ಹಬ್ಬಗಳ ಸಾಂಸ್ಕೃತಿಕ ಮಹತ್ವ

ಸರ್ವಾಧಿಕಾರಿ ಫ್ಯಾಶಿಸಂ ಈಗ ಭಾರತವನ್ನು ನುಂಗಿ ನೊಣೆಯುತ್ತಿದೆ. ಧರ್ಮ ದ್ವೇಷದ ಪರಾಕಾಷ್ಠೆಯಲ್ಲಿ ಹಬ್ಬಗಳು, ಆಚಾರ, ವಿಚಾರ, ಆಹಾರ, ಉಡುಗೆ-ತೊಡುಗೆ ಎಲ್ಲವುಗಳೂ ಗಬ್ಬೆದ್ದು ಹೋಗಿವೆ. ಆದರೂ ಜೆನ್ ಝಿಗಳು ಹದಗೆಟ್ಟ ರಾಜಕಾರಣಕ್ಕೆ ದೊಂದಿಯಾಗಿ ಎದ್ದು ನಿಲ್ಲುತ್ತಿರುವುದು ಆಶಾದಾಯಕವಾಗಿದೆ. ಫ್ಯಾಶಿಸಂಗೆ ಆಯಸ್ಸು ತುಂಬಾ ಕಡಿಮೆ ಎಂಬುದನ್ನು ಇತಿಹಾಸ ಸಾಕ್ಷೀಕರಿಸುತ್ತಲೇ ಇದೆ.
ಹಬ್ಬಗಳು ಭಾರತ ಒಳಗೊಂಡಂತೆ ವಿಶ್ವದೆಲ್ಲೆಡೆ ತಮ್ಮದೇ ನೆಲೆ-ನಂಬಿಕೆಗಳಿಗನುಸರಿಸಿ ಆಚರಿಸಲ್ಪಡುತ್ತಿವೆ. ಮಾನವ ಜನಾಂಗದ ನಡೆಯಲ್ಲಿ ಹಬ್ಬಗಳು ಬದುಕಿನ ಅವಿಭಾಜ್ಯ ಅಂಗವಾಗಿ; ಆಯಾ ಸಾಂಸ್ಕೃತಿಕ ಚಹರೆಗಳಾಗಿ ಅಭಿವೃದ್ಧಿ ಹೊಂದಿವೆ. ಜನರ ನೋವು, ನಲಿವು, ಆಸೆ-ನಿರಾಸೆ ಎಲ್ಲವುಗಳ ಪ್ರತಿಬಿಂಬವಾಗಿ ಪರ್ವಗಳು ಮೇಲೆದ್ದು ನಿಂತಿವೆ. ಅದರೊಟ್ಟಿಗೆ ಆಯಾ ಪ್ರದೇಶದ ಹವಾಮಾನ, ಅವರ ಕೃಷಿ ಸಂಬಂಧಿ ಚಟುವಟಿಕೆಗಳು, ಶ್ರಮ ಶಕ್ತಿಯ ಗೌರವ ಎಲ್ಲಕ್ಕಿಂತ ಹೆಚ್ಚಾಗಿ ಅವರು ನಿತಾಂತವಾಗಿ ನಂಬಿಕೊಂಡು ಬಂದಿರುವ ದೇವರು-ಧರ್ಮಗಳ ಆರಾಧನೆಯ ವಿನ್ಯಾಸಗಳಾಗಿಯೂ ಅಸ್ತಿತ್ವಗೊಂಡಿವೆ. ಭಾರತೀಯರಿಗಂತೂ ಹುಟ್ಟಿನಿಂದ ಸಾವು ಮತ್ತು ಅದರ ನಡುವಿನ ಪ್ರತಿಯೊಂದು ದೈಹಿಕ ಬೆಳವಣಿಗೆ, ಮಾನಸಿಕ ಚಲನ-ವಲನ ಎಲ್ಲವೂ ಹಬ್ಬವಾಗಿ ಸಂಭ್ರಮಿಸುವ ಸಂಗತಿಗಳಾಗಿ ಮುಂದುವರಿದುಕೊಂಡು ಬರುತ್ತಿವೆ.
ನಮ್ಮವರಿಗೆ ಪ್ರತೀ ಹುಣ್ಣಿಮೆ, ಅಮಾವಾಸ್ಯೆಗಳು ಹಬ್ಬವೇ. ಸೂರ್ಯ ಹುಟ್ಟುವುದು ಹಬ್ಬ; ಸೂರ್ಯ ಮುಳುಗುವುದು ಹಬ್ಬ. ಹಬ್ಬಗಳಿಲ್ಲದ ಮಾಸಗಳೇ ಇಲ್ಲವೆಂದರೆ ಆಶ್ಚರ್ಯ ಪಡಬೇಕಿಲ್ಲ. ಇವುಗಳಲ್ಲಿ ಸಂಕ್ರಾಂತಿ, ನಾಗರ ಪಂಚಮಿ, ದಸರೆ, ದೀಪಾವಳಿ, ಯುಗಾದಿ, ಹೋಳಿ ಹುಣ್ಣಿಮೆ, ಗಣೇಶ ಚತುರ್ಥಿ, ಮಹಾಶಿವರಾತ್ರಿ ಮುಂತಾದವುಗಳಲ್ಲದೆ ಈದುಲ್ ಪಿತ್ರ್ (ರಮಝಾನ್), ಬಕ್ರೀದ್, ಕ್ರಿಸ್ಮಸ್, ಬೈಸಾಖಿ, ಬುದ್ಧ ಪೂರ್ಣಿಮಾ ಮುಂತಾಗಿ ದೇಶದೆಲ್ಲೆಡೆ ಆಚರಿಸಿಕೊಂಡು ಬರುತ್ತಿರುವ ಹಬ್ಬಗಳಾದರೆ ಪ್ರಾದೇಶಿಕವಾಗಿ ಆಚರಿಸುವ ಹಬ್ಬಗಳು ಬೇರೆ. ಕೇರಳಂ ರಾಜ್ಯದಲ್ಲಿ ಓಣಂ ಪ್ರಮುಖವಾಗಿದ್ದರೆ ತಮಿಳು ನಾಡಿನಲ್ಲಿ ಪೊಂಗಲ್ ಆಚರಿಸಲಾಗುತ್ತದೆ. ಆಂಧ್ರಪ್ರದೇಶ ಹಾಗೂ ತೆಲಂಗಾಣದಲ್ಲಿ ಬತುಕಮ್ಮ ಮತ್ತು ಬೋನಾಲು ಹಬ್ಬ. ಕರ್ನಾಟಕದಲ್ಲಿ ಯುಗಾದಿ, ಅದರಲ್ಲಿಯೂ ಉತ್ತರ ಕರ್ನಾಟಕದಲ್ಲಿ ಎಳ್ಳಮಾವಾಸ್ಯೆ, ಮಹಾರಾಷ್ಟ್ರದಲ್ಲಿ ಗುಡಿ ಪಾಡವಾ ಮತ್ತು ಶಿವಾಜಿ ಜಯಂತಿ. ಗುಜರಾತ್ನಲ್ಲಿ ಗಾಳಿಪಟ ಹಬ್ಬ ಮತ್ತು ನವರಾತ್ರಿಯಲ್ಲಿ ಗರ್ಬಾ ನೃತ್ಯ. ಆಸ್ಸಾಮಿನಲ್ಲಿ ಬಿಹು, ಪಂಜಾಬ್ನಲ್ಲಿ ಬೈಸಾಖಿ, ಬಿಹಾರದಲ್ಲಿ ಛಠ್ ಪೂಜೆ, ಜಮ್ಮು -ಕಾಶ್ಮೀರದಲ್ಲಿ ಟುಲಿಪ್ ಮಹೋತ್ಸವ, ಬಂಗಾಳದಲ್ಲಿ ದುರ್ಗಾಪೂಜೆ, ರಾಜಸ್ಥಾನದಲ್ಲಿ ತೇಜ್ ಹಬ್ಬ ಮತ್ತು ಪುಷ್ಕರ್ ಒಂಟೆ ಉತ್ಸವ ಇರುತ್ತದೆ. ಮಧ್ಯಪ್ರದೇಶದಲ್ಲಿ ಖಜುರಾಹೊ ನೃತ್ಯ ಉತ್ಸವ ಮತ್ತು ಭಗೋರಿಯಾ ಹಬ್ಬ, ನಾಗಾಲ್ಯಾಂಡ್ನ ಹಾರ್ನ್ ಬಿಲ್ ಹಬ್ಬ, ಮಣಿಪುರದ ಸಂಗೈ ಹಬ್ಬ ಹೀಗೆ ಪ್ರತೀ ಪ್ರದೇಶಕ್ಕೂ ರಾಷ್ಟ್ರೀಯ ಹಬ್ಬಗಳಲ್ಲದೆ ತನ್ನದೇ ನೆಲದ ವಿಶಿಷ್ಟ ಹಬ್ಬಗಳು ಸಾಂಗೋಪಾಂಗವಾಗಿ ಜರಗುತ್ತವೆ.
ಪ್ರದೇಶಕ್ಕೆ ವಿಶಿಷ್ಟವಾಗಿರುವಂತೆ ವಿವಿಧ ಧರ್ಮೀಯರಿಗೆ ತಮ್ಮದೇ ಹಬ್ಬಗಳು ಇವೆ. ಎಲ್ಲ ಹಬ್ಬಗಳ ಹಿಂದೆ ಪೌರಾಣಿಕ ಕಥನಗಳಲ್ಲದೆ ಸ್ಥಳೀಯ ಕಥೆಗಳು ಹೆಣೆದುಕೊಂಡಿವೆ. ಹಬ್ಬವೆಂದರೆ ಸಾಕು ಸಂಭ್ರಮ ಸಂತೋಷ. ಹಾಡು-ನೃತ್ಯ- ಆಟೋಟಗಳ ಭರಾಟೆ. ಸಿಹಿ ತಿಂಡಿ, ಹೊಸ ಬಟ್ಟೆ, ದೇವರ ಆರಾಧನೆ, ಮೆರವಣಿಗೆ, ಉತ್ಸವ ಹೀಗೆ ಬದುಕಿನ ರಸವಂತಿಕೆಯ ವಿದ್ಯಮಾನಗಳಾಗಿ ಅನೂಚಾನವಾಗಿ ನಡೆದುಕೊಂಡು ಬರುತ್ತಿವೆ. ಬಹುತೇಕ ಪ್ರಮುಖ ಹಬ್ಬಗಳು ಪ್ರಕೃತಿಯ ಪೂಜೆಯಾಗಿ ಮಾನ್ಸೂನ್ ನಡೆಗಳನ್ನು ನಿರೀಕ್ಷಿಸುವ ಅವಸರವಾಗಿ ಹುಟ್ಟಿಕೊಂಡಿವೆ. ಆಯಾ ಮಾನ್ಸೂನ್ಗೆ ಅನುಸರಿಸಿ ಅದಕ್ಕೆ ಸರಿ ಹೊಂದುವ ಖಾದ್ಯಗಳ ನೈವೇದ್ಯ ಇದ್ದೇ ಇರುತ್ತದೆ. ಎಲ್ಲ ಹಬ್ಬಗಳ ಕೇಂದ್ರದಲ್ಲಿ ದೈವಾರಾಧನೆಯು ಸ್ಥಿತವಾಗಿರುತ್ತದೆ.
ಈ ಎಲ್ಲ ಹಬ್ಬಗಳ ಹಿಂದೆ ಮಾನವೀಯ ಮೌಲ್ಯಗಳ ಅನುಸರಣೆ ಮತ್ತು ಪರಸ್ಪರ ಕೂಡಿ ಬಾಳುವ ಧೃತಿಯನ್ನು ಹೆಣೆದುಕೊಂಡು ಬರಲಾಗಿದೆ. ಕ್ರಿಸ್ಮಸ್ ಹಬ್ಬದಲ್ಲಿ ಮತಧರ್ಮದಾಚೆ ಎಲ್ಲರೂ ಕೇಕ್ ತಿನ್ನದೆ ಇರಲು ಸಾಧ್ಯವೇ? ಅಂತೆಯೆ ರಮಝಾನ್ ಹಬ್ಬದಲ್ಲಿ ಮುಸ್ಲಿಮ್ ಬಾಂಧವರು ನೆರೆ ಹೊರೆಯವರಿಗೆ ಶೀರ್ಕುರ್ಮಾ ಕುಡಿಸಿ ಬಿರಿಯಾನಿ ತಿನ್ನಿಸದೆ ಹಬ್ಬ ಆಚರಿಸುವುದಿಲ್ಲ. ಯುಗಾದಿಯಂತೂ ಕರ್ನಾಟಕದಲ್ಲಿ ಗ್ರಾಮೀಣ ಭಾಗದಲ್ಲಿ ಜಾತಿ, ಮತ, ಪಂಥವೆನ್ನದೆ ಎಲ್ಲರೂ ಆಚರಿಸಿಕೊಂಡು ಬರುತ್ತಾರೆ. ಎಳ್ಳಮಾವಾಸ್ಯೆಗೆ ಜಮೀನು ಇದ್ದವರು ನೆರೆ ಹೊರೆಯವರಿಗೆ ಭಜ್ಜಿ-ಕಡುಬು ಉಣಿಸದೆ ಬಿಡುವುದಿಲ್ಲ. ಗುರುನಾನಕ್ ಜಯಂತಿಯಂದು ಗುರುದ್ವಾರಗಳಲ್ಲಿ ಹಂಚುವ ಸಿಹಿ ಭಕ್ಷ್ಯ ತಿನ್ನದೆ ಇರಲು ಸಾಧ್ಯವೇ? ಯುಗಾದಿಯಂದು ಬೇವು ಪಾನಕ (ಉತ್ತರ ಕರ್ನಾಟಕದಲ್ಲಿ ತಯಾರಿಸುವ ವಿಶೇಷ ಪಾನಕ) ಕುಡಿಸದೆ ಮನೆಗೆ ಬಂದವರನ್ನು ಹಾಗೇ ಕಳಿಸಲಾಗದು. ಒಟ್ಟಾರೆ ಹಬ್ಬಗಳೆಂದರೆ ಖುಷಿ ಮತ್ತು ಸಂಭ್ರಮ. ದೈನಂದಿನ ಬದುಕಿನ ಬಡಿದಾಟ, ದುನಿಯಾದಾರಿ ಇವುಗಳಿಂದ ಒಂದು ದಿನವಾದರೂ ಪುರುಸೊತ್ತು ಪಡೆದು ನಿರುಮ್ಮಳವಾಗುವ ಅವಧಿ. ಬಂಧು-ಬಳಗ, ದಾಯಾದಿಗಳೊಂದಿಗೆ, ಊರ ದೈವದೊಂದಿಗೆ ಸರಸ-ಸಂಭಾಷಣೆ ನಡೆಸುವ ಮೂಲಕ ಹಗುರವಾಗುವ ಕ್ಷಣ. ಆದ್ದರಿಂದಲೇ ಉಳಿದ ಯಾವ ಪ್ರಾಣಿಗಳಿಗೂ ದಕ್ಕದ ಪರ್ವಗಳು ಮನುಷ್ಯರಿಗೆ ಸಂದಿವೆ. ಕ್ರಿಯಾಶೀಲವಾದ ಮನುಷ್ಯರು ಪ್ರಕೃತಿಯೊಂದಿಗೆ ನಡೆಸುವ ಸೆಣಸಾಟವಾಗಿಯೂ ಸಲ್ಲಿಸುವ ಕೃತಜ್ಞತೆಯಾಗಿಯೂ ಹಬ್ಬಗಳು ದಿನದಿಂದ ದಿನಕ್ಕೆ ವೈಭವೋಪೇತವಾಗಿ ಹರಡಿಕೊಳ್ಳುತ್ತಿವೆ.
ಪ್ರತೀ ಹಬ್ಬಗಳಿಗೂ ಒಂದಿಲ್ಲೊಂದು ಬಗೆಯ ಧಾರ್ಮಿಕ ಆವರಣಗಳು ಇವೆಯಾದರೂ ಅದಕ್ಕಿಂತ ಹೆಚ್ಚಾಗಿ ಅವುಗಳಿಗೆ ಸಾಂಸ್ಕೃತಿಕ ಹಿರಿಮೆ-ಗರಿಮೆಗಳು ನಡೆದುಕೊಂಡು ಬರುತ್ತಿವೆ. ‘ಮಾನವ ಕುಲಂ ತಾನೊಂದೆ ವಲಂ’ ಎಂಬ ಪಂಪನ ವಾಣಿಯು ಭಾರತೀಯರ ಅಕ್ಷುಣ್ಯ, ಅಪರಂಪಾರ ಸಾಂಸ್ಕೃತಿಕ ಕೊಡು-ಪಡೆಯನ್ನು ಎತ್ತಿ ಹಿಡಿಯುತ್ತದೆ. ತನ್ನಂತಿರುವ ಮನುಷ್ಯರನ್ನು, ತನಗೆ ವರವಾಗಿ ಪರಿಣಮಿಸಿರುವ ನಿಸರ್ಗವನ್ನು ಗೌರವಿಸುವ, ಪ್ರೀತಿಸುವ ಉಪಕ್ರಮವಾಗಿ ಹಬ್ಬಗಳು ಉತ್ಕೃಷ್ಟವೆನಿಸಿವೆ. ಪಡೆದುದನ್ನು ಹಂಚಿ ಕೊಂಡು ತಿನ್ನುವಲ್ಲಿಯೇ ಎಲ್ಲ ಹಬ್ಬಗಳ ಮಹತಿ ಇದೆ. ಧಾರ್ಮಿಕ ಕ್ರಿಯಾ ಕಲಾಪಗಳಾದರೂ ಎಲ್ಲರನ್ನು ಒಳಗೊಳ್ಳುವ ವಿದ್ಯಮಾನಗಳಾಗಿಯೇ ಅಭಿವೃದ್ಧಿ ಪಡಿಸಲಾಗಿದೆ.
ದೀಪಾವಳಿ ಹಬ್ಬಕ್ಕೆ ಕುಂಬಾರರು ಮಾಡಿದ ಹಣತೆ ಇಲ್ಲದೆ ನಡೆಯದು. ಪಟಾಕಿ ತಯಾರಿಸುವವರಲ್ಲಿ ಎಲ್ಲ ಧರ್ಮೀಯರ ಬೆವರು ಇರುತ್ತದೆ. ಪೂಜೆ ಮಾಡುವಾಗ ಬಾಜಾ ಬಜಂತ್ರಿಗಳು ಬೇಕು. ವಾದ್ಯ ನುಡಿಸುವ ಬಾಂಧವರು ಇಲ್ಲದೆ ಯಾವ ಅಂಗಡಿ, ಮುಂಗಟ್ಟುಗಳಲ್ಲಿ ಪೂಜೆ ಸಂಪನ್ನಗೊಳ್ಳದು. ಗಣಪತಿ, ದುರ್ಗೆ, ದೇವಿ ಮೂರ್ತಿಗಳನ್ನು ಮುಸ್ಲಿಮ್ ಬಾಂಧವರಷ್ಟು ಅಚ್ಚುಕಟ್ಟಾಗಿ ಇನ್ನೊಬ್ಬರು ಮಾಡಲಿಕ್ಕಿಲ್ಲ. ಶತಮಾನಗಳಿಂದಲೂ ದುರ್ಗೆ, ಗಣಪತಿ ಮೂರ್ತಿ ತಯಾರಿಸುವ ಮುಸ್ಲಿಮ್ ಕುಟುಂಬಗಳು ಈ ಕ್ಷಣಕ್ಕೂ ತಮ್ಮ ಕಸುಬಿನ ಪಾವಿತ್ರ್ಯವನ್ನು ಕಾಪಿಟ್ಟುಕೊಂಡು ಬಂದಿದ್ದಾರೆ. ಹೈನುಗಾರಿಕೆ ಇಲ್ಲದೆ ರಮಝಾನ್ ಆಚರಿಸುವುದಾದರೂ ಎಂತು? ಸಂಕ್ರಾತಿಯಲ್ಲಿ ಹಾರಿಸುವ ಪಟಗಳನ್ನು ತಯಾರಿಸುವ ಶ್ರಮಿಕರ ಕುಲ ಯಾವುದು ಎಂದು ಕೇಳಲಾದೀತೆ? ಅಂಬಾಬಾಯಿ ಬಹಳ ಖಡಕ್ ದೇವತೆ. ಅವಳಿಗೆ ಮೈಲಿಗೆ ಆಗದು. ಎಲ್ಲವೂ ಮಡಿಯಲ್ಲಿಯೇ ಆಗಬೇಕು. ಭಯಗ್ರಸ್ಥ ಭಕ್ತಿ ಇದ್ದಾಗಲೂ ದೇವಿಗೆ ಶೃಂಗರಿಸುವ ಹಾರ ಕಟ್ಟುವ ಇಮಾಮ್ಸಾಬಿಯೂ ಅವಳದೇ ಸಂತಾನ ಎಂಬ ತಿಳಿವಳಿಕೆಯನ್ನು ನಮ್ಮ ಹಿರೀಕರು ಸಹಜವೆಂಬಂತೆ ನಿಸರ್ಗ ವಿವೇಕದಿಂದಲೇ ಪಡೆದುಕೊಂಡಿದ್ದಾರೆ.
ಒಟ್ಟಾರೆ ಹಬ್ಬಗಳು ಜನಪದರ ಜೀವನ ಪ್ರೀತಿಯ ಹಾಗೂ ಹೃದಯ ಶ್ರೀಮಂತಿಕೆಯ ದ್ಯೋತಕವಾಗಿ ಕಾಲಾನುಕಾಲದಿಂದಲೂ ನಡೆದುಕೊಂಡು ಬಂದಿವೆ. ಕಾಲ ಗತಿಸಿದಂತೆ ಅವುಗಳ ಆಚರಣಾ ವಿನ್ಯಾಸಗಳಲ್ಲಿ ಹತ್ತಾರು ಬದಲಾವಣೆಗಳು, ಸುಧಾರಿತ ವಿದ್ಯಮಾನಗಳು ಕಾಣಿಸಿಕೊಂಡವಾದರೂ ಅವುಗಳ ಮೂಲ ಆಶಯದಲ್ಲಿ ಫರಕು ಆಗಿರಲಿಲ್ಲ. ತೀರ ಇತ್ತೀಚೆಗೆ ಅಂದರೆ ದೇಶದಲ್ಲಿ ಸ್ವಾರ್ಥ ರಾಜಕಾರಣವು ಮುನ್ನೆಲೆಗೆ ಬರುತ್ತಿರುವ ಹೊತ್ತಲ್ಲಿ ನಮ್ಮ ಹಬ್ಬಗಳು ಅತಿ ಹೆಚ್ಚು ವಿಕಾರ ವಿಕೃತಿಗೆ ತುತ್ತಾಗಿರುವುದನ್ನು ನೋಡುತ್ತಿದ್ದೇವೆ. ಅದಕ್ಕೆ ಜ್ವಲಂತವಾಗಿ ಈ ಬಾರಿಯ ದಸರಾ ಹಬ್ಬವನ್ನು ಉದಾಹರಿಸಬಹುದು.
ದಸರೆ, ಮಹಾನವಮಿ, ದುರ್ಗಾಷ್ಟಮಿ, ಮಾನೌಮಿ ಹೀಗೆ ತರಹೇವಾರಿ ಹೆಸರಿನಿಂದ ಕರೆದುಕೊಂಡು ಬರುತ್ತಿರುವ ಈ ಹಬ್ಬವನ್ನು ಬಹುತೇಕ ಭಾರತದ ಉದ್ದಕ್ಕೂ ಆಚರಿಸಿಕೊಂಡು ಬರಲಾಗುತ್ತಿದೆ. ಹಬ್ಬದ ವಿಧಾನದಲ್ಲಿ ಪ್ರದೇಶದಿಂದ ಪ್ರದೇಶಕ್ಕೆ ಹಲವು ವೈವಿಧ್ಯಗಳಿವೆಯಾದರೂ ಮೂಲದಲ್ಲಿ ಅದು ಮಾತೃ ಆರಾಧನಾ ಮೊತ್ತವಾಗಿ ನಿಂತಿದೆ. ಹಾಗೆ ನೋಡಿದರೆ ಭಾರತೀಯರ ಬಹುತೇಕ ಹಬ್ಬಗಳು ಪುರುಷ ದೇವರುಗಳನ್ನು ಕೇಂದ್ರೀಕರಿಸಿಕೊಂಡೇ ಬಂದಿವೆ. ಸಂಕ್ರಾಂತಿಗೆ ಸೂರ್ಯ ದೇವ, ನಾಗರ ಪಂಚಮಿಗೆ ನಾಗರಾಜ, ದೀಪಾವಳಿಗೆ ಬಲಿ ಪೂಜೆ, ನರಕಾಸುರನ ನೆನಪು, ಗಣೇಶ ಚತುರ್ಥಿಗೆ ಗಣಪತಿ, ಹೋಳಿ ಹುಣ್ಣಿಮೆಗೆ ಕಾಮದೇವ, ಶಿವರಾತ್ರಿಗೆ ಶಿವಶಂಕರ, ರಾಮ ನವಮಿ, ಕೃಷ್ಣಾಷ್ಟಮಿಗಳಂತೂ ಸರಿಯೇ ಸರಿ. ಅದರಂತೆ ಗುರುನಾನಕ್ ಜಯಂತಿ, ಮಹಾವೀರ ಜಯಂತಿ ಹೀಗೆ ಈ ಪಟ್ಟಿ ಇನ್ನೂ ಬೆಳೆಸಬಹುದು.
ಸ್ತ್ರೀದೇವತೆಯನ್ನು ಕೇಂದ್ರವಾಗಿಟ್ಟುಕೊಂಡು ಆಚರಿಸುವ ದೊಡ್ಡ ಪರ್ವವೆಂದರೆ ದುರ್ಗಾಷ್ಟಮಿ ಅಥವಾ ದಸರೆ ಮಾತ್ರ. ಭಾರತೀಯ ದರ್ಶನಗಳಾದ ದ್ವೈತ, ಅದ್ವೈತ, ವಿಶಿಷ್ಟಾದ್ವೈತ, ದ್ವೈತಾದ್ವೈತ ಇತ್ಯಾದಿಗಳು ಹೆಚ್ಚಾಗಿ ಅಮೂರ್ತ ಆತ್ಮ-ಪರಮಾತ್ಮನ ಸುತ್ತಲೇ ಗಿರಕಿ ಹೊಡೆಯುತ್ತಿದ್ದವು. ಈ ಜಿಜ್ಞಾಸೆಗಳಲ್ಲಿ ಲಿಂಗ ತಾಟಸ್ಥ್ಯ ಹುಡುಕಾಟವಿದೆ. ಆತ್ಯಂತಿಕ ಹಂತದಲ್ಲಿ ಅದೇನೋ ಸರಿ. ಆದರೆ ವಾಸ್ತವದ ಬದುಕು ಬೇರೆಯೇ ಇತ್ತಲ್ಲ. ಶಿವನಲ್ಲಿ ಶಕ್ತಿ ಇದೆ ಮಾತ್ರವಲ್ಲ. ಶಕ್ತಿಯೆ ಲೀಲೆಯಾದೊಡನೆ ಶಿವನಾಯಿತು ಎಂಬ ಶಕ್ತಿ ವಿಶಿಷ್ಟಾದ್ವೈತ ಸಿದ್ಧಾಂತವು ಮುನ್ನೆಲೆಗೆ ಬಂದಿತು. ತತ್ಪೂರ್ವದಲ್ಲಿಯೇ ಭಾರತದಲ್ಲಿ ಶಾಕ್ತ ಪಂಥವು ತುಂಬಾ ವಿಸ್ತಾರವಾಗಿ ಮತ್ತು ಆಳವಾಗಿ ಜನಮಾನಸವನ್ನು ಪ್ರಭಾವಿಸಿಕೊಂಡು ಬಂದಿತ್ತು. ಈ ಹಿನ್ನೆಲೆಯಲ್ಲಿ ದೇಶವ್ಯಾಪಿ ದಸರೆ ಹಬ್ಬವು ದೇವಿ ಆರಾಧನೆಯಾಗಿ ಚಾಲ್ತಿಯಲ್ಲಿದೆ. ಜಗನ್ಮಾತೆ, ಶಾಂಭವಿ, ಅಂಬಾಭವಾನಿ ಸಹಸ್ರ ನಾಮಗಳಲ್ಲಿ ಆರಾಧನೆ ನಡೆಯುತ್ತದೆ. ಉಳಿದೆಲ್ಲ ಹಬ್ಬಗಳಿಗಿಂತ ದೀರ್ಘ ಅವಧಿಗೆ ಇದು ಜರುಗುತ್ತದೆ. ಒಂಭತ್ತು ದಿನಗಳವರೆಗೆ ದೇವಿಯ ಪೂಜೆ, ಮನೆ ಮನೆಗಳಲ್ಲಿಯೂ ಕೇರಿ, ಬೀದಿ, ಮೊಹಲ್ಲಾ, ಓಣಿಗಳಲ್ಲಿ ದೇವಿಯ ಪ್ರತಿಷ್ಠಾಪನೆ.
ಕರ್ನಾಟಕದಲ್ಲಿಯಂತೂ ಚಿದಾನಂದ ಅವಧೂತನೆಂಬ ಶಾಕ್ತ ಕವಿ ರಚಿಸಿದ ‘ದೇವಿ ಪುರಾಣ’ ಪಠಣವು ವೃತದಂತೆ ಪಾಲಿಸಿಕೊಂಡು ಬರಲಾಗುತ್ತದೆ. ಹತ್ತನೇ (ದಸವಿ) ದಿನ ದಸರೆ. ಅಂದು ದೇವಿ ತನ್ನೆಲ್ಲ ಲೋಕ ಸಂಚಾರ ಮುಗಿಸಿ ಮಲಗಿಕೊಂಡು ಬಿಡುತ್ತಾಳೆ ಎಂಬ ಮುಗ್ಧ ನಂಬಿಕೆ ಭಕ್ತರದು. ಹತ್ತನೆ ದಿವಸ ಉತ್ತರ ಕರ್ನಾಟಕದಲ್ಲಿ ಬನ್ನಿ ವೃಕ್ಷವನ್ನು ಮಹಾಂಕಾಳಿಯಾಗಿ ಪೂಜೆ ಮಾಡಿ ಅದೇ ಮರದ ಎಲೆಗಳನ್ನು ಬಂಗಾರವೆಂದು ಪರಸ್ಪರ ಕೊಟ್ಟು ಕೊಂಡು ನಲಿಯುತ್ತಾರೆ. ಹಿಂದೆ ಪಾಂಡವರು 12 ವರುಷ ವನವಾಸ ಮುಗಿಸಿ ಒಂದು ವರ್ಷ ಅಜ್ಞಾತವಾಸ ಅಂದರೆ ಯಾರಿಗೂ ಗುರುತು ಸಿಗದ ಹಾಗೆ ಇರಬೇಕಿತ್ತಲ್ಲ! ಆಗ ಅವರು ತಮ್ಮ ಶಸ್ತಾಸ್ತ್ರಗಳನ್ನು ದಟ್ಟವಾಗಿ ಆವರಿಸಿಕೊಂಡು ಬೆಳೆದಿದ್ದ ಬನ್ನಿ(ಶಮಿ) ಮರದಲ್ಲಿ ಅಡಗಿಸಿಟ್ಟಿದ್ದರಂತೆ. ಬನ್ನಿ ಮಹಾಂಕಾಳಿಯಾದರೂ ವರ್ಷ ಪರ್ಯಂತ ಅವರ ಆಯುಧಗಳು ಯಾರ ಕಣ್ಣಿಗೂ ಬೀಳದಂತೆ ಕಾಪಾಡಿದಳಂತೆ. ನಂತರ ಪಾಂಡವರು ತಮ್ಮ ಆಯುಧಗಳನ್ನು ಪಡೆದು ಕೃತಜ್ಞತೆ ಸಲ್ಲಿಸುತ್ತ ದೇವಿ ಪೂಜೆ ಮಾಡಿ ತಾವು ನೆಲೆಸಿದ್ದ ವಿರಾಟ ದೇಶದ ಸೀಮೋಲ್ಲಂಘನ ಮಾಡಿ ಮುಂದೆ ಹೋದರಂತೆ. ಆ ಪಾಂಡವರ ನೆನಪಿಗಾಗಿ ಜನತೆ ಇವತ್ತಿಗೂ ನವಮಿ ದಿವಸ ತಮ್ಮ ಆಯುಧಗಳು, ವೃತ್ತಿ ಉಪಕರಣಗಳನ್ನು ಪೂಜಿಸಿಕೊಂಡು ಬರುವರಲ್ಲದೆ, ಹತ್ತನೇ ದಿವಸ ಬನ್ನಿ ಮರದ ಪೂಜೆ ಮಾಡಿ ಸೀಮೋಲ್ಲಂಘನ ಮಾಡುವುದುಂಟು.
ದಸರೆ ಹಬ್ಬದ ಸುತ್ತಲೂ ಅನೇಕ ಧಾರ್ಮಿಕ ನಂಬಿಕೆಗಳು ಹುತ್ತ ಕಟ್ಟಿಕೊಂಡಿವೆ. ಬಸವಾನುಯಾಯಿಗಳ ಪ್ರಕಾರ ಬಸವಣ್ಣನವರು 12ನೇ ಶತಮಾನದಲ್ಲಿ ಜಾತಿ ನಿರ್ನಾಮ ಮಾಡಲೆಂದು ಅಂತರ್ಜಾತಿ ವಿವಾಹ ಏರ್ಪಡಿಸಿದ್ದರು. ಸಮಗಾರ ಹರಳಯ್ಯನ ಮಗನಾದ ಶೀಲವಂತನಿಗೂ ಬ್ರಾಹ್ಮಣ ಮಧುವರಸನ ಮಗಳು ಕಲಾವತಿ(ಲಾವಣ್ಯ)ಗೂ ಮದುವೆ ಮಾಡಲು ಮುಂದಾದಾಗ ಕರ್ಮಠರು ಇದನ್ನು ಸಹಿಸದೆ ಬಿಜ್ಜಳನ ಕಿವಿ ತುಂಬಿ ಕಲ್ಯಾಣದಲ್ಲಿ ರಕ್ತ ಕಾಲುವೆ ಹರಿಯುವಂತೆ ಮಾಡುತ್ತಾರೆ. ಬಸವಣ್ಣನವರನ್ನು ಕಲ್ಯಾಣ ತೊರೆಯುವಂತೆ ಮಾಡಿದರೆ, ಹರಳಯ್ಯ, ಮಧುವರಸ ದಂಪತಿಗಳನ್ನು ಆನೆಯ ಕಾಲಿಗೆ ಕಟ್ಟಿ ಕಲ್ಯಾಣದ ಬೀದಿಯಲ್ಲಿ ಎಳೆದು ಚಿತ್ರ ಹಿಂಸೆ ನೀಡಿ ಕೊಲ್ಲುತ್ತಾರೆ. ಮದುಮಕ್ಕಳನ್ನು ನಡು ಬೀದಿಯಲ್ಲಿ ಗಲ್ಲಿಗೆ ಏರಿಸಲಾಗುತ್ತದೆ. ಶರಣರನ್ನು ಕಂಡ ಕಂಡಲ್ಲಿ ಅಟ್ಟಿಸಿಕೊಂಡು ಕೊಲ್ಲಲಾಗುತ್ತದೆ. ಕಲ್ಯಾಣ ಅಕ್ಷರಶಃ ರಕ್ತದ ಮಡುವು ಆಗುತ್ತದೆ. ಇದು ಕಟ್ಟು ಕಥೆಯಲ್ಲ. ಇಂಥ ಭೀಕರ ಕೃತ್ಯವನ್ನು ಕುರಿತು ಶಾಸನಗಳು, ಶಿಷ್ಟ ಕಾವ್ಯಗಳು ರಚನೆಯಾಗುವ ಸಾಧ್ಯತೆಯೇ ಇರಲಿಲ್ಲವಾದರೂ ಜನಪದರ ಹಾಡು-ಹಸೆ, ಮಾತು-ಕಥೆಗಳಲ್ಲಿ ಎಲ್ಲಕ್ಕಿಂತ ಹೆಚ್ಚಾಗಿ ಶರಣರ ವಚನಗಳಲ್ಲಿಯೇ ಇದಕ್ಕೆ ಪುರಾವೆಗಳಿವೆ. ಈ ಮಹಾನವಮಿಯಂದೇ ಶರಣರ ಮಾರಣ ಹೋಮ ನಡೆದಿದೆ ಎಂದು ಅಂದಾಜಿಸುವ ಬಸವಾನುಯಾಯಿಗಳು ಇದನ್ನು ಎಳೆಹೂಟೆ ದಿನವೆಂದು ಆಚರಿಸುತ್ತಾರೆ. ಬಸವಣ್ಣನವರ ವಚನವೊಂದರಲ್ಲಿ ‘ಜೋಳವಾಳಿಯಾನಲ್ಲವಯ್ಯ, ವೇಳೆವಾಳಿಯವ ನಾನಯ್ಯಾ. ಹಾಳುಗೆಟ್ಟೋಡುವ ಆಳು ನಾನಲ್ಲವಯ್ಯಾ. ಕೇಳು ಕೂಡಲಸಂಗಮದೇವಾ ಮರಣವೇ ಮಹಾನವಮಿ’ ಎಂದು ನಿರೂಪಿಸಿರುವುದರಿಂದ ಶರಣರು ಮರಣಕ್ಕೆ ಅಂಜದೆ ಪುರೋಹಿತರ ಕ್ರೌರ್ಯಕ್ಕೆ ಎದೆ ಕೊಟ್ಟು ನಿಂತರು. ತತ್ವಕ್ಕಾಗಿ ಜೀವ ತೆತ್ತು ಹುತಾತ್ಮರಾದರು. ಆದ್ದರಿಂದ ಮಹಾನವಮಿಯು ಬಸವಣ್ಣನವರಾದಿಯಾಗಿ ಶರಣರು ಬಲಿ ತೆತ್ತ ದಿನವೆಂದು ಆಚರಿಸಿಕೊಂಡು ಬರಲಾಗುತ್ತಿದೆ.
ಇನ್ನೊಂದೆಡೆ ರಾಮಾಯಣದಲ್ಲಿ ರಾಮನು ಲಂಕೆಯ ಮೇಲೆ ಯುದ್ಧ ಸಾರಿ ಲಂಕಾಪತಿ ರಾವಣನನ್ನು ಕೊಂದ ದಿನವೆಂದು ನಂಬಲಾಗುತ್ತದೆ. ರಾವಣನ ಹತ್ಯೆಯ ನೆನಪಿಗಾಗಿ ಮಹಾನವಮಿಯೆಂದು ಉತ್ತರ ಭಾರತದಲ್ಲಿ ರಾವಣ, ಕುಂಭಕರ್ಣ, ಮೇಘನಾದ ಇವರ ಪ್ರತಿಕೃತಿಗಳನ್ನು ಮಾಡಿ ಸುಡುತ್ತಾರೆ. ಇದಕ್ಕೆ ಪ್ರತಿನಡೆಯೆಂಬಂತೆ ದಕ್ಷಿಣ ಭಾರತದ ತಮಿಳನಾಡು ಮುಂತಾದೆಡೆಯಲ್ಲಿ ಶಿವಭಕ್ತನಾಗಿದ್ದ ರಾವಣನನ್ನು ಅನ್ಯಾಯದಿಂದ ಕೊಲ್ಲಲಾಗಿದೆ ಎಂದು ಭಾವಿಸಿ ರಾಮ ಮತ್ತು ಲಕ್ಷ್ಮಣರ ಪುತ್ಥಳಿಯನ್ನು ಸುಡುತ್ತಾರೆ. ಒಂದರ್ಥದಲ್ಲಿ ಇದು ಆರ್ಯರು ಮತ್ತು ದ್ರಾವಿಡರ ಮಧ್ಯದ ಸಂಘರ್ಷವಾಗಿ ಉಳಿದುಕೊಂಡು ಬಂದಿದೆ. ಈ ಬಗ್ಗೆ ಇನ್ನು ಹೆಚ್ಚಿನ ಅಧ್ಯಯನ ಆಗಬೇಕಿದೆ. ಇಲ್ಲಿಯವರೆಗೆ ಈ ಎಲ್ಲ ಆಚರಣೆಗಳು ಸಾಂಕೇತಿಕವಾಗಿ ಒಂದು ಮಧ್ಯಮ ನಿಲುವಿನಲ್ಲಿ ನಡೆಯುತ್ತಿದ್ದವು. ಆದರೆ ಇತ್ತೀಚೆಗೆ ಹಬ್ಬಗಳನ್ನು ರಾಜಕೀಯಗೊಳಿಸಿ ತೀರ ದ್ವೇಷ ಹರಡುತ್ತಿರುವುದು ಆಘಾತಕಾರಿ ಸಂಗತಿಯಾಗಿ ಪರಿಣಮಿಸಿದೆ.
ದಿಲ್ಲಿಯ ರಾಮಲೀಲಾ ಮೈದಾನದಲ್ಲಿ ಸಂಪ್ರದಾಯದಂತೆ ರಾವಣಾದಿಗಳ ಮೂರ್ತಿ ಸುಡುವುದೇನೋ ಸರಿ. ಆದರೆ ಈ ಬಾರಿ ಬಿಜೆಪಿಯ ಮಹನೀಯರು ಆರೆಸ್ಸೆಸ್ನ ಕಟ್ಟಾಳುಗಳು 30 ಅಡಿ ಜಿರಳೆಯ ಪ್ರತಿಕೃತಿ ಮಾಡಿ ದಹಿಸುತ್ತಿರುವುದು ಅವರ ದಿಕ್ಕೆಟ್ಟ ರಾಜಕಾರಣದ ಪ್ರತೀಕವಾಗಿದೆ. ಇದಕ್ಕಿಂತ ಆಘಾತಕಾರಿ ಎಂದರೆ ಗರ್ಬಾನೃತ್ಯ ಸಮಾರಂಭದಲ್ಲಿ ಗೆಳೆಯ ಗೆಳತಿಯರೊಡಗೂಡಿ ಬಂದಿದ್ದ ಅಲ್ಪಸಂಖ್ಯಾತ ಮಕ್ಕಳನ್ನು ನೃತ್ಯ ಮಾಡುವುದರಿಂದ ಹೊರ ಹಾಕಿದ್ದು, ಮಕ್ಕಳ ಪಾಲಕರೇ ತಮ್ಮ ಮಕ್ಕಳ ಬಗೆಗೆ ಅಸಮಾಧಾನ ತಾಳದಿದ್ದರೂ ಅನೈತಿಕ ಪೊಲೀಸ್ ಗಿರಿ ಮಾಡುವ ಪುಂಡರು ನೃತ್ಯ ಮಾಡಲು ಇಚ್ಛಿಸುವ ಜಾತ್ಯತೀತ ಮನೋಭಾವದ ಮಕ್ಕಳನ್ನು ನಿರ್ಲಜ್ಜತನದಿಂದ ಬೆದರಿಸಿ ಅಕ್ಷರಶಃ ಹೊರ ದೂಡಿದ್ದು ಭಾರತದ ಹದಗೆಟ್ಟ ಮಾನಸಿಕ ಸ್ಥಿತಿಗೆ ಕನ್ನಡಿ ಹಿಡಿದಿದೆ.
ಕೆಲವು ದಿನಗಳ ಹಿಂದೆ ಉಡುಪಿಯ ಕೃಷ್ಣ ದೇವಸ್ಥಾನಕ್ಕೆ ದರ್ಶನಕ್ಕಾಗಿ ತೆರಳಿದ್ದ ಗುಂಪಿನಲ್ಲಿ ಯಾತ್ರಾರ್ಥಿಗಳ ಕುಟುಂಬ ಸದಸ್ಯಳಂತೆ ನಡೆದುಕೊಂಡು ಬರುತ್ತಿದ್ದ ಯುವತಿಯೊಬ್ಬಳ ಧರ್ಮವನ್ನು ಅವಳ ಆಧಾರ ಕಾರ್ಡ್ದಿಂದ ಪತ್ತೆ ಹಚ್ಚಿ ವಸತಿಗೃಹದಲ್ಲಿ ಅವಳಿಗೆ ವಾಸ್ತವ್ಯ ನೀಡಲು ರಾತ್ರಿ ಹೊತ್ತಿನಲ್ಲಿ ನಿರಾಕರಿಸಿದ್ದು ವರದಿಯಾಗಿತ್ತು. ಆ ರಾತ್ರಿಯಲ್ಲಿ ಅನ್ಯ ಧರ್ಮೀಯಳು ಎಂಬ ಕಾರಣಕ್ಕಾಗಿ ಯುವತಿಯನ್ನು ಹೊರ ಹಾಕಿದ್ದು ಅದಾವ ದೇವರು ಮೆಚ್ಚುವ ಕೆಲಸವೋ ಗೊತ್ತಿಲ್ಲ. ‘ದಯವಿಲ್ಲದ ಧರ್ಮ ಅದಾವುದಯ್ಯಾ?’ ಎಂದು ಬಸವಣ್ಣನವರು ಕೇಳಿದ್ದು ಈ ಕ್ಷಣಕ್ಕೂ ಧರ್ಮಧುರಂಧರರ ಅಮಾನವೀಯತೆಯನ್ನು ಎತ್ತಿ ತೋರಿಸುತ್ತದೆ. ಸಾಂಸ್ಕೃತಿಕ ಅನನ್ಯತೆಯ ದ್ಯೋತಕವಾಗಬೇಕಾಗಿದ್ದ ಹಬ್ಬಗಳು ಮತ್ತು ಅವುಗಳ ಆಪ್ತ ಆಚರಣೆಗಳು ಧರ್ಮ ದ್ವೇಷವನ್ನು, ಅಸಹಿಷ್ಣುತೆಯನ್ನು ಬಿತ್ತುತ್ತಿರುವುದು ಅತ್ಯಂತ ನೋವಿನ ಸಂಗತಿ. ಇದು ಅನೂಚಾನವಾಗಿ ಹಬ್ಬಗಳನ್ನು ಆಚರಿಸಿಕೊಂಡು ಬರುತ್ತಿದ್ದ ಜನಸಾಮಾನ್ಯರ ಸಮಸ್ಯೆಯಲ್ಲ. ಜನರನ್ನು ವೋಟು ಬ್ಯಾಂಕಾಗಿ ನಡೆಸಿಕೊಂಡು ಬರುತ್ತಿರುವ ದುಷ್ಟ ರಾಜಕಾರಣದ ಕೋಮು ದಳ್ಳುರಿಯ ದಾವಾನಲವಾಗಿ ಎಲ್ಲೆಲ್ಲೂ ಈ ತರದ ದುರ್ಭಾವನೆಗಳು ಹುರಿಗಟ್ಟುತ್ತಿವೆ.
ಸರ್ವಾಧಿಕಾರಿ ಫ್ಯಾಶಿಸಂ ಈಗ ಭಾರತವನ್ನು ನುಂಗಿ ನೊಣೆಯುತ್ತಿದೆ. ಧರ್ಮ ದ್ವೇಷದ ಪರಾಕಾಷ್ಠೆಯಲ್ಲಿ ಹಬ್ಬಗಳು, ಆಚಾರ, ವಿಚಾರ, ಆಹಾರ, ಉಡುಗೆ-ತೊಡುಗೆ ಎಲ್ಲವುಗಳೂ ಗಬ್ಬೆದ್ದು ಹೋಗಿವೆ. ಆದರೂ ಈಗ ಜೆನ್ ಝಿಗಳು ಹದಗೆಟ್ಟ ರಾಜಕಾರಣಕ್ಕೆ ದೊಂದಿಯಾಗಿ ಎದ್ದು ನಿಲ್ಲುತ್ತಿರುವುದು ಆಶಾದಾಯಕವಾಗಿದೆ. ಫ್ಯಾಶಿಸಂಗೆ ಆಯಸ್ಸು ತುಂಬಾ ಕಡಿಮೆ ಎಂಬುದನ್ನು ಇತಿಹಾಸ ಸಾಕ್ಷೀಕರಿಸುತ್ತಲೇ ಇದೆ.
(ಲೇಖಕರು: ಪ್ರಾಧ್ಯಾಪಕರು ಮತ್ತು ಸಾಮಾಜಿಕ ಹೋರಾಟಗಾರರು)






