Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ಪುಸ್ತಕ ಸಾಂಗತ್ಯ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಅಂಕಣಗಳು
  4. ಬಯಲ ಬುತ್ತಿ
  5. ಮೂರ್ತಿಯನ್ನು ಮಾತ್ರ ಒಡೆಯಬಹುದು,...

ಮೂರ್ತಿಯನ್ನು ಮಾತ್ರ ಒಡೆಯಬಹುದು, ವಿಚಾರಗಳನ್ನಲ್ಲ

ಡಾ. ಮೀನಾಕ್ಷಿ ಬಾಳಿಡಾ. ಮೀನಾಕ್ಷಿ ಬಾಳಿ19 May 2026 10:55 AM IST
share
ಮೂರ್ತಿಯನ್ನು ಮಾತ್ರ ಒಡೆಯಬಹುದು, ವಿಚಾರಗಳನ್ನಲ್ಲ

ಸಮಾಜವಾದ ಹುಟ್ಟಿದ್ದು ಜರ್ಮನಿಯಲ್ಲಾದರೂ ಅದು ಮೊದಲು ಸಾಕಾರಗೊಂಡದ್ದು ರಶ್ಯದಲ್ಲಿ. ಅದನ್ನು ಆಗು ಮಾಡಿದ ಕ್ರಾಂತಿಕಾರಿಯೊಬ್ಬನ ಬಗೆಗೆ ಏನೇನೂ ತಿಳಿಯದ ಅವಿವೇಕಿಗಳು ಆತ ದುಡಿಯುವ ಜನತೆಯ ಪರವಾಗಿದ್ದ ಎಂಬ ಕಾರಣಕ್ಕಾಗಿಯೇ ದ್ವೇಷಿಸುವುದಾದರೆ ಅದರಿಂದ ಲೆನಿನ್‌ಗಾಗಲಿ, ಸಮಾಜವಾದಿ ತತ್ವಗಳಿಗಾಗಲಿ ಏನೂ ಹಾನಿಯಿಲ್ಲ. ಬುದ್ಧ, ಬಸವ, ಬಾಬಾಸಾಹೇಬರು ಹುಟ್ಟಿದ್ದ ನಾಡಿನಲ್ಲಿ ಅಂಥದ್ದೇ ತತ್ವಗಳೊಂದಿಗೆ ಬದುಕಿದ್ದ ಕ್ರಾಂತಿಕಾರಿಯೊಬ್ಬನನ್ನು ಅಪಮಾನಿಸುವುದೆಂದರೆ ಅದು ವಿಶ್ವದ ಸಮಸ್ತ ಸಮತಾವಾದಿಗಳನ್ನು ಅಗೌರವಿಸಿದಂತೆಯೇ ಸರಿ.

ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಆಡಳಿತದ ಚುಕ್ಕಾಣಿ ಹಿಡಿಯುತ್ತದೆ ಎಂದು ತಿಳಿದ ಕೂಡಲೇ ಆ ಪಕ್ಷದ ಬೆಂಬಲಿಗರು ಮೊದಲು ಮಾಡಿದ ಕೆಲಸವೆಂದರೆ; ಸಮಾಜವಾದಿ ಹೋರಾಟಗಾರನಾಗಿದ್ದ ಲೆನಿನ್‌ನ ಮೂರ್ತಿಯನ್ನು ಒಡೆದು ಹಾಕಿದ್ದು. ಅದರೊಟ್ಟಿಗೆ ಸೋತ ಪಕ್ಷಗಳ ಕಚೇರಿ ಧ್ವಂಸ, ಕಾರ್ಯಕರ್ತರ ಮೇಲೆ ಹಲ್ಲೆ, ದೊಂಬಿ, ಗಲಭೆ ಮುಂತಾಗಿ ನಡೆದದ್ದು ಬಿಜೆಪಿ ತನ್ನ ಮುಂದಿನ ಆಡಳಿತ ವೈಖರಿಯನ್ನು ಪರಿಚಯಿಸಿದೆ. ಪ್ರಾಯಶಃ ಹೀಗೆ ಮೂರ್ತಿ ಭಂಜಿಸಿದ ಅನೇಕರಿಗೆ ಅವರು ಯಾರು? ಏತಕ್ಕಾಗಿ ಅಂಥ ವ್ಯಕ್ತಿಗಳನ್ನು ಕಾಲ, ದೇಶಗಳಾಚೆ ಜನರು ತಮ್ಮ ಅಸ್ಮಿತೆಗಳನ್ನಾಗಿ ಗುರುತಿಸಿಕೊಂಡು ಬರುತ್ತಿದ್ದಾರೆ ಎಂಬ ಕಲ್ಪನೆಯೂ ಇರದು. ಅಲ್ಲಿ ಮೂರ್ತಿಯನ್ನು ಧ್ವಂಸ ಮಾಡಿದ ಬಹುತೇಕರಿಗೆ ತಾವೇಕೆ ಹೀಗೆ ಮಾಡುತ್ತಿದ್ದೇವೆ ಎಂಬ ಕನಿಷ್ಠ ಅರಿವೂ ಇರಲಾರದು. ಇವುಗಳನ್ನು ಒಡೆಯಬೇಕು, ನಾಶ ಪಡಿಸಬೇಕು ಎಂದು ಹೇಳಿದವರಿಗೂ ಆ ವ್ಯಕ್ತಿಗಳ ಪೂರ್ಣ ಪರಿಚಯವಿರದು. ಇಷ್ಟು ದಿವಸಗಳವರೆಗೆ ತಮ್ಮನ್ನು ಅಧಿಕಾರದ ಗದ್ದುಗೆಯಿಂದ ದೂರವಿಡಲು ಕಾರಣೀಕರ್ತರೇ ಈ ವಿಚಾರವಾದಿಗಳು ಎಂಬ ಬಾಲಿಶ ತಿಳುವಳಿಕೆಯಿಂದಲೇ ಅವರು ತಮ್ಮ ಅಂಧಭಕ್ತರನ್ನು ಒಡೆಯುವ ಕೆಲಸಕ್ಕೆ ಪ್ರಚೋದಿಸುತ್ತಾರೆ. ವಿಚಾರಗಳನ್ನು ಎದುರಿಸಲಾಗದ ಹತಾಶೆ ಸ್ಥಿತಿಯೊಂದು ಅವರನ್ನು ಭೂತವಾಗಿ ಕಾಡುತ್ತಲೇ ಇರುತ್ತದೆ. ಇಂದಲ್ಲ ನಾಳೆ ಈ ವಿಚಾರಗಳೇ ತಮ್ಮನ್ನು ಅಧಿಕಾರದಿಂದ ಕೆಳಗಿಳಿಸಲು ಯಶಸ್ವಿಯಾಗಬಲ್ಲವು ಎಂಬ ಅವ್ಯಕ್ತ ಭಯವೊಂದು ಅವರನ್ನು ಸದಾಕಾಲದಲ್ಲಿ ಕಾಡುತ್ತಿರುತ್ತದೆ.

ಕತ್ತಲೆಯು ಗಾಳಿ, ಮಳೆ, ಚಳಿ, ಬೆಂಕಿ ಮತ್ತು ಕಾಲ ಯಾವುದಕ್ಕೂ ಅಂಜುವುದಿಲ್ಲ. ಕೇವಲ ಬೆಳಕಿಗೆ ಮಾತ್ರ ಅಂಜುತ್ತದೆ. ಅಪರಿಮಿತದ ಕತ್ತಲೆಗೆ ಮಿಣುಕು ಬೆಳಕು ಸಾಕು ಓಡಿ ಹೋಗುತ್ತದೆ. ದೊಡ್ಡ ಕೋಣೆಯಲ್ಲಿನ ಕತ್ತಲೆ ಓಡಿಸಲು ಒಂದು ದೀಪ ಅಥವಾ ಒಂದೇ ಹ್ಯಾಲೊಜಿನ್ ಬಲ್ಬ್ ಸಾಕು. ಇನ್ನು ವಿಪರೀತ ಬೆಳಕು ಬೀರಿದರೆ ಕತ್ತಲೆಯ ನೆನಪು ಬರದಷ್ಟು ಅದು ದಿಕ್ಕಾಪಾಲಾಗಿ ಓಡುತ್ತದೆ. ಕೋಮುವಾದಿ ಕತ್ತಲೆಗೆ ವಿಚಾರದ ಬೆಳಕಿನ ಬಗೆಗೆ ಅನವರತ ಭಯವಿದೆ. ಭಾರತದ ಮಟ್ಟಿಗೆ ಮನುವಾದವನ್ನು ಅಂತರ್ಗತ ಮಾಡಿಕೊಂಡಿರುವ ಅಂತರ್‌ರಾಷ್ಟ್ರೀಯ ಮಟ್ಟದ ಸಾಮ್ರಾಜ್ಯಶಾಹಿಗೆ ಸರ್ವ ಸಮಾನತೆಯ ತತ್ವಗಳು ಎಂದಿಗೂ ಹಿಡಿಸವು. ಭೂಮಿಯ ಮೇಲಿನ ಎಲ್ಲ ಸಂಪತ್ತನ್ನು ಕೈವಶ ಮಾಡಿಕೊಳ್ಳಬೇಕೆಂಬ ದುರ್ಭಾವ, ಸಂಪತ್ತನ್ನು ಉತ್ಪಾದಿಸುವ ಕೈಗಳ ಮೇಲೂ ಪ್ರಶ್ನಾತೀತ ಒಡೆತನ ಹೊಂದಲು ಬಯಸುತ್ತದೆ. ಹೀಗಾಗಿಯೇ ಅದಕ್ಕೆ ದುಡಿಯುವ ಯಂತ್ರಗಳಾಗಿ, ಸ್ವಾಮಿನಿಷ್ಠ ಸೇವಕರಾಗಿ ಜನರು ಬೇಕು. ದುಡಿಯುವ ಕೈಗಳು ಯಾವತ್ತೂ ಯೋಚಿಸುವ ತಲೆಯಾಗಬಾರದು. ಪ್ರಶ್ನಿಸುವ ಛಾತಿಯನ್ನಂತೂ ಅವರು ತೋರಲೆಬಾರದು. ದುಡಿಯುವ ಜನರು ವಿಚಾರವಂತರಾದರೆ ಒಡೆಯರ ಅರ್ಥಾತ್ ಬಂಡವಾಳಿಗರ ಆಟ ನಡೆಯದು. ಆದ್ದರಿಂದಲೇ ಅವರು ದಮನ-ದಬ್ಬಾಳಿಕೆಯ ಮೂಲಕ ಇಲ್ಲವೇ ಮೌಢ್ಯ-ಕಂದಾಚಾರಗಳ ಮೂಲಕ ಜನತೆಯ ತಲೆ ಮತ್ತು ಕೈಗಳನ್ನು ಒತ್ತೆಯಿಟ್ಟುಕೊಳ್ಳಲು ಹವಣಿಸುತ್ತಾರೆ.

ವಿಚಾರದ ಸಣ್ಣ ಕಿರಣವನ್ನು ಸಹಿಸದ ಸಾಮ್ರಾಜ್ಯಶಾಹಿ ವ್ಯವಸ್ಥೆ ಜನತೆಯು ವೈಚಾರಿಕ ಪ್ರಜ್ಞೆ ಬೆಳೆಸಿಕೊಳ್ಳದಂತೆ ಭಾವನಾತ್ಮಕ ತಡೆಗೋಡೆಯೊಂದನ್ನು ನಿರ್ಮಿಸುತ್ತದೆ. ಅದಕ್ಕೆ ದೈವಭಕ್ತಿ, ರಾಷ್ಟ್ರಪ್ರೇಮ, ಭಾಷಾಭಿಮಾನ, ಧರ್ಮ ಪಾಲನೆಯಂಥ ಆಕರ್ಷಕ ಹೆಸರನ್ನು ಇಡುತ್ತದೆ. ಅದರ ಫಲವೇ ಲೆನಿನ್ ಮೂರ್ತಿ ಕೆಡವಿದಾಗ ನೆಟ್ಟಿಗರು ‘‘ವಿದೇಶದ ವ್ಯಕ್ತಿಗೆ ಭಾರತದಲ್ಲಿ ಏನು ಕೆಲಸ?’’, ‘‘ವಿದೇಶಿ ವ್ಯಕ್ತಿಗಳ ಮೂರ್ತಿ ನಮ್ಮ ದೇಶದಲ್ಲಿ ಏಕೆ ಸ್ಥಾಪಿಸಬೇಕು?’’, ‘‘ಅಸಂಖ್ಯ ಮಹಾನುಭಾವರು ನಮ್ಮಲ್ಲಿ ಇರುವಾಗ ಹೊರಗಿನವರು ಏಕೆ ಬೇಕು?’’ ಎಂದು ಟ್ರೋಲ್ ಮಾಡಿದ್ದೇ ಮಾಡಿದ್ದು. ಇದು ಅವರ ‘ಪವಿತ್ರ ರಾಷ್ಟ್ರಪ್ರೇಮ’ದ ನಮೂನೆ. ಇದೇ ಜನರು ವಿದೇಶಗಳಲ್ಲಿ ರಾಮ, ಕೃಷ್ಣರ ಮಂದಿರಗಳು ಕಟ್ಟಿಸಿದಾಗ ರೋಮಾಂಚಿತರಾಗುತ್ತಾರೆ. ವಿದೇಶಿಯರು ಬಂದು ನಮ್ಮ ದೇವಸ್ಥಾನಗಳಲ್ಲಿ ಕೈ ಮುಗಿದು ನಿಂತಾಗ ಇಲ್ಲವೇ ನಮ್ಮ ದೇವ ಮಾನವರ ಶಿಷ್ಯತ್ವ ಸ್ವೀಕರಿಸಿದಾಗ ದಿವ್ಯತೆಯನ್ನು ಅನುಭವಿಸುತ್ತಾರೆ.

ಮಹಾತ್ಮಾ ಗಾಂಧೀಜಿಯವರ ಪುತ್ಥಳಿಯನ್ನು ಜಗತ್ತಿನಾದ್ಯಂತ 70ಕ್ಕೂ ಹೆಚ್ಚು ದೇಶಗಳಲ್ಲಿ ಸ್ಥಾಪಿಸಲಾಗಿದೆ. ನ್ಯೂಯಾರ್ಕ್‌ನ ಯೂನಿಯನ್ ಸ್ಕ್ವೇರ್ ಪಾರ್ಕ್‌ನಲ್ಲಿ, ವಾಶಿಂಗ್ಟನ್ ಡಿಸಿಯಲ್ಲಿ, ಕ್ಯಾಲಿಫೋರ್ನಿಯಾದ ಲೆಕ್ ಶ್ರೈನಿಯಲ್ಲಿ ಗಾಂಧೀಜಿಯವರ ಚಿತಾಭಸ್ಮ ಸ್ಮಾರಕ ಮೂರ್ತಿ ಸ್ಥಾಪಿಸಲಾಗಿದೆ. ಲಂಡನ್‌ಪಾರ್ಲಿಮೆಂಟ್ ಮತ್ತು ಟ್ಯಾವಿಸ್ಟಾಕ್ ಸ್ಕ್ವೇರ್‌ಗಳಲ್ಲಿ ಗಾಂಧೀಜಿಯವರ ಮೂರ್ತಿ ಇದೆ. ದಕ್ಷಿಣ ಆಫ್ರಿಕಾದ ಜೋಹಾನ್ಸ್‌ಬರ್ಗ್, ಪೀಟರ್ ಮ್ಯಾರಿಟ್ಜ್ ಬರ್ಗ್, ಆಸ್ಟ್ರೇಲಿಯದ ಕ್ಯಾನ್ಬೆರಾ, ಸಿಡ್ನಿ, ಬ್ರಿಸ್ಬೆನ್, ಸ್ವಿಟ್ಸರ್‌ಲ್ಯಾಂಡ್, ಡೆನ್ಮಾರ್ಕ್, ಆಸ್ಟ್ರಿಯಾ, ಅರ್ಜೆಂಟಿನಾ, ಉಗಾಂಡಾ, ದಕ್ಷಿಣ ಕೊರಿಯಾ ಮುಂತಾದ ದೇಶಗಳಲ್ಲಿ ಬಾಪುವಿನ ಪುತ್ಥಳಿ ಸ್ಥಾಪಿಸಲಾಗಿದೆ. ಅದರಂತೆ ಬಾಬಾಸಾಹೇಬ ಅಂಬೇಡ್ಕರ್ ಅವರ ಪ್ರತಿಮೆಯನ್ನು ಅಮೆರಿಕ, ಇಂಗ್ಲೆಂಡ್, ಜಪಾನ್, ಆಸ್ಟ್ರೇಲಿಯ, ಕೆನಡಾ, ಹಂಗೇರಿ, ಅಝರ್‌ಬೈಜಾನ್, ಮಾರಿಷಸ್, ಥಾಯ್ಲೆಂಡ್, ವಿಯಟ್ನಾಂ ಮುಂತಾದೆಡೆಯಲ್ಲಿ ಸ್ಥಾಪಿಸಲಾಗಿದೆ. ಇನ್ನೂ ಕೆಲವು ವಿದೇಶಗಳಲ್ಲಿ ವಿವೇಕಾನಂದರ ಸ್ಮಾರಕಗಳನ್ನು ನಿರ್ಮಿಸಲಾಗಿದೆ. ಅವರಲ್ಲಿಯೂ ಸರಕಾರಗಳು ಬದಲಾಗುತ್ತಲೇ ಇರುತ್ತವೆ. ಆ ದೇಶಗಳಲ್ಲಿ ಹೀಗೆ ಸರಕಾರ ಬದಲಾದಂತೆ ಮೂರ್ತಿ ಭಂಜಿಸಿದ ಉದಾಹರಣೆಗಳಿಲ್ಲ. ಭಾರತದಲ್ಲಿ ಮಾತ್ರ ಇತ್ತೀಚೆಗೆ ತಾನು ನಂಬದ ವಿಚಾರಧಾರೆಗಳಿಗಾಗಿ ಜಡ ಮೂರ್ತಿಗಳನ್ನು ಧ್ವಂಸ ಮಾಡುವ ಕುಕೃತ್ಯ ರಾಜಕೀಯ ಪಿಡುಗಾಗಿ ಪರಿಣಮಿಸುತ್ತಿದೆ. ಅಂತರ್‌ರಾಷ್ಟ್ರ ಮಟ್ಟದಲ್ಲಿ ಭಾರತದ ಸಭ್ಯತೆ, ಸಂಸ್ಕೃತಿಯನ್ನು ಇಂತಹ ಕೃತ್ಯಗಳು ಹರಾಜಿಗೆ ಹಾಕುತ್ತಿವೆ.

ಲೆನಿನ್ ಎಂಬ ವ್ಯಕ್ತಿಯು 22ನೇ ಎಪ್ರಿಲ್ 1870ರಲ್ಲಿ ರಶ್ಯದ ಸಿಂಬಿರ್ಸ್ಕ್ ಎಂಬಲ್ಲಿ ಜನಿಸಿದ ಕ್ರಾಂತಿಕಾರಿ ಹೋರಾಟಗಾರ. ಈತನ ಪೂರ್ಣ ಹೆಸರು ವ್ಲಾದಿಮಿರ್ ಇಲ್ಯಿಚ್ ಉಲ್ಯಾನೋವ್. ಸುಶಿಕ್ಷಿತ ಮಧ್ಯಮ ವರ್ಗದಲ್ಲಿ ಜನಿಸಿದ ಈತ ಚಿಕ್ಕಂದಿನಿಂದಲೂ ಕ್ರಾಂತಿಕಾರಕ ತತ್ವಗಳಿಂದ ಆಕರ್ಷಿತನಾಗಿದ್ದ. ಅಂದಿಗೆ ರಶ್ಯದಲ್ಲಿ ತ್ಸಾರ್ ಶಾಹಿ ಅಂದರೆ ಕ್ರೂರ ಜಮೀನ್ದಾರಿ ವ್ಯವಸ್ಥೆಯು ಉಚ್ಛ್ರಾಯ ಸ್ಥಿತಿಯಲ್ಲಿದ್ದಿತು. ಕೃಷಿ ಕೂಲಿ ಕಾರ್ಮಿಕರು ತ್ಸಾರ್ ರಾಜಶಾಹಿ ದಬ್ಬಾಳಿಕೆಯಲ್ಲಿ ನಲುಗಿ ಹೋಗಿದ್ದರು. ದಮನಕಾರಿ ತ್ಸಾರ್ ದೊರೆಗಳ ವಿರುದ್ಧ ಜನರು ತಿರುಗಿ ಬಿದ್ದರು. ತ್ಸಾರ್ ರಾಜನ ಹತ್ಯೆಗೆ ಸಂಚು ಹೂಡಿದ ಆರೋಪದ ಮೇಲೆ ಲೆನಿನ್ ಅಣ್ಣ ಅಲೆಕ್ಸಾಂಡರ್ ಉಲಿಯಾನೋವ್ ಗಲ್ಲು ಶಿಕ್ಷೆಗೆ ಒಳಗಾದನು. ಇದು ಲೆನಿನ್ ಮೇಲೆ ಅಗಾಧ ಪರಿಣಾಮ ಬೀರಿತು. ಅಷ್ಟರಲ್ಲಿ ವಿಶ್ವದೆಲ್ಲೆಡೆ ಮಾರ್ಕ್ಸ್‌ವಾದಿ ಸಿದ್ಧಾಂತಗಳು ಕಾಡ್ಗಿಚ್ಚಿನಂತೆ ಹಬ್ಬತೊಡಗಿದ್ದವು. ‘‘ವಿಶ್ವದ ಕಾರ್ಮಿ ಕರೇ ಒಂದಾಗಿ ನಿಮ್ಮಲ್ಲಿ ಕಳೆದು ಕೊಳ್ಳಲು ಏನೂ ಇಲ್ಲ. ಕಳೆದು ಕೊಳ್ಳುವುದಾದರೆ ನಿಮ್ಮನ್ನು ಬಂಧಿಸಿದ ದಾಸ್ಯದ ಸಂಕೋಲೆಗಳನ್ನು ಮಾತ್ರ’’ ಎಂಬ ಘೋಷಣೆಗಳು ಕ್ರಾಂತಿಕಾರಿ ಲೆನಿನ್ ಅವರನ್ನು ತೀವ್ರವಾಗಿ ಪ್ರಭಾವಿಸಿದವು. ಈಗಾಗಲೇ ರಶ್ಯದಲ್ಲಿ ನಡೆಯುತ್ತಿದ್ದ ಕಾರ್ಮಿಕರ ಹೋರಾಟಗಳಲ್ಲಿ ನುಗ್ಗಿದ ಕಾರಣಕ್ಕಾಗಿಯೇ ಈತ ಬಂಧನಕ್ಕೆ ಸಿಲುಕಿ ಸೈಬೀರಿಯಾಕ್ಕೆ ಗಡೀಪಾರು ಮಾಡಲ್ಪಟ್ಟಿದ್ದ. ರಶ್ಯದ ಪೊಲೀಸರಿಂದ ತಪ್ಪಿಸಿಕೊಳ್ಳಲೆಂದೇ ವ್ಲಾದಿಮಿರ್ ಇಲ್ಯಿಚ್ ತನ್ನ ಹೆಸರನ್ನು ಲೆನಿನ್ ಎಂದು ಬದಲಾಯಿಸಿಕೊಂಡನು. ಮುಂದೆ ಇದೇ ಹೆಸರಿನಿಂದ ಆತ ಪ್ರಸಿದ್ಧಿಗೆ ಬಂದನು. ಮೊದಲನೇ ಮಹಾಯುದ್ಧದ ಸಮಯದಲ್ಲಿ ರಾಜಕೀಯ ಅಸ್ಥಿರತೆಯ ಲಾಭ ಪಡೆದುಕೊಂಡು ಸೈಬೀರಿಯದಿಂದ ರಶ್ಯಕ್ಕೆ ಮರಳಿ ಅಲ್ಲಿ ಬೋಲ್ಸೆವಿಕ್ ಎಂಬ ಶ್ರಮಿಕ ಮತ್ತು ರೈತರ ಪಕ್ಷವೊಂದನ್ನು ಕಟ್ಟಿ ಹೋರಾಟದ ಮೂಲಕ ತ್ಸಾರ್ ಶಾಹಿಯನ್ನು ಉರುಳಿಸಿ ಸಮಾಜವಾದಿ ಸರಕಾರವನ್ನು ಸ್ಥಾಪಿಸಿದನು. ಇದುವೇ ಬೋಲ್ಷೆವಿಕ್ ಕ್ರಾಂತಿ ಅಥವಾ ಅಕ್ಟೋಬರ್ ಕ್ರಾಂತಿಯೆಂದು ಹೆಸರಾಗಿದೆ. ಮಾರ್ಕ್ಸ್‌ವಾದವನ್ನು ತನ್ನ ದೇಶಕ್ಕೆ ಒಗ್ಗುವಂತೆ ಪುನರ್‌ರೂಪಿಸಿಕೊಂಡು ಜನರನ್ನು ಕ್ರಾಂತಿ ಪಥದತ್ತ ನಡೆಸಿಕೊಂಡು ಬಂದು ಜಗತ್ತಿನಲ್ಲಿಯೇ ಮೊದಲ ಕಮ್ಯುನಿಸ್ಟ್ ಸರಕಾರವನ್ನು ಸ್ಥಾಪಿಸಿದನು. ಬೋಲ್ಸೆವಿಕ್ ಪಕ್ಷವು ತನ್ನ ಪ್ರಣಾಳಿಕೆಯಲ್ಲಿ ಜನರಿಗೆ ಮುಖ್ಯವಾದ ಮೂರು ಭರವಸೆಗಳನ್ನು ನೀಡಿತು. ‘ಶಾಂತಿ, ಭೂಮಿ ಮತ್ತು ರೊಟ್ಟಿ’ ಅಂದರೆ ಯುದ್ಧವನ್ನು ನಿಲ್ಲಿಸುವುದು. ಕೆಲವೇ ಜನರಲ್ಲಿ ಕೇಂದ್ರೀಕೃತವಾಗಿರುವ ಭೂಮಿಯನ್ನು ಭೂ ಹೀನರಿಗೆ ಹಂಚುವುದು ಹಾಗೂ ದೇಶವನ್ನು ಹಸಿವು ಮುಕ್ತ ಮಾಡುವುದು. ತನ್ನ ಜೀವಿತಾವಧಿಯಲ್ಲಿ ಲೆನಿನ್ ಈ ಮೂರು ಷರತ್ತುಗಳನ್ನು ಪೂರೈಸಿದ್ದನು.

ಸೋತ ರಾಜ್ಯಶಾಹಿಗೆ ಹಾಗೂ ಅವರೊಟ್ಟಿಗೆ ಸಹಕರಿಸಿದ ಜಮೀನ್ದಾರರಿಗೆ ಇದು ನುಂಗಲಾರದ ತುತ್ತಾಗಿತ್ತು. ಹೀಗಾಗಿ ಲೆನಿನ್‌ನ ಆಡಳಿತವು ಹಲವು ಅಂತರ್ಯುದ್ಧಗಳನ್ನು ಎದುರಿಸಬೇಕಾಯಿತು. ರಾಜಪ್ರಭುತ್ವದಿಂದ ಸಮಾಜವಾದಿ ಸಿದ್ಧಾಂತದತ್ತ ಹೊರಳಿಕೊಳ್ಳಲು ಜನತೆಗೆ ಕಷ್ಟವೆನಿಸಿತ್ತು. ಸಮತಾವಾದಿ ತತ್ವಗಳ ಅಕ್ಷರಶಃ ಪಾಲನೆ ಅಷ್ಟು ಸುಲಭವಲ್ಲ. ಲೆನಿನ್ ಅಧಿಕಾರ ವಹಿಸಿಕೊಂಡ ಹೊಸತರಲ್ಲಿ ವಿಶಾಲವಾದ ಸೋವಿಯತ್ ಯೂನಿಯನ್ ಕ್ಷಾಮ-ಡಾಮರಗಳಿಗೆ ತುತ್ತಾಯಿತು. ತನ್ನ ದೇಶದ ಹಸಿವನ್ನು ನೀಗಿಸಲು ಲೆನಿನ್ ತಕ್ಷಣ ಆರ್ಥಿಕ ನೀತಿಯಲ್ಲಿ ಸುಧಾರಣೆಗಳನ್ನು ತಂದನು.

ಮಾರ್ಕ್ಸ್‌ವಾದ ಎಂಬುದು ಆನ್ವಯಿಕ ಸಾಮಾಜಿಕ ವಿಜ್ಞಾನ. ಪ್ರತಿಯೊಂದು ಜನಾಂಗವು ತನ್ನ ಕಾಲ ಮತ್ತು ದೇಶಕ್ಕೆ ತಕ್ಕಂತೆ ಸಮಾಜೋ ಆರ್ಥಿಕ ನೀತಿಗಳನ್ನು ರೂಪಿಸಿಕೊಳ್ಳಬೇಕು. ಮಾರ್ಕ್ಸ್ ವಾದ ಎಂದರೆ ಸಿದ್ಧ ಮಾದರಿಯ ನಿಶ್ಚಿತ ತತ್ವವಲ್ಲ. ಅದು ಆಗುತ್ತಲೇ ಇರುವ, ಕಾಲಕಾಲಕ್ಕೂ ತನಗೆ ಒಗ್ಗುವ ತತ್ವಗಳನ್ನು ಕಟ್ಟಿಕೊಳ್ಳುತ್ತಲೇ ಹೋಗಬೇಕಾದ ಪ್ರಕ್ರಿಯೆ ಎಂಬುದನ್ನು ಮನಗಂಡ ಲೆನಿನ್ ರಶ್ಯಕ್ಕೆ ತಕ್ಷಣಕ್ಕೆ ಒಗ್ಗುವ ಹೊಸ ಆರ್ಥಿಕ ನೀತಿಯನ್ನು ಜಾರಿಗೆ ತಂದನು. ಇದನ್ನು ‘ಲೆನಿನಿಸಂ’ ಎಂದು ಗುರುತಿಸಲಾಗುವುದು. ಆತನ ಈ ಪ್ರಯೋಗದಿಂದಾಗಿ ದೇಶ ಅನತಿ ಕಾಲದಲ್ಲಿಯೇ ಸುಭಿಕ್ಷವಾಯಿತು. ಆಹಾರ ಉತ್ಪಾದನೆಯಲ್ಲಿ, ತಂತ್ರಜ್ಞಾನದ ಬೆಳವಣಿಗೆಯಲ್ಲಿ ವಿಕ್ರಾಂತ ಸಾಧನೆ ಮಾಡಿತು. ವಿಶ್ವದಲ್ಲಿಯೇ ಸೂಪರ್ ಶಕ್ತಿಯಾಗಿ ಹೊರಹೊಮ್ಮಿತ್ತು.

ಲೆನಿನ್ ಎಲ್ಲಿಯೂ ಹಿಂಸೆಗೆ ಪ್ರಚೋದಿಸಲಿಲ್ಲ. ಕಾರ್ಮಿಕರು, ರೈತರು ತಮ್ಮ ರಕ್ಷಣೆಗಾಗಿ ಮಾಡಿದ ಹೋರಾಟವನ್ನು ಸಾಮ್ರಾಜ್ಯಶಾಹಿ ತಿರುಚಿ ಸಾದರ ಪಡಿಸಿತ್ತು. ಮಾಕ್‌ರ್ಸ್ವಾದವು ಸಿದ್ಧಾಂತವಾದರೆ ಲೆನಿನಿಸಂ ಅದರ ಅನುಷ್ಠಾನವೆಂದು ಪರಿಗಣಿಸಲಾಯಿತು. ಜಗತ್ತಿನಾದ್ಯಂತ ದುಡಿಯುವ ವರ್ಗ ತನ್ನ ಪ್ರಜ್ಞೆ ಎತ್ತರಿಸಿಕೊಳ್ಳುವ ಮೂಲಕವೇ ಸಮಾನತೆಯತ್ತ ಹೆಜ್ಜೆ ಇಡಬಹುದೆಂದು ಲೆನಿನ್ ತೋರಿಸಿಕೊಟ್ಟನು. ಇಂದು ಜಗತ್ತಿನಾದ್ಯಂತ ಕಾರ್ಮಿಕ, ರೈತ ಅಥವಾ ದುಡಿಯುವ ಜನತೆ ಪರ ದೃಷ್ಟಿ- ಧೋರಣೆ ಕಾಣಿಸಿಕೊಂಡಿದ್ದರೆ ಅದಕ್ಕೆ ಲೆನಿನ್ ಮಾಡಿದ ಪ್ರಯೋಗಗಳು ದೊಡ್ಡ ದೇಣಿಗೆ ನೀಡಿವೆ. ಆದ್ದರಿಂದಲೇ ಲೆನಿನ್ ಅವರನ್ನು ಮಾರ್ಕ್ಸ್ ನಂತರದ ಶ್ರೇಷ್ಠ ಕ್ರಾಂತಿ ಕಾರಿ ಚಿಂತಕ ಎಂದು ಪರಿಗಣಿಸಲಾಗುತ್ತದೆ. ಮಾರ್ಕ್ಸ್ ವಾದವನ್ನು ಪ್ರಾಯೋಗಿಕಗೊಳಿಸಿದ ಕ್ರಾಂತಿಕಾರಿ ಎಂದೇ ಗುರುತಿಸಲ್ಪಡುವ ಲೆನಿನ್ 1918ರಲ್ಲಿ ದುಷ್ಕರ್ಮಿಗಳಿಂದ ದಾಳಿಗೆ ತುತ್ತಾದರೂ ಸಾವಿನ ದವಡೆಯಿಂದ ಪಾರಾದನು. 1922ರಲ್ಲಿ ಪಾರ್ಶ್ವವಾಯುವಿಗೆ ತುತ್ತಾಗಿ 1924ರಲ್ಲಿ ಮರಣಿಸಿದ. ಲೆನಿನ್ ಕೇವಲ ಹೋರಾಟಗಾರ ಮಾತ್ರವಲ್ಲ ಆತನೊಬ್ಬ ಸೋಪಜ್ಞತೆಯುಳ್ಳ ಲೇಖಕನೂ ಆಗಿದ್ದ. ‘ಏನು ಮಾಡಬೇಕು?’ (‘what is to Be Done’), ‘ಸಾಮ್ರಾಜ್ಯಶಾಹಿ: ಬಂಡವಾಳಶಾಹಿಯ ಅತ್ಯುನ್ನತ ಹಂತ’ (‘Imperialism, the Highest Stage Of Capitalism’), ‘ರಶ್ಯದಲ್ಲಿ ಬಂಡವಾಳಶಾಹಿಯ ಅಭಿವೃದ್ಧಿ’ (‘The Development of Capitalism In Russia’) ಇವು ಆತನ ಪ್ರಮುಖ ಕೃತಿಗಳು. ಬೃಹತ್ ಬಂಡವಾಳಶಾಹಿ ಸ್ವರೂಪ ಮತ್ತು ಲಕ್ಷಣಗಳನ್ನು ಕರಾರುವಕ್ಕಾಗಿ ಗ್ರಹಿಸಿದ್ದ ಲೆನಿನ್ ದುಡಿಯುವ ವರ್ಗವೇ ಸಮಾಜವಾದಿ ಸಿದ್ಧಾಂತದ ನೆಲೆಗಟ್ಟು ಎಂಬುದನ್ನು ಎತ್ತಿ ತೋರಿಸಿದ್ದನು. ಕಾರ್ಮಿಕ ಮತ್ತು ರೈತರು ಒಗ್ಗೂಡಿದಾಗಲೇ ಸಮಗ್ರ ಕ್ರಾಂತಿ ಘಟಿಸುತ್ತದೆ ಎಂದು ಅವನು ಹೇಳಿದ ಮಾತಿಗಾಗಿ ಜಗತ್ತು ಇವತ್ತಿಗೂ ಕಾಯುತ್ತಿದೆ. ಆ ಕಾಲ ಸನ್ನಿಹಿತವೂ ಆಗಿದೆ. ಲೆನಿನ್ ವ್ಯಕ್ತಿತ್ವವನ್ನು ಕುರಿತು ಕವಿ ಕುವೆಂಪು:

‘‘ಧಮನಿಯಲಿ ಬಿಸಿ ನೆತ್ತರುಕ್ಕದೆ ನೆನೆಯಲಾರೆ

ನಿನ್ನಂ ಲೆನಿನ್! ನಿನ್ನ ಹೆಸರದು ಸಿಡಿಲ್ ಸದ್ದು

ದೊರೆಗಿವಿಗೆ: ನಿನ್ನ ಸಮತಾ ಬೋಧೆ ಸಿಡಿಮದ್ದು

ನರನ ಸಂಗ್ರಹ ಬುದ್ಧಿ ಸ್ವಾರ್ಥತೆಯನುರಿದೋರೆ

ದಹಿಸಿ, ನಿಃಸ್ವಾರ್ಥತೆಯ ಬೆಂಕಿಯಿಂ ಹೃತ್ಕುಂಡ

ಸರ್ವದಾ ಪ್ರಜ್ವಲಿಸುವಂತೆನಗೆ, ಜಮದಗ್ನಿ

ದುಡಿವ ದೀನನ ದೈವವನ್ಯರ್ಗೆ ಯಮದಂಡ!

ಗೆಯ್ದವರ್ಗೇನಿಲ್ಲ, ಕುಳಿತುಂಬರಿಗೆ ಬೆಲ್ಲ;

ಮುಳ್ಳುನೋವಾಳಿಂಗೆ, ಕಂಪು ಹೂ ಒಡೆಯಂಗೆ

ಗೋವಳಗೆ, ಸೊಂಪಿವಗೆ, ಈ ತರತಮವನೆಲ್ಲ

ಮುರಿಯೆ ಬಹನಲ್ಲಲ್ಲಿ ಕಲ್ಕಿ. ರಕ್ತದ ಗಂಗೆ

ಸಿರಿನಾಳದಿಂ ಮರಳಿ ಬಡತನದೊಣಗು ಮೈಗೆ

ಹರಿದಿಕ್ಕೆ ದೊರೆಗಳಸಿ ಕೂಲಿ ರೈತರ ಕೈಗೆ !’’

ಎಂದು ಬರೆದಿದ್ದಾರೆ. ಲೆನಿನ್ ದುಡಿವ ದೀನರಿಗೆ ದೈವದಂತೆ ಕಂಡು ಬಂದರೆ ಕುಳಿತು ತಿನ್ನುವವರಿಗೆ ಯಮಪಾಶವಾಗಿದ್ದನಂತೆ. ಸಮಾಜದಲ್ಲಿನ ತಾರತಮ್ಯವನ್ನು ತೊಡೆಯಲೆಂದು ಕಲ್ಕಿ ಅವತಾರ ತೊಟ್ಟು ಬಂದಂತಿದೆ ಎಂದು ಹೇಳಿದ ಮಾತಂತೂ ಲೆನಿನ್‌ಗೆ ಸಂದ ಅತ್ಯುನ್ನತ ಗೌರವವಾಗಿದೆ. ಕುವೆಂಪು ಈಗ ಬದುಕಿದ್ದರೆ ಕೋಮುವಾದಿಗಳ ಹುಚ್ಚಾಟ ಕಂಡು ಅದೆಷ್ಟು ಸಂಕಟ ಪಡುತ್ತಿದ್ದರೊ?

ಸಮಾಜವಾದ ಹುಟ್ಟಿದ್ದು ಜರ್ಮನಿಯಲ್ಲಾದರೂ ಅದು ಮೊದಲು ಸಾಕಾರಗೊಂಡದ್ದು ರಶ್ಯದಲ್ಲಿ. ಅದನ್ನು ಆಗು ಮಾಡಿದ ಕ್ರಾಂತಿಕಾರಿಯೊಬ್ಬನ ಬಗೆಗೆ ಏನೇನೂ ತಿಳಿಯದ ಅವಿವೇಕಿಗಳು ಆತ ದುಡಿಯುವ ಜನತೆಯ ಪರವಾಗಿದ್ದ ಎಂಬ ಕಾರಣಕ್ಕಾಗಿಯೇ ದ್ವೇಷಿಸುವುದಾದರೆ ಅದರಿಂದ ಲೆನಿನ್‌ಗಾಗಲಿ, ಸಮಾಜವಾದಿ ತತ್ವಗಳಿಗಾಗಲಿ ಏನೂ ಹಾನಿಯಿಲ್ಲ. ಬುದ್ಧ, ಬಸವ, ಬಾಬಾಸಾಹೇಬರು ಹುಟ್ಟಿದ್ದ ನಾಡಿನಲ್ಲಿ ಅಂಥದ್ದೇ ತತ್ವಗಳೊಂದಿಗೆ ಬದುಕಿದ್ದ ಕ್ರಾಂತಿಕಾರಿಯೊಬ್ಬನನ್ನು ಅಪಮಾನಿಸುವುದೆಂದರೆ ಅದು ವಿಶ್ವದ ಸಮಸ್ತ ಸಮತಾವಾದಿಗಳನ್ನು ಅಗೌರವಿಸಿದಂತೆಯೇ ಸರಿ. ಅವರು ಕಲ್ಲಿನ ಮೂರ್ತಿ ಒಡೆಯಬಹುದು. ಎಂತಿದ್ದರೂ ಅದು ಸ್ಥಾವರ. ಆದರೆ ಲೆನಿನಿಸಂ ವಿಚಾರಗಳನ್ನು ಒಡೆಯಲಾರರು. ಕಾರಣ ಅದು ಜಂಗಮ. ಸ್ಥಾವರಕ್ಕಳಿವುಂಟು; ಜಂಗಮಕ್ಕಳಿವಿಲ್ಲ.

Tags

statue
share
ಡಾ. ಮೀನಾಕ್ಷಿ ಬಾಳಿ
ಡಾ. ಮೀನಾಕ್ಷಿ ಬಾಳಿ
Next Story
X