ಅವಳ ಚರಿತ್ರೆಯನ್ನು ಹುಡುಕುತ್ತಾ...

ಒಬ್ಬೊಬ್ಬ ಮಹಿಳೆಯರು ತಾವು ಕ್ರಮಿಸಿದ ದಾರಿಯಲ್ಲಿ ಮೈಲುಗಲ್ಲುಗಳನ್ನು ನೆಟ್ಟಿದ್ದಾರೆ. ಸಾಧನಾ ಮಾರ್ಗದಲ್ಲಿ ಅವರು ಎದುರಿಸಿದ ಕಷ್ಟ ಪರಂಪರೆಗಳಿಗೆ ಲೆಕ್ಕವಿಲ್ಲ. ಅಮುಕಿದಷ್ಟು ಪುಟಿದೆದ್ದ ಇಲ್ಲಿನ ಮಹಿಳೆಯರು ತೋರಿಸಿದ ಜೀವನ ಪ್ರೀತಿ ಅನನ್ಯ, ಅಪರೂಪ. ಇಲ್ಲಿ ಈಗಾಗಲೇ ಹೆಸರು ಮಾಡಿರುವ ಮಹಿಳೆಯರು ಇರುವಂತೆ ಮೊದಲ ಬಾರಿಗೆ ಅಕ್ಷರ ಲೋಕಕ್ಕೆ ದಕ್ಕಿರುವ ಬಿದನೂರಿನ ಗಂಗಮ್ಮ, ಲಕ್ಷ್ಮೀಬಾಯಿ ಮರತೂರ, ಜತ್ತ ಶಿವಲಿಂಗವ್ವನಂಥ ಮಹಿಳೆಯರು ಮಾಡಿದ ಸಾಧನೆಯು ಗಮನ ಸೆಳೆಯುತ್ತದೆ. ಇವರೆಲ್ಲರೂ ಆಧ್ಯಾತ್ಮಿಕ ಲೋಕದಲ್ಲಿ ಬೆಳಗಿದವರಾದರೂ ಸ್ತ್ರೀವಾದಿ ನೆಲೆ ಮತ್ತು ನಿಲುವುಗಳನ್ನು ತಮ್ಮದೇ ಮಿತಿಯಲ್ಲಿ ವ್ಯಕ್ತ ಪಡಿಸಿದ್ದು ಕುತೂಹಲ ಮೂಡಿಸುತ್ತದೆ.
ಭಾರತ ಒಳಗೊಂಡಂತೆ ವಿಶ್ವದಾದ್ಯಂತ ಈವರೆಗೆ ಸೃಷ್ಟಿಯಾದ ಚರಿತ್ರೆಯು ಪುರುಷ ಕೇಂದ್ರಿತವೇ ಆಗಿದೆ. ಕನ್ನಡದ ಚರಿತ್ರೆ/ಇತಿಹಾಸ ಪದವು ಇಂಗ್ಲಿಷ್‌ನಲ್ಲಿ HISTORY ಎಂದಾಗುತ್ತದೆ. ಇದರ ಪದಚ್ಛೇದ ಮಾಡಿದರೆ ‘HIS STORY ಎಂದಾಗುತ್ತದೆ. ‘HER STORY’ ಈವರೆಗೂ ನಮೂದಾಗಿಲ್ಲ. ಹೌದು ಈವರೆಗೂ ಕಟ್ಟಿಕೊಂಡಿದ್ದೆಲ್ಲ ಅವನ ಚರಿತ್ರೆಯೇ. ಅವಳ ಚರಿತ್ರೆಯು ಇತಿಹಾಸದಲ್ಲಿ ಗೈರುಹಾಜರಾಗಿದೆ. ಹಾಗೆ ನೋಡಿದರೆ ಮಾನವರ ಚರಿತ್ರೆಯನ್ನು ಗಂಡು-ಹೆಣ್ಣು ಸೇರಿಯೇ ಮುನ್ನಡೆಸಿಕೊಂಡು ಬಂದಿದ್ದಾರಾದರೂ ಪುರುಷ ಪ್ರಧಾನ ಸಮಾಜ ಸ್ತ್ರೀಯರ ಪಾಲುದಾರಿಕೆಯನ್ನು ಪರಿಗಣಿಸುವುದೇ ಇಲ್ಲ. ಇತಿಹಾಸ ಪೂರ್ವ ಕಾಲಘಟ್ಟದಲ್ಲಿ ಅಂದರೆ ತೀರ ಆದಿಮ ಕಾಲದಲ್ಲಿ ಮನುಷ್ಯರ ಬುದ್ಧಿ-ಭಾವಗಳಿಗೆ ಸಾಣೆ ಹಿಡಿಯದಿದ್ದ ಅವಧಿಯಲ್ಲಿ ಮಕ್ಕಳಿಗೆ, ತಮ್ಮ ಜನನಕ್ಕೆ ನೇರವಾಗಿ ತೊಡಗಿಸಿಕೊಳ್ಳುವ ತಾಯಿ ಮಾತ್ರ ಗ್ರಹಿಕೆಗೆ ಬರುತ್ತಿದ್ದಳಷ್ಟೆ. ಹೀಗಾಗಿ ತಾಯಿ ಎಂಬ ಜೀವವೊಂದು ಜೈವಿಕವಾಗಿಯೇ ಪ್ರಾಮುಖ್ಯತೆ ಪಡೆದುಕೊಂಡು ಮಾತೃ ಪ್ರಧಾನ ಸಂಸ್ಕೃತಿಯು ಚಾಲ್ತಿಯಲ್ಲಿತ್ತು. ಮುಂದೊಂದು ದಿನ ಪ್ರಜನನ ಪ್ರಕ್ರಿಯೆಯಲ್ಲಿ ಪ್ರಧಾನ ಪಾತ್ರ ವಹಿಸುವ ಸ್ತ್ರೀ ಸಂಕುಲವನ್ನು ಅಂಚಿಗೆ ತಳ್ಳಲಾಗುತ್ತದೆ ಎಂಬ ಅರಿವು ಪ್ರಾಯಶಃ ಯಾರಿಗೂ ಇರಲಿಲ್ಲವೇನೊ?
ಮಾತೃ ಪ್ರಧಾನ ವ್ಯವಸ್ಥೆಯಿಂದ ಪಿತೃ ಪ್ರಧಾನ ವ್ಯವಸ್ಥೆಗೆ ತಿರುಗಿಕೊಂಡೊಡನೆ ಸ್ತ್ರೀಸಮುದಾಯದ ಸಂಕಟ ಮೊದಲಿಟ್ಟಿತು. ಜನನ ಕ್ರಿಯೆಗೆ ಕಾರಣೀಭೂತವಾಗುವ ರಜಸ್ವಲೆಯನ್ನೇ ಮೈಲಿಗೆ ಎಂದು ಬಿಂಬಿಸುವ ಮೂಲಕ ಸ್ವಯಂ ಸ್ತ್ರೀಯರು ತಮ್ಮನ್ನು ತಾವೇ ತುಚ್ಛೀಕರಿಸಿಕೊಳ್ಳುವ ಅವಸ್ಥೆಗೆ ತಳ್ಳಲಾಯಿತು. ಹೆಣ್ಣಿನ ಶಕ್ತಿ ಕೇಂದ್ರವಾದ ಗರ್ಭಾಶಯ, ಮಾಸಿಕಸ್ರಾವ, ಮಗುವಿನ ಜನನ ಮುಂತಾಗಿ ಸ್ತ್ರೀಯರ ಜೈವಿಕ ಪ್ರಕ್ರಿಯೆಗಳೆಲ್ಲವನ್ನು ಸೂತಕ ಅಂದರೆ ‘ಪಾಪ’ ಎಂದು ನಂಬಿಸಿ, ಒಟ್ಟು ಸಮಾಜದಲ್ಲಿ ಸ್ತ್ರೀಯರ ಕುರಿತು ಹೇವರಿಕೆ ಭಾವವನ್ನು ಸೃಷ್ಟಿಸಿ ಹುರಿಗಟ್ಟಿಸಲಾಯಿತು. ಇಂಥ ಅಪಪ್ರಥೆಗಳನ್ನು ಮೌಲ್ಯಗಳೆಂದು ಪ್ರತಿಪಾದಿಸಿ ಅನುಲಂಘನೀಯಗೊಳಿಸಲಾಯಿತು. ಸ್ತ್ರೀಯರ ಜೈವಿಕ ಕ್ರಿಯೆಗಳನ್ನೇ ತುಚ್ಛೀಕರಿಸಿದ ಸಮಾಜ ಅವಳು ಮಾಡುವ ಆರ್ಥಿಕ, ಸಾಂಸ್ಕೃತಿಕ ಕಲಾಪಗಳನ್ನೂ ನಗಣ್ಯಗೊಳಿಸಿತು. ಭಾಷೆ, ಸೃಜನ ಕಲೆಗಳು, ಉತ್ಪಾದನಾ ಸಾಮರ್ಥ್ಯ, ರಾಜಕೀಯ ಅಧಿಕಾರ, ಸಾಮಾಜಿಕ ಪ್ರತಿಷ್ಠೆ ಮುಂತಾಗಿ ಎಲ್ಲವನ್ನು ಪುರುಷಕೇಂದ್ರಿತವಾಗಿಯೇ ಅಭಿವೃದ್ಧಿ ಪಡಿಸಿತು, ಅವಳಿಗೇ ಬೆಲೆ ಇಲ್ಲವಾದರೆ ಅವಳು ಮಾಡುವ ಯಾವುದೇ ಕೆಲಸವನ್ನು ಮೌಲ್ಯೀಕರಿಸಲು ಸಾಧ್ಯವೇ ಇರಲಿಲ್ಲ. ಉತ್ಪಾದನಾ ಚಟುವಟಿಕೆಗಳಲ್ಲಿ ಸ್ತ್ರೀಯರು ಪ್ರಧಾನ ಪಾತ್ರ ನಿರ್ವಹಿಸಿದರೂ ಅದರ ಪ್ರತಿಫಲದಲ್ಲಿ ಅವರ ಪಾಲು ಇರಲಿಲ್ಲ. ಆರ್ಥಿಕವಾಗಿಯಂತೂ ಅವಳು ಎಲ್ಲಿಯೂ ಗುರುತಿಸಿಕೊಳ್ಳುವಂತೆ ಇರಲಿಲ್ಲ. ಆರ್ಥಿಕ ಪಾಲುದಾರಿಕೆ ಇಲ್ಲವಾದರೆ ರಾಜಕೀಯ, ಸಾಮಾಜಿಕ ಅವಕಾಶಗಳಂತೂ ಊಹಿಸಲು ಸಾಧ್ಯವಿರಲಿಲ್ಲ. ಜಡ್ಡುಗಟ್ಟಿದ ಸಮಾಜ ವ್ಯವಸ್ಥೆಯು ಸ್ತ್ರೀಯರನ್ನು ಧಾರ್ಮಿಕವಾಗಿ ‘ಮಾಯೆ’ ಎಂದು ಪರಿಗಣಿಸಿದರೆ, ಸಾಮಾಜಿಕವಾಗಿ ಎರಡನೇ ದರ್ಜೆ ಪ್ರಜೆಯೆಂದು, ರಾಜಕೀಯದಲ್ಲಿ ಅಜ್ಞಳೆಂದು, ಸಾಂಸ್ಕೃತಿಕವಾಗಿ ಅಧೀನಳೆಂದು ಪರಿಗಣಿಸಿತು.
ಭಾಷೆ, ಕಲೆ, ಅಧಿಕಾರ, ವಿಜ್ಞಾನ-ತಂತ್ರಜ್ಞಾನ ಎಲ್ಲವನ್ನೂ ಪುರುಷಕೇಂದ್ರಿತವಾಗಿಯೇ ಅಭಿವೃದ್ಧಿ ಪಡಿಸಿಕೊಂಡು ಬರುತ್ತಿರುವುದರಿಂದಾಗಿ ಅವಳು ಕ್ರಮಿಸಿದ ಹೆಜ್ಜೆ ಗುರುತುಗಳನ್ನು ನಗಣ್ಯಗೊಳಿಸಲಾಯಿತು. ಇಲ್ಲವೇ ಅಳಿಸಿ ಹಾಕಲಾಯಿತು. ತತ್ಪರಿಣಾಮ ಸ್ತ್ರೀಯರು ಇತಿಹಾಸದಲ್ಲಿ ಸಂಪೂರ್ಣ ಗೈರು ಹಾಜರಾದರು. ಇಲ್ಲವೇ ಪುರುಷಾಧೀನ ಟೂಲ್ಸ್‌ಗಳಾಗಿ ನಿರ್ಮಿಸಲಾಯಿತು. ಕರ್ನಾಟಕವೂ ಇದಕ್ಕೆ ಹೊರತಾಗೇನು ಇರಲಿಲ್ಲ. ಇಂಥ ಕಳಂಕವನ್ನು ಹೊಡೆದೋಡಿಸುವ ನಿಟ್ಟಿನಲ್ಲಿ ಇತ್ತೀಚೆಗೆ ನಮ್ಮ ಘನವೆತ್ತ ಸರಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಕರ್ನಾಟಕ ಸಾಹಿತ್ಯ ಅಕಾಡಮಿ ವತಿಯಿಂದ ಮರೆಗೆ ಸಂದ 50 ಧೀಮಂತ ಮಹಿಳೆಯರ ಕುರಿತು ಪುಸ್ತಕಗಳನ್ನು ಬರೆಸಿ ಬಿಡುಗಡೆ ಮಾಡಿಸಿತು. ನಿಜಕ್ಕೂ ಇದು ಶ್ಲಾಘನೀಯ ಕೈಂಕರ್ಯವೇ ಸರಿ. ನಾಡಿಗೆ ಕರ್ನಾಟಕವೆಂದು ನಾಮಾಂಕಿತಗೊಳಿಸಿದ ಅರ್ಧ ಶತಮಾನದ ನೆನಪಿಗಾಗಿ ‘ಕರ್ನಾಟಕ: ಸಂಭ್ರಮ-50’ ಅಭಿಯಾನ ಹಮ್ಮಿಕೊಂಡಿತ್ತು. ಅಭಿಯಾನದ ಅಂಗವಾಗಿ ‘‘ಹೆಸರಾಯಿತು ಕರ್ನಾಟಕ, ಉಸಿರಾಗಲಿ ಕನ್ನಡ’’ ಎಂಬ ಶೀರ್ಷಿಕೆಯಡಿಯಲ್ಲಿ ವರ್ಷದುದ್ದಕ್ಕೂ ಕರ್ನಾಟಕದ ಕಲೆ, ಸಾಹಿತ್ಯ, ಇತಹಾಸ, ಸಂಸ್ಕೃತಿ ಹಾಗೂ ನಾಡು ನುಡಿಗೆ ಸಂಬಂಧಿಸಿದಂತೆ ನವ ಪೀಳಿಗೆಯಲ್ಲಿ ಅರಿವು ಮೂಡಿಸುವ ಹತ್ತಾರು ಯೋಜನೆಗಳನ್ನು ರೂಪಿಸಿತ್ತು. ಅದರ ಅಂಗವಾಗಿಯೇ ‘‘ಮಹಿಳಾ ಮುನ್ನಡೆ’ ಎಂಬ ತಲೆಬರಹದಲ್ಲಿ ಎಲ್ಲ ಕ್ಷೇತ್ರಗಳಲ್ಲಿ ಅವಿರತ ಶ್ರಮಿಸಿ ಸಂದು ಹೋಗಿರುವ ಮಹಿಳೆಯರ ಇತಿಹಾಸವನ್ನು ಕಟ್ಟಿಕೊಡುವ ಮಹಾಮಣಿಹವನ್ನು ಪೂರೈಸಿದೆ. ದಿನಾಂಕ 5-6-2026ರಂದು ಸದರಿ ಪುಸ್ತಕ ಮಾಲಿಕೆಯ ಹೊತ್ತಿಗೆಗಳನ್ನು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಬಿಡುಗಡೆಗೊಳಿಸಲಾಯಿತು. ಅಕಾಡಮಿ ಅಧ್ಯಕ್ಷ ಎಲ್. ಎನ್. ಮುಕುಂದರಾಜ್ ಅವರು ಯೋಜನೆಯ ಪ್ರಧಾನ ಸಂಪಾದಕರಾಗಿ ಇದೊಂದು ಮಹತ್ವಾಂಕ್ಷೆ ಯೋಜನೆಯಾಗಿದ್ದು ಮಾಡಿದ ಕೆಲಸಗಳಲ್ಲಿಯೇ ಅತ್ಯಂತ ತೃಪ್ತಿ ಕೊಟ್ಟಿದೆ ಎಂದು ಹೇಳಿದ್ದು ಗಮನ ಸೆಳೆಯಿತು. ಡಾ. ಎಚ್.ಎಲ್. ಪುಷ್ಪಾ ಮತ್ತು ಡಾ. ಮೀನಾಕ್ಷಿ ಬಾಳಿಯವರು ಸಂಪಾದಕರಾಗಿ ಕಾರ್ಯನಿರ್ವಹಿಸಿ ಸಕಾಲಕ್ಕೆ ಪುಸ್ತಿಕೆಗಳನ್ನು ಹೊರತರುವಲ್ಲಿ ಶ್ರಮಿಸಿದ್ದಾರೆ.
ಯೋಜನೆಯು 50 ಜನ ಮಹಿಳೆಯರ ಕುರಿತು ಕಿರುಪುಸ್ತಿಕೆ ಪ್ರಕಟಿಸುವ ಯೋಜನೆ ಹಾಕಿಕೊಂಡಿತ್ತು. ಪಟ್ಟಿ ಮಾಡುತ್ತಾ ಹೋದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ನೂರಾರು ಸಾಧಕಿಯರು ಗಮನ ಸೆಳೆದರು. ಅಕಾಡಮಿಯ ವ್ಯಾಪ್ತಿ 50 ಮಹಿಳೆಯರ ಕಿರುಪುಸ್ತಿಕೆಗೆ ಸಿಮೀತವಾಗಿದ್ದರಿಂದ ಅಳೆದು ಸುರಿದು ಸದ್ಯ 54 ಸಾಧಕಿಯರ ಕಿರುಹೊತ್ತಿಗೆಗಳನ್ನು ಕೈಗೆತ್ತಿಕೊಳ್ಳಲಾಯಿತು. ಬೆಳಕು ಕಾಣಬೇಕಾದ ಇನ್ನೂ ಕೆಲವು ಸಾಧಕಿಯರು ಉಳಿದುಕೊಂಡದ್ದು ಸ್ತ್ರೀಸಂಕುಲದ ಅಸ್ಮಿತೆಯನ್ನು ಎತ್ತಿ ತೋರಿಸಿದೆ. ಬರೆಸಿಕೊಂಡವರಿಗಿಂತ ಬರೆಯಿಸಿಕೊಳ್ಳುವ ಕ್ಷಮತೆ ಹೊಂದಿಯೂ ಅಕ್ಷರಕ್ಕೆ ದಕ್ಕದೆ ಉಳಿದವರ ಸಂಖ್ಯೆ ಹೆಚ್ಚಿದೆ. ಅಪರೂಪದ ಸಾಧನೆ ಮಾಡಿದ ಅನೇಕ ಧೀರೋದಾತ್ತ ಮಹಿಳೆಯರ ಕೆಲವು ಮಾಹಿತಿಗಳು ದೊರಕುತ್ತವೆ. ಮಹತ್ವದ ಹೆಜ್ಜೆಗಳನ್ನಿಟ್ಟರೂ ಒಂದು ಪುಸ್ತಕಕ್ಕೆ ಆಗುವಷ್ಟು ಮಾಹಿತಿಗಳು ದೊರೆಯದೆ ಇರುವುದರಿಂದ ಉಳಿದು ಹೋದ ಮಹಿಳೆಯರ ಸಂಖ್ಯೆಯೂ ಕಡಿಮೆ ಇಲ್ಲ. ಮೊನ್ನೆ ಮೊನ್ನೆ ಗತಿಸಿಹೋಗಿರುವ ಅಪ್ರತಿಮ ಸಾಧನೆ ಮಾಡಿದ ಮಹಿಳೆಯರ ಕೆಲವು ನೆನಪುಗಳು, ಪ್ರಸಂಗಗಳು ಬಿಟ್ಟರೆ ಕನಿಷ್ಠ ಮಾಹಿತಿಗಳು ಲಭ್ಯವಿಲ್ಲ. ಇಂಥ ಪ್ರತಿಕೂಲ ಪರಿಸ್ಥಿತಿಯ ನಡುವೆಯೂ ಅನೇಕ ಅಪರೂಪದ ವ್ಯಕ್ತಿತ್ವಗಳನ್ನು ಹೆಕ್ಕಿ ತೆಗೆದು ಲೇಖಕರು ಸಾಧಕಿಯರ ಬದುಕು-ಬವಣೆ ಕಟ್ಟಿಕೊಟ್ಟಿದ್ದಾರೆ.
ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾಗವಹಿಸಿದ್ದ ಗಾಂಧಿವಾದಿಗಳಾದ ಕಮಲಾ ಚಟ್ಟೋಪಾಧ್ಯಾಯ, ಯಶೋದರಮ್ಮ ದಾಸಪ್ಪ, ಚನ್ನಮ್ಮ ಹಳ್ಳಿಕೇರಿ, ಉಮಾಬಾಯಿ ಕುಂದಾಪೂರ, ನಾಗಮ್ಮತಾಯಿ ಪಾಟೀಲರಂತಹ ಧೀಮಂತ ಮಹಿಳೆಯರು ಕ್ರಮಿಸಿದ ದಾರಿಯನ್ನು ತೆರೆದು ತೋರಿಸಿದ್ದಾರೆ. ಸ್ವಾತಂತ್ರ್ಯೋತ್ತರ ಕಾಲಘಟ್ಟದಲ್ಲಿ ಸಕ್ರಿಯ ರಾಜಕಾರಣದಲ್ಲಿ ತೊಡಗಿಸಿಕೊಂಡಿದ್ದ ಸರೋಜಿನಿ ಮಹಿಷಿ, ನಾಗಮ್ಮ ಕೇಶವಮೂರ್ತಿ, ಕೆ.ಎಸ್. ನಾಗರತ್ನಮ್ಮ, ಗೋಗಲಿಬಾಯಿ, ಬಸವರಾಜೇಶ್ವರಿಯಂತಹ ಮಹಿಳೆಯರಲ್ಲದೆ ನಾಲ್ವಡಿ ಕೃಷ್ಣರಾಜ ಒಡೆಯರ ತಾಯಿಯಾದ ಕೆಂಪನಂಜಮ್ಮಣ್ಣಿಯವರ ಸಮಾಜಸೇವೆಯನ್ನು ಕುರಿತು ಮೊದಲ ಬಾರಿಗೆ ಪುಸ್ತಕವೊಂದನ್ನು ಪ್ರಕಟಿಸಲಾಗಿದೆ. ಆಧುನಿಕ ಕನ್ನಡ ಸಾಹಿತ್ಯಕ್ಕೆ ಮೌಲಿಕ ಕೊಡುಗೆ ನೀಡಿದ ಸಂತೂಬಾಯಿ ನೀಲಗಾರ, ಜಯದೇವಿತಾಯಿ ಲಿಗಾಡೆ, ಸಾರಾ ಅಬೂಬಕರ್, ಡಾ. ನಿರುಪಮಾ, ಅನುಪಮಾ ನಿರಂಜನ, ಕಮಲಾ ಹಂಪನಾ, ವಿಜಯಾದಬ್ಬೆ, ಶಾಂತಾದೇವಿ ಮಾಳವಾಡ, ಎಚ್.ಎಸ್.ಪಾರ್ವತಿ, ಆರ್. ಕಲ್ಯಾಣಮ್ಮ, ಎಚ್.ವಿ ಸಾವಿತ್ರಮ್ಮ, ಮಲ್ಲಿಕಾ ಕಡಿದಾಳ್, ಶ್ಯಾಮಲಾದೇವಿ ಬೆಳಗಾಂವಕರ್, ಶೈಲಜಾ ಉಡುಚಣ ಮುಂತಾದವರ ಜೀವನ ಚಿತ್ರಗಳು ಇಲ್ಲಿವೆ. ಮಹಿಳಾ ಲೋಕಕ್ಕೆ ಅಸೀಮ ಧೈರ್ಯ ತಂದುಕೊಟ್ಟಿದ್ದ ಪಂಡಿತ ರಮಾಬಾಯಿ, ಗುಡ್ಡೇಕೇರಿ ಕಾಡಮ್ಮ ಹೆಗ್ಗಡತಿಯವರ ಅನುಪಮ ಸೇವೆಯನ್ನು ನೆನಪಿಸಿಕೊಡಲಾಗಿದೆ. ಆಧ್ಯಾತ್ಮಿಕ ಕ್ಷೇತ್ರದಲ್ಲಿ ಅನುಪಮ ಸಿದ್ಧಿಯನ್ನು ಹೊಂದಿ ಗುರುಪಂಥಗಳನ್ನು ಮುನ್ನಡೆಸಿದ್ದ ಶಿವಲಿಂಗವ್ವ ಜತ್ತ, ಬಿದನೂರಿನ ಗಂಗಮ್ಮ, ತಾವರಕೆರೆ ವೀರದಾಸಮ್ಮ, ಮಾತೆ ಮಹಾದೇವಿ, ರಾಯಚೂರಿನ ಹನುಮಂತವ್ವರಂತಹ ಮಹಿಳೆಯರು ಈವರೆಗೂ ಅವರವರ ಗುರುಪಂಥಗಳಲ್ಲಿ ಪರಿಚಿತರಾಗಿದ್ದಾರೆ ಹೊರತು ಅಕಾಡಮಿಕ್ ಲೋಕದಲ್ಲಿ ಅವರ ಪ್ರವೇಶಿಕೆ ಇರಲಿಲ್ಲ. ಸದರಿ ಪುಸ್ತಕ ಮಾಲಿಕೆ ಇಂತಹವರನ್ನು ಮೊದಲ ಬಾರಿಗೆ ಸಾರಸ್ವತ ಲೋಕಕ್ಕೆ ಪರಿಚಯಿಸಿದ್ದು ನಿಜಕ್ಕೂ ಶ್ಲಾಘನೀಯ. ಇವರೆಲ್ಲರೂ ಮೌಲಿಕ ತತ್ವಪದಗಳನ್ನು ರಚಿಸಿ ಸಾಹಿತಿಗಳು ಎನಿಸಿಕೊಂಡಿದ್ದಾರೆ. ಕಲಾ ಕ್ಷೇತ್ರದಲ್ಲಿ ಅದರಲ್ಲಿಯೂ ರಂಗಭೂಮಿಯಲ್ಲಿ ಪ್ರಸಿದ್ಧರಾಗಿಯೂ ಸಮಾಜದಿಂದ ಅವಹೇಳನಕ್ಕೆ ಒಳಗಾಗಿದ್ದ ನತದೃಷ್ಟ ಸಾಧಕಿಯರಾದ ರೆಹಮಾನವ್ವ ಕಲ್ಮನಿ, ಜುಬೇದಾಬಾಯಿ ಸವಣೂರು, ಗೋಹರ್‌ಬಾಯಿ ಕರ್ನಾಟಕಿ ಅವರ ಬದುಕು ಬವಣೆಯನ್ನು ಕಂಡರಿಸಲಾಗಿದೆ. ಸಂಗೀತ ಕ್ಷೇತ್ರದ ದಿಗ್ಗಜರಾದ ಗಂಗೂಬಾಯಿ ಹಾನಗಲ್, ದೃಶ್ಯಮಾಧ್ಯಮದಲ್ಲಿ ಹೆಸರು ಮಾಡಿದ್ದ ಎಸ್. ಧನಲಕ್ಷ್ಮೀ, ಮಾನವ ಕಂಪ್ಯೂಟರ್ ಎಂದೇ ಖ್ಯಾತಿ ವೆತ್ತ ಶಂಕುತಲಾದೇವಿಯರಲ್ಲದೆ ಜನಪದ ಗಾಯಕಿಯಲ್ಲಿ ತಮ್ಮದೇ ಛಾಪು ಮೂಡಿಸಿದ್ದ ದರೋಜಿ ಈರಮ್ಮ, ಲಕ್ಷ್ಮೀಬಾಯಿ ಮರತೂರು, ತಂಬೂರಿ ರಾಜಮ್ಮ, ಸಿರಿಯಜ್ಜಿಯರನ್ನು ಕುರಿತು ಪುಸ್ತಕಗಳು ಪ್ರಕಟವಾಗಿವೆ. ಒಂದು ಕಾಲದಲ್ಲಿ ಕನ್ನಡ ರಂಗಭೂಮಿ ವೈಭವದಿಂದ ಮೆರೆದಿತ್ತು. ಅಂಥ ವೈಭವಕ್ಕೆ ಬುನಾದಿಯಾಗಿ ನೂರಾರು ರಂಗಭೂಮಿ ಕಲಾವಿದೆಯರು ಗತಿಸಿಹೋಗಿದ್ದಾರೆ. ಆ ಎಲ್ಲ ಮಹಿಳೆಯರ ಪೂರ್ಣ ಮಾಹಿತಿಗಳು ದಕ್ಕಿಲ್ಲವಾದರೂ ಕೆಲವು ಸಾಧಕಿಯರಾದ ಸುಭದ್ರಮ್ಮ ಮನ್ಸೂರ, ನಾಟಕ ನಿರ್ದೇಶನ ಕ್ಷೇತ್ರದಲ್ಲಿ ಹೆಸರು ಮಾಡಿದ್ದ ಪ್ರೇಮಾ ಕಾರಂತ, ನೃತ್ಯಕಲಾವಿದೆ ಕೆ. ವೆಂಕಟಲಕ್ಷ್ಮಮ್ಮ, ಆಕಾಶವಾಣಿ ಕಾರ್ಯನಿರ್ವಹಣಾ ಅಧಿಕಾರಿಯಾಗಿ ಯಶಸ್ವಿಯಾಗಿ ಹೊರಹೊಮ್ಮಿದ ಜ್ಯೋತ್ಸ್ನಾ ಕಾಮತ್ ಮುಂತಾದವರು, ವೈದ್ಯಕೀಯ ಕ್ಷೇತ್ರದಲ್ಲಿ ಹೆಸರು ಮಾಡಿದ್ದ ಡಾ. ಎಚ್. ಗಿರಿಜಮ್ಮ, ಡಾ. ಕುಸಮಾ ಸೊರಬ, ಡಾ. ಲೀಲಾವತಿ ದೇವಿದಾಸ್ ಅವರನ್ನಲ್ಲದೆ ಜಾನಪದ ವೈದ್ಯಕ್ಷೇತ್ರದಲ್ಲಿ ಅದ್ಭುತ ಸಾಧನೆ ಮಾಡಿದ ವೈದ್ಯೆ ಜಲ್ಲೆಜಡೆ ಮಾದಮ್ಮ, ಪರಿಸರಕ್ಕಾಗಿ ಜೀವತೆತ್ತ ಸಾಲುಮರದ ತಿಮ್ಮಕ್ಕ ಮುಂತಾದವರ ಕುರಿತು ಪುಸ್ತಕಗಳು ಇಲ್ಲಿ ಅಡಕವಾಗಿವೆ. ಅಪಾರ ಒಳನೋಟವನ್ನಿಟ್ಟುಕೊಂಡು ಕರ್ನಾಟಕದ ಇತಿಹಾಸ ತಜ್ಞರಿಗೆ ಹೊಸ ನೋಟ ಕೊಡುವಲ್ಲಿ ನಿರತರಾಗಿದ್ದ ವಸು ಮಳಲಿ ತೀರ ಚಿಕ್ಕ ವಯಸ್ಸಿನಲ್ಲಿಯೇ ಅಕಾಲ ಮರಣಕ್ಕೆ ತುತ್ತಾಗಿದ್ದು ಇತಿಹಾಸ ಲೋಕಕ್ಕೆ ಮಾತ್ರವಲ್ಲ ಚಳವಳಿಗೂ ತುಂಬಲಾರದ ನಷ್ಟವೇ ಆಗಿದೆ. ಇವರನ್ನೂ ಕುರಿತು ಪುಸ್ತಿಕೆಯೊಂದು ಪ್ರಕಟವಾಗಿದೆ. ಲೈಂಗಿಕ ಅಲ್ಪಸಂಖ್ಯಾತರಾದ ಮಂಜುಳಮ್ಮ ಮತ್ತು ಫಮಿಲಿ ಅವರ ಬದುಕನ್ನು ಅಕ್ಷರಗಳಲ್ಲಿ ಓದಿಕೊಳ್ಳುವುದು ಹೊಸದೊಂದು ಅನುಭವ ಲೋಕಕ್ಕೆ ಕರೆದುಕೊಂಡು ಹೋಗುತ್ತದೆ. ಕೋಮುವಾದಿಗಳ ಕ್ರೂರ ಗುಂಡಿನ ದಾಳಿಗೆ ಬಲಿಯಾದ ಗೌರಿ ಲಂಕೇಶ್ ಅವರನ್ನು ಕುರಿತು ಬರೆದ ಪುಸ್ತಕದ ಓದು ಕಣ್ಣಲ್ಲಿ ಪಸೆ ಮೂಡಿಸುತ್ತದೆ. ಹೆಚ್ಚು ಕಡಿಮೆ ಎರಡು ಶತಮಾನಗಳ ಅವಧಿಯಲ್ಲಿ ಮಹಿಳೆಯರು ಸಾಧಿಸಿದ ಕ್ವಚಿತ್ ಹೆಜ್ಜೆಗಳ ಗುರುತುಗಳನ್ನು ವ್ಯಕ್ತಿ ಕೇಂದ್ರಿತವಾಗಿ ಹಿಡಿದಿಡುವ ಪ್ರಯತ್ನ ಮಾಡಲಾಗಿದೆ.
ಒಬ್ಬೊಬ್ಬ ಮಹಿಳೆಯರು ತಾವು ಕ್ರಮಿಸಿದ ದಾರಿಯಲ್ಲಿ ಮೈಲುಗಲ್ಲುಗಳನ್ನು ನೆಟ್ಟಿದ್ದಾರೆ. ಸಾಧನಾ ಮಾರ್ಗದಲ್ಲಿ ಅವರು ಎದುರಿಸಿದ ಕಷ್ಟ ಪರಂಪರೆಗಳಿಗೆ ಲೆಕ್ಕವಿಲ್ಲ. ಅಮುಕಿದಷ್ಟು ಪುಟಿದೆದ್ದ ಇಲ್ಲಿನ ಮಹಿಳೆಯರು ತೋರಿಸಿದ ಜೀವನ ಪ್ರೀತಿ ಅನನ್ಯ, ಅಪರೂಪ. ಇಲ್ಲಿ ಈಗಾಗಲೇ ಹೆಸರು ಮಾಡಿರುವ ಮಹಿಳೆಯರು ಇರುವಂತೆ ಮೊದಲ ಬಾರಿಗೆ ಅಕ್ಷರ ಲೋಕಕ್ಕೆ ದಕ್ಕಿರುವ ಬಿದನೂರಿನ ಗಂಗಮ್ಮ, ಲಕ್ಷ್ಮೀಬಾಯಿ ಮರತೂರ, ಜತ್ತ ಶಿವಲಿಂಗವ್ವನಂಥ ಮಹಿಳೆಯರು ಮಾಡಿದ ಸಾಧನೆಯು ಗಮನ ಸೆಳೆಯುತ್ತದೆ. ಇವರೆಲ್ಲರೂ ಆಧ್ಯಾತ್ಮಿಕ ಲೋಕದಲ್ಲಿ ಬೆಳಗಿದವರಾದರೂ ಸ್ತ್ರೀವಾದಿ ನೆಲೆ ಮತ್ತು ನಿಲುವುಗಳನ್ನು ತಮ್ಮದೇ ಮಿತಿಯಲ್ಲಿ ವ್ಯಕ್ತ ಪಡಿಸಿದ್ದು ಕುತೂಹಲ ಮೂಡಿಸುತ್ತದೆ.
ಕೆಲವೊಬ್ಬರನ್ನು ಹೊರತು ಪಡಿಸಿದರೆ ಬಹುತೇಕ ಮಹಿಳೆಯರ ಬಗೆಗಿನ ಮಾಹಿತಿಗಳು ಸಿಗುವುದು ಅತ್ಯಂತ ದುಸ್ತರವಾಗಿತ್ತು. ಮಹಿಳೆಯರು ತಾನೆ? ಅವರು ಮಾಡಿದ್ದು ಸಾಧನೆಯೆ ಅನಿಸಿರಲಿಲ್ಲವಾಗಿ ಅವರ ಅಕ್ಕಪಕ್ಕದಲ್ಲಿ ವಾಸವಿದ್ದವರಿಗೂ ಕೂಡ ತಮ್ಮ ನಡುವಿನ ಸಾಧಕಿಯರ ಬಗೆಗೆ ಕನಿಷ್ಠ ಮಾಹಿತಿಗಳು ಇರಲಿಲ್ಲ. ಜೀವಂತವಿದ್ದಾಗ ತಮ್ಮ ಸಾಧನೆಗಾಗಿ ಗುರುತಿಸಿಕೊಂಡಿದ್ದ ಮಹಿಳೆಯರ ಸಂಖ್ಯೆ ಕಡಿಮೆಯೆ ಆಗಿದೆ. ಎಲೆ ಮರೆಯ ಕಾಯಿಯಂತೆ ಉಳಿದುಕೊಂಡವರೇ ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ. ಮಾಲಿಕೆಯ ಲೇಖಕರು ಹರಸಾಹಸ ಪಟ್ಟು ವಿಶಾಲವಾದ ಕ್ಷೇತ್ರ ಕಾರ್ಯ ಮಾಡಿ ವಿಷಯ ಸಂಗ್ರಹಿಸಿಕೊಟ್ಟಿದ್ದಾರೆ. ಇನ್ನೂ ಕೆಲವು ಮಹಿಳೆಯರ ಮಾಹಿತಿಗಳು ಅಲಭ್ಯವಾಗಿ ಕೈ ಚೆಲ್ಲಿದ್ದು ಉಂಟು. ಅದರಲ್ಲಿ ಬಸವಕಲ್ಯಾಣದ ಫೈಮುದಾ ಫಾತಿಮಾ ಎಂಬ ತತ್ವಪದಕಾರ್ತಿಯೂ ಒಬ್ಬಳು. ಇವಳು ಬಸವಕಲ್ಯಾಣದ ನಿವಾಸಿಯಾಗಿದ್ದು ಉಳ್ಳವರ ಮನೆಯ ಕಸಮುಸುರೆ ಕೆಲಸ ಮಾಡುತ್ತಿದ್ದ ಫಾತಿಮಾ ಕಲ್ಯಾಣದಲ್ಲಿ ನಡೆಯುತ್ತಿದ್ದ ಅನುಭವ ಗೋಷ್ಠಿಗಳಲ್ಲಿ ನಿಯಮಿತವಾಗಿ ಭಾಗವಹಿಸುತ್ತಿದ್ದಳಂತೆ. ‘ಅತಕಲ್ಯಾಣಿ’ ಎಂಬ ಸೂಫಿ ಕವಿಯೊಬ್ಬನ ಸಂಪರ್ಕಕ್ಕೆ ಬಂದು ತಾನೂ ತತ್ವಪದಕಾರ್ತಿಯಾಗಿ ಅರಳಿದ್ದು ಮಾತ್ರ ಸೋಜಿಗವಾಗಿದೆ. ಅವಳದೊಂದು ಪದ ಹೀಗಿದೆ.
ಅಲ್ಲಾ ಹೋ ಅಕ್ಬರ್‌ಅನತಿ ಯಾಕ
ಅಲ್ಲಾನ ದಿಲ್ನೀ ತಿಳಕೊಂಡಿಲ್ಲ ಯಾಕ ॥ ಪ ॥
ಅಲ್ಲಾ ಅಂತ ಚೀರುತಿ ಯಾಕ
ಅಲ್ಲಾನು ಕಿವುಡ ಅನಕೊಂಡಿದ್ಯಾಕ
ಅಲ್ಲಾನಾದರ ಕಿವುಡ
ಇಲ್ಲೊ ನಿನಗ ಜಾಗಾ ಭಡವ ॥ 1 ॥
ಅಲ್ಲಾ ಅಂಬವ ಸಣ್ಣವನಲ್ಲ
ಮಂದಿರ ಮಸೀದಿಯೊಳಗ ಹಿಡಿಯುವನಲ್ಲ
ಕಟ್ಟಿದಿ ಯಾಕ ನೀ ಅವೆಲ್ಲ
ಮಾಡಿಕೊ ನಿನ್ನ ದ್ಯಾಹ ಮಜೀದ ॥ 2 ॥
ನಮಾಜ ಮಾಡೊ ನಿಮ್ಮ ಒಳಗ
ನಾದ ಬರತಾದ ಅದರಿಂದೊಳಗ
ನಾದದೊಳಗ ಕಾಣೋ ನೀ ಅಲ್ಲಾಗ
ಕಂಡು ಆಗೋ ಪರಿಪೂರ್ಣ ॥ 3 ॥
ದೊರೆ ಬಸವನ ಬೇಟಿ ನಾ ಫಾತಿಮಾ
ಹಾಡಿನೀ ಪದವ ಕಲ್ಯಾಣಿ ಗುರುವಿನಿಂದ
ನಡೆದೆ ನಾ ಗುರು ಹೇಳಿದ ಮಾರ್ಗದಿಂದ
ನಡೆದೆ ನಾ ಗುರು ಹೇಳಿದ ಮಾರ್ಗದಿಂದ ॥ 4 ॥
ಸರಳ ಆದರೆ ಅನುಭಾವಪೂರ್ಣವಾದ ಈ ಪದದಲ್ಲಿ ಕಾವ್ಯಾಂಶದ ಕೊರತೆ ಇರಬಹುದು. ಆದರೆ ಸಾಧನೆಯ ಹೊಳಹು ಉತ್ಕೃಷ್ಟವಾದುದೆ. ಇನ್ನು ಆರು ಪದಗಳು ದೊರೆತಿವೆ. ಅವು ಕೂಡ ಆನುಭಾವಿಕ ದೃಷ್ಟಿಯಿಂದ ಅಪರೂಪದ ರಚನೆ ಎಂದೇ ಹೇಳಬೇಕು. ಇಸ್ಲಾಂ ಧರ್ಮದಲ್ಲಿ ಜನಿಸಿ ಆನುಭಾವಿಕ ಪರಂಪರೆಯಲ್ಲಿ ಬಸವಾದಿ ಶರಣ ಸಂದೋಹದೊಂದಿಗೆ ಗುರುತಿಸಿಕೊಳ್ಳುವ ಫೈಮುದಾ ಅಧ್ಯಯನ ಯೋಗ್ಯ ವ್ಯಕ್ತಿತ್ವವನ್ನು ಹೊಂದಿದ್ದಾಳೆ. ದುರಂತವೆಂದರೆ ತೀರ ಇತ್ತೀಚೆಗೆ ಗತಿಸಿ ಹೋಗಿರುವ ನಮ್ಮ ನಡುವಿನ ಅಪರೂಪದ ಆನುಭಾವಿಕ ಸಾಧಕಿಯೊಬ್ಬಳ ಬದುಕಿನ ಮಾಹಿತಿಗಳು ದೊರೆಯುತ್ತಿಲ್ಲ. ಅವಳ ಸಾಹಿತ್ಯವು ಪೂರ್ತಿ ದಕ್ಕಿಲ್ಲ. ಈ ದಿಸೆಯಲ್ಲಿ ಗಂಭೀರ ಸಂಶೋಧನೆಗಳು ನಡೆಯಬೇಕಾದ ಅವಶ್ಯಕತೆ ಇದೆ. ಹೀಗೆಯೆ ಪೈಮುದಾಳಂತೆ ಇನ್ನೂ ಅನೇಕರು ನೆಲದ ಮರೆಯ ನಿಧಾನದಂತೆ ಅಜ್ಞಾತರಾಗಿಯೆ ಉಳಿದಿರುವ ಸಾಧ್ಯತೆ ಇದೆ. ಅಂಥ ಧೀಮಂತ ಸಾಧಕಿಯರನ್ನು ವಿಚಕ್ಷಣ ದೃಷ್ಟಿಯಿಂದ ಹೆಕ್ಕಿ ತೆಗೆಯಬೇಕಾದ ಅವಶ್ಯಕತೆ ಇದೆ. ಇವುಗಳ ನಡುವೆಯೂ ಶಾಶ್ವತವಾಗಿ ಮರೆಗೆ ಸಂದು ಹೋಗಬಹುದಾಗಿದ್ದ ಕೆಲವೊಂದು ಅಜ್ಞಾತ ಸಾಧಕಿಯರನ್ನು ಗುರುತಿಸಿ ಅವರ ಕುರಿತು ಪುಸ್ತಕ ಬರೆಸಿ ಪ್ರಕಟಿಸುವ ಮೂಲಕ ಕರ್ನಾಟಕ ಸಾಹಿತ್ಯ ಅಕಾಡಮಿ, ಕನ್ನಡ ಸಾರಸ್ವತ ಲೋಕಕ್ಕೂ ಹಾಗೂ ಸ್ತ್ರೀವಾದಿ ಅಧ್ಯಯನಕಾರರಿಗೂ ದೊಡ್ಡ ಕೊಡುಗೆ ನೀಡಿ ಅಭಿನಂದನೆಗೆ ಅರ್ಹವಾಗಿದೆ.






