Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಅಂಕಣಗಳು
  4. ಬಯಲ ಬುತ್ತಿ
  5. ದಖ್ಖನಿ ಉರ್ದು ಕಾವ್ಯದ ಹಣೆಮಣಿ ಸುಲೇಮಾನ್...

ದಖ್ಖನಿ ಉರ್ದು ಕಾವ್ಯದ ಹಣೆಮಣಿ ಸುಲೇಮಾನ್ ಖತೀಬ್

ಡಾ. ಮೀನಾಕ್ಷಿ ಬಾಳಿ6 Jan 2026 11:44 AM IST
share
ದಖ್ಖನಿ ಉರ್ದು ಕಾವ್ಯದ ಹಣೆಮಣಿ ಸುಲೇಮಾನ್ ಖತೀಬ್

ಸುಲೇಮಾನ್ ಖತೀಬರ ಸಾಹಿತ್ಯ, ಕಲ್ಯಾಣ ಕರ್ನಾಟಕ ಪ್ರದೇಶದ ಜನ ಬದುಕಿನ ಆತ್ಮವಾಗಿದೆ. ಕಲಬುರಗಿಯ ಕಪ್ಪು ಮಣ್ಣು, ಮಟ್ಟಿ ನೀರು, ಖ್ವಾಜಾ ಬಂದೇನವಾಝರ ಸದಖಾ, ನೌಕರಿ ಮಾಡಿದ ಪಾನಿ ಮಹಲ್, ಇಲ್ಲಿನ ಜನರ ಮುಗ್ಧ ಹಾಲ್‌ಚಾಲ್ ಇತ್ಯಾದಿಗಳು ಅದೆಷ್ಟು ಆಪ್ತವಾಗಿ ಕಂಡರಿಸಲ್ಪಟ್ಟಿವೆ ಎಂದರೆ ಅವುಗಳನ್ನು ಓದಿಯೇ ಅನುಭವಿಸಬೇಕು.

‘‘ಮಿಠ್ಠಾ ಮಿಠ್ಠಾ ಮೊಟ್‌ಕಾ ಪಾನಿ

ಸೀತಾ ಸರಕೀ ಪಾಸ್‌ಜವಾನಿ

ಚಂಪಾ ಚಮೇಲಿ ದೋನಾ ಮರವಾ

ದಿನಕಾ ರಾಜಾ ರಾತ್‌ಕೀ ರಾನಿ

ಮೊಟ್‌ಚಲಾತೂ ಹಲ್ಲೂ ಹಲ್ಲೂ ॥’’

ದಖ್ಖನಿ ಉರ್ದುವಿನ ಸ್ವಾದ, ಸುಗಂಧವನ್ನು ಕನ್ನಡಿಸುವುದು ಕಷ್ಟ. ಆದರೂ ಅಂಥ ಹಲವು ಪ್ರಯತ್ನಗಳು ಕಲ್ಯಾಣ ಕರ್ನಾಟಕ ಭಾಗದಲ್ಲಿ ಜರುಗುತ್ತಲೇ ಇವೆ. ಸುಲೇಮಾನ್ ಖತೀಬರ ಈ ಕಾವ್ಯವನ್ನು ದಿವಂಗತ ರೇವಣಸಿದ್ಧಯ್ಯ ರುದ್ರಸ್ವಾಮಿ ಮಠ ಅವರು ಅನುವಾದಿಸಿದ್ದು ಹೀಗಿದೆ.

‘‘ಮಿಠ್ಠಾ ಮಿಠ್ಠಾ ಮಟ್ಟಿಯ ನೀರೋ

ಸೀತೆಯ ಶುದ್ಧ ಯೌವನಧಾಂಗ

ಚಂಪಾ, ಚಮೇಲಿ, ದವನಾ, ಮರಗ

ದಿನದ ರಾಜ ರಾತ್ರಿಯ ರಾಣಿ

ಮಿಠ್ಠ ಮಿಠ್ಠಾ ಮಟ್ಟಿಯ ನೀರೋ

ಮಟ್ಟಿಯ ಹೊಡೆಯುವೆ ಮೆಲ್ಲಗೆ ಮೆಲ್ಲಗೆ’’

ಹೊಲ ಗದ್ದೆಗಳಿಗೆ ನೀರುಣಿಸಲು ಇನ್ನೂ ಪಂಪ್‌ಸೆಟ್‌ಗಳು ಬರದಿದ್ದ ಕಾಲದಲ್ಲಿ ಚರ್ಮದಿಂದ ಮಾಡಿದ ಚೀಲದಿಂದ ಬಾವಿಯ ನೀರನ್ನು ಮೇಲೆತ್ತುವುದಿತ್ತು. ಈ ಚೀಲಕ್ಕೆ ಕನ್ನಡದಲ್ಲಿ ಮಟ್ಟಿ, ಉರ್ದುವಿನಲ್ಲಿ ಮೊಟ್ ಎನ್ನುತ್ತಾರೆ. ಮಟ್ಟಿಯ ನೀರಿನ ರುಚಿ, ಅಂದಿನ ದೇಸಿ ಬದುಕಿನ ಸ್ವಾದ ಅರಿಯಬೇಕೆಂದರೆ ಸುಲೇಮಾನ್ ಖತೀಬ್‌ರ ಕಾವ್ಯದ ಒಳ ಹೋಗಬೇಕು. ಕವಿಗೆ ಆ ನೀರು ಸೀತೆಯ ಯೌವನದಷ್ಟೇ ಪವಿತ್ರವಾಗಿತ್ತು. ಚಂಪಕ, ಮಲ್ಲಿಗೆ, ದವನಾ, ಮರುಗದಷ್ಟು ಸುಗಂಧಿತವಾಗಿತ್ತು ಎಂದು ಹೇಳುವಲ್ಲಿ ದೇಸಿ ಬದುಕಿನ ಬಗೆಗೆ ಅವರಿಗಿದ್ದ ಗೌರವವನ್ನು ಗಮನಿಸಬಹುದು. ರೈತರು ಮೊಟ್ಟಿಯ ಮೂಲಕ ನೀರು ಎತ್ತುವಾಗ ಎತ್ತುಗಳ ಮತ್ತು ತಮ್ಮ ಶ್ರಮವು ಕಾಣದಿರಲೆಂದು ಹಾಡುಗಳನ್ನು ಹಾಡುವುದಿತ್ತು. ಸುಗ್ಗಿ ಮಾಡುವಾಗ, ಉತ್ತುವಾಗ, ಬಿತ್ತುವಾಗ, ಕಳೆ ಕೀಳುವಾಗ ಹೀಗೆ ಶ್ರಮಭರಿತ ಕಾರ್ಯಗಳಲ್ಲಿ ತೊಡಗಿಕೊಂಡಾಗಲೆಲ್ಲ ಹಾಡಿನ ಮೂಲಕ ತಮ್ಮ ಶ್ರಮ ಪರಿಹಾರಕ್ಕೆಂದು ವೆಗ್ಗಳ ಪದಗಳನ್ನು ರಚಿಸಿ ಹಾಡುತ್ತಿದ್ದರು. ಹಂತಿಯ ಪದಗಳು, ಮಟ್ಟಿ ಪದಗಳೆಂದೆಲ್ಲ ಅವುಗಳ ಧರತಿ ಧಾಟಿ ಭಿನ್ನ ವಿಭಿನ್ನವಾಗಿರುತ್ತಿದ್ದವು. ಸುಲೇಮಾನ್ ಖತೀಬರು ಈ ಎಲ್ಲ ಕೆಲಸಗಳನ್ನು ಕಣ್ಣಾರೆ ಕಂಡುಂಡು ಅವುಗಳ ಜಾಡಿನಲ್ಲಿಯೇ ಬೆಳೆದವರಾಗಿದ್ದರು. ಹೀಗೆಂದೇ ಅಂಥ ಧಾಟಿ, ಮಟ್ಟುಗಳನ್ನು ಬಳಸಿಕೊಂಡು ದಖ್ಖನಿಯಲ್ಲಿ ರೈತಾಪಿಗಳ ಬೆವರನ್ನು ಭಟ್ಟಿ ಇಳಿಸಿದ್ದಾರೆ. ನಿಜಾಮ ಆಡಳಿತದ ಜನಸಾಮಾನ್ಯರ ಬದುಕನ್ನು ಸಾಹಿತ್ಯದಲ್ಲಿ ಖತೀಬರಂತೆ ಅನ್ಯೋನ್ಯವಾಗಿ ಹಿಡಿದಿಟ್ಟವರು ವಿರಳ. ಅದರಲ್ಲಿಯೂ ರೈತಾಪಿ, ಕೂಲಿ ಕಾರ್ಮಿಕರ ಬದುಕು-ಬವಣೆ, ನಂಬಿಕೆ-ನೆಲೆ, ಅವರ ಮುಗ್ಧತೆ, ವ್ಯವಸ್ಥೆಯ ಕ್ರೌರ್ಯ, ಅಸಹಾಯಕತೆಗಳನ್ನು ಖತೀಬ್ ಹೂಬಾಬೂಬ್‌ಗೊಳಿಸಿದ್ದಾರೆ.

ಹುಟ್ಟಿದ ಆರು ತಿಂಗಳಲ್ಲಿ ತಾಯಿಯನ್ನು, ಹತ್ತು ತಿಂಗಳಲ್ಲಿ ಅಪ್ಪನನ್ನು ಕಳೆದುಕೊಂಡು ಹದಿನಾರು ತಿಂಗಳಲ್ಲಿ ಅಕ್ಷರಶಃ ಅನಾಥವಾದ ಮಗುವೊಂದು ತುತ್ತು ಅನ್ನಕ್ಕೂ ಗತಿಯಿಲ್ಲದಂತೆ ಕೆಲವು ಕಾಲ ಅಜ್ಜ-ಅಜ್ಜಿಯರಲ್ಲಿ, ಮತ್ತೆ ಕೆಲವು ಕಾಲ ದಾದಾ ದಾದಿಯರಲ್ಲಿ ಮತ್ತೆ ಮಸೀದಿಯ ಮೌಲ್ವಿಗಳಲ್ಲಿ ಹೀಗೆ ಎಲ್ಲೆಲ್ಲೊ ಚೆಲ್ಲಾಡುತ್ತಲೇ ಬೆಳೆದ ಮಗುವೊಂದು ದಖ್ಖನಿ ಉರ್ದುವಿನ ಖ್ಯಾತ ಕವಿಯಾಗಿ ಅರಳಿದ್ದು ನಿಜಕ್ಕೂ ಸೋಜಿಗ.

ಮೂಲತಃ ಬೀದರ್ ಜಿಲ್ಲೆಯ ಹುಮನಾಬಾದ್ ತಾಲೂಕಿನ ಚಿಟಗುಪ್ಪಾದಲ್ಲಿ ಡಿಸೆಂಬರ್ 26, 1922 ರಲ್ಲಿ ಜನಿಸಿದ ಖತೀಬ್‌ರ ಪೂರ್ತಿ ಹೆಸರು ಮುಹಮ್ಮದ್ ಸುಲೇಮಾನ್ ಖತೀಬ್. ಇವರ ಪೂರ್ವಜರು ಕ್ರಿ.ಶ 1627ರಲ್ಲಿ ಬಿಜಾಪೂರ ಇಬ್ರಾಹೀಂ ಆದಿಲ್‌ಶಾಹಿ ದೊರೆಗಳಿಂದ ಚಿಟಗುಪ್ಪಾದ ಜಾಮಾ ಮಸೀದಿಯಲ್ಲಿ ಖತೀಬರಾಗಿ ನಿಯುಕ್ತಿಗೊಂಡಿದ್ದರು. ಖತೀಬ್ ಎಂದರೆ ಮಸೀದಿಯಲ್ಲಿ ಪ್ರವಚನ ಮಾಡುವ ಧಾರ್ಮಿಕ ವಿದ್ವಾಂಸರು. ಹೀಗಾಗಿ ಇವರ ಮನೆತನಕ್ಕೆ ಖತೀಬ್ ಎಂಬ ಹೆಸರು ಖಾಯಂಗೊಂಡಿತ್ತು. ಹುದ್ದೆಯೇನೊ ದೊಡ್ಡದೇ. ಆದರೆ ಬದುಕು ಮಾತ್ರ ಹೆತ್ತವರಿಲ್ಲದೆ ಹುಟ್ಟುವಾಗಲೇ ಮೂರಾಬಟ್ಟೆಯಾಗಿತ್ತು. ನಾಲ್ಕು ಮಕ್ಕಳಲ್ಲಿ ಕೊನೆಯವರಾಗಿ ಹುಟ್ಟಿದ ಖತೀಬ್ ಸಾಹೇಬರು ಹತ್ತು ವರ್ಷದವರಾಗುವವರೆಗೂ ಶಾಲೆಯ ಮುಖವೇ ನೋಡಿರಲಿಲ್ಲ. ಹಿರಿಯ ಅಣ್ಣ ಮುಹಮ್ಮದ್ ವಝೀರುದ್ದೀನರು ಇವರನ್ನು ರಾಯಚೂರಿಗೆ ಕರೆದುಕೊಂಡು ಹೋಗಿ ಅಲ್ಲಿ ಶಾಲೆಗೆ ಕಳಿಸಿದರು. ಅಣ್ಣನೊಂದಿಗೆ ತೆಲಂಗಾಣದ ಮೇಡಕ್‌ಗೆ ತೆರಳಿ ಅಲ್ಲಿ ಪ್ರೌಢ ಶಿಕ್ಷಣವನ್ನು ಮುಗಿಸಿದ ಇವರು ಹೈದರಾಬಾದ್‌ನಲ್ಲಿ ಉನ್ನತ ವ್ಯಾಸಂಗ ಮಾಡಿ ಆ ಕಾಲಕ್ಕೆ ಮುನ್ಷಿ ಫಾಸಿಲ್ ಪರೀಕ್ಷೆಯನ್ನು (ಈಗಿನ ಪದವಿ) ಪಾಸು ಮಾಡಿದ್ದರು. 1941ರಲ್ಲಿ ಕಲಬುರಗಿಯ ಫಿಲ್ಟರ್‌ಬೆಡ್(ನೀರು ಶುದ್ಧೀಕರಣ ಘಟಕ)ನಲ್ಲಿ ಮೆಕ್ಯಾನಿಕಲ್ ಫೋರ್‌ಮನ್‌ರಾಗಿ ನಿಯುಕ್ತಿಗೊಂಡರು. 1977ರ ನಿವೃತ್ತಿವರೆಗೆ ಅಲ್ಲಿಯೇ ಕಾರ್ಯ ನಿರ್ವಹಿಸಿ ಕಲಬುರಗಿ ಭಾಗದ ಜನರಿಗೆ ನೀರು ಸಾಹೇಬರೆಂದೇ ಪರಿಚಿತರಾಗಿದ್ದರು. ನೀರು ಶುದ್ಧೀಕರಣ ಘಟಕಕ್ಕೆ ‘ಪಾನಿ ಮಹಲ್’ ಎಂದು ಹೆಸರಿಟ್ಟವರು ಕೂಡ ಖತೀಬರೇ.

ಹುಟ್ಟುವಾಗಲೇ ಅನಾಥತನಕ್ಕೆ ಪಕ್ಕಾಗಿ ಪರದೇಶಿ ಸ್ಥಿತಿಯಲ್ಲಿಯೇ ಬಾಲ್ಯ ಕಳೆದ ಖತೀಬರು ಕಲ್ಪಿಸಿಕೊಳ್ಳಲು ಸಾಧ್ಯವಾಗದಿದ್ದ ಸಾಹಿತ್ಯ ಲೋಕಕ್ಕೆ ಹೊರಳಿಕೊಂಡದ್ದೇ ಅಚ್ಚರಿಯ ಸಂಗತಿ. ತುತ್ತು ಅನ್ನಕ್ಕೂ ಪರದಾಡುತ್ತಿದ್ದ ಬಾಲಕನ ಹೃದಯಲ್ಲಿ ಮಾತ್ರ ಶೇರ್-ಶಾಯರಿಯ ಸಾಗರ ಉಕ್ಕೇರುತ್ತಲೇ ಇತ್ತು. ಹೇಳಿಕೊಳ್ಳುವಂಥ ಸಾಹಿತ್ಯಕ ಗಾಡ್‌ಫಾದರ್‌ಗಳಾರೂ ಇರದಿದ್ದರೂ ಖತೀಬರು ಅನುಭವಿಸಿದ ಬವಣೆಯೆ ಅವರನ್ನು ಸಂವೇದನಾಶೀಲ ಕವಿಯನ್ನಾಗಿ ರೂಪಿಸಿದೆ. ಕನ್ನಡ, ತೆಲಗು, ದಖ್ಖನಿ, ಉರ್ದು, ಫಾರ್ಸಿ, ಅರಬಿ ಹಲವು ಭಾಷೆಗಳಲ್ಲಿ ನಿಷ್ಣಾತರಾಗಿದ್ದ ಇವರು, ಕವಿತೆ, ಶೇರ್-ಶಾಯರಿ, ನಾಟಕ, ರೇಡಿಯೊ ನಾಟಕ, ಪ್ರಬಂಧ ಹೀಗೆ ಅನೇಕ ಪ್ರಕಾರಗಳಲ್ಲಿ ಕೃಷಿ ಮಾಡಿದ್ದಾರೆ. ಸ್ವತಃ ನಿರ್ದೇಶಕರಾಗಿದ್ದ ಅವರು ‘ಮಜಾ ಲೇಲೋ’’ ಎಂಬ ಸಿನೆಮಾದಲ್ಲಿ ಅಭಿನಯ ಕೌಶಲ್ಯ ಮೆರೆದದ್ದೂ ಇದೆ. ಬಹುಮುಖ ಪ್ರತಿಭೆಯುಳ್ಳ ಖತೀಬರು ಆ ಕಾಲದ ಪ್ರಸಿದ್ಧ ಶಾಯರಿಕಾರರಲೊಬ್ಬರಾಗಿದ್ದರು. ದೇಶದಾದ್ಯಂತ ಮುಷಾಯಿರಾಗಳಲ್ಲಿ ಭಾಗವಹಿಸಿ ಸೈ ಎನಿಸಿಕೊಂಡು 1974ರಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿದ್ದರು. ಕರ್ನಾಟಕದ ಸಾಂಸ್ಕೃತಿಕ ನಾಯಕ ಬಸವಣ್ಣನವರ ಕುರಿತು ‘ಬಸವದೀಪ’ ಎಂಬ ಕವನ ಬರೆದು ಕಲ್ಯಾಣ ನಾಡಿನ ಮಣ್ಣಿನ ಮಹತ್ವವನ್ನು ಅರುಹಿದ್ದರು. ದೇಶದಾದ್ಯಂತ ಅಡ್ಡಾಡಿದರೂ ಖತೀಬರ ಮನಸ್ಸು ಮಾತ್ರ ಕಲಬುರಗಿಯನ್ನು ಬಿಟ್ಟು ಕದಲಲೇ ಇಲ್ಲ. ಅವರ ಕಾವ್ಯದಲ್ಲಿ ಕಲಬುರಗಿಯ ಕಪ್ಪು ನೆಲ ಸೊಕ್ಕಿದ ಸೂರ್ಯನ ಶಾಖ ಪ್ರಜ್ವಲಿಸುತ್ತಿದೆ.

ಶೇರ್-ಶಾಯರಿಯೆಂದರೆ ಪ್ರೇಮ, ಪ್ರಣಯ ಮತ್ತು ವಿರಹ ಇತ್ಯಾದಿ, ಅದೆಲ್ಲವೂ ದೈವಿ ಪ್ರೇಮ ಎಂದುಕೊಂಡರೂ ಒಟ್ಟಾರೆ ಶೃಂಗಾರ ಭಾವ ಮಾತ್ರ ಹಿಡಿದಿಡಲು ಸಮರ್ಥ ವಾಹಕ ಎಂದು ಭಾವಿಸಿದ್ದನ್ನು ಸುಳ್ಳಾಗಿಸಿದ ಖತೀಬರು ಜನ ಬದುಕಿನ ಅತ್ಯಂತ ದಾರುಣತೆಯನ್ನು ಅಷ್ಟೇ ಪರಿಣಾಮಕಾರಿಯಾಗಿ ಚಿತ್ರಿಸಬಹುದು ಎಂಬುದನ್ನು ‘ಕೆವಡೆ ಕಾ ಬನ್’(ಕೇದಗೆಯ ಬನ) ಸಂಕಲನದಲ್ಲಿ ತೋರಿಸಿಕೊಟ್ಟಿದ್ದಾರೆ. ಪಹೇಲಿ ತಾರಿಖ್, ಸಾಸ-ಬಹು, ಸಾಂಪ್, ರೋಟಿ, ರಾಸ್ತೆ, ತಲಾಸೋ ಗುಮಸುದಾ ಮುಂತಾದ ಕಾವ್ಯಗಳಲ್ಲಿ ಜನಸಾಮಾನ್ಯರ ಬಡತನ, ಕುಬ್ಜತೆ, ಹಸಿವು, ಅಸಹಾಯಕತೆ, ವ್ಯವಸ್ಥೆಯ ದೋಷ-ದೌರ್ಬಲ್ಯಗಳನ್ನು ವಸ್ತುನಿಷ್ಠವಾಗಿ ಹಿಡಿದಿಟ್ಟಿದ್ದನ್ನು ಗಮನಿಸಬಹುದು. ಸಮಾಜದ ಓರೆ-ಕೋರೆಗಳನ್ನು ಪದಗಳಲ್ಲಿ ಟಂಕಿಸಿದ ಕಲೆ ನಿಜಕ್ಕೂ ಅಚ್ಚರಿ ಮೂಡಿಸುತ್ತದೆ. ಉದಾಹರಣೆಗಾಗಿ ಅವರ ‘ಇಪ್ಪತ್ತೆಂಟನೇ ತೇದಿ’ (ಅಠ್ಠಾಯಿಸ್ ತಾರೀಕ್)ಕವನ ನೋಡಬಹುದು. ಇಪ್ಪತ್ತೆಂಟನೇ ತಾರೀಕಿನಂದು ಸತ್ತ ಬಡ ಗುಮಾಸ್ತನ ವಿಧವೆ, ತನ್ನ ಗಂಡನ ಸಮಾಧಿ ಎದುರು ಕುಳಿತು ರೋದಿಸುವ ಈ ಹಾಡು ಕೇಳುಗರ ಮನ ಕಲಕದೇ ಇರದು.

ದಿನಾ ಕಚ್ಚಾಡಿ ಜೀವ ತಿಂದು

ಇಂದ ಚೆಂದ ಅಡವಿಯಲ್ಲಿ ಮಲಗಿದಿ ಬಂದು

ಈ ಮುಂಡೆ ಮೊದಲೆ ಸಾಯಬೇಕಿತ್ತು.

ಹಿಡಿಯೊಳಗೆ ಜೀವ ಹಿಡಕೊಂಡು ಬಂದೀನಿ

ನಿನ್ನ ಗೋರಿಗಿ.

ಸಾಯುವುದೇ ಆಗಿದ್ರ ಹೀಂಗ್ಯಾಕ್ ಸಾಯಬೇಕಿತ್ರೀ?

ಮದುವಿ ಮಗಳ ಮನೆಯಲ್ಲಿ ಬಿಟ್ಟು

ಎಷ್ಟು ಮಂದಿಯ ಕೈ ಕಾಲು ಬಿದ್ದು

ಎತ್ತಿಸಿದೆ ನಾ ನಿನ್ನ ಚಟ್ಟ

ಸಾಯೋತನ ಸಾಲದೊಳಗ ಬದುಕೋ ವರಾ ಕೊಟ್ಟಿ

ಇವತ್ ಗೋರಿಗಿ ಹೂವಾನೂ ಉದ್ರಿನೆ ತಂದೀನಿ

ನನ್‌ಮ್ಯಾಲಿಷ್ಟು ಉಪಕಾರ ಮಾಡಿದ್ರ ಸಾಕಿತ್ತು

ಇಪ್ಪತ್ತೆಂಟ್ ತಾರೀಖ್ ಬದಲಿ ಪಗಾರ ತಗೊಂಡು ಸಾಯಬೇಕಿತ್ತಲ್ಲಾ!

ಮಧ್ಯಮ ವರ್ಗದ ದಾರುಣ ಬಡತನವನ್ನು ಈ ಕವಿತೆ ಚುಚ್ಚುತ್ತದೆ. ಇನ್ನೊಂದೆಡೆ ಕವಿ ವರದಕ್ಷಿಣೆಗಾಗಿ ವರನ ಕಡೆಯವರು ಕನ್ಯೆಯ ಮನೆಯವರಿಗೆ ಸತಾಯಿಸುವುದನ್ನು ತೀಕ್ಷ್ಣ ವ್ಯಂಗ್ಯದೊಂದಿಗೆ ನಾಟಿಸಿದ್ದಾರೆ.

‘‘ಜೀಮೆ ಆತಾ ಹೈ ಅಪ್ನಿ ಬಚ್ಚಿಕೊ

ಅಪ್ನೆ ಹಾಥೌಂಸೆ ಖುದ್‌ಹಿ ದಫ್ನಾದೆ

ಲಾಲ ಜೋಡೆ ತೋ ದೇ ನಹಿ ಸಕ್ತೆ

ಲಾಲ ಚಾದರಮೆ ಕೆಂವ್‌ನ ದಫ್ನಾದೇ ॥’’

‘‘ಅನಿಸುತ್ತದೆ ನಮ್ಮ ಮಗಳನ್ನು

ನಮ್ಮ ಕೈಯಾರೆ ನಾವೆ ದಫನ್ ಮಾಡಬೇಕೆಂದು

ಕೆಂಪು ಪೋಷಾಕಂತೂ ಕೊಡಲಾಗುವುದಿಲ್ಲ

ಕೆಂಪು ಬಟ್ಟೆಯನ್ನಾದರೂ ಹೊದಿಸಿ ಏಕೆ ದಫನ್ ಮಾಡಬಾರದೆಂದು ॥’’

ಹೆಣ್ಣು ಹೆತ್ತವರ ನೋವನ್ನು ಇದಕ್ಕಿಂತಲೂ ಪರಿಣಾಮಕಾರಿಯಾಗಿ ನಾಟಿಸಲು ಸಾಧ್ಯವೇ ಇಲ್ಲ. ಖತೀಬರು ಖಯಾಲಿಗಾಗಿ ಕಾವ್ಯದ ಕೈ ಹಿಡಿದವರಲ್ಲ. ಬದುಕಿನ ದುರ್ದಮ್ಯ ಅನುಭವ, ಮನುಷ್ಯರ ಅಸಹಾಯಕತೆಗಳು ಅವರನ್ನು ಕವಿಯಾಗಿಸಿವೆ. ತನ್ನ ನೆಲದ ಸುಡುವ ಸತ್ಯಗಳನ್ನು, ಎನ್ನೆದೆಯ ನೋವುಗಳನ್ನು ದಾಟಿಸಲೆಂದೇ ಅವರು ಕಾವ್ಯಯಾನ ಕೈಗೊಂಡಿದ್ದಾರೆ.

‘ಕೇವಡೆ ಕಾ ಬನ’ ಸಂಕಲನದ ಪ್ರಾರಂಭದಲ್ಲಿಯೇ

‘‘ಎಲ್ಲಿಯತನಕವಿರುವುವೊ ಚಂದ್ರ, ತಾರೆ, ಗಗನ

ಘಮಘಮಿಸುತ್ತಿರಲೆನ್ನ ಕೇದಗೆ ಬನ

ತುಂಬು ನೋವುಗಳೆನ್ನ ಕವನಗಳಲಿ ಶಿವನೆ

ಮನದಿಂದತ್ತತ್ತ ಎನ್ನ ಮಾತಿರಲಿ

ಮೇಣಬತ್ತಿಯೋಲುರಿದು ಕರಗುತ್ತಿರಲಿ

ಬೆಳಗಲಿ ಸಭೆಗಳಾ ಬೆಳಕಿನಲಿ

ಖತೀಬ ದಖನ್ನಿನೊಲುಮೆ ಆಗರವಾಗಿರಲಿ’’

ನೋವು-ದುಗುಡಗಳೇ ತಮ್ಮ ಕಾವ್ಯದ ಸ್ಥಾಯಿ ಎಂಬುದನ್ನು ಸ್ಪಷ್ಟಪಡಿಸಿದ ಕವಿ, ಕಾವ್ಯ ತನಗೆ ಅಕ್ಷರ ಕೈಂಕರ್ಯ ಮಾತ್ರವಲ್ಲ ಅದೊಂದು ವ್ರತ ಮತ್ತು ಈ ನಾಡಿಗೆ ತಾನು ಸಲ್ಲಿಸುತ್ತಿರುವ ಋಣ ಸಂದಾಯವೆಂದು ಹೇಳಿಕೊಂಡಿದ್ದಾರೆ. ಕಲ್ಯಾಣ ಕರ್ನಾಟಕದ 18-19ನೇ ಶತಮಾನದ ಮಧ್ಯ ಭಾಗದಲ್ಲಿನ ರೈತರ ಸಂಕಷ್ಟಗಳನ್ನು ಖತೀಬರಷ್ಟು ಮನೋಜ್ಞವಾಗಿ ದಖ್ಖನಿ ಭಾಷೆಯಲ್ಲಿ ಹಿಡಿದಿಟ್ಟವರು ಇನ್ನೊಬ್ಬರು ಸಿಗಲಿಕ್ಕಿಲ್ಲ.

ದಖ್ಖನಿ ಎಂದರೆ, ಕ್ಲಾಸಿಕ್ ಉರ್ದು ವಿದ್ವಾಂಸರು ಮೂಗು ಮುರಿಯುವುದಿತ್ತು. ಹಳ್ಳಿಯ ಗಮ್ಮಾರರ ಭಾಷೆ ಎಂಬ ಅಸಡ್ಡೆಯೂ ಇರಲಿಕ್ಕು ಸಾಕು. ಖತೀಬರು ಯಾವತ್ತೂ ಶ್ರೇಷ್ಠತೆಯ ಬಗೆಗೆ ತಲೆ ಕೆಡಿಸಿಕೊಂಡವರಲ್ಲ. ಆಸ್ಥಾನದ ಪಾಂಡಿತ್ಯದ ಬಗೆಗಂತೂ ಹೊರಳಿಯೂ ನೋಡಲಿಲ್ಲ. ಕಡುಬಡತನದ ಹಿನ್ನೆಲೆಯಿಂದ ಬಂದ ಸುಲೇಮಾನ್‌ರಿಗೆ ಜನಸಾಮಾನ್ಯರ ಬಗೆಗೆ ಅಪಾರ ಅಭಿಮಾನ ಮತ್ತು ಆರ್ದ್ರತೆ ಇತ್ತು. ಎಂತಲೇ ಅವರು 1977ರ ಡಿಸೆಂಬರ್ 1ರಂದು ಪ್ರಕಟಿಸಿದ ತಮ್ಮ ಕವನ ಸಂಕಲನದಲ್ಲಿ ಹೀಗೆ ಅರಿಕೆ ಮಾಡಿಕೊಂಡಿದ್ದಾರೆ.

‘‘ವಿದ್ವಾಂಸರಾದ ವಿಮರ್ಶಕರ ಗಮನಕ್ಕೆ ತರುವುದೇನೆಂದರೆ, ಈ ರಚಯಿತೃ ಒಬ್ಬ ಲೋಕಕವಿ ಮಾತ್ರವಲ್ಲದೆ ಲೋಕ ಶೈಲಿ, ಲೋಕಭಾಷೆ, ಜನಸಾಮಾನ್ಯರ ಲೋಕ ಭಾವನೆಯನ್ನು ಅಪ್ಪಿಕೊಂಡು ಅದನ್ನೇ ಪ್ರತಿನಿಧಿಸುವ ಮಣಿಹ ಹೊತ್ತುಕೊಂಡಿದ್ದಾನೆ. ಆ ಕಾರಣವಾಗಿ ಈ ಕೃತಿಯು ನಮ್ಮ ಕಾಲಘಟ್ಟದ ಸಾಂಸ್ಕೃತಿಕ ದಾಖಲೆಯೂ, ಪರಿಸ್ಥಿತಿಯ ವರ್ಣನೆಯೂ ಅದರೊಟ್ಟಿಗೆ ಐತಿಹಾಸಿಕ ಪುರಾವೆಯೂ ಆಗಲಿದೆ.’’ ಆದ್ದರಿಂದ ಇಲ್ಲಿ ಕ್ಲಾಸಿಕ್ ಉರ್ದುವಿನ ನಯ-ನಾಜೂಕು, ಬಂಧ-ಛಂದ, ಶುದ್ಧ ಭಾಷಾ ಪ್ರಯೋಗದ ಕವಾಯತ್ತು ಮಾಡಬೇಕಿಲ್ಲ. ದಖ್ಖನಿ ಉರ್ದುವಿನ ಪದ ಪ್ರಯೋಗ ಧ್ವನಿ-ಕಾಕು, ಉಚ್ಚಾರಗಳ ಪರಿಚಯವಿಲ್ಲದವರು ಅದನ್ನು ಅಪಾರ್ಥ ಮಾಡಿಕೊಂಡರೆ ಅದಕ್ಕೆ ಕವಿ ಜವಾಬ್ದಾರನಲ್ಲ ಎಂದೂ ಹೇಳಿಕೊಂಡಿದ್ದಾರೆ. ಸುಲೇಮಾನ್ ಖತೀಬರಿಗೆ ಔಪಚಾರಿಕ ಉರ್ದುವಿನ ಶಾಹಿ ಅಂದಾಜಿನ ದರ್ಪ ದೌಲತ್ತುಗಳ ಜ್ಞಾತವಿತ್ತು ಎಂತಲೇ ಅವರು ಅಂಥ ಮಾನದಂಡಗಳಿಂದ ತಮ್ಮ ಕಾವ್ಯವನ್ನು ಅಳೆಯಬಾರದೆಂದು ಸ್ವಾಭಿಮಾನದಿಂದ ಹೇಳಿಕೊಳ್ಳುತ್ತಾರೆ. ಖತೀಬರ ಈ ಮಾತುಗಳು ನಿಜಾಮ ಪ್ರಾಂತದ ಶಾಹಿ ಅಂದಾಜಿನಲ್ಲಿ ನಲುಗಿದ ಬಹುಸಂಖ್ಯಾತರ ಬದುಕಿನ ಅಜ್ಞಾತ ಆಯಾಮಗಳನ್ನು ತೆರೆದಿಡುತ್ತವೆ. ಗತಕಾಲ ಕುರಿತು ವೈಭವೀಕರಿಸಿ ಮಾತಾಡುವ ಮೂಢ ಮತಿಗಳ ಕಣ್ಣು ತೆರೆಸುತ್ತವೆ. ರೈತರ ಬವಣೆ ಕುರಿತು ಅವರು ಬರೆದಿರುವ ‘ಪಾನಿ ದೇರೆ ಮೇಘರಾಜ’, ‘ಮೊಟ್‌ಕಾ ಪಾನಿ’ಯಂಥ ಕವನಗಳು ಗತಕಾಲದ ನೈಜತೆಯನ್ನು ದರ್ಶಿಸುತ್ತವೆ. ಈ ಕುರಿತು ಖತೀಬರು ‘‘ಇಲ್ಲಿಯವರೆಗೆ ಕವಿಗಳು ರೈತ ಬದುಕನ್ನು ಸುಮಧುರ, ಸುಶ್ರಾವ್ಯ, ಸುವಾಚ್ಯ ಉರ್ದುವಿನಲ್ಲಿ ವ್ಯಕ್ತಿಸಿದ್ದರೆ ನಾನಿಲ್ಲಿ ಮೊದಲ ಬಾರಿಗೆ ಕೃಷಿಕರ ಬದುಕನ್ನು ಅವರದೆ ದೇಸಿ ಮಾತಿನಲ್ಲಿ, ಅಕೃತ್ರಿಮ ಶೈಲಿಯಲ್ಲಿ ಹಿಡಿದಿಟ್ಟಿದ್ದೇನೆ. ಹಾಸ್ಯ-ವ್ಯಂಗ್ಯಗಳು ಸಹಜವೆಂಬಂತೆ ಸೇರಿಕೊಂಡಿವೆ. ಒಟ್ಟಾರೆ ರೂಕ್ಷವಾದ ಬದುಕೊಂದು ಅದಿರುವಂತೆಯೆ ಹಿಡಿದಿಡಬೇಕು ಎಂಬುದೇ ನನ್ನ ಆಶಯ’’ ಎಂದು ಹೇಳಿಕೊಂಡಿದ್ದಾರೆ. ಆದ್ದರಿಂದಲೇ ಖತೀಬರ ಸಾಹಿತ್ಯ, ಕಲ್ಯಾಣ ಕರ್ನಾಟಕ ಪ್ರದೇಶದ ಜನ ಬದುಕಿನ ಆತ್ಮವಾಗಿದೆ. ಕಲಬುರಗಿಯ ಕಪ್ಪು ಮಣ್ಣು, ಮಟ್ಟಿ ನೀರು, ಖ್ವಾಜಾ ಬಂದೇನವಾಝರ ಸದಖಾ, ನೌಕರಿ ಮಾಡಿದ ಪಾನಿ ಮಹಲ್, ಇಲ್ಲಿನ ಜನರ ಮುಗ್ಧ ಹಾಲ್‌ಚಾಲ್ ಇತ್ಯಾದಿಗಳು ಅದೆಷ್ಟು ಆಪ್ತವಾಗಿ ಕಂಡರಿಸಲ್ಪಟ್ಟಿವೆ ಎಂದರೆ ಅವುಗಳನ್ನು ಓದಿಯೇ ಅನುಭವಿಸಬೇಕು.

Tags

Suleman KhatibUrdu poetry
share
ಡಾ. ಮೀನಾಕ್ಷಿ ಬಾಳಿ
ಡಾ. ಮೀನಾಕ್ಷಿ ಬಾಳಿ
Next Story
X