Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ಪುಸ್ತಕ ಸಾಂಗತ್ಯ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಅಂಕಣಗಳು
  4. ಬಯಲ ಬುತ್ತಿ
  5. ಈ ಭೂಪತಿಗಳ ಮೆಚ್ಚಿ ಅರೆಸುಖ ತನಗಾಯಿತು

ಈ ಭೂಪತಿಗಳ ಮೆಚ್ಚಿ ಅರೆಸುಖ ತನಗಾಯಿತು

ಡಾ. ಮೀನಾಕ್ಷಿ ಬಾಳಿಡಾ. ಮೀನಾಕ್ಷಿ ಬಾಳಿ11 Aug 2026 11:54 AM IST
share
ಈ ಭೂಪತಿಗಳ ಮೆಚ್ಚಿ ಅರೆಸುಖ ತನಗಾಯಿತು

ಪ್ರಜಾಪ್ರಭುತ್ವವೆಂಬ ಸೋಗಿನ ಅರಿ ಭಯಂಕರ ದುಷ್ಟತನವನ್ನು ನಾವೀಗ ನೋಡುತ್ತಿದ್ದೇವೆ. ಜ್ವಲಂತ ಉದಾಹರಣೆ ಎಂದರೆ ಮಂತ್ರಿಗಿರಿಯ ಕಚ್ಚಾಟ. ಪಕ್ಷ ಯಾವುದೇ ಇರಲಿ ಗುಣಲಕ್ಷಣ ಒಂದೇ. ಕರ್ನಾಟಕದಲ್ಲಿ ಬರಗಾಲ ತಿಕ್ಕಿ ಮುಕ್ಕುತ್ತಿದೆ. ರಾಜ್ಯಾದ್ಯಂತ ವಾಡಿಕೆಯಷ್ಟು ಮಳೆ ಸುರಿಯದೆ ಹೆಚ್ಚು ಕಡಿಮೆ ಮುಂಗಾರು ಕೈ ಕೊಟ್ಟಿದೆ. ದೊಡ್ಡ ಶಹರುಗಳಲ್ಲಿಯೂ ಕೂಲಿ ಸಿಗದೆ ಜನರು ಕಂಗಾಲಾಗಿದ್ದಾರೆ. ಕುಡಿಯುವ ನೀರಿಗೂ ತತ್ವಾರ ಆಗಿರುವಾಗ ನಮ್ಮ ಚುನಾಯಿತ ಪ್ರತಿನಿಧಿಗಳು ಮಂತ್ರಿಗಿರಿಗಾಗಿ ನಡೆಸಿರುವ ಕಚ್ಚಾಟ ನೋಡಿದರೆ ಹೇಸಿಗೆ ಬರುತ್ತದೆ.

ಸ್ವಾತಂತ್ರ್ಯ ಪೂರ್ವದಲ್ಲಿ ಭಾರತವೆಂಬ ಈ ದೇಶ 500ಕ್ಕೂ ಹೆಚ್ಚು ಸಣ್ಣ-ದೊಡ್ಡ ಸಂಸ್ಥಾನಗಳಲ್ಲಿ ಹರಿದು ಹಂಚಿ ಹೋಗಿತ್ತು. ಈಗಿನಂತೆ ಇದು ಒಂದು ವಿಶಾಲ ದೇಶವಾಗಿ ಅಸ್ತಿತ್ವಗೊಂಡಿರಲೇ ಇಲ್ಲ. ಅತ್ಯಂತ ಪ್ರಾಚೀನ ಕಾಲದಿಂದಲೂ ಮೌರ್ಯರು, ಗುಪ್ತರು, ಮೊಗಲರು, ಮರಾಠರು ಮುಂತಾಗಿ ಪ್ರಮುಖ ಅರಸು ಮನೆತನಗಳನ್ನಲ್ಲದೆ ಅವರ ಕೈ ಕೆಳಗೆ ನೂರಾರು ಮಾಂಡಲೀಕರು, ಅವರ ಕೆಳಗೆ ಸಂಸ್ಥಾನಿಕರು, ಸಣ್ಣ-ಪುಟ್ಟ ಜಮೀನ್ದಾರರು ಆಳಿದ್ದರು. ಅಂತೆಯೇ ಕರ್ನಾಟಕದಲ್ಲಿಯೂ ಕದಂಬರು, ಗಂಗರು, ರಾಷ್ಟ್ರಕೂಟರು, ಹೊಯ್ಸಳರು, ವಿಜಯನಗರದ ಅರಸರು, ಬಹಮನಿ, ಆದಿಲಶಾಹಿ, ಮೈಸೂರು ಅರಸರು ಮುಂತಾದವರಲ್ಲದೆ ಮಾಂಡಲೀಕರಾಗಿ ಕಿತ್ತೂರು, ಕೆಳದಿ, ಕೊಡಗು, ಚಿತ್ರದುರ್ಗದ ಮದಕರಿ ನಾಯಕರು, ಸುರಪೂರಿನ ಬೇಡ ನಾಯಕರು ರಾಜರುಗಳಾಗಿ ಮೆರೆದಿದ್ದರು. ಮತ್ತೆ ಇವರ ಕೈಯಲ್ಲಿ ಸ್ಥಳೀಯವಾಗಿ ದೇಶಮುಖರು, ದೇಶಪಾಂಡೆಗಳು, ಪೊಲೀಸ್‌ಗೌಡರು, ಮಾಲಿಗೌಡರು, ಸಾಹುಕಾರರು, ಜಮೀನ್ದಾರರು ಜನಸಾಮಾನ್ಯರ ದುಡಿಮೆಯ ಮೇಲೆ ರಾಜ್ಯಭಾರ ನಡೆಸಿಕೊಂಡು ಬಂದಿದ್ದರು. ರಾಜಪ್ರಭುತ್ವದಲ್ಲಿ ಜನರ ಯೋಗಕ್ಷೇಮ ಎಂಬುದು ಕನಸಿನ ಮಾತಾಗಿರುತ್ತದೆ. ಗಡಿ ರಕ್ಷಣೆ ಮಾತ್ರ ಅವರ ಪ್ರಥಮ ಆದ್ಯತೆಯಾಗಿರುತ್ತಿತ್ತು. ನೆರೆ-ಹೊರೆ ರಾಜರ ದಾಳಿಗಳಿಂದ ರಕ್ಷಣೆ ನೀಡುತ್ತೇವೆ ಎಂದು ಹೇಳುತ್ತ ಅವರು ತಮ್ಮ ರಾಜ್ಯಪ್ರಭುತ್ವವನ್ನು ಕಾಪಾಡಿಕೊಳ್ಳುತ್ತಿದ್ದರು. ತಮ್ಮ ಸಾಮ್ರಾಜ್ಯ ವಿಸ್ತರಣೆಗಾಗಿ ನಡೆಸುವ ಯುದ್ಧಗಳನ್ನು ಅವರು ಪ್ರಜೆಗಳ ರಕ್ಷಣೆಯ ಕೆಲಸಗಳೆಂದು ನಂಬಿಸಿಕೊಂಡು ಬಂದಿದ್ದರು. ಯುದ್ಧಗಳಲ್ಲಿ ಭಾಗವಹಿಸಲು ಪ್ರತೀ ಮನೆಯ ಯುವಕರು ದುಡಿಯಬೇಕಿತ್ತು. ರಾಜರ ಕೆಲಸಗಳು ಸುಗಮವಾಗಲು ಜನರು ತಪ್ಪದೆ ಕಂದಾಯ ಕೊಡಬೇಕಿತ್ತು.

ಕಂದಾಯ ವಸೂಲಿಯೇ ರಾಜ್ಯ ಪ್ರಭುತ್ವದ ಜೀವಾಳವಾಗಿತ್ತು. ಬರಗಾಲ ಬಿದ್ದು ಜನರು ಹಸಿವಿನಿಂದ ಒದ್ದಾಡುತ್ತಿದ್ದರೂ ಕರ ಸಂದಾಯ ತಪ್ಪಿಸುವಂತಿರಲಿಲ್ಲ. ದುಡಿಯುವ ಪ್ರತಿಯೊಬ್ಬ ಕೂಲಿ ಕಾರ್ಮಿಕರು ತಮ್ಮ ವೃತ್ತಿಯ ಕಂದಾಯ ನೀಡಬೇಕಿತ್ತು. ಕಂದಾಯ ಪದ್ಧತಿಯ ಸ್ವರೂಪ, ಅದಕ್ಕಾಗಿ ನಡೆಸುತ್ತಿದ್ದ ದೌರ್ಜನ್ಯಗಳ ಪಟ್ಟಿಯೇ ಶಾಸನಗಳಲ್ಲಿ ದಾಖಲಾಗಿದೆ. ಕಂದಾಯ ವಸೂಲಾತಿಯ ಚಿತ್ರಗಳು ಪ್ರಾಚೀನ ಕಾವ್ಯಗಳಲ್ಲಿ ಕೂಡ ಕಂಡು ಬರುತ್ತವೆ. ಕಂದಾಯ ಭರಿಸದ ಜನರ ಸಂಕಟಗಳನ್ನು ಕೇಳುವವರು ಇರುತ್ತಿರಲಿಲ್ಲ. ರಾಜರುಗಳು ಇರುವುದೇ ಕಂದಾಯ ವಸೂಲಿಗಾಗಿ ಎಂಬ ನಂಬಿಕೆಯನ್ನು ಬೇರೂರಿಸಲಾಗಿತ್ತು. ಪ್ರಜಾ ಪೀಡಕರಾಗಿದ್ದ ರಾಜರಿಗೆ ಜನರ ಯೋಗಕ್ಷೇಮದ ಹೊಣೆಗಾರಿಕೆ ಇರಲಿಲ್ಲ. ಜನರ ಸಂಕಟಗಳಿಗೆ ಕಾರಣ ಅವರವರ ಕರ್ಮ ಎಂಬುದನ್ನು ಪುರೋಹಿತರು ಪ್ರಶ್ನಾತೀತವಾಗಿ ಒಪ್ಪಿಸಿಬಿಟ್ಟಿದ್ದರು. ಎಲ್ಲವೂ ದೈವ ನಿಯಾಮಕ ಎಂದು ಭಯ-ಭಕ್ತಿಯಿಂದ ಒಪ್ಪಿಕೊಂಡು ಬಂದಿದ್ದ ಜನರಿಗೆ ತಮ್ಮ ಬಡತನ, ಸಂಕಟಗಳಿಗೆ ಆಳುವ ಪ್ರಭುಗಳೇ ಹೊಣೆಗಾರರು ಎಂಬ ಕನಿಷ್ಠ ವಿಚಾರವು ಮೊಳೆಯುವಂತೆ ಇರಲಿಲ್ಲ. ರಾಜಪ್ರಭುತ್ವದ ಕಪಿ ಮುಷ್ಟಿಯಲ್ಲಿ ಸಿಕ್ಕು ನರಳುತ್ತಿದ್ದ ಜನರಿಗೆ ಪ್ರಜಾಪ್ರಭುತ್ವದ ಪರಿಕಲ್ಪನೆಯೂ ಇರಲಿಲ್ಲ. ಬ್ರಿಟಿಷರು ಭಾರತವನ್ನು ಆಕ್ರಮಿಸಿಕೊಂಡು ಸ್ಥಳೀಯ ರಾಜರನ್ನು ಬಡಿದು ಮೂಲೆಗೊತ್ತತೊಡಗಿದಾಗಲೇ ರಾಜರು ಮತ್ತು ಜನರಿಗೂ ದೇಶ-ನಾಡು ತಮ್ಮದು ಎಂಬ ಅರಿವು ಮೂಡಿತು. ಪರಕೀಯರ ಗುಲಾಮಗಿರಿಯಿಂದ ಬಿಡುಗಡೆ ಹೊಂದಬೇಕೆಂಬ ಬಯಕೆಯೂ ಇಂಗ್ಲಿಷ್ ಶಿಕ್ಷಣದಿಂದ ಪ್ರಭಾವಿತರಾದವರಲ್ಲಿ ಮೊದಲು ಉದಿಸಿ ಆನಂತರ ಅದು ಜನ ಚಳವಳಿಯಾಗಿ ಪರಿವರ್ತನೆಗೊಂಡಿತ್ತು. ರಾಜರು ಯಥಾ ಪ್ರಕಾರ ತಮ್ಮ ತಮ್ಮ ಅರಸೊತ್ತಿಗೆಗಳ ಉಳುವಿಕೆಗಾಗಿ ಹೋರಾಟ ನಡೆಸಿದ್ದರು. ನೆರೆಯ ವೈರಿಗಳಿಂದ ಉಳಿದುಕೊಳ್ಳಲೆಂದು ಬ್ರಿಟಿಷರೊಂದಿಗೆ ಕೈ ಜೋಡಿಸಿ ಯುದ್ಧಗಳನ್ನು ಮಾಡಿದ್ದು ಕಡಿಮೆಯೇನಿಲ್ಲ. ಆದರೆ ಅಖಂಡ ಭಾರತ ಎಂಬ ಕೂಗು ಎದ್ದಿದ್ದು ಜಾಗತಿಕ ಸಾಮ್ರಾಜ್ಯಶಾಹಿ ವಿರೋಧಿ ಹೋರಾಟಗಳಿಂದ ಎಂಬುದನ್ನು ನೆನಪಿಟ್ಟುಕೊಳ್ಳಬೇಕು. ಸ್ವಾತಂತ್ರ್ಯ ಹೋರಾಟದೊಂದಿಗೆ ಪ್ರಜಾಸತ್ತಾತ್ಮಕ ಪದ್ಧತಿಯ ಆಶೋತ್ತರಗಳು ಜನರಲ್ಲಿ ದಾಂಗುಡಿಯಿಟ್ಟವು. ರಾಜಸತ್ತೆಯಿಂದ ಮರಳಿ ರಾಜಸತ್ತೆಗೆ ಹಿಂಚಲನೆಗೆ ಒಪ್ಪದ ಜನತೆ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ತರಲೆಂದು ಸಮರಧೀರ ಹೋರಾಟ ಮಾಡಿದರು. ಅಸಂಖ್ಯ ಜನರ ತ್ಯಾಗ-ಬಲಿದಾನಗಳು ನಡೆದು ಹೋದವು. ಸ್ಥಳೀಯ ಅನೇಕ ರಾಜರು ಪ್ರಜಾಪ್ರಭುತ್ವಕ್ಕೆ ಹೊರಳಲು ಬಯಸಿರಲಿಲ್ಲ. ಅವರು ಸ್ವತಂತ್ರ ರಾಜರಾಗಿ ಮತ್ತೆ ತಮ್ಮ ಪೂರ್ವದ ವೈಭವದಲ್ಲಿ ವಿರಾಜಮಾನರಾಗಲು ಹಪಹಪಿಸುತ್ತಿದ್ದರು. ಎಚ್ಚೆತ್ತ ಜನತೆ ರಾಜಸತ್ತೆಗೆ ಮರಳುವಂತಿರಲಿಲ್ಲ. ಅಂತೂ ದೇಶಕ್ಕೆ ಸ್ವಾತಂತ್ರ್ಯ ಬಂದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಅಡಿಯಿಟ್ಟರೆ ತಮ್ಮೆಲ್ಲ ಕಷ್ಟ-ನಷ್ಟ, ಶೋಷಣೆಗಳು ನಿಲ್ಲುತ್ತವೆ ಎಂದು ನಂಬಿದ್ದರು. ಪ್ರಜಾಪ್ರಭುತ್ವದ ಉದಯದೊಂದಿಗೆ ಜನತೆಯ ಕೈಗೆ ಅಧಿಕಾರ ಬಂದು ತಮ್ಮನ್ನು ತಾವು ಆಳಿಕೊಳ್ಳುತ್ತಾರೆ. ಶ್ರೇಣೀಕೃತ ವ್ಯವಸ್ಥೆಯಿಲ್ಲದ ಸಮಸಮಾಜ ನಿರ್ಮಾಣವಾಗುತ್ತದೆ. ಎಲ್ಲರಿಗೂ ಅನ್ನ, ಆಶ್ರಯ, ಉದ್ಯೋಗ, ಗೌರವಗಳು ದಕ್ಕುತ್ತವೆ ಎಂದು ಜನರು ನಿರೀಕ್ಷೆಗಳನ್ನು ಇಟ್ಟುಕೊಂಡು ಸಂಭ್ರಮಿಸಿದ್ದರು.

ಆದದ್ದೇನು? ಅನತಿ ಕಾಲದಲ್ಲಿಯೇ ಜನರ ಆಶೋತ್ತರಗಳು ಮಣ್ಣು ಪಾಲಾದವು. ಕಂಡ ಕನಸುಗಳು ಗಾಳಿ ಗೋಪುರವಾದವು. ಪ್ರಜಾಪ್ರಭುತ್ವದ ಹೆಸರಲ್ಲಿ ಲೂಟಿಕೋರರ ಗುಂಪು ಚುನಾವಣೆಯ ನೆಪದಲ್ಲಿ ಮುನ್ನೆಲೆಗೆ ಬಂದಿತು. ಸ್ವಾತಂತ್ರ್ಯೋತ್ತರ ಭಾರತದಲ್ಲಿ ನಿಜವಾದ ಪ್ರಜಾಪ್ರಭುತ್ವ ಅವತರಿಸಲೇ ಇಲ್ಲ. ಹುಸಿ ಪ್ರಜಾಪ್ರಭುತ್ವಕ್ಕೆ ಚುನಾವಣೆಗಳು ಯಂತ್ರಗಳಾಗಿ ಬಳಕೆಯಾದವು. ಮತ್ತದೇ ಜಾತಿ, ಧರ್ಮ, ಪ್ರದೇಶ, ಹಣ ಬಲದಿಂದ ಚುನಾವಣೆಗಳು ಪ್ರಜಾಪ್ರಭುತ್ವದ ಅಣಕಗಳಾಗಿ ಬಿಟ್ಟವು. ಅಂದಿನ ಜಮೀನ್ದಾರ ಗೌಡರು, ಸಾಹುಕಾರರೇ ಇಂದಿನ ಎಂಎಲ್‌ಎ ಮತ್ತು ಎಂಪಿ ಹಾಗೂ ಮಂತ್ರಿ, ಮುಖ್ಯಮಂತ್ರಿ, ಪ್ರಧಾನಿಗಳಾಗಿ ಪರಿವರ್ತನೆಗೊಂಡರು. ಹಳೆಯ ಹೆಂಡ ಹೊಸ ಬಾಟಲಿಯಲ್ಲಿ ತುಂಬಿದರು. ಬಾಬಾ ಸಾಹೇಬ ಅಂಬೇಡ್ಕರ್ ಕೊಡ ಮಾಡಿದ ಸಂವಿಧಾನದಿಂದಾಗಿ ಒಂದಷ್ಟು ದಲಿತ, ಹಿಂದುಳಿದ ಜನರಿಗೆ ಸೀಟುಗಳು ದೊರಕಿದ್ದು ಬಿಟ್ಟರೆ ಹೆಚ್ಚಿನ ಬದಲಾವಣೆ ಏನೂ ಘಟಿಸಲಿಲ್ಲ. ಪ್ರಜಾಪ್ರಭುತ್ವವೆಂಬ ಸೋಗಿನ ಅರಿ ಭಯಂಕರ ದುಷ್ಟತನವನ್ನು ನಾವೀಗ ನೋಡುತ್ತಿದ್ದೇವೆ. ಜ್ವಲಂತ ಉದಾಹರಣೆ ಎಂದರೆ ಮಂತ್ರಿಗಿರಿಯ ಕಚ್ಚಾಟ. ಪಕ್ಷ ಯಾವುದೇ ಇರಲಿ ಗುಣಲಕ್ಷಣ ಒಂದೇ. ಕರ್ನಾಟಕದಲ್ಲಿ ಬರಗಾಲ ತಿಕ್ಕಿ ಮುಕ್ಕುತ್ತಿದೆ. ರಾಜ್ಯಾದ್ಯಂತ ವಾಡಿಕೆಯಷ್ಟು ಮಳೆ ಸುರಿಯದೆ ಹೆಚ್ಚು ಕಡಿಮೆ ಮುಂಗಾರು ಕೈ ಕೊಟ್ಟಿದೆ. ದೊಡ್ಡ ಶಹರುಗಳಲ್ಲಿಯೂ ಕೂಲಿ ಸಿಗದೆ ಜನರು ಕಂಗಾಲಾಗಿದ್ದಾರೆ. ಕುಡಿಯುವ ನೀರಿಗೂ ತತ್ವಾರ ಆಗಿರುವಾಗ ನಮ್ಮ ಚುನಾಯಿತ ಪ್ರತಿನಿಧಿಗಳು ಮಂತ್ರಿಗಿರಿಗಾಗಿ ನಡೆಸಿರುವ ಕಚ್ಚಾಟ ನೋಡಿದರೆ ಹೇಸಿಗೆ ಬರುತ್ತದೆ. ಶಾಸಕರೆಲ್ಲರೂ ಮಂತ್ರಿಗಿರಿಯ ಆಕಾಂಕ್ಷಿಗಳೇ. ಮಂತ್ರಿಗಿರಿ ಸಿಗದಿದ್ದರೆ ರಾಜೀನಾಮೆ, ಧಮಕಿ, ಬೆಂಬಲಿಗರಿಂದ ಧರಣಿ, ಪ್ರದರ್ಶನ, ಕಚ್ಚಾಟ ಪಟ್ಟಿ ಮಾಡಲೂ ಸಾಧ್ಯವಿಲ್ಲದಷ್ಟು ಅಸಹ್ಯ ಕಾರನಾಮೆಗಳು ನಡೆಯುತ್ತವೆ. ಇಂಥ ಚಟುವಟಿಕೆಗಳಿಗೆ ಯಾವ ಪಕ್ಷವೂ ಹೊರತಾಗಿಲ್ಲ. ಒಂದೆಡೆ ಯುವ ಜನತೆ ಉದ್ಯೋಗವಿಲ್ಲದೆ, ಬದುಕಿಗೆ ಕನಿಷ್ಠ ಆಸರೆಯೂ ಇಲ್ಲದ್ದಕ್ಕಾಗಿ ಬೀದಿಗಿಳಿದು ಹೋರಾಟ ನಡೆಸುತ್ತಿದ್ದರೆ ಈ ಶಾಸಕ ಮಹಾಶಯರಿಗೆ ತಮ್ಮ ಮಂತ್ರಿ ಪದವಿ, ಅಲ್ಲಿ ಗಿಟ್ಟಿಸಿಕೊಳ್ಳಬಹುದಾದ ಆದಾಯದ ಚಿಂತೆ. ಅಳಿದು ಹೋದ ರಾಜರುಗಳಿಗಿಂತ ಯಾವುದರಲ್ಲಿಯೂ ಕಡಿಮೆ ಇರದ ಇವರು ತಮ್ಮ ಮಕ್ಕಳು, ಮರಿಮೊಮ್ಮಕ್ಕಳಿಗಾಗಿ ಬಡಿದಾಡುತ್ತಾರೆ ಹೊರತು ಆಯ್ಕೆ ಮಾಡಿ ಕಳುಹಿಸಿದ ಪ್ರಜೆಗಳ ಬಗೆಗೆ ಎಳ್ಳಷ್ಟು ಕಾಳಜಿ ಇಲ್ಲ. ದೇಶವೆಂಬ ದೇಶವು ಕೋಮುದಳ್ಳುರಿಯಲ್ಲಿ ಹೊತ್ತಿ ಉರಿಯುತ್ತಿದೆ. ಸಂಘಿಗಳ ಉಪಟಳದಿಂದ ಮುಕ್ತರಾಗಬೇಕೆಂದು ಜನತೆ ಬದುಕನ್ನೇ ಪಣಕ್ಕಿಟ್ಟು ಕೇಂದ್ರ ಸರಕಾರದ ವಿರುದ್ಧ ಸೆಣಸಾಡುತ್ತಿದ್ದರೆ ರಾಜ್ಯದ ನಾಯಕರು ತಾವು ಕೋಮುವಾದಿಗಳಲ್ಲ; ಪ್ರಜಾಪ್ರೇಮಿಗಳು, ಸಾಮಾನ್ಯ ಜನರ ಬದುಕು ತಮ್ಮ ಆದ್ಯತೆ ಎಂದು ಬೊಗಳೆ ಹೊಡೆಯುತ್ತಲೇ ಮಂತ್ರಿಗಿರಿಯ ಕಚ್ಚಾಟದಲ್ಲಿ ನಾಚಿಕೆ ಬಿಟ್ಟು ನಿರತರಾಗಿದ್ದಾರೆ. ಇವರ ಆದ್ಯತೆ ಯಾವತ್ತೂ ಪ್ರಜೆಗಳ ಬದುಕು ಆಗಿರಲೇ ಇಲ್ಲ. ಇಂಥವರನ್ನು ನೋಡಿಯೇ ತತ್ವಪದಕಾರ ಕಡಕೋಳ ಮಡಿವಾಳಪ್ಪನವರು

‘‘ಈ ಭೂಪತಿಗಳ ಮೆಚ್ಚಿ ಅರೆಸುಖ ತನಗಾಯಿತು

ತಾ ಪೂರ್ಣಸುಖ ಇಲ್ಲದೆ ಹೋಯಿತು

ಆ ಪರಬ್ರಹ್ಮವ ಒಲಿದರೇನಾಯ್ತು

ಈ ಪರಿಭವವೆಲ್ಲ ಹರಿ ಹರಿದು ಹೋಯಿತ್ಹೋಯಿತೊ ॥’’

ಎಂದು ಉದ್ಗಾರ ಮಾಡಿದ್ದಾರೆ. ಮಡಿವಾಳಪ್ಪ ಅಂದಿನ ಭೂಪತಿಗಳು ಅಂದರೆ ಆಳರಸರ ಕುರಿತು ಈ ಮಾತು ಹೇಳಿರಬಹುದಾದರೂ ಅದು ಇಂದಿಗೂ ಪ್ರಸ್ತುತವಾಗಿದೆ. ಇದರರ್ಥ ಆಳುವ ಪ್ರಭುಗಳನ್ನು ಪ್ರಶ್ನಾತೀತವಾಗಿ ನಂಬಿದಾಗಲೂ ಸಿಕ್ಕಿದ್ದು ಅರ್ಧ ಸುಖವೇ ಹೊರತು ಎಂದಿಗೂ ಪೂರ್ಣ ಸುಖ ಸಿಗಲೇ ಇಲ್ಲ. ಪ್ರಭುವನ್ನು ಮೆಚ್ಚಿಸಲೆಂದು ಮಾಡಿದ ಕಸರತ್ತುಗಳಲ್ಲಿ ಅರ್ಧದಷ್ಟು ಪರಬ್ರಹ್ಮನ ಕುರಿತು ಧ್ಯಾನಿಸಿದರೆ ಬ್ರಹ್ಮನು ಒಲಿಯುತ್ತಿದ್ದನಂತೆ. ಬ್ರಹ್ಮನ ಒಳಿಸಿಕೊಳ್ಳುವುದು ಸುಲಭ. ಆದರೆ ಆಳರಸರನ್ನು ಮೆಚ್ಚಿಸಿಕೊಂಡು ಸುಖ ಪಡೆದೆನೆಂಬುದು ಭ್ರಮೆ ಎನ್ನುತ್ತಾನೆ ಮಡಿವಾಳಪ್ಪ. ಅಂದಿನ ಭೂಪತಿಗಳೇ ಇಂದಿನ ಶಾಸಕ, ಸಂಸದ ಮಹೋದಯರಾಗಿದ್ದಾರೆ. ಅದರಲ್ಲಿ ಕೆಲವರು ಅಪವಾದವೆಂಬಂತೆ ತಮ್ಮ ಬದ್ಧತೆ, ಕಾರ್ಯ ವೈಖರಿಯಿಂದ ಆಯ್ಕೆಯಾಗಿ ಬಂದವರು ಇರಬಹುದು. ಅಂಥವರು ನಗಣ್ಯವಾಗಿದ್ದಾರೆ. ಹೆಚ್ಚಿನ ಪ್ರತಿನಿಧಿಗಳು ಜಾತಿ ಬಲ, ತೋಳಬಲ, ಹಣಬಲ ಇತ್ಯಾದಿ ಸಾಧ್ಯವಿರುವ ಎಲ್ಲ ಕಾನೂನುಬಾಹಿರ ಕಾರ್ಯತಂತ್ರಗಳಿಂದಲೇ ಆಯ್ಕೆಯಾಗಿದ್ದಾರೆ. ಚುನಾವಣೆಯಲ್ಲಿ ಭ್ರಷ್ಟಾಚಾರ ಎಂಬ ಮಾತಿಗೆ ಅರ್ಥವೇ ಉಳಿದಿಲ್ಲ. ಭ್ರಷ್ಟಾಚಾರಕ್ಕೆ ಚುನಾವಣೆ ಎಂಬ ಹೆಸರಿದೆ. ಆದರೆ ಈ ಬಾರಿ ಮಾತ್ರ ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ ಹೆಚ್ಚು ಸೀಟುಗಳನ್ನು ಪಡೆದು ಅಧಿಕಾರ ಗದ್ದುಗೆ ಹಿಡಿದದ್ದು ಪ್ರಜ್ಞಾವಂತ ಜನರ ಶ್ರಮ ಮತ್ತು ಪ್ರತಿಫಲರಹಿತ ಬೆಂಬಲದಿಂದ ಎಂಬುದನ್ನು ಅವರು ಮರೆಯಬಾರದು. ಆರ್ಥಿಕ ನೀತಿಗಳಲ್ಲಿ ಬಿಜೆಪಿ, ಕಾಂಗ್ರೆಸ್, ಅಸಂಖ್ಯ ಸ್ಥಳೀಯ ಚಿಕ್ಕಪುಟ್ಟ ಪಕ್ಷಗಳು ಸೇರಿದಂತೆ ಏನೂ ವ್ಯತ್ಯಾಸವಿಲ್ಲ ಎಂಬುದನ್ನು ಕಮ್ಯುನಿಸ್ಟ್ ಪಕ್ಷಗಳು ಆಗಾಗ ತಿಳಿಸಿ ಹೇಳುತ್ತಲೇ ಇವೆಯಾದರೂ ಇಳಿಧ್ವನಿಯಲ್ಲಿರುವ ಅವರು ಪರಿಣಾಮಕಾರಿಯಾಗಿ ಜನರನ್ನು ತಲುಪುತ್ತಿಲ್ಲ. ಆದರೂ ಬಿಜೆಪಿಯಂಥ ಕರಾಳ ಫ್ಯಾಶಿಸ್ಟರನ್ನು ಹಿಮ್ಮೆಟ್ಟಿಸಲು ಅನಿವಾರ್ಯವಾಗಿ ಜನರು ಕಾಂಗ್ರೆಸ್‌ನ ಕೈಹಿಡಿದರು. ಜನಾಂಗೀಯ ದ್ವೇಷವನ್ನೇ ಅಸ್ತ್ರ ಮಾಡಿಕೊಂಡಿರುವ ದುಷ್ಟರ ಕೈಯಿಂದ ಪಾರಾಗಲೆಂದು ಇವರ ಪರಿದಿಗೆ ಬಿದ್ದರೆ ಇವರು ತಾವೇನೂ ಅವರಿಗಿಂತಲೂ ಸ್ವಾರ್ಥ ಸಾಧನೆಯಲ್ಲಿ ಕಮ್ಮಿ ಇಲ್ಲ ಎಂಬುದನ್ನು ಹೆಜ್ಜೆ ಹೆಜ್ಜೆಗೂ ಸಾಬೀತು ಪಡಿಸುತ್ತಲೇ ಇದ್ದಾರೆ. ಬಹಿರಂಗದ ಕೋಮುವಾದಿಗಳನ್ನು ಎದುರಿಸಬಹುದು. ಆದರೆ ಅಂತರಂಗದ ಕೋಮುವಾದಿಗಳನ್ನು ಹಿಮ್ಮೆಟ್ಟಿಸುವುದು ಸುಲಭವಲ್ಲ. ಜನತೆ ಫ್ಯಾಶಿಸ್ಟರಿಂದ ದೇಶದ ಚುಕ್ಕಾಣಿ ಬಿಡಿಸಿಕೊಳ್ಳಬೇಕೆಂದು ತ್ಯಾಗ-ಬಲಿದಾನಗಳಿಗೆ ಸಿದ್ಧರಾದರೆ ಇವರು ಸುಟ್ಟ ಮನೆಯ ಗಳ ಎಣಿಸಲು ಮುಂದಾಗಿದ್ದಾರೆ.

ಮಂತ್ರಿಗಿರಿಯಿಂದ ಜನತೆಗೆ ದಕ್ಕುವುದು ಏನೂ ಇಲ್ಲ. ಯಾರೇ ಮಂತ್ರಿಯಾದರೂ ಅದೇ ಸ್ವಾಹಾ. ಅದೇ ಸ್ವಜನ ಪಕ್ಷಪಾತ, ಕಮಿಷನ್ ದಂಧೆ, ಅದೇ ಮೋಸ-ವಂಚನೆ. ಜನರ ಬದುಕಿನಲ್ಲಿ ಪರಿವರ್ತನೆ ತರುವ ಇಚ್ಛಾಶಕ್ತಿಯಿರುವ ಜನನಾಯಕರ ಅವಶ್ಯಕತೆ ಇದೆ. ಪದವಿ ಪಿಪಾಸು ರಾಜಕಾರಣಿಗಳಿಂದ ಪ್ರಜೆಗಳ ಬದುಕಿನಲ್ಲಿ ಎಳ್ಳಷ್ಟೂ ಬದಲಾವಣೆಯಾಗದು. ಬರಲಿರುವ ಸಂಸತ್ತಿನ ಚುನಾವಣೆ ಭೂತದ ಭಯವು ಅಟ್ಟಾಡಿಸುತ್ತಿದೆ. ಎಸ್‌ಐಆರ್ ಮೂಲಕ ಈಗಾಗಲೇ ಕೇಂದ್ರ ಸರಕಾರ ತನಗೆ ಮತ ನೀಡಲಾರರು ಎಂದು ಅಂದಾಜಿಸುವವರನ್ನು ಹೊರಗಿಡುವ ಎಲ್ಲ ವ್ಯಾಯಾಮಗಳನ್ನು ಪ್ರಜಾಪ್ರಭುತ್ವದ ಹೆಸರಿನಲ್ಲಿಯೇ ಮಾಡುತ್ತಿದೆ. ಈ ಹಿಂದೆ ಜನರು ಶಾಸಕ, ಸಂಸದರನ್ನು ಆಯ್ಕೆ ಮಾಡುತ್ತಿದ್ದರೆ ಈಗ ಕೇಂದ್ರ ಬಿಜೆಪಿ ಸರಕಾರ ಮತದಾರರನ್ನು ಆಯ್ಕೆ ಮಾಡಿಕೊಳ್ಳುತ್ತಿದೆ. ಪ್ರಜಾತಂತ್ರದ ಚುಕ್ಕಾಣಿ ಈಗ ಜನರ ಕೈಯಲ್ಲಿ ಇಲ್ಲವೇ ಇಲ್ಲ. ಬ್ರಹ್ಮಾಂಡ ಭ್ರಷ್ಟರಾಗಿರುವ ರಾಜಕಾರಣಿಗಳು ಅದನ್ನು ಈಗಾಗಲೇ ಬೃಹತ್ ಬಂಡವಾಳಶಾಹಿಗಳ ಕೈಗೆ ವರ್ಗಾಯಿಸಿದ್ದಾರೆ. ಆದರೂ ದೇಶದ ಯುವಕರು ವಿಶ್ವಾಸ ಕಳೆದುಕೊಳ್ಳದೆ ಕೋಮವಾದಿ ಸರಕಾರವನ್ನು ಕಿತ್ತೆಸೆಯಲು ತಮ್ಮದೇ ಸೀಮಿತ ಸಾಧನೆಗಳಿಂದ ಬಡಿದಾಡುತ್ತಿದ್ದಾರೆ. ವಿರೋಧ ಪಕ್ಷಗಳು ಮಾತ್ರ ಕಡಿದಾಗ ಕಡಿದಷ್ಟೆ ಜಾಗದಲ್ಲಿ ತುರಿಸಿಕೊಳ್ಳುತ್ತ ತಮ್ಮದೇ ಪದವಿ, ಪಟ್ಟ, ಅಧಿಕಾರ ಹಂಚಿಕೆಯಲ್ಲಿ ವ್ಯಸ್ತವಾಗಿವೆ. ಹಲವು ಬಾರಿಯಂತೂ ಒಳ ಒಪ್ಪಂದಗಳನ್ನು ಮಾಡಿಕೊಂಡು ಜನರ ನಿರೀಕ್ಷೆಗಳನ್ನು ಹುಸಿಗೊಳಿಸಿದ್ದಾರೆ. ಆಯ್ಕೆ ಇಲ್ಲದಂಥ ಪರಿಸ್ಥಿತಿ ನಿರ್ಮಾಣ ಮಾಡಲಾಗುತ್ತಿದೆ. 2014 ರಿಂದಲೂ ಅನೇಕ ಬಾರಿ ವಿರೋಧ ಪಕ್ಷಗಳು ಕೋಮುವಾದಿ ಬಿಜೆಪಿಯನ್ನು ಹಣಿಯಲೆಂದು ಒಗ್ಗಟ್ಟಾಗಿ ಇನ್ನೇನು ಯಶಸ್ವಿಯಾಗುತ್ತಾರೆ ಎನ್ನುವಷ್ಟರಲ್ಲಿ ಸೀಟು ಹಂಚಿಕೆ, ಮುಖ್ಯಮಂತ್ರಿ, ಪ್ರಧಾನ ಮಂತ್ರಿಗಿರಿಗಳ ಕಚ್ಚಾಟದಲ್ಲಿ ಒಡೆದು ಚೂರುಚೂರಾಗಿದ್ದಾರೆ. ಒಗ್ಗಟ್ಟಿನಿಂದ ಕೋಮುವಾದಿ ಶಕ್ತಿಗಳ ವಿರುದ್ಧ ಸೆಣೆಸಬೇಕಾದ ಈ ಹಂತದಲ್ಲಿಯೂ ಶಾಸಕ ಮಹೋದಯರ ಕಿತ್ತಾಟ ಹೇಸಿಗೆ ತರಿಸುತ್ತಿದೆ. ಹೆಣ ಸುಡುತ್ತಿರುವ ಬೆಂಕಿಯ ಮೇಲೆ ರೊಟ್ಟಿ ಬೇಯಿಸಿಕೊಳ್ಳ ಬಯಸುವ ಇಂಥ ನಾಯಕರು ಜನರನ್ನು ಕೋಮು ಕಪಿಮುಷ್ಟಿಯಿಂದ ಪಾರುಗಾಣಿಸಬಹುದೆ?

ಇನ್ನೊಂದೆಡೆ ಜನರ ಮನೋಭೂಮಿಕೆಯನ್ನು ಕಲುಷಿತಗೊಳಿಸಿದ್ದಾರೆ. ರಾಜಕಾರಣಿಗಳು ಅನುಯಾಯಿಗಳನ್ನು ಬೆಳೆಸಿಲ್ಲ. ಬಾಲಬಡುಕ ಗುಲಾಮರನ್ನು ಸಾಕಿಕೊಂಡಿದ್ದಾರೆ. ಬಡ ಜನತೆ ತಮ್ಮದೇ ಕಷ್ಟ ನಷ್ಟಗಳಿಗಾಗಿ ಹೋರಾಟ ಮಾಡಲು ಉತ್ಸಾಹ ತೋರಿಸದಿದ್ದರೂ ತಮ್ಮ ನಾಯಕರ ಮಂತ್ರಿಗಿರಿಗಾಗಿ ಧರಣಿ, ಸತ್ಯಾಗ್ರಹ ಅಷ್ಟೇ ಏಕೆ; ಪೆಟ್ರೋಲ್ ಸುರಿದುಕೊಂಡು ಸಾಯಲು ಸಿದ್ಧರಾಗುತ್ತಿದ್ದಾರೆ. ಹೋರಾಟದ ಪ್ರವೃತ್ತಿಯನ್ನೇ ಮಣ್ಣು ಮುಕ್ಕಿಸಲಾಗಿದೆ. ಪಕ್ಷ ಯಾವುದೇ ಇರಲಿ: ಜನಾಧಿಕಾರವು ವಂಶ ಪಾರಂಪರ್ಯ ದಂಧೆಯಾಗಿದೆ. ಅಪ್ಪ, ಮಗ, ಮೊಮ್ಮಗ, ಮಗಳು, ಸೊಸೆ, ಸಹೋದರ ಯಾರಾದರೂ ಆಗಬಹುದು ಒಟ್ಟಾರೆ ಅವರ ರಕ್ತ ಸಂಬಂಧಿಗಳು ಆಯ್ಕೆಯಾಗಬೇಕು. ಅಧಿಕಾರವು ತಲೆತಲಾಂತರದಿಂದಲೂ ಅವರ ಮನೆತನದಿಂದ ತಪ್ಪಿ ಹೋಗಬಾರದು. ಜನತೆ ಈ ವಂಶ ಪಾರಂಪರ್ಯ ಆಡಳಿತವನ್ನು ಒಪ್ಪಿಕೊಂಡು ಬಿಟ್ಟಿದೆ. ಅಳಿದ ರಾಜ-ಮಹಾರಾಜರ ಕುಟುಂಬಗಳು, ಸಾಹುಕಾರರ ವಂಶದ ಕುಡಿಗಳೇ ನಮ್ಮನ್ನು ಆಳಬೇಕು ಎಂಬ ಗುಲಾಮಗಿರಿಯಿಂದ ಇನ್ನೂ ಹೊರಬಂದಿಲ್ಲ.

ದೇಶವೆಂಬ ದೇಶ ಫ್ಯಾಶಿಸ್ಟ್ ಕ್ರೌರ್ಯದ ಸುಳಿಯಲ್ಲಿ ಒದ್ದಾಡುತ್ತಿದ್ದರೆ ಆಳುವ ಪ್ರಭುಗಳು ತಮ್ಮ ವಂಶೋದ್ಧಾರದ ಮೋಹದಲ್ಲಿ ಬಂದಿಗಳಾಗಿದ್ದಾರೆ. ಸ್ವಾರ್ಥಿಗಳ ಈ ಸ್ಥಿತಿಯನ್ನು ಅರಿಯಲು ಕಥೆಯೊಂದು ನೆರವಿಗೆ ಬರುತ್ತದೆ. ಅದು ಹೀಗಿದೆ.

ಅಡವಿಯಲ್ಲಿ ಕಟ್ಟಿಗೆ ಆರಿಸಲೆಂದು ಹೋದವನಿಗೆ ಹುಲಿಯೊಂದು ಬೆನ್ನು ಹತ್ತುತ್ತದೆ. ಹುಲಿಯಿಂದ ಪಾರಾಗಲೆಂದು ಓಡಲು ತೊಡಗುತ್ತಾನೆ. ಮೈ ಮೇಲೆ ಖಬರು ಇಲ್ಲದಂತೆ ಓಡುತ್ತಿರಲು ಎದುರಿಗೆ ಆಳವಾದ ಹಾಳು ಬಾವಿ ಕಾಣಿಸುತ್ತದೆ. ಅದರಲ್ಲಿ ಬಿದ್ದು ಈಜಿ ಪಾರಾಗಬೇಕೆಂದು ಹಾರಿಕೊಳ್ಳುತ್ತಾನೆ. ಇನ್ನೇನು ಬಾವಿಯ ತಳಕ್ಕೆ ಬೀಳಬೇಕು ಎಂಬಷ್ಟರಲ್ಲಿ ಕೆಳಗೆ ಕರಿನಾಗರವೊಂದು ಹೆಡೆ ತೆರೆದು ಬುಸುಗುಟ್ಟುವುದು ಕಾಣಿಸುತ್ತದೆ. ಥಟ್ಟನೆ ಮಧ್ಯದಲ್ಲಿ ನೀರು ಸೇದಲೆಂದು ಇಳಿಬಿಟ್ಟ ಹಗ್ಗವೊಂದು ಕಾಣಿಸುತ್ತದೆ. ಬದುಕಿದೆ ಬಡಜೀವವೇ ಎಂದು ಹಗ್ಗ ಹಿಡಿದು ನೇತಾಡತೊಡಗುತ್ತಾನೆ. ಹೇಳಿ ಕೇಳಿ ಅರಣ್ಯ. ಈತನ ಧ್ವನಿ ಕೇಳಲು ಅಲ್ಲಿ ಯಾರೂ ಇಲ್ಲ. ಹಗ್ಗಕ್ಕೆ ಹಾಗೇ ಜೋತು ಬೀಳುತ್ತಾನೆ. ಕೈ ಸೋಲತೊಡಗುತ್ತವೆ. ಮೇಲೆ ಏರುವುದು ಸಾಧ್ಯವಿಲ್ಲ. ಹುಲಿ ಬಾಯಿ ತೆರೆದುಕೊಂಡು ಕಾದು ಕೂತಿದೆ. ಕೆಳಗೆ ಹಾರುವಂತಿಲ್ಲ ಹಾವು ಬುಸುಗುಡುತ್ತಿದೆ. ಅಷ್ಟರಲ್ಲಿ ದೊಡ್ಡ ಇಲಿಯೊಂದು ಹಗ್ಗವನ್ನು ಕಡಿಯುತ್ತಿರುವುದು ಕಾಣಿಸುತ್ತದೆ. ಭಯದಿಂದ ಕಂಪಿಸುತ್ತಾನೆ. ಏನೂ ಮಾಡುವಂತಿಲ್ಲ. ಅದರ ನಡುವೆ ಈತನ ನೆತ್ತಿಯ ಮೇಲೆ ಬಾವಿಯ ಗೋಡೆಗೆ ಆತುಕೊಂಡು ಬೆಳೆದಿದ್ದ ಹುಣಸೇ ಮರದ ಟೊಂಗೆಗೆ ಜೇನು ಹತ್ತಿಕೊಂಡಿದ್ದು ನೋಡುತ್ತಾನೆ. ಜೇನಿನ ತಟ್ಟೆ ತುಂಬಿ ತುಪ್ಪ ಜಿನುಗುಟ್ಟುತ್ತಿದೆ. ಹೇಗಾದರೂ ಮಾಡಿ ಸುರಿಯುವ ಜೇನು ತಿನ್ನಲೆಂದು ಮುಂದೆ ಮುಂದೆ ನಾಲಿಗೆ ಚಾಚಲು ಪ್ರಾರಂಭಿಸುತ್ತಾನೆ. ಕೆಳಗಿನ ಹಾವು, ಮೇಲಿನ ಹುಲಿ, ಮಧ್ಯದ ಇಲಿ ಯಾವುದೂ ಆತನ ಜೇನಿನ ಆಸೆಯನ್ನು ತಡೆ ಹಿಡಿಯಲು ಸಾಧ್ಯವಾಗುವುದಿಲ್ಲ. ಇಷ್ಟೇ ಕಥೆ. ಜನರು ಹುಲಿ, ಹಾವು, ಇಲಿಗಳ ದುರ್ದಮ್ಯ ದಾಳಿಗೆ ಸಿಕ್ಕು ನಲುಗಿ ಹೋಗುತ್ತಿದ್ದರೆ ಇವರಿಗೆ ತೊಟ್ಟಿಕ್ಕುತ್ತಿರುವ ಜೇನಿನ ಮೇಲಾಸೆ. ಶಾಸಕರ ಈ ನಡೆ ಸಾರ್ವತ್ರಿಕ ಬದುಕಿನೊಂದಿಗೆ ತಳಕು ಹಾಕಿಕೊಂಡಿರುವುದರಿಂದ ಅವರ ಸ್ವಾರ್ಥ ನಾಡನ್ನೇ ಕಬಳಿಸುತ್ತದೆ ಎಂಬುದರಲ್ಲಿ ಸಂದೇಹವಿಲ್ಲ.

Tags

IndiaDemocracy
share
ಡಾ. ಮೀನಾಕ್ಷಿ ಬಾಳಿ
ಡಾ. ಮೀನಾಕ್ಷಿ ಬಾಳಿ
Next Story
X