿವೆಯೋ ಗೊತ್ತಿಲ್ಲ. ಆದರೆ ಮೇಲ್ನೋಟಕ್ಕೆ ಇದೊಂದು ಮಹಿಳಾ ಪರ ನಿಲುವು ಎನ್ನುವುದರಲ್ಲಿ ಎರಡು ಮಾತಿಲ್ಲ.

ಆದಿಮ ಸಂಸ್ಕೃತಿಯಲ್ಲಿ ಅಂದರೆ ವಿವಾಹ, ಕುಟುಂಬ ಇತ್ಯಾದಿ ಸಾಮಾಜಿಕ ಸಂಸ್ಥೆಗಳು ಜನ್ಮ ತಾಳದೆ ಇದ್ದ ಕಾಲಘಟ್ಟದಲ್ಲಿ ಜನರು ಅತ್ಯಂತ ಸ್ವಚ್ಛಂದವಾಗಿ ನೈಸರ್ಗಿಕ ಪಾತಳಿಯಲ್ಲಿ ಬದುಕು ಕಟ್ಟಿಕೊಂಡು ಬಂದಿದ್ದರಷ್ಟೆ. ಕಾಲಕಳೆದಂತೆ ಮನುಷ್ಯರ ಬುದ್ಧಿ ಭಾವಗಳು ವಿಕಾಸಗೊಂಡಂತೆ ನಾಗರಿಕತೆಯನ್ನು ಅಭಿವೃದ್ಧಿ ಪಡಿಸಿಕೊಂಡು ಬಂದದ್ದೇನೊ ಸರಿ. ಮೂಲತಃ ಪಶು-ಪಕ್ಷಿಗಳಂತೆ ಬದುಕು ಮಾಡುತ್ತಿದ್ದ ಮನುಷ್ಯರು ತಮ್ಮ ಕ್ರಿಯಾಶೀಲತೆ ಮತ್ತು ಮೆದುಳಿನ ವಿಕಾಸಶೀಲತೆಯಿಂದ ಏನೆಲ್ಲ ಆವಿಷ್ಕಾರ ಮಾಡಿಕೊಂಡರು ಮತ್ತು ಇತರ ಪ್ರಾಣಿಗಳಿಗಿಂತ ಭಿನ್ನರೆಂದು ಅಸ್ತಿತ್ವಗೊಂಡರು ಎಂಬುದಾಗಿ ಜನಾಂಗೀಯ ಇತಿಹಾಸ ಹೇಳುತ್ತದೆ. ಇದೆಲ್ಲವೂ ಸರಿ. ಮನುಷ್ಯರು ಇತರೆಲ್ಲ ಪ್ರಾಣಿಗಳಿಗಿಂತ ಭಿನ್ನರಾದುದೇ ಅವರಲ್ಲಿದ್ದ ಅಗಾಧವಾದ ಬುದ್ಧಿಮತ್ತೆ ಮತ್ತು ನಿರಂತರ ಕ್ರಿಯಾಶೀಲತೆಯಿಂದಾಗಿ ಎಂಬುದರಲ್ಲಿ ತಕರಾರು ಇರಲಾರದು. ಆದರೆ ಹೀಗೆ ವಿಕಾಸವಾದ ಬುದ್ಧಿಮತ್ತೆ ಸಾಗಿದ್ದು ಎತ್ತ ಎಂಬ ಪ್ರಶ್ನೆಗಳು ಕೇಳಿಕೊಳ್ಳಬೇಕಾದುದು ಕೂಡ ಇದೇ ನಾಗರಿಕ ಸಮಾಜಕ್ಕೆ ಅನಿವಾರ್ಯವಾಗಿದೆ.

ಮನುಷ್ಯರು ಇತರ ಪ್ರಾಣಿಗಳಿಂತ ಭಿನ್ನ ಹಾಗೂ ಮೇಲ್ ಸ್ತರದವರು ಎಂದು ಹೇಳುತ್ತಲೇ ಇತರೆಲ್ಲ ಪ್ರಾಣಿಗಳಿಗಿಂತಲೂ ಕ್ರೂರವಾದುದೇಕೆ? ಪ್ರಾಣಿ ಪ್ರಪಂಚದಲ್ಲಿ ಅಷ್ಟಾಗಿ ಕಾಣಿಸಿಕೊಳ್ಳದ ತರತಮಗಳು, ದ್ವೇಷ-ಅಸೂಯೆಗಳು ಮನುಷ್ಯರಲ್ಲಿಯೇ ರಕ್ತಗತವಾಗಿರುವ ಕಾರಣವಾದರೂ ಏನು? ಈ ಎಲ್ಲ ನಕಾರಾತ್ಮಕ ಗುಣಗಳು ಮನುಷ್ಯರಲ್ಲಿ ಕಾಣಿಸಿಕೊಳ್ಳಲು ಜೈವಿಕ ಕಾರಣಗಳೇನಾದರೂ ಇವೆಯೇ? ಇಂಥ ಪ್ರಶ್ನೆಗಳನ್ನು ಇಟ್ಟುಕೊಂಡು ಮಾನವ ಶಾಸ್ತ್ರಜ್ಞರು ಹತ್ತಾರು ಗಂಭೀರ ಸಂಶೋಧನೆಗಳನ್ನು ಕೈಗೊಂಡು ಸಮಾಜದಲ್ಲಿ ನಿರ್ಮಾಣವಾದ ಎಲ್ಲ ಬಗೆಯ ಅಸಮಾನತೆಗೆ ಕಾರಣಗಳು ನಾವು ರಚಿಸಿಕೊಂಡಿರುವ ಸಮಾಜ ವ್ಯವಸ್ಥೆಯಲ್ಲಿವೆ ಹೊರತು ನಿಸರ್ಗದಲ್ಲಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ನಿಸರ್ಗದಲ್ಲಿ ಹೆಣ್ಣು-ಗಂಡು ಎಂಬ ಭೇದವಾಗಲಿ, ಜಾತಿ, ವರ್ಗ, ವರ್ಣ ಮುಂತಾಗಿ ಯಾವುದೇ ತಾರತಮ್ಯಗಳಿಲ್ಲ. ಜೀವ ಜಗತ್ತಿನಲ್ಲಿ ವಿವಿಧತೆ ಇದೆ. ಭಿನ್ನತೆ ಇಲ್ಲ. ಕೆಲವೊಂದು ಸ್ವಾರ್ಥಿ ಗುಂಪು ನಿಸರ್ಗದಲ್ಲಿನ ಈ ವಿವಿಧತೆಗಳನ್ನು ಬಳಸಿಕೊಂಡು ಅವುಗಳನ್ನೇ ಭೇದ-ಭಾವದ ಮಾನದಂಡಗಳಾಗಿ ನಿರ್ಮಿಸಿಕೊಂಡದ್ದು ಇದೆ. ಈ ದುಷ್ಟತನಕ್ಕೆ ಮೊದಲು ಬಲಿಯಾದವರು ಮಹಿಳೆಯರು.

ಗಂಡು ಪ್ರಾಣಿಗಳಿಗಿಲ್ಲದ ವಿಶೇಷ ಸಾಮರ್ಥ್ಯವೊಂದು ಸ್ತ್ರೀ ಸಂಕುಲಕ್ಕೆ ನಿಸರ್ಗ ಕರುಣಿಸಿದೆ. ಗರ್ಭಾಶಯ ಮತ್ತು ಹಾಲೊಸರುವ ಸ್ತನಗಳು. ಗರ್ಭಾಶಯವು ಮಹಿಳೆಯರ ಶಕ್ತಿ ಕೇಂದ್ರ. ಸಂತಾನ ಸಾಧ್ಯತೆಯ ಪ್ರಧಾನ ಅಂಗ. ಸಂತಾನ ಸೃಜನೆಯಲ್ಲಿ ಗಂಡು ಪ್ರಾಣಿಯ ಪಾಲುದಾರಿಕೆ ಸ್ತ್ರೀಯರ ಪಾಲುದಾರಿಕೆಗೆ ಹೋಲಿಸಿದರೆ ಅತ್ಯಲ್ಪವೆಂದೇ ಹೇಳಬೇಕು. ಹೀಗೆಂದು ಗಂಡು ಪ್ರಾಣಿ ಕಡಿಮೆ, ಹೆಣ್ಣು ಪ್ರಾಣಿ ಹೆಚ್ಚು ಎಂದೂ ಭಾವಿಸಬೇಕಿಲ್ಲ. ಸೃಷ್ಟಿಯಲ್ಲಿ ಯಾವುದೇ ಪ್ರಾಣಿಗೂ ಕನಿಷ್ಠ-ಶ್ರೇಷ್ಠ ಎಂಬ ಭ್ರಮೆಗಳಿಲ್ಲ. ದುರಂತವೆಂದರೆ ಶ್ರೇಷ್ಠ-ಕನಿಷ್ಠವೆಂಬ ಈ ಭ್ರಮೆಯನ್ನು ಸೃಷ್ಟಿಸಿಕೊಂಡವರು ಅತಿ ಬುದ್ಧಿವಂತರೆಂದು ಕರೆದು ಕೊಂಡಿರುವ ಮನುಷ್ಯಪ್ರಾಣಿಗಳೇ. ಹೆಣ್ಣಿನ ಈ ಪ್ರಜನನ ಕ್ರಿಯೆಯು ಗಂಡು ಪ್ರಾಣಿಗಳಲ್ಲಿ ಗಾಬರಿ ಹುಟ್ಟಿಸಿರಲೂ ಸಾಕು. ಹೆಣ್ಣನ್ನು ಆತ ತನ್ನ ಸಹಜೀವಿ ಎಂದು ಪರಿಭಾವಿಸಿದ್ದಕ್ಕಿಂತಲೂ ಹೆಚ್ಚಾಗಿ ತನ್ನ ಸ್ಪರ್ಧಾಳು ಎಂದೇ ಭಾವಿಸಿಕೊಂಡು ಬಂದಂತಿದೆ. ಆದ್ದರಿಂದಲೇ ನಾಗರಿಕತೆಯ ಉಗಮದೊಂದಿಗೆ ಹೆಣ್ಣನ್ನು ಅವಳ ಸಂತಾನ ಸಾಧ್ಯತೆಯ ಕಾರಣವಾಗಿಯೇ ತುಚ್ಛೀಕರಿಸುತ್ತ ಬರಲಾಗಿದೆ. ಚರಿತ್ರೆಯ ನಡೆಯಲ್ಲಿ ಹೆಣ್ಣನ್ನು ಆಸ್ತಿಯ ಭಾಗವಾಗಿ ಪರಿಗಣಿಸಿದಂದಿನಿಂದ ಅವಳು ವಸ್ತುವಾದಳು. ನಂತರ ಪುರುಷನ ಲೈಂಗಿಕ ಬಯಕೆಗೆ ಒದಗಿ ಬಂದದ್ದೇ ಕಾರಣವಾಗಿ ಭೋಗದ ವಸ್ತುವಾದಳು. ಮುಂದೆ ಪುರುಷಾಧಿಕ್ಯದ ನಡೆಯಲ್ಲಿ ಆಸ್ತಿ ಸಂರಕ್ಷಣೆ ಮಾಡಲೆಂದು ಮಕ್ಕಳನ್ನು ಹೆರುವ ಯಂತ್ರವಾದಳು. ಬಸುರಿ, ಬಾಣಂತಿತನ ಇತ್ಯಾದಿ ನೈಸರ್ಗಿಕ ಕ್ರಿಯೆಗಳು ಮೈಲಿಗೆಯಾದವು. ಹೆಣ್ಣುಮಕ್ಕಳ ಯಾವ ಸಂಗತಿಗಳು ಗೌರವಕ್ಕೆ, ಉಪಚಾರಕ್ಕೆ ಪಾತ್ರವಾಗಬೇಕಿತ್ತೋ ಅವುಗಳನ್ನೇ ಸೂತಕ ಎಂದು ನಗಣ್ಯಗೊಳಿಸಲಾಯಿತು. ಅವಳ ಅಪಾರವಾದ ಸೃಜನಶೀಲತೆಯನ್ನು ನಗಣ್ಯಗೊಳಿಸಲೆಂದೇ ಧಾರ್ಮಿಕವಾಗಿ ಅವಳಲ್ಲಿ ಪಾಪಭೀತಿಯನ್ನು ತುಂಬಲಾಯಿತು.

ಧಾರ್ಮಿಕವಾಗಿ ನಗಣ್ಯಗೊಳಿಸಿದ್ದರಿಂದಲೇ ಸ್ತ್ರೀಯರನ್ನು ಸಾಮಾಜಿಕವಾಗಿ ತೊತ್ತಳ ತುಳಿಯಲಾಯಿತು. ವೈಧವ್ಯ, ಬಂಜೆತನ, ಪತಿವ್ರತೆ, ಸವತಿ, ಗಂಡು ಸಂತಾನವಾಗದಿದ್ದರೆ ಅದಕ್ಕೆ ಸ್ತ್ರೀಯರನ್ನೇ ಹೊಣೆಗಾರರನ್ನಾಗಿಸುವುದು, ಬಹುಪತ್ನಿತ್ವ, ಉಪಪತ್ನಿ, ದೇವದಾಸಿ ಇತ್ಯಾದಿ ಸಾಮಾಜಿಕ ಅಪಸವ್ಯಗಳಲ್ಲಿ ಬಂಧಿಸಿ ಸ್ತ್ರೀಯರು ತಮ್ಮನ್ನು ತಾವೇ ದೂಷಿಸಿಕೊಳ್ಳುವಂತೆ ಮಾಡಲಾಯಿತು. ಇವುಗಳ ಸಾಲಿನಲ್ಲಿ ಕಾಣಿಸಿಕೊಂಡ ಭಯಂಕರ ಪಿಡುಗೆಂದರೆ ವರದಕ್ಷಿಣೆ ಪದ್ಧತಿ. ವರದಕ್ಷಿಣೆ ಪದ್ಧತಿಯು ಭಾರತದಲ್ಲಿ ವೇದಗಳ ಕಾಲದಿಂದಲೂ ವಿಭಿನ್ನ ರೂಪಗಳಲ್ಲಿ ಕಾಣಿಸಿಕೊಂಡಿದೆ. ಮದುವೆ ಸಂದರ್ಭದಲ್ಲಿ ತಂದೆಯ ಆಸ್ತಿಯಲ್ಲಿ ಮಗಳ ಖರ್ಚಿಗೆಂದು ಸ್ತ್ರೀಧನ ಕೊಡುವ ಪದ್ಧತಿ ಇತ್ತು. ತಂದೆಯ ಆಸ್ತಿಯಲ್ಲಿ ಮಗಳಿಗೆ ಹಕ್ಕಿಲ್ಲದ ಕಾರಣವಾಗಿ ಸಾಂಕೇತಿಕವಾಗಿ ಒಂದಷ್ಟು ವಸ್ತು-ಒಡವೆ, ಧನ-ಕನಕ-ಬಟ್ಟೆ ಕೊಡುವುದಿತ್ತು. ಮಧ್ಯಕಾಲೀನ ಚರಿತ್ರೆಯಲ್ಲಿ ಇದು ಕಡ್ಡಾಯ ವರದಕ್ಷಿಣೆಯಾಗಿ ವರನ ಕಡೆಯವರ ಹಕ್ಕಾಗಿ ಪರಿಣಮಿಸಿತು. ಸ್ತ್ರೀ ಬದುಕಿನ ಇನ್ನೊಂದು ಮಗ್ಗುಲು ನೋಡುವುದಾದರೆ: ಬಸುರಿ, ಬಾಣಂತಿತನ ಮತ್ತು ಹೆಣ್ಣು ಶಿಶುಗಳ ಬಗೆಗೆ ಅಲಕ್ಷ್ಯತನ ಮುಂತಾದ ಕಾರಣಗಳಿಂದಾಗಿ ಸ್ತ್ರೀ ಮರಣ ಹೆಚ್ಚಿತ್ತು. ಆಗ ಕನ್ಯೆಯರ ಸಂಖ್ಯೆಯಲ್ಲಿ ಗಣನೀಯ ಇಳಿತದಿಂದಾಗಿ ಎದುರು ಹಣ ಕೊಟ್ಟು ಮದುವೆ ಮಾಡಿಕೊಳ್ಳುವ ತೆರವು ಪದ್ಧತಿ ಇತ್ತು. ಅಂದರೆ ವಧುವಿನ ಪಾಲಕರಿಗೆ ಹಣ ಕೊಡುವುದಿತ್ತು. ಈಗ ನೂರು ವರ್ಷಗಳ ಹಿಂದೆಯೇ ತೆರವು ಪದ್ಧತಿ ಇದ್ದದ್ದಕ್ಕೆ ಸಾಕಷ್ಟು ಪುರಾವೆಗಳು ಇವೆ. ವರನ ಕಡೆಯವರು ವಧುವಿನ ಪಾಲಕರಿಗೆ ಹಣ, ಕನಕ ಅಥವಾ ಆಕಳು, ಎಮ್ಮೆಗಳನ್ನು ಕೊಟ್ಟು ಒಂದರ್ಥದಲ್ಲಿ ಖರೀದಿಸಿಕೊಂಡು ಬರುವುದಿತ್ತು. ಇದು ಇನ್ನೊಂದು ಬಗೆಯ ಶೋಷಣೆಗೆ ದಾರಿ ಮಾಡಿಕೊಟ್ಟಿತ್ತು. ಬಡ ಮನೆತನದ ಹೆಣ್ಣುಮಕ್ಕಳನ್ನು ವಯೋವೃದ್ಧರು ಹಣ ಕೊಟ್ಟು ಖರೀದಿಸುವುದಿತ್ತು. ಹಣದ ಆಸೆಗಾಗಿ ಪಾಲಕರು ತಮ್ಮ ಮನೆಯ ಮಕ್ಕಳನ್ನು ಯಾರಿಗಾದರೂ ಧಾರೆ ಎರೆದು ಕೈ ತೊಳೆದುಕೊಂಡ ಉದಾಹರಣೆಗಳು ಇವೆ. ಇದಕ್ಕೆ ಅಪವಾದಗಳು ಇಲ್ಲದಿಲ್ಲ. ಎಲ್ಲ ಪಾಲಕರು ಹೆಣ್ಣುಮಕ್ಕಳನ್ನು ಕೆಟ್ಟದಾಗಿಯೇ ನಡೆಸಿಕೊಂಡಿರಲಿಕ್ಕಿಲ್ಲ. ಆದರೆ ಹಣದ ಆಮಿಷಕ್ಕಾಗಿ ಕುಡುಕ, ದುಷ್ಟ, ಮುದುಕ, ಲಂಪಟರಂಥ ಸಮಾಜ ಘಾತುಕರೊಂದಿಗೆ ಕೂಡ ಮದುವೆ ಮಾಡಿಕೊಟ್ಟ ಅಸಂಖ್ಯ ಉದಾಹರಣೆಗಳಿವೆ. ತಮ್ಮ ಹೆಣ್ಣುಮಕ್ಕಳನ್ನು ಗುರುವಿಗೆ ದಕ್ಷಿಣೆ ಸಲ್ಲಿಸುವ ರೂಪದಲ್ಲಿ ವಿಕ್ರಯ ಮಾಡಿದ ಉದಾಹರಣೆಗಳು ನಮ್ಮ ಪುರಾಣದಲ್ಲಿ ನಮೂದಾಗಿವೆ. ವಿಶ್ವಾಮಿತ್ರನು ಗುರುದಕ್ಷಿಣೆಯಾಗಿ ಎಂಟು ನೂರು ಕುದುರೆಗಳು ಅದೂ ಒಂದು ಕಿವಿ ಕಪ್ಪಾದ ಕುದುರೆಗಳನ್ನು ಕೇಳಲಾಗಿ ಅವು ತನ್ನ ಬಳಿ ಇರದಿರಲು ಗಾಲವ ಋಷಿಯು ರಾಜನಾದ ಯಯಾತಿ ಬಳಿಗೆ ಹೋಗುತ್ತಾನೆ. ಆತನ ಬಳಿಯೂ ಅಂಥ ಕುದುರೆಗಳಿಲ್ಲದಿರಲು ತನ್ನ ಮಗಳು ಮಾಧವಿಯನ್ನು ಕೊಟ್ಟು ಅಂಥ ಕುದುರೆಗಳು ಯಾರ ಬಳಿ ಇವೆಯೋ ಅವರಿಗೆ ಮಾಧವಿಯನ್ನು ಅನುಭವಿಸುವಂತೆ ಕೇಳಿಕೊಂಡು ಅದಕ್ಕೆ ಪ್ರತಿಯಾಗಿ ಕಪ್ಪು ಕಿವಿಯುಳ್ಳ ಕುದುರೆ ಪಡೆದುಕೊಳ್ಳುವಂತೆ ಹೇಳಿದನಂತೆ. ಗಾಲವ ಋಷಿ ಯಯಾತಿಯಿಂದ ದಾನವಾಗಿ ಪಡೆದ ಮಾಧವಿಯನ್ನು ಅನೇಕ ರಾಜರಿಗೆ ಒಪ್ಪಿಸಿ ಅವರಿಂದ ಕುದುರೆಗಳನ್ನು ಸಂಪಾದಿಸಿಕೊಂಡನು. ಆದರೆ ಆರು ನೂರು ಕುದುರೆಗಳು ಮಾತ್ರ ಲಭ್ಯವಾದವಂತೆ. ಕೊನೆಗೆ ಅಪೂರ್ವ ಸುಂದರಿಯಾದ ಮಾಧವಿಯನ್ನು ಆರು ನೂರು ಕುದುರೆಗಳೊಂದಿಗೆ ವಿಶ್ವಾಮಿತ್ರನಿಗೆ ದಾನವಾಗಿ ನೀಡಿದನಂತೆ. ಹೀಗೆ ಆ ಕತೆ ಮುಂದುವರಿಯುತ್ತದೆ. ಇದರರ್ಥ ಪ್ರಾಚೀನ ಕಾಲದಲ್ಲಿ ಹೆಣ್ಣನ್ನು ದಾನ ರೂಪದಲ್ಲಿ ಕೊಡುವ ಪದ್ಧತಿಯು ಮೌಲ್ಯವಾಗಿಯೇ ಆಚರಿಸಿಕೊಂಡು ಬರಲಾಗಿತ್ತು.

ಸತ್ಯಸಂಧತೆಗಾಗಿ ಕೈ ಹಿಡಿದ ಹೆಂಡತಿಯನ್ನೇ ಮಾರಿಕೊಂಡ ಹರಿಶ್ಚಂದ್ರ, ಜೂಜಿನ ಪಣಕ್ಕೆ ಹೆಂಡತಿಯನ್ನೇ ಹಚ್ಚಿದ ಪಾಂಡವರು, ಅಗಸನ ಮಾತು ಕೇಳಿ ಸಾಧ್ವಿ ಶಿರೋಮಣಿ ಸೀತೆಯನ್ನು ಕಾಡಿಗಟ್ಟಿದ ಶ್ರೀರಾಮಚಂದ್ರ, ತಾನು ಮಾಡದ ತಪ್ಪಿಗಾಗಿ ಕಲ್ಲಾಗಿ ಹೋದ ಅಹಲ್ಯೆ, ಮಗನಿಂದಲೇ ಕೊಲೆಯಾದ ರೇಣುಕೆ ಹೀಗೆ ಲೆಕ್ಕವಿಲ್ಲದಷ್ಟು ಉದಾಹರಣೆಗಳು ಇಂದು ಚರ್ವಿತ ಚರ್ವಣ ಎನಿಸಿದರೂ ಕಾಡುತ್ತಲೇ ಇರುತ್ತವೆ. ಇಂಥವುಗಳ ಕುರಿತು ಚರ್ಚೆ ಮಾಡಲು ಧೈರ್ಯವಿಲ್ಲದ ಮಡಿವಂತರು ಹೀಗೆ ಮಾತಾಡುವವರೆಲ್ಲರೂ ಸನಾತನ ಧರ್ಮ ವಿರೋಧಿಗಳು ಎಂದು ಷರಾ ಬರೆದು ಮುಗಿ ಬೀಳುವುದು ಸರ್ವೇಸಾಮಾನ್ಯವಾಗಿ ಬಿಟ್ಟಿದೆ. ಆದರೆ ಪುರಾಣದ ಇಂಥ ಕಥಾನಕಗಳೇ ಜನರನ್ನು ಕಟ್ಟಿ ಆಳುತ್ತಿರುವುದರಿಂದ ಇಂದಿಗೂ ಸ್ತ್ರೀಯರನ್ನು ನೋಡುವ ದೃಷ್ಟಿ-ಧೋರಣೆಯಲ್ಲಿ ಹೇಳಿಕೊಳ್ಳುವಂಥ ಬದಲಾವಣೆಗಳು ಆಗಿಲ್ಲ. ಹೀಗೆಂದೇ ವಧು ದಕ್ಷಿಣೆ ಅನಿಷ್ಟದಿಂದ ವರದಕ್ಷಿಣೆ ಪಿಡುಗಿಗೆ ಬಂದು ತಲುಪಿದ್ದೇವೆ.

ತಂದೆಯ ಆಸ್ತಿಯಲ್ಲಿ ಪಾಲು ಇಲ್ಲವಾದ್ದರಿಂದ ವರದಕ್ಷಿಣೆ ಕೊಡುವಲ್ಲಿ ತಪ್ಪೇನಿದೆ ಎಂಬ ವಾದವು ಶುರುವಾಗಿದೆ. ಆದರೆ ಹೀಗೆ ಕೊಡುವ ಹಣ-ಬಂಗಾರ ಏನೇ ಇರಲಿ ಅದು ವಧುವಿನ ಕೈ ಸೇರುವುದಿಲ್ಲ. ಗಂಡನ ಮನೆಯವರು ಅದನ್ನು ಪಡೆಯುವುದು ತಮ್ಮ ಅಬಾಧಿತ ಹಕ್ಕೆಂದೇ ಭಾವಿಸುತ್ತಾರೆ. ವರದಕ್ಷಿಣೆ ಎಂಬುದೇ ಸ್ತ್ರೀ ಸಂಕುಲಕ್ಕೆ ಮಾಡುವ ಅಪಮಾನ. ವರದಕ್ಷಿಣೆ ನೀಡುವುದು ಆಸ್ತಿಯಲ್ಲಿ ಪಾಲು ಕೊಡುವುದಕ್ಕೆ ಪರ್ಯಾಯವಾಗದು. ಸ್ವಾಭಿಮಾನದ ಆಸ್ತಿ ಹಕ್ಕು ನಮ್ಮದಾಗಬೇಕೆ ಹೊರತು ಅಪಮಾನದ ವರದಕ್ಷಿಣೆ ಅಥವಾ ಅದ್ದೂರಿ ಮದುವೆಗಾಗಿ ಮಾಡುವ ಖರ್ಚುಗಳು ಸ್ತ್ರೀಯರನ್ನು ಆರ್ಥಿಕವಾಗಿ ಸಶಕ್ತಗೊಳಿಸುವುದಿಲ್ಲ. ವರದಕ್ಷಿಣೆ ನಿಷೇಧ ಕಾಯ್ದೆ ಜಾರಿಯಾಗಿ ದಶಮಾನಗಳೇ ಸಂದರೂ ಅದು ನಿಂತಿಲ್ಲ. ಏಕೆಂದರೆ ವರದಕ್ಷಿಣೆ ಪಡೆಯುವವರು ಮತ್ತು ಕೊಡುವವರು ಇಬ್ಬರೂ ಕೂಡಿಯೇ ಕಾಯ್ದೆಯನ್ನು ಉಲಂಘಿಸುತ್ತಾರೆ. ಸಾಂಕೇತಿಕವಾಗಿದ್ದ ವರದಕ್ಷಿಣೆ ಇಂದು ಹೆಣ್ಣು ಹೆತ್ತವರಿಗೆ ಕೊರಳಿಗೆ ಉರುಳಾಗಿ ಪರಿಣಮಿಸಿದೆ. ವರದಕ್ಷಿಣೆ ಪಿಡುಗಿನಿಂದಾಗಿಯೇ ಹೆಣ್ಣು ಭ್ರೂಣ ಹತ್ಯೆ ದಾಂಗುಡಿಯಿಟ್ಟಿದೆ.

ಹಿಂದೆ ಈ ಅನಿಷ್ಟ ಪದ್ಧತಿ ಮೇಲ್ವರ್ಗ ಮತ್ತು ಮೇಲ್ಜಾತಿಗಳಲ್ಲಿ ಹೆಚ್ಚಾಗಿ ಚಾಲ್ತಿಯಲ್ಲಿತ್ತು. ಆದರೆ ದಿನಗಳೆದಂತೆ ಅದು ಇನ್ನಿತರ ಸಮುದಾಯಗಳಲ್ಲಿ ಅಂದರೆ ತಳಸಮುದಾಯಗಳು, ಬುಡಕಟ್ಟುಗಳಲ್ಲಿಯೂ ಪ್ರಾರಂಭವಾಗಿರುವುದು ಅತ್ಯಂತ ಖೇದಕರ ಸಂಗತಿಯಾಗಿದೆ. ಲಂಬಾಣಿಗಳಲ್ಲಿ ವರದಕ್ಷಿಣೆ ಇರಲೇ ಇಲ್ಲ. ಅವರಲ್ಲಿ ತೆರವು ಪದ್ಧತಿಯಂತೆ ‘ಕರಾರ’ ಎಂಬ ವಧು ದಕ್ಷಿಣೆ ಪದ್ಧತಿಯು ಅವರ ಬುಡಕಟ್ಟು ಸಂಪ್ರದಾಯದ ಭಾಗವಾಗಿ ಮುಂದುವರಿದುಕೊಂಡು ಬಂದಿತ್ತು. ಮೂಲತಃ ಗುಡ್ಡಗಾಡು, ತಾಂಡಾ ನಿವಾಸಿಗಳಾಗಿದ್ದ ಅವರು ಅಡವಿಯಿಂದ ಹೊರಬಂದು ನಾಗರಿಕತೆಗೆ ತೆರೆದುಕೊಂಡೊಡನೆ ಮುಂದುವರಿದ ಜಾತಿಗಳನ್ನೇ ತಮ್ಮ ಆದರ್ಶಗಳೆಂದು ಭಾವಿಸಿಕೊಂಡರು. ಅವರಂತೆ ವೇಷ-ಭೂಷಣ, ಕೆಲವು ಆಚಾರ-ವಿಚಾರಗಳನ್ನು ಪಾಲಿಸುತ್ತ ವರದಕ್ಷಿಣೆ ಪಿಡುಗಿಗೆ ಒಡ್ಡಿಕೊಂಡರು. ಈ ಪಿಡುಗು ಬಡ ಲಂಬಾಣಿಗಳನ್ನು ಇನ್ನಿಲ್ಲದಂತೆ ಹಣಿಯತೊಡಗಿತು. ಅವರ ಕೌಟುಂಬಿಕ ವಿನ್ಯಾಸ, ಮಾನವೀಯ ಸಂಬಂಧಗಳಲ್ಲಿ ಬಿರುಕು ಮೂಡಿಸಿತು. ಪ್ರಾಯಶಃ ಅವರಿಗೆ ಇದರ ದೂರಗಾಮಿ ದುಷ್ಪರಿಣಾಮಗಳು ಮನವರಿಕೆಯಾದಂತೆ ತೋರುತ್ತದೆ. ಹೀಗಾಗಿಯೇ ವರದಕ್ಷಿಣೆ ಪಿಡುಗಿನ ವಿರುದ್ಧ ಅವರು ಆಂದೋಲನ ನಡೆಸಲು ಮುಂದಾದಂತಿದೆ. ಇದು ಉಳಿದ ಸಮುದಾಯಗಳಿಗೂ ಮಾದರಿಯಾಗಬೇಕಿದೆ.

ದುರಂತವೆಂದರೆ ಒಂದೆಡೆ ಸ್ತ್ರೀ ಭ್ರೂಣ ಹತ್ಯೆಯಿಂದಾಗಿ ಹೆಣ್ಣುಮಕ್ಕಳ ಸಂಖ್ಯೆಯಲ್ಲಿ ಇಳಿಕೆ ಕಾಣಿಸಿಕೊಂಡಿದೆ. ಹೆಣ್ಣುಶಿಶುಗಳ ಸಂಖ್ಯೆ ಕಡಿಮೆಯಾದರೆ ವರದಕ್ಷಿಣೆ ಪಿಡುಗು ನಿಲ್ಲಬೇಕಿತ್ತಲ್ಲವೆ? ಹಾಗಾಗಿಲ್ಲ. ಡಿಮಾಂಡ್ ಮತ್ತು ಸಪ್ಲೈ ಎಂಬ ಆರ್ಥಿಕ ಥಿಯರಿ ಇಲ್ಲಿ ಹೊಂದಾಣಿಕೆಯಾಗದು. ಕಾರಣ ಇದು ಆರ್ಥಿಕ ಪ್ರಶ್ನೆ ಮಾತ್ರವಲ್ಲ. ಇದೊಂದು ಸಾಮಾಜಿಕ, ಸಾಂಸ್ಕೃತಿಕ ನೀಚಾಚಾರವಾಗಿದೆ. ವರದಕ್ಷಿಣೆ ನಿಷೇಧ ಕಾಯ್ದೆ ಜಾರಿಯಾದ ನಂತರ ಆ ಪದ್ಧತಿಯು ಹೊರಳು ಹಾದಿ ಹಿಡಿದಿದೆ. ಈಗ ಹಣದ ರೂಪದಲ್ಲಿ ವರದಕ್ಷಿಣೆ ಪಡೆಯುವುದಿಲ್ಲ, ಸೈಟು, ಬಂಗಾರ, ಅದ್ದೂರಿ ಮದುವೆ, ವಾಹನ, ವಸ್ತುಗಳ ರೂಪದಲ್ಲಿ ಅದೂ ವಧುವಿನ ಕಡೆಯವರು ತಾವಾಗಿಯೇ ಪ್ರೀತಿಯಿಂದ ತಮ್ಮ ಮಗಳಿಗೆ ಉಡುಗೊರೆ ಕೊಡುತ್ತಿದ್ದಾರೆ ಎಂಬ ಸೋಗು ಶುರುವಾಗಿದೆ. ಒಳಗೊಳಗೆ ಅನೇಕ ಬೇಡಿಕೆಗಳನ್ನಿಟ್ಟು ಬಾಹ್ಯದಲ್ಲಿ ತಾವೇನೂ ವರದಕ್ಷಿಣೆಗೆ ಆಸೆ ಪಡುವವರಲ್ಲ ಎಂಬ ಮೋಸವೊಂದು ಚಾಲ್ತಿಯಲ್ಲಿದೆ. ಮಾರುಕಟ್ಟೆಯ ಹೊಸ ವರಸೆಗಳು ಜನರ ಮನೋಸ್ಥಿತಿಯನ್ನು ಧೂಳೀಪಟ ಮಾಡಿ ಬಿಟ್ಟಿವೆ. ಬಡವರಾದಿ ಶ್ರೀಮಂತರಲ್ಲಿ ಆದ್ದೂರಿತನದ ಅಮಲು ಏರಿಸಿ ಭರ್ಜರಿ ಮದುವೆ ಮಾಡಿಕೊಳ್ಳುವ ಮೂಲಕ ಹೆತ್ತವರ ಮನೆಯನ್ನು ದಿವಾಳಿ ಎಬ್ಬಿಸುವ ದಂಧೆ ಭರದಿಂದ ನಡೆದಿದೆ. ಒಂದು ದಿನದಲ್ಲಿ ಮುಗಿಯುತ್ತಿದ್ದ ಮದುವೆ ಸಮಾರಂಭ ಐದು ದಿನಕ್ಕೆ ವಿಸ್ತರಿಸಿಕೊಂಡಿದೆ. ಬಂಡವಾಳಶಾಹಿ ಮಾರುಕಟ್ಟೆ ಸಾಮಾನ್ಯ ಜನರ ದಿಕ್ಕು ತಪ್ಪಿಸಿದೆ. ಆಕರ್ಷಕ ವಸ್ತುಗಳ ಲಭ್ಯತೆಯು ಜನರನ್ನು ಇನ್ನಿಲ್ಲದ ಆಮಿಷಕ್ಕೆ ಒಡ್ಡುತ್ತಿದೆ. ಹೀಗಾಗಿ ಇಂದು ವರದಕ್ಷಿಣೆ ಪಡೆಯದಿದ್ದರೂ ಮದುವೆ ಮಾಡಿಕೊಡಲೆಂದೇ ಹೆಣ್ಣು ಹೆತ್ತವರು ಅಪಾರ ಹಣ ವ್ಯಯಿಸಬೇಕಾಗುತ್ತಿದೆ. ವರದಕ್ಷಿಣೆ ಪಿಡುಗನ್ನು ನಿವಾರಿಸಿಕೊಳ್ಳುವುದರೊಂದಿಗೆ ಸರಳ ಮದುವೆ, ಖರ್ಚು ರಹಿತ ಮದುವೆಗಳಿಗೂ ತರುಣ ಪೀಳಿಗೆ ಮುಂದಾಗಬೇಕಿದೆ. ಬಂಡವಾಳಶಾಹಿಗಳು ಹರಡಿದ ಮಾರುಕಟ್ಟೆ ಜಾಲಕ್ಕೆ ಬೀಳದಂತೆ ಎಚ್ಚರ ವಹಿಸಬೇಕಿದೆ. ನಮ್ಮ ಕುಟುಂಬಗಳ ಆರ್ಥಿಕತೆ ದಿವಾಳಿಯಾಗುವಲ್ಲಿ ಆದ್ದೂರಿ ಮದುವೆಗಳು ಪ್ರಧಾನ ಪಾತ್ರವಾಡುತ್ತಿವೆ ಎಂಬ ತಿಳುವಳಿಕೆಯನ್ನು ನವ ಪೀಳಿಗೆಗೆ ನೀಡಬೇಕಾಗಿದೆ. ಮದುವೆಗಳು ಮೌಲ್ಯಯುತವೂ ಆದರ್ಶವೂ ಆಗಿರಬೇಕೆ ವಿನಃ ಆದ್ದೂರಿಯೂ, ಪ್ರತಿಷ್ಠೆಯ ಸಂಗತಿಯೂ ಆಗಬೇಕಿಲ್ಲ.

Tags

DowrypropertyAlternative
share
ಡಾ. ಮೀನಾಕ್ಷಿ ಬಾಳಿ
ಡಾ. ಮೀನಾಕ್ಷಿ ಬಾಳಿ
Next Story
X