Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಅಂಕಣಗಳು
  4. ಬಯಲ ಬುತ್ತಿ
  5. ತತ್ವಪದಗಳ ಜಾತ್ರಾ ಝೇಂಕಾರ

ತತ್ವಪದಗಳ ಜಾತ್ರಾ ಝೇಂಕಾರ

ಡಾ. ಮೀನಾಕ್ಷಿ ಬಾಳಿಡಾ. ಮೀನಾಕ್ಷಿ ಬಾಳಿ18 Nov 2025 11:00 AM IST
share
ತತ್ವಪದಗಳ ಜಾತ್ರಾ ಝೇಂಕಾರ

ಚಿಣಗೇರಿ ಜಾತ್ರೆಗಿಂತ ಒಂದು ವಾರ ಮೊದಲು ಮಡಿವಾಳಪ್ಪನವರ ಜನ್ಮಸ್ಥಳವಾದ ಬಿದನೂರಿನಲ್ಲಿ ತತ್ವಪದಗಳ ಅನುಸಂಧಾನ ನಡೆಸುತ್ತಾರೆ. ಹುಣ್ಣಿಮೆಯಂದು ಚಿಣಮಗೇರಿ ಮಠದಲ್ಲಿ ಜಾತ್ರೆ ನಡೆದು ಆನಂತರ ಕಡಕೋಳದಲ್ಲಿ ನಡೆಯುತ್ತದೆ. ಈ ನಡುವೆ ಸಿದ್ಧಪ್ಪನವರ ಸಮಾಧಿ ಸ್ಥಳವಾದ ಕಡ್ಲೆವಾಡದಲ್ಲಿ ಜಲಾಲಸಾಹೇಬರ ಗದ್ದುಗೆ ಸ್ಥಾನ ಚೆನ್ನೂರಿನಲ್ಲಿಯೂ ತತ್ವಪದಗಳ ಜಾತ್ರೆ ನಡೆಯುತ್ತವೆ. ಎಲ್ಲ ಕಡೆ ಸಜ್ಜಿ ಖಜ್ಜಾ ಭಜ್ಜಿ ಮಾತ್ರ ಇರುತ್ತದೆ. ನಂತರ ಪದ ಪರಿಷೆ.

ಶಿವನಾಮವನು ನುಡಿಯದ ಬಾಯಿ ಬಚ್ಚಲ ಕುಳಿಯಂತೆ

ಶಿವನಾಮವನು ಜಪಿಸದ ಮನುಷ್ಯ ಯಾತಕೆ ಬರದಂತೆ ॥

ಇದು ಕಲ್ಯಾಣ ಕರ್ನಾಟಕದಲ್ಲಿ ಉದ್ದಕ್ಕೂ ಹಾಡಿಕೊಂಡು ಬರುತ್ತಿರುವ ತತ್ವಪದವೊಂದರ ಪಲ್ಲವಿ. ತತ್ವಪದಗಳ ಭಜನೆ ಸಂಘಗಳು ಇರದ ಹಳ್ಳಿಗಳೇ ಇಲ್ಲವೆಂದರೆ ತಪ್ಪಾಗದು. ಶಿವಭಜನೆ ಇಲ್ಲಿನವರ ಸಾಂಸ್ಕೃತಿಕ ಚಹರೆಯೇ ಆಗಿದೆ. ಮುಂಗಾರಿನ ಹಂಗಾಮು ಮುಗಿದು ಹಿಂಗಾರು ಸುರುವಾದೊಡನೆ ನಮ್ಮಲ್ಲಿ ಜಾತ್ರೆಗಳ ಸುಗ್ಗಿಯೇ ನಡೆಯುತ್ತದೆ. ನವೆಂಬರ್ ಮೊದಲ ವಾರದಿಂದ ಜಾತ್ರೆಗಳ ಮೊದಲ ಕಂತು ಪ್ರಾರಂಭವಾದರೆ, ಸುಗ್ಗಿಯೆಲ್ಲಾ ಮುಗಿದು ಯುಗಾದಿಯ ಬಿಸಿಲಲ್ಲಿ ಜಾತ್ರೆಗಳ ಎರಡನೇ ಕಂತು ಶುರುವಿಟ್ಟುಕೊಳ್ಳುತ್ತದೆ. ಎರಡನೇ ಕಂತಿನಲ್ಲಿ ಗ್ರಾಮ ದೇವರುಗಳ ಜಾತ್ರೆ ನಡೆದರೆ ಮೊದಲ ಕಂತಿನಲ್ಲಿ ಸಂತ, ಶರಣರ ಗುರುಗದ್ದುಗೆಗಳಲ್ಲಿ ತತ್ವಪದಗಳ ಪರಿಷೆ ಅಣಿನೆರೆಯುತ್ತದೆ.

ತತ್ವಪದಗಳ ಜಾತ್ರೆಯ ವೈಶಿಷ್ಟ್ಯವೇ ಬೇರೆ. ಅದರಲ್ಲಿಯೂ ಉತ್ತರ ಕರ್ನಾಟಕದ ಮನೆಮಾತಾಗಿರುವ ಕಡಕೋಳ ಮಡಿವಾಳಪ್ಪ ಮತ್ತು ಅವರ ಶಿಷ್ಯ ಪರಂಪರೆಯ ಜಾತ್ರೆಗಳನ್ನು ಖಜ್ಜಾ ಭಜ್ಜಿ ಜಾತ್ರೆಗಳೆಂದು ಕರೆಯುವುದಿದೆ.

‘‘ಜ್ಞಾನಪೂರ್ಣಂ ಜಗಂಜ್ಯೋತಿ| ನಿರ್ಮಲವಾದ ಮನವೆ ಕರ್ಪೂರದಾರತಿ|’’ ಎಂಬ ಪದವನ್ನು ಕೇಳದ ಕನ್ನಡಿಗರು ಅಪರೂಪ. ಇದನ್ನು ರಚಿಸಿದ ಮಡಿವಾಳಪ್ಪನವರು ತತ್ವಪದಗಳ ಅಲ್ಲಮ ಎಂದೇ ಖ್ಯಾತರಾಗಿದ್ದಾರೆ. ತತ್ವಪದ ಲೋಕಕ್ಕೆ ಮೌಲಿಕವಾದ ಪದಗಳನ್ನು ನೀಡಿದ ಮಡಿವಾಳಪ್ಪ ತಮ್ಮ ಆಧ್ಯಾತ್ಮಿಕ ದಂಗೆಯಿಂದಾಗಿ ದಾರ್ಶನಿಕ ಲೋಕದ ಗಮನ ಸೆಳೆದಿದ್ದಾರೆ. ಬಹುತೇಕ ಸಂತರಿಗೆ ಹುಟ್ಟಿದ ನಂತರ ಸಂಘರ್ಷ ಶುರುವಾದರೆ ಮಡಿವಾಳಪ್ಪರಿಗೆ ಅವರ ಹುಟ್ಟೇ ಸಂಘರ್ಷಕ್ಕೆ ಎಡೆ ಮಾಡಿಕೊಟ್ಟಿತ್ತು. ಲಿಂಗಾಯತ ಮಠಾಧೀಶರಾಗಿದ್ದ ವಿರೂಪಾಕ್ಷಸ್ವಾಮಿ (ಸನ್ಯಾಸಿ) ಮತ್ತು ವಿಧವೆಯಾಗಿದ್ದ ಗಾಣಿಗ ಕುಲದ ಗಂಗಮ್ಮ ಎಂಬ ಶಿವಸಾಧಕರ ಮೋಹಕ್ಕೆ ಹುಟ್ಟಿದ ಇವರು, ಹಾದರದ ಸಂತಾನವೆಂಬ ಅವಜ್ಞೆಗೆ ಒಳಗಾಗುತ್ತಲೇ ಬದುಕಿದ್ದರು. ಮಡಿವಾಳಪ್ಪ ಬಹು ದೊಡ್ಡ ಶಿವಯೋಗ ಸಾಧಕರಾಗಿ ಅದರಲ್ಲಿಯೂ ಸಾಂಪ್ರದಾಯಿಕ ಆಧ್ಯಾತ್ಮಿಕತೆಯ ವಿರುದ್ಧ ಬಹು ದೊಡ್ಡ ಬಂಡಾಯ ಸಾರಿದ್ದರಿಂದ ಬದುಕಿನುದ್ದಕ್ಕೂ ಹೋರಾಟ ಮಾಡಿದ್ದು ಅವರ ತತ್ವಪದಗಳಲ್ಲಿ ದಾಖಲಾಗಿದೆ. ಅವರ ಒಟ್ಟು ಜೀವನಯಾನವನ್ನು

‘‘ಬಿದನೂರಿನಲ್ಲಿ ಬುಡವಾಗಿ

ಚಿಣಮಗೇರಿಯಲ್ಲಿ ಚಿಗಿತು

ಅರಳಗುಂಡಗಿಯಲ್ಲಿ ಅರಳಿ

ಕಡಕೋಳಕ್ಕೆ ಕಡೆಯಾದ

ಮಡಿವಾಳಯೋಗಿ’’

ಎಂಬ ನಾಣ್ಣುಡಿಯೊಂದು ದರ್ಶಿಸುತ್ತಿದೆ. ಮಡಿವಾಳಪ್ಪ ಹುಟ್ಟಿದ್ದು ಕಲಬುರಗಿ ಜಿಲ್ಲೆಯ ಅಫ್ಝಲ್‌ಪುರ ತಾಲೂಕಿನ ಬಿದನೂರು ಎಂಬ ಹಳ್ಳಿಯಲ್ಲಿ. ನಂತರ ಬಾಲ್ಯವನ್ನು ಅದೇ ತಾಲೂಕಿನ ಚಿಣಮಗೇರಿ ಮಹಾಂತೇಶ್ವರ ಮಠದಲ್ಲಿ ಕಳೆದರೆ ಮುಂದೆ ಜಂಗಮ ದೀಕ್ಷೆ ಪಡೆಯಲೆಂದು ಕಲಬುರಗಿ ಶರಣಬಸಪ್ಪ ಎಂದು ಪರಿಚಿತನಾಗಿರುವ ಶರಣಸಂತನೊಬ್ಬನ ಕಾರ್ಯಸ್ಥಾನವಾದ ಜೇವರ್ಗಿ ತಾಲೂಕಿನ ಅರಳಗುಂಡಿಗೆ ಎಂಬ ಹಳ್ಳಿಗೆ ಬರುತ್ತಾರೆ. ಹುಟ್ಟು ಕಾರಣವಾಗಿ ಅಂದಿನ ಜಾತಿ ಜಂಗಮರು ಮಡಿವಾಳಪ್ಪನವರಿಗೆ ಜಂಗಮ ದೀಕ್ಷೆ ನೀಡಲು ನಿರಾಕರಿಸಿ ಗಲಭೆ ಎಬ್ಬಿಸುತ್ತಾರೆ. ಬೇಸತ್ತ ಮಡಿವಾಳಪ್ಪ ಕರ್ಮಠ ಜಾತಿ ಜಂಗಮರು ನೀಡುವ ಜಂಗಮದೀಕ್ಷೆಯನ್ನು ಧಿಕ್ಕರಿಸಿ ಪದಗಳನ್ನು ರಚಿಸುತ್ತ ಅಲ್ಲಿಂದ ಶ್ರೀಶೈಲದತ್ತ ಲೋಕ ಸಂಚಾರಕ್ಕೆ ಹೊರಡುತ್ತಾರೆ. 12 ವರ್ಷ ಪರ್ಯಂತ ಸಂಚಾರಗೈದು ಅಪಾರ ಲೋಕಾನುಭವ ಮತ್ತು ಶಿವಾನುಭಾವಗಳನ್ನು ಮೈಗೂಡಿಸಿಕೊಂಡು ಕೊನೆಗೆ ಜೇವರ್ಗಿ ತಾಲೂಕಿನ ಕಡಕೋಳ ಎಂಬ ಹಳ್ಳಿಯಲ್ಲಿ ಅಂತ್ಯಗೊಳ್ಳುತ್ತಾರೆ. ಈ ಚಾರಿತ್ರಿಕ ಸಂಗತಿಗಳನ್ನೇ ಶಿಷ್ಯ ಪರಂಪರೆಯವರು ನಾಣ್ಣುಡಿಯಾಗಿ ಅಸ್ತಿತ್ವಗೊಳಿಸಿದ್ದಾರೆ. 12ನೇ ಶತಮಾನದ ಶರಣಕ್ರಾಂತಿಯ ಅಪ್ಪಟ ಅನುಯಾಯಿಯಾಗಿದ್ದ ಮಡಿವಾಳಪ್ಪ ಮತ್ತೆ ಎಲ್ಲ ಜಾತಿ, ಮತ, ಪಂಥದವರನ್ನು ಸೇರಿಸಿಕೊಂಡು ತತ್ವಪದಗಳ ಮೂಲಕ ಶರಣತತ್ವಗಳಿಗೆ ಕಾಯಕಲ್ಪ ನೀಡಿದರು. ಅವರಿಗೆ ಮುಸ್ಲಿಮ್ ಜಲಾಲಸಾಹೇಬ, ಹೂಗಾರ ಕುಲದ ರೇವಪ್ಪ, ಕಬ್ಬಲಿಗ ಮತದ ಸಿದ್ದಪ್ಪ, ಬ್ರಾಹ್ಮಣ ಕುಲಕ್ಕೆ ಸೇರಿದ್ದ ಕೃಷ್ಣಪ್ಪ, ಬಣಜಿಗ ಕುಲಕ್ಕೆ ಸೇರಿದ ಹಂಗರಗಿ ಬಸಲಿಂಗಪ್ಪ ಮುಂತಾಗಿ ನೂರಾರು ಶಿಷ್ಯರಿದ್ದರು. ಇವರೆಲ್ಲರೂ ‘ಮಡಿವಾಳ’ ಅಂಕಿತದಿಂದ ನೂರಾರು ಮೌಲಿಕ ತತ್ವಪದಗಳನ್ನು ರಚಿಸಿದ್ದಾರೆ. ಈ ತತ್ವಪದಗಳ ಅನುಸಂಧಾನವಾಗಿ ಇಲ್ಲಿ ಸರಣಿ ಜಾತ್ರೆಗಳು ನಡೆಯುತ್ತವೆ.

ಮಡಿವಾಳಪ್ಪನವರ ಗುರುಸ್ಥಾನ ಅಫ್ಝಲ್‌ಪುರ ತಾಲೂಕಿನ ಚಿಣಮಗೇರಿ-ಚೌಡಾಪೂರ ನಡುಸೀಮೆಯ ಮಹಾಂತೇಶ್ವರ ಮಠ. ಗುಡ್ಡದ ಮಠವೆಂದೇ ಜನಜನಿತವಾಗಿರುವ ಲಿಂಗಾಯತ ಪರಂಪರೆಯ ಈ ಮಠದಸ್ವಾಮಿಗಳಿಂದಲೇ ಅನುಗ್ರಹ ಪಡೆದುಕೊಂಡು ಅಲ್ಲಿಯೇ ವಿದ್ಯಾಭ್ಯಾಸ ಮಾಡಿದ್ದರಿಂದ ತನ್ನ ಗುರುವಿನ ಜಾತ್ರೆಯನ್ನು ಭಜನಾ ಜಾತ್ರೆಯಾಗಿ ಮಡಿವಾಳಪ್ಪ ಅಸ್ತಿತ್ವಗೊಳಿಸುತ್ತಾರೆ. ಈ ಜಾತ್ರೆಗೆ ತಾತ್ವಿಕ ಹಿನ್ನೆಲೆಯೊಂದಿದೆ. ಚಿಣಮಗೇರಿ ಮಹಾಂತ ಶಿವಯೋಗಿಗಳು ಅಸದಳ ಮಾನವಪ್ರೇಮಿಯಾಗಿದ್ದು ಜನಸಾಮಾನ್ಯರ ದುಃಖ ದುಮ್ಮಾನಗಳಿಗೆ ಒದಗಿ ಬರುತ್ತಿದ್ದರಂತೆ. ಇವರಿಂದ ಉಪಕೃತಳಾದ ಬಡಮುದುಕಿಯೊಬ್ಬಳು ‘‘ಯಪ್ಪಾ ಗುರುವೇ ನನ್ನಲ್ಲಿ ನಿನಗೆ ಕೊಡಲು ಏನೂ ಇಲ್ಲ. ಆದ್ರ ನಿನ್ನ ತಲೆಯ ಕೂದಲು ನೀರು ಕಾಣದೆ ಜಡ್ಡುಗಟ್ಟಿ ಹೋಗಿವೆ. ನಾ ಬೇಕಾದ್ರ ಎಣ್ಣೆ ಹಚ್ಚಿ ತಿಕ್ಕಿ ನಿನ್ ತಲಿ ತೋಳಿತೀನಿ’’ ಎಂದು ಅದರಂತೆ, ಗುರುವಿನ ಜಡೆ ತೊಳೆದು ಸ್ನಾನ ಮಾಡಿಸಿದಳಂತೆ. ಸ್ನಾನವಾದ ನಂತರ ಊಟ ಮಾಡಿಸಬೇಕಲ್ಲ? ಬಡವಿ ವಿಶೇಷವೇನೂ ಇಲ್ಲ. ಸಜ್ಜೆ ರೊಟ್ಟಿ ತಟ್ಟಿದಳು. ಹಿಂಗಾರು ರಾಶಿ ಮುಗಿದು ಕೂಲಿಯಿಂದ ಬಂದ ಹೆಸರು, ಉದ್ದು, ಕಡಲೆ, ಮೆಟಗಿ ಎಲ್ಲ ದ್ವಿದಳ ಧಾನ್ಯಗಳು ಇದ್ದವು. ತೋಟಗಳಲ್ಲಿ ತರಹೇವಾರಿ ತರಕಾರಿ, ಫುಂಡಿಪಲ್ಯೆ, ಮೆಂತೆಪಲ್ಯೆ, ಚಿಕ್ಕಿಪಲ್ಯೆ, ರಾಜಗಿರಿ, ಹುಣಚಿಪಲ್ಯೆ, ಪಾಲಕಸೊಪ್ಪು, ಸೊಬಸ್ಗಿ, ಹಸಿಉಳಾಗಡ್ಡಿ ತಪ್ಪಲು ಸಕಲೆಂಟು ನಮೂನಿ ತರಕಾರಿ ಮೇಲಾಗಿ ಹಸರಗಾಯಿ (ಸೋರೆಕಾಯಿ), ರಾಮಗುಂಬಳ, ಚವಳಿ, ಹೀರೆ, ಖಡಕ್ ಹಸಿ ಮೆಣಸಿನಕಾಯಿ, ಬೆಳ್ಳುಳ್ಳಿ, ಶುಂಠಿ ಎಲ್ಲಾ ಸೇರಿಸಿ ಭಜ್ಜಿ ಪಲ್ಯೆ ಮಾಡಿದಳಂತೆ. ಅದನ್ನೇ ಗುರುವಿಗೆ ಎಡೆ ಮಾಡಿದಳು. ಮಹಾಂತಯೋಗಿ ಅದನ್ನುಂಡು ತೃಪ್ತರಾದರು. ಉಳಿದೆಲ್ಲ ಮಠಾಧೀಶರು ತಮ್ಮ ಲಿಂಗಕ್ಕೆ ಭತ್ತದ ಅನ್ನ, ತುಪ್ಪ ನೈವೇದ್ಯ ಕೇಳಿದರೆ ಇವರು ಮಾತ್ರ ಖಜ್ಜಾ (ರೊಟ್ಟಿ) ಭಜ್ಜಿಯೇ ನೈವೇದ್ಯಕ್ಕೆ ಆಗಬೇಕು ಎಂದರಂತೆ. ಅದಕ್ಕೆ ಮಡಿವಂತ ಮಠಾಧೀಶನೊಬ್ಬ ‘‘ಏನ್ರಿ ಸ್ವಾಮಿಗಳೇ ಲಿಂಗಕ್ಕೆ ಸದಾ ಬಾಗಿ ತೊನೆದಾಡುತ್ತಿರುವ ಭತ್ತದನ್ನ ಮತ್ತು ಶುದ್ಧ ಆಕಳ ತುಪ್ಪವೇ ಯೋಗ್ಯ. ಭಕ್ತರು ಸದಾ ಗುರುಗಳಿಗೆ ಬಾಗಿರಬೇಕು. ಅದು ಬಿಟ್ಟು ನೀವು ಶೂದ್ರಾನ್ನವಾದ ಸಜ್ಜೆ ರೊಟ್ಟಿ ಎಲ್ಲ ಕಾಳುಕಡಿ ಮೇಲೋಗರ ಕೇಳುತ್ತೀರಲ್ಲ!’’ ಎಂದರಂತೆ. ಅದಕ್ಕೆ ಮಹಾಂತೇಶ್ವರರು ‘‘ಹೌದು ನನಗೆ ಗುಲಾಮರಂತಿರುವ ಭಕ್ತರು ಬೇಕಿಲ್ಲ. ಯಾರಿಗೂ ಬಾಗದ ಎದೆ ಸೆಟಿಸಿ ನಿಲ್ಲುವ ಸ್ವಾಭಿಮಾನಿ ಸಜ್ಜೆ ದಂಟಿನಂಥ ದುಡಿಯುವ ಜನರೇ ಶಿಷ್ಯರು. ಎಲ್ಲ ಜಾತಿ, ಮತ, ಪಂಥಗಳಿಂದ ಬಂದವರೆಲ್ಲರೂ ನನ್ನ ಬಳಿ ಹರಿದು ಬರಬೇಕು. ಅದರ ಪ್ರತೀಕವಾಗಿ ಸಜ್ಜೆಯ ಖಜ್ಜಾ ಭಜ್ಜಿಯೆ ಆಗಬೇಕು’’ ಎಂದಿದ್ದರಂತೆ. ಮಡಿವಾಳಪ್ಪನವರು ಗುರುವಿನ ಈ ಪರಂಪರೆಯನ್ನು ಮುಂದುವರಿಸಿ ತನ್ನ ಗುರುವಿನ ಜಡೆ ತೊಳೆದ ನೆನಪಿಗಾಗಿ ಜಡೆಜಾತ್ರೆ ಮುಂದುವರಿಸಿಕೊಂಡು ಬರುತ್ತಾರೆ. ಖಜ್ಜಾ ಭಜ್ಜಿ ಸಮಾರಾಧನೆ ನಂತರ ಬೆಳ್ಳಂಬೆಳಗಿನವರೆಗೆ ತತ್ವಪದಗಳ ಹಾಡುಗಾರಿಕೆ ಓತಪ್ರೋತವಾಗಿ ತುಂಬಿ ಹರಿಯುತ್ತದೆ. ಮಡಿವಾಳಪ್ಪನವರು ಗತಿಸಿದ ತರುವಾಯ ಅವರ ಶಿಷ್ಯ ಸಮುದಾಯ ಈ ಪರಂಪರೆಯನ್ನು ಮುಂದುವರಿಸಿ ಚಿಣಗೇರಿ ಜಾತ್ರೆಗಿಂತ ಒಂದು ವಾರ ಮೊದಲು ಮಡಿವಾಳಪ್ಪನವರ ಜನ್ಮಸ್ಥಳವಾದ ಬಿದನೂರಿನಲ್ಲಿ ತತ್ವಪದಗಳ ಅನುಸಂಧಾನ ನಡೆಸುತ್ತಾರೆ. ಹುಣ್ಣಿಮೆಯಂದು ಚಿಣಮಗೇರಿ ಮಠದಲ್ಲಿ ಜಾತ್ರೆ ನಡೆದು ಆನಂತರ ಕಡಕೋಳದಲ್ಲಿ ನಡೆಯುತ್ತದೆ. ಈ ನಡುವೆ ಸಿದ್ಧಪ್ಪನವರ ಸಮಾಧಿ ಸ್ಥಳವಾದ ಕಡ್ಲೆವಾಡದಲ್ಲಿ ಜಲಾಲಸಾಹೇಬರ ಗದ್ದುಗೆ ಸ್ಥಾನ ಚೆನ್ನೂರಿನಲ್ಲಿಯೂ ತತ್ವಪದಗಳ ಜಾತ್ರೆ ನಡೆಯುತ್ತವೆ. ಎಲ್ಲ ಕಡೆ ಸಜ್ಜಿ ಖಜ್ಜಾ ಭಜ್ಜಿ ಮಾತ್ರ ಇರುತ್ತದೆ. ನಂತರ ಪದ ಪರಿಷೆ.

ಅಲ್ಲಿಯ ಪ್ರಸಾದ ವಿತರಣೆ ಮತ್ತು ಪದಗಳ ಕಾರವಾನ ಎರಡೂ ಅನನ್ಯ ಮತ್ತು ಅನಿರ್ವಚನೀಯ. ರಾತ್ರಿಗಳ ನೀರವ, ನೀರಭ್ರ ಕತ್ತಲಿನ ವಿಸ್ತಾರದಲ್ಲಿ ಪಕ್ಕಾ ರೈತಾಪಿ ಕೂಲಿ ಕಾರ್ಮಿಕರ ತಾಳ, ದಮಡಿ, ಏಕತಾರಿಗಳೊಂದಿಗೆ ಗುರುಗದ್ದುಗೆಗಳ ಸನ್ನಿಧಾನದಲ್ಲಿ ತತ್ವಗಳ ಅನುಸಂಧಾನ ನಡೆಯುತ್ತದೆ. ದೇಶಿ ಮಟ್ಟುಗಳು ಅವರ ಉಚ್ಛಂಖಲಿತ ಕಂಠಗಳಿಂದ ನಿರರ್ಗಳವಾಗಿ ಹರಿದು ಬರತೊಡಗಿದರೆ ಕೇಳುವುದೇ ಆನಂದ, ಮಹದಾನಂದ. ಬರೀ ಹಾಡುವುದಲ್ಲ, ಹಾಡಿಕೆ ಮಧ್ಯದಲ್ಲಿ ಅವುಗಳ ಅರ್ಥವನ್ನು ಬಿಡಿಸಿ ಹೇಳುವ ಪರಿಗೆ ಎಂಥ ಪಂಡಿತರೂ ಮೂಕವಿಸ್ಮಿತರಾಗಬೇಕು. ಸಾಮಾನ್ಯರಲ್ಲಿ ಸಾಮಾನ್ಯರಂತೆ, ನೋಡುವವರಿಗೆ ಇವರೇನು ಬಲ್ಲರು ಉನ್ನತಾನುಭಾವಿಕ ತತ್ವ ಮೀಮಾಂಸೆ? ಎಂದು ಭಾಸವಾಗುವ ಆ ಮಂದಿಯ ಖದರೇ ಅಲ್ಲಿ ಬೇರೆಯಾಗಿರುತ್ತದೆ. ಒಬ್ಬರಿಗಿಂತ ಒಬ್ಬರು ಆ ಹಾದಿಯಲ್ಲಿನ ಶಾಸ್ತ್ರಾರ್ಥ, ತಾತ್ವಿಕಾರ್ಥಗಳನ್ನು ಬಿಚ್ಚಿ ಹೇಳುತ್ತಲೇ ಹೋಗುತ್ತಾರೆ. ಒಂದು ಪದಕ್ಕೆ ಎಷ್ಟು ಆಯಾಮಗಳು, ಅದೆಷ್ಟು ಭಿನ್ನ ಪಾಠಗಳು, ವಾಚಾರ್ಥ, ಲಕ್ಷಾರ್ಥ, ವ್ಯಂಗ್ಯಾರ್ಥಗಳೆಲ್ಲವನ್ನೂ ಸೂರೆಗೈಯುತ್ತಾರೆ. ಅವರ ಅನೌಪಚಾರಿಕ ವಾಗ್ವಾದಗಳ ನಡುವೆ ಯಾರಾದರೂ ಅಕಾಡಮಿಕ್ ಶಿಸ್ತಿನವರು ಬಾಯಿ ಹಾಕಿ ತಮ್ಮ ಪಾಂಡಿತ್ಯ ಪ್ರದರ್ಶನಕ್ಕೆ ನಿಂತರೆ ಅವರು ಸುಮ್ಮನಾಗುತ್ತಾರೆ. ತಮ್ಮದೇ ಖರೆ ಎಂದು ಹಟಕ್ಕೆ ಬಿದ್ದವರಲ್ಲ. ‘‘ಗುರುನಾಥ ಯಾರಿಗಿ ಏನು ಹೊಳೆಸುತ್ತಾನೋ ಯಾರಿಗೊತ್ತು’’ ಎಂದು ನಕ್ಕು ಬಿಡುತ್ತಾರೆ. ಶಾಸ್ತ್ರ ಜಡರು ಪದದ ಅರ್ಥಕ್ಕೆ ಜೋತು ಬಿದ್ದರೆ, ಅವರು ಪದಾರ್ಥಕ್ಕೆ ಲಗತ್ತಾಗಿರುತ್ತಾರೆ. ದೈನಂದಿನ ಬದುಕಿನ ಮೂಸೆಯಲ್ಲಿ ಜೀವನಾನುಭಾವಗಳ ನಿಕಷದಲ್ಲಿ ಉದಿಸಿದ ಅರ್ಥ ಸಾಧ್ಯತೆಗಳನ್ನು ಹಿಡಿದಿಡುವ ಭಕ್ತಿ ಅವರದಾದರೆ, ನಿಘಂಟುವಿನ ನೆಲೆಯಿಂದ ಪುಸ್ತಕಗಳ ಮಿತಿಯಿಂದ ಸಂಗ್ರಹಿತಗೊಂಡ ಜಿಜ್ಞಾಸೆ ಪಂಡಿತರದಾಗಿರುತ್ತದೆ.

ಪ್ರಾರಂಭದ ಹಾಡುಗಾರ ಗುರುವಿನ ಮಹಿಮೆ ಕುರಿತು ಪದ ಹಿಡಿದರೆ ಮುಂದಿನ ಎಲ್ಲ ಮುಮುಕ್ಷುಗಳು ಗುರು ತತ್ವ ಕುರಿತೆ ಅನೇಕರ ಪದಗಳ ಜುಗಲಬಂದಿ ನಡೆಸುತ್ತಾರೆ. ಕಾಯ ತತ್ವ, ಜೀವ ತತ್ವ, ಸಂಸಾರ ಸಾಗರ, ಮರಣ, ಲಿಂಗಾಂಗ ಸಾಮರಸ್ಯ, ಪಾರಮಾರ್ಥ, ಅರಿವಿನ ದಾರಿ, ಲೋಕ ದಂದುಗ, ಪ್ರಾಣ-ಪ್ರಕೃತಿ ಹೀಗೆ ಯಾವುದಾದರೂ ವಿಷಯಗಳು ನಿರ್ಜರ ನಿನಾದದಲ್ಲಿ ಸುತ್ತುಗಟ್ಟಿ ಅನುರಣಿಸುತ್ತವೆ. ಹೊತ್ತು ಮೂಡುತ್ತದೆ. ಸೂರ್ಯ ಕಣ್ಣು ಹಾಯಿಸುತ್ತಾನೆ. ಆದರೆ ತತ್ವದ ಹುಡುಕಾಟ ಮುಗಿಯುವುದಿಲ್ಲ. ನಾಳಿನ ದಿನಕ್ಕೆ ತತ್ವಾನುಸಂಧಾನ ದೂಡಿ ಕೊನೆಗೆ ಒಲ್ಲದ ಮನಸಿನಿಂದ ಭೈರವಿ ರಾಗದಲ್ಲಿ ಅರ್ಥಪೂರ್ಣ ಮಂಗಳಾರತಿ ಹಾಡಿ ಗುರುವಿನ ಜಯಘೋಷದೊಂದಿಗೆ ಮತ್ತೆ ತಮ್ಮ ಎಂದಿನ ಕಾಯಕಕ್ಕೆ ಹೊರಡುತ್ತಾರೆ. ಅಲ್ಲಿ ಹಾಡುವವರು ಶಾಸ್ತ್ರೀಯ ಸಂಗೀತ ಪಾರಂಗತರಲ್ಲ. ವಿದ್ವಾಂಸರ ಕಚೇರಿಗಳಲ್ಲಿ ಹಾಡಿ ಸಂಭಾವನೆ, ಪ್ರಶಸ್ತಿ, ಬಹುಮಾನ ಪಡೆಯುವ ಹಂಗಿಗೆ ಬಿದ್ದವರಲ್ಲ. ಗುರುಬೋಧ ಪಡೆದು ಶಿಶುಮಕ್ಕಳಾದ ಸಾಧಕರು, ಭಜನೆ ಮೇಳದಲ್ಲಿ ಪಾಲ್ಗೊಳ್ಳುತ್ತ ಒಬ್ಬರಿಂದೊಬ್ಬರು ಕಲಿತು ಹಾಡುತ್ತಾರೆ. ಅವರಿಗೆ ನಾದ, ಲಯ, ಅರ್ಥ, ಭಾವಗಳ ಸೋಬತಿ ಪ್ರಾಪ್ತವಾಗುತ್ತದೆ. ಗುರುಮಾರ್ಗದ ನಡೆಯಲ್ಲಿ ಅದು ಸಿದ್ಧಿಸುತ್ತದೆ. ಅಸಲಿಗೆ ಸಿದ್ಧಿಗಾಗಿ ಪರಿತಪಿಸಿದವರಲ್ಲ. ಗುರು ಕರುಣೆಗಾಗಿ ಅವರ ಹಂಬಲ. ಎಲ್ಲೆಲ್ಲಿ ಇಂಥ ತತ್ವಪದಗಳ ಅನುಸಂಧಾನ ನಡೆಯುತ್ತದೆಯೋ ಅಲ್ಲಿಗೆ ಇವರು ಕೈಖರ್ಚು ಮಾಡಿಕೊಂಡು ಹೋಗಿ ಹಾಡಿ ಬರುತ್ತಾರೆ. ಕಾರಣ ಅದು ಅವರಿಗೆ ಗುರುಸೇವೆಯ ಪ್ರತೀಕ. ಹೊಟ್ಟೆತುಂಬ ಖಜ್ಜಾ ಭಜ್ಜಿ ಉಂಡು ಮನದುಂಬಿ ಹಾಡುತ್ತಾರೆ. ನಮ್ಮ ಪ್ರದೇಶದ ಭಜ್ಜಿ ಅಂದರೆ ಅದು ಮಾಮೂಲಿಯಲ್ಲ. ಭರ್ತಿ ಖಾರ, ತುಟಿಗಿಟ್ಟರೆ ಅಳ್ಳೆತ್ತಿ ಜುಂ ಎನ್ನಬೇಕು. ಅಂಥ ಖಾರದ ಮೇಲೋಗರದೊಂದಿಗೆ ಮತ್ತೆ ಹಸಿ ಮೆಣಸಿನಕಾಯಿ ಬಾಡಿಸಿಕೊಂಡು ತಿನ್ನುವ ಅವರ ತಾಕತ್ತನ್ನು ನೋಡಿಯೇ ಅರಿಯಬೇಕು. ಇಲ್ಲಿನ ಖಡಕ್ ಬಿಸಿಲು, ಖಟಿ ರೊಟ್ಟಿ, ಖಡಕ್ ಖಾರಾ ಇವುಗಳ ಸಾವಯವ ಸಂಬಂಧಕ್ಕೆ ದುಸರಾ ಮಾತಿಲ್ಲ. ಅದ್ಹೇಗೆ ಇಂಥ ಖಾರಾ ತಿನ್ನುತ್ತೀರಿ ಎಂದರೆ ‘‘ಯವ್ವಾ ಮೆಣಸಿನಕಾಯಿ ಬ್ರಹ್ಮಾಂಡಕ್ಹತ್ತಿ ನೆತ್ತಿ ಗರಕ್ ಎಂದಾಗಲೇ ಹಾಡಿಗೆ ಹದಾ ಬಂದು ಪದಾ ಉಚ್ಚಿ ಬೀಳತಾವ, ಧನಿ ತೇಜಾಗತಾದ’’ ಎಂದು ಬಿಡುತ್ತಾರೆ. ಅದರೊಂದಿಗೆ ನಡೆಯುವ ಉನ್ನತ ತತ್ವಾನುಭಾವ ಕೇಳುಗರನ್ನು ಮಂತ್ರಮುಗ್ಧಗೊಳಿಸಿ ಪ್ರಫುಲ್ಲಿತವಾಗಿಸುತ್ತವೆ. ಖರೇ ಹೇಳಬೇಕೆಂದರೆ ರಾತ್ರಿಗಳ ಉನ್ಮೀಲಿತ ತತ್ವಾನುಸಂಧಾನದ ನಾದ ಲಹರಿಯನ್ನು ಪದಗಳಲ್ಲಿ ಹಿಡಿದಿಡಲು ಹೊರಡುವುದು ವ್ಯರ್ಥ ಚೇಷ್ಟೆಯಾಗಿಯೇ ಉಳಿದು ಬಿಡುತ್ತದೆ. ಆಸಕ್ತರು ಮಡಿವಾಳ ಮಠದ ಫೌಳಿಗಳ ವಿಶಾಲ ಹರಹಿನ ನೆಲಹಾಸಿನಲ್ಲಿ ಕೈಕಾಲು ಚಾಚಿ ಧುನಿ ಮುಂದ ಕುಳಿತು ಸುಮ್ಮಗೆ ಕಿವಿಯಾಗಬೇಕು. ಅಂತರಂಗದ ಕವಾಟ ತನ್ನಿಂತಾನೆ ತೆರೆದು ಯಾವಾಗ ಆ ಪದಗಂವ್ಹರಗಳ ಅನಂತ ಅಮಿತಾನಂದದಲ್ಲಿ ಮುಳುಗಿ ಹೋಗುತ್ತೇವೆಯೋ ಗೊತ್ತೆ ಆಗುವುದಿಲ್ಲ.

share
ಡಾ. ಮೀನಾಕ್ಷಿ ಬಾಳಿ
ಡಾ. ಮೀನಾಕ್ಷಿ ಬಾಳಿ
Next Story
X