Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ನೆಲದನಿ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ಪುಸ್ತಕ ಸಾಂಗತ್ಯ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಮಾಹಿತಿ ಮಾರ್ಗದರ್ಶನ
    • ಆರೋಗ್ಯ
    • ಓ ಮೆಣಸೇ
    • ಕೃತಿ ಪರಿಚಯ
    • ಝಲಕ್
    • ಬುಡಬುಡಿಕೆ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಅಂಕಣಗಳು
  4. ಬಯಲ ಬುತ್ತಿ
  5. ಮಹಿಳೆ-ಧಾರ್ಮಿಕತೆ-ಸಂಸ್ಕೃತಿ

ಮಹಿಳೆ-ಧಾರ್ಮಿಕತೆ-ಸಂಸ್ಕೃತಿ

ಡಾ. ಮೀನಾಕ್ಷಿ ಬಾಳಿಡಾ. ಮೀನಾಕ್ಷಿ ಬಾಳಿ6 Oct 2026 12:52 PM IST
share
ಮಹಿಳೆ-ಧಾರ್ಮಿಕತೆ-ಸಂಸ್ಕೃತಿ

ಸಸ್ತನಿ ಜೀವಿಗಳಲ್ಲಿ ಹಾಲೊಸರುವ ಸಾಮರ್ಥ್ಯ ಹೊಂದಿದ ಸ್ತ್ರೀ ಸಂಕುಲವು ಸೃಷ್ಟಿಯ ಅದ್ಭುತ ರಚನೆಯೆಂದೇ ಪರಿಗಣಿತವಾಗಿದೆ. ಇದು ಪ್ರಕೃತಿಯು ಸ್ತ್ರೀ ಜನ್ಮಕ್ಕೆ ನೀಡಿದ ವರವೆಂದು ಪರಿಗಣಿಸಬಹುದೆ? ಹೌದು ಎಂದಾದರೆ ಇಂಥ ಅಸೀಮ ಸಾಮರ್ಥ್ಯವಿರುವ ಸ್ತ್ರೀಯರೇಕೆ ತುಚ್ಛವಾದರು, ಯಾವ ಮಾನದಂಡಗಳಡಿ ಅವರನ್ನು ಬದುಕಿನ ಎಲ್ಲ ಹಂತದಲ್ಲಿಯೂ ದೂರೀಕರಿಸಲಾಯಿತು ಮತ್ತು ಏಕೆ? ಸಂತಾನ ಸೃಷ್ಟಿಯಲ್ಲಿ ಅತಿ ಹೆಚ್ಚು ಶ್ರಮ ವಹಿಸುತ್ತಿರುವ ಸ್ತ್ರೀ ಸಂಕುಲ ಹೆಚ್ಚು ಗೌರವಕ್ಕೆ ಪಾತ್ರವಾಗುವ ಬದಲು ಕೀಳಾದದ್ದು ಏಕೆ? ಹೆಚ್ಚು ಗೌರವಕ್ಕೆ ಪಾತ್ರವಾಗುವುದು ಹೋಗಲಿ; ಕನಿಷ್ಠ ಸಮಾನ ಗೌರವವಾದರೂ ಪಡೆಯಬೇಕಿತ್ತಲ್ಲವೇ?

ಹೆಣ್ಣಾಗಿ ಹುಟ್ಟುವುದಕ್ಕಿಂತ ಮಣ್ಣಾಗಿ ಹುಟ್ಟಿದರೆ

ಮಣ್ಣಿನ ಮೇಲೊಂದು ಮರವಾಗಿ ಹುಟ್ಟಿದರೆ

ಪುಣ್ಯವಂತರಿಗೆ ನೆರಳಾದೆ ॥

ಹೆಣ್ಣು ಹಡಿಯಲಿ ಬ್ಯಾಡ ಹೆರವರಿಗೆ ಕೊಡಬ್ಯಾಡ

ಹೆಣ್ಣು ಹೋಗಾಗ ಅಳಬ್ಯಾಡ | ಹಡದವ್ವ

ಸಿಟ್ಟಾಗಿ ಶಿವನಿಗೆ ಬಯ್ಯಬ್ಯಾಡ ॥

ಹುಟ್ಟಬಾರದು ಹೆಣ್ಣಿನ ಜನ್ಮ

ಈ ದೇಹ ಸುಡಲಿ ಕಷ್ಟ ಬರೆದನು ಬ್ರಹ್ಮ ದೇವರು ॥

ಇತ್ಯಾದಿ ಜನಪದ ಹಾಡುಗಳಿಗೆ ಬರಗಾಲವಿಲ್ಲ. ಜನಪದ ಸಾಹಿತ್ಯಕ್ಕೆ ಕರ್ತೃ ನಿರ್ದೇಶನವಿಲ್ಲವಾದ್ದರಿಂದ ಇಂಥ ಪದಗಳನ್ನು ಸೃಷ್ಟಿಸಿದವರು ಗಂಡೋ ಹೆಣ್ಣೊ ಅನ್ನುವುದು ಅಪ್ರಾಸಂಗಿಕ. ಇವುಗಳನ್ನು ಯಾರೇ ರಚಿಸಿರಲಿ; ಅಸಲಿಗೆ ಇಲ್ಲಿರುವುದು ಸ್ತ್ರೀ ಬದುಕಿನ ದಾರುಣತೆ ಎನ್ನುವುದನ್ನು ಗಮನಿಸಬೇಕು. ಹೆಣ್ಣಾಗಿ ಹುಟ್ಟುವುದು ಅದೆಷ್ಟು ದುರದೃಷ್ಟಕರ ಎಂಬುದನ್ನು ಇಂಥ ಪದಗಳು ಕಣ್ಣಿಗೆ ರಾಚಿಸುತ್ತವೆ. ಗಂಡಾಗಿ ಹುಟ್ಟುವುದಕ್ಕಿಂತ ಕಲ್ಲಾಗಿಯೋ ಮಣ್ಣಾಗಿಯೋ ಹುಟ್ಟಬೇಕಿತ್ತು ಎಂಬ ಹಾಡುಗಳು ರಚನೆಯಾಗಿಲ್ಲ. ಎಲ್ಲಿಯೂ ಗಂಡಿನ ಬಾಳು ಗೋಳು ಎಂಬ ಸೊಲ್ಲುಗಳಿಲ್ಲ. ಯಾಕೆ ಹೀಗೆ? ಪ್ರಶ್ನೆಗಳು ಪ್ರಜ್ಞಾವಂತರನ್ನು ಅನುಗಾಲದಿಂದಲೂ ಕಾಡುತ್ತಲೇ ಇವೆಯಾದರೂ ಪ್ರಶ್ನಿಸದೆ ಒಪ್ಪಿಕೊಂಡದ್ದೇ ಜಾಸ್ತಿ. ಹೆಣ್ಣಿನ ಜನ್ಮ ಅತ್ಯಂತ ಹೇಯ ಮತ್ತು ಅದು ಇರಬೇಕಾದದ್ದೆ ಹೀಗೆ ಎಂದು ಒಪ್ಪಿಸಿಕೊಂಡು ಬರುತ್ತಿರುವುದಕ್ಕೆ ಅನೇಕ ಸಮಾಜೋ-ಆರ್ಥಿಕ ಕಾರಣಗಳಿವೆ. ಫಲವಂತಿಕೆಯ ಸಾಧನವಾದ ಸ್ತ್ರೀಯರನ್ನು ಅವರ ಜನನಾಂಗಗಳ ಕಾರಣವಾಗಿಯೇ ತುಚ್ಛೀಕರಿಸಿದ್ದಂತೂ ಮಾನವ ಇತಿಹಾಸದಲ್ಲಿನ ಅತಿ ದೊಡ್ಡ ಅಪರಾಧ. ಸಂತಾನ ಸೃಷ್ಟಿಯಲ್ಲಿ ಪ್ರಧಾನ ಪಾತ್ರ, ಮಕ್ಕಳ ಪಾಲನೆ-ಪೋಷಣೆಯಲ್ಲಿಯೂ ಹೆಚ್ಚಿನ ಶ್ರಮ ವಹಿಸುವ ಸ್ತ್ರೀ ಸಂಕುಲವನ್ನು ಅಸ್ತಿತ್ವಹೀನಗೊಳಿಸುತ್ತಲೇ ಬರುತ್ತಿರುವುದೇ ನಾಗರಿಕ ಸಮಾಜದ ಚಹರೆಯಾಗಿದೆ.

ಪ್ರಕೃತಿಯ ಸಹಜ ನಡೆಯಲ್ಲಿ ಲಿಂಗಭೇದವಿಲ್ಲ. ಜನನ, ಮರಣ, ಆಸೆ, ಆಮಿಷ ಇತ್ಯಾದಿ ಮನುಷ್ಯರ ಭಾವ ಭಾವನೆಗಳಲ್ಲಿ ಲಿಂಗ ವಿವಕ್ಷೆಯಿಲ್ಲ. ಹೀಗಿರುವಾಗಲೂ ಸ್ತ್ರೀ-ಪುರುಷರ ನಡೆ-ನುಡಿ, ಆಕಾರ-ಆಚಾರಗಳಲ್ಲಿ ಭಿನ್ನತೆಗಳು ಎದ್ದು ಕಾಣಿಸುತ್ತವೆಯಲ್ಲ! ಇದು ಹೇಗೆ ಸಾಧ್ಯವಾಯಿತು? ಸೃಷ್ಟಿ ರಚನೆಯಲ್ಲಿಯೇ ಅಂಥದ್ದೊಂದು ವಿಭಾಗೀಕರಣ ಇದೆ ಎಂಬುದಕ್ಕೆ ಪುರಾವೆಯಾಗಿ ಸ್ತ್ರೀ ಸಹಜವಾದ ಮೊಲೆ-ಮುಡಿ, ಮಾಸಿಕ ಸ್ರಾವ, ಗರ್ಭಾಶಯ ಹೀಗೆ ಕೆಲವು ಲಿಂಗ ವೈವಿಧ್ಯಗಳನ್ನು ಎತ್ತಿ ತೋರಿಸಲಾಯಿತು. ಹೌದು. ಸ್ತ್ರೀ-ಪುರುಷರ ಅಂಗಾಗಗಳಲ್ಲಿ; ತತ್ಕಾರಣವಾಗಿ ಜೈವಿಕ ಕ್ರಿಯೆಗಳಲ್ಲಿ ಕೆಲವು ಭಿನ್ನತೆಗಳಿವೆ. ಸಂತಾನಾಭಿವೃದ್ಧಿಯಲ್ಲಿ ಗಂಡಿಗೊಂದು ಸಾಮರ್ಥ್ಯವಿದ್ದರೆ ಹೆಣ್ಣಿಗೊಂದು ಸಾಮರ್ಥ್ಯವಿದೆ. ಗಂಡಿನಲ್ಲಿನ ಶುಕ್ಲವು ಸ್ತ್ರೀಗರ್ಭವನ್ನು ಪ್ರವೇಶಿಸಿದಾಗಲೇ ಅಂಡ ಫಲಿತವಾಗುತ್ತದೆ. ಅವಳ ಮಾಸಿಕ ಸ್ರಾವವೇ ಜಮೆಗೊಂಡು ಪಿಂಡವಾಗಿ; ಪಿಂಡದಲ್ಲಿ ಜೀವ ಸಂಚಾರವಾಗಿ ಮಗುವಾಗಿ ಭೂಮಿಗೆ ಉದಿಸುತ್ತದೆ. ಉದಿಸಿದ ಕೂಸಿಗಾಗಿಯೇ ಸ್ತ್ರೀಸ್ತನಗಳಲ್ಲಿ ಹಾಲೊಸರುತ್ತದೆ. ಇದು ಮಗುವಿನ ಜೀವದಾಯಿನಿ ಶಕ್ತಿ ಸಂಚಯ. ತಾಯಿಯ ಮೊಲೆವಾಲು ನಂಜಾದರೆ ತುಂಬಾ ಕಷ್ಟ. ಆದ್ದರಿಂದಲೇ ಬಸವಣ್ಣನವರು ತಮ್ಮೊಂದು ವಚನದಲ್ಲಿ ‘‘ತಾಯಿಯ ಮೊಲೆವಾಲು ನಂಜಾಗಿ ಕೊಲುವೊಡೆ ಇನ್ನಾರಿಗೆ ದೂರುವೆ ಕೂಡಲಸಂಗಮದೇವಾ’’ ಎಂದು ಮೊರೆ ಇಡುತ್ತಾರೆ. ಅಂದರೆ ಸಸ್ತನಿ ಜೀವಿಗಳಲ್ಲಿ ಹಾಲೊಸರುವ ಸಾಮರ್ಥ್ಯ ಹೊಂದಿದ ಸ್ತ್ರೀ ಸಂಕುಲವು ಸೃಷ್ಟಿಯ ಅದ್ಭುತ ರಚನೆಯೆಂದೇ ಪರಿಗಣಿತವಾಗಿದೆ. ಇದು ಪ್ರಕೃತಿಯು ಸ್ತ್ರೀ ಜನ್ಮಕ್ಕೆ ನೀಡಿದ ವರವೆಂದು ಪರಿಗಣಿಸಬಹುದೆ? ಹೌದು ಎಂದಾದರೆ ಇಂಥ ಅಸೀಮ ಸಾಮರ್ಥ್ಯವಿರುವ ಸ್ತ್ರೀಯರೇಕೆ ತುಚ್ಛವಾದರು, ಯಾವ ಮಾನದಂಡಗಳಡಿ ಅವರನ್ನು ಬದುಕಿನ ಎಲ್ಲ ಹಂತದಲ್ಲಿಯೂ ದೂರೀಕರಿಸಲಾಯಿತು ಮತ್ತು ಏಕೆ? ಸಂತಾನ ಸೃಷ್ಟಿಯಲ್ಲಿ ಅತಿ ಹೆಚ್ಚು ಶ್ರಮ ವಹಿಸುತ್ತಿರುವ ಸ್ತ್ರೀ ಸಂಕುಲ ಹೆಚ್ಚು ಗೌರವಕ್ಕೆ ಪಾತ್ರವಾಗುವ ಬದಲು ಕೀಳಾದದ್ದು ಏಕೆ? ಹೆಚ್ಚು ಗೌರವಕ್ಕೆ ಪಾತ್ರವಾಗುವುದು ಹೋಗಲಿ; ಕನಿಷ್ಠ ಸಮಾನ ಗೌರವವಾದರೂ ಪಡೆಯಬೇಕಿತ್ತಲ್ಲವೇ?

ಮಗು ಹೆರುವುದು. ಹಾಲೂಡಿಸುವುದು, ಮಗುವಿನ ಪಾಲನೆ-ಪೋಷಣೆ ಮಾಡುವುದು ಇತ್ಯಾದಿ; ಇವೆಲ್ಲವೂ ಪ್ರಕೃತಿಯೇ ಹೆಣ್ಣಿನ ಹೆಗಲಿಗೆ ಏರಿಸಿದೆ. ಇದೇನು ಮಹಾ? ಮಾಮೂಲಿನ ಜವಾಬ್ದಾರಿಗಳಲ್ಲವೆ? ಇದನ್ನು ಮಹಾನ್‌ಸಾಧನೆ ಎಂದಾಗಲಿ, ಭಾರವೆಂದಾಗಲಿ ಏಕೆ ತಿಳಿದುಕೊಳ್ಳಬೇಕು. ನಮ್ಮ ಪೂರ್ವಿಕರು ಹತ್ಹತ್ತು ಮಕ್ಕಳು ಹೆತ್ತರೂ ತುಟಿ ಬಿಚ್ಚಲಿಲ್ಲ. ಈಗಿನವರು ಮಾತ್ರ ಎಲ್ಲದಕ್ಕೂ ಸ್ತ್ರೀವಾದದ ತುರುಸಿಗೆ ಇಳಿಯುತ್ತಾರೆ ಎಂದು ಮೂಗು ಮುರಿಯುವವರಿಗೇನು ಕೊರತೆ ಇಲ್ಲ. ಇತಿಹಾಸವನ್ನು ಕೆದಕಿದರೆ ಭಯಾನಕ ಚಿತ್ರವೊಂದು ಸುರುಳಿ ಬಿಚ್ಚಿಕೊಳ್ಳದೆ ಇರದು. ಕನಿಷ್ಠ ಆರೈಕೆಯ ಅವಕಾಶವಿಲ್ಲದೆ ಹೆಣ್ಣು ಶಿಶು ಮರಣ, ಬಾಣಂತಿ ಮರಣ, ಸ್ತ್ರೀಹತ್ಯೆ, ಸೇಡಿನ ಹತ್ಯೆ, ಧಾರ್ಮಿಕ ಹತ್ಯೆ ಮರ್ಯಾದೆ ಹತ್ಯೆ ಮುಂತಾಗಿ ಅಕಾಲ ಮೃತ್ಯುವಿಗೆ ತುತ್ತಾದ ಮಹಿಳೆಯರ ಲೆಕ್ಕವನ್ನು ಸಮಾಜ ಪರಿಗಣಿಸಿಯೇ ಇಲ್ಲ. ಆದ್ದರಿಂದಲೇ ನಮ್ಮ ಅಜ್ಜ-ಮುತ್ತಜ್ಜರುಗಳಿಗೆ ಮೂರು-ನಾಲ್ಕು ಮದುವೆಗಳು ಮಾಮೂಲಿಯಾಗಿರುತ್ತಿದ್ದವು. ಕಾರಣ ಗರ್ಭಿಣಿಯರ ಸಾವಿನ ಪ್ರಮಾಣ ಹೆಚ್ಚು ಇರುತ್ತಿತ್ತು. ಬೆಸಲೆಯಾಗಿಯೋ ಆಗದೆಯೋ ಸತ್ತ ಹೆಂಡತಿಯರು ಅಪಾರ. ಹೆಂಡಂದಿರ ಸಾವಿನ ಬೆಂಕಿ ಆರುವುದರಲ್ಲಿಯೇ ಮಗನಿಗೆ ಇನ್ನೊಂದು ಮದುವೆ ಸಿದ್ಧವೇ ಇರುತ್ತಿತ್ತು. ಎರಡನೆಯವಳೂ ಬಸಿರು, ಬಾಣಂತಿತನದಲ್ಲಿ ಅಸು ನೀಗಿದರೆ ಮೂರನೇ ಮದುವೆಗೆ ವರ ಮಹಾಶಯ ಎವರ್‌ರೆಡಿಯಾಗಿಯೆ ಇರುತ್ತಿದ್ದನು. ಆತನ ಮನೆಯವರು ನೆರೆ ಹೊರೆಯವರ ಎದುರು ‘‘ಏನ್‌ಮಾಡಾದ್ರಿ ಯಾಕೋ ನಮ್ಮ ಮಗನಿಗಿ ಹೆಂಡರ ಬಲಾನೇ ಇಲ್ಲ ನೋಡ್ರಿ’’ ಎನ್ನುತ್ತಾ ಇನ್ನೊಂದು ಮದುವೆಯ ಔತಣ ಕೂಟಕ್ಕೆ ಮುಂದಾಗುತ್ತಿದ್ದರೇ ವಿನಾ ಯಾಕಾಗಿ ಸ್ತ್ರೀಯರು ಹೀಗೆ ಅಕಾಲದಲ್ಲಿಯೇ ಮರಣಿಸುತ್ತಿದ್ದಾರೆ. ಇದಕ್ಕೆ ಕಾರಣವೇನಾದರೂ ಇರಬೇಕಲ್ಲ. ಸ್ತ್ರೀಯರಿಗೆ ಸಿಗಬೇಕಾದ ಕಾಳಜಿಯಲ್ಲಿ ತಪ್ಪಾಗುತ್ತಿದೆಯೇ? ಎಂಬಿತ್ಯಾದಿ ವೈಜ್ಞಾನಿಕ ಅಂಶಗಳ ಬಗೆಗೆ ಎಂದೂ ತಲೆ ಕೆಡಿಸಿಕೊಂಡವರಲ್ಲ.

ಅನೇಕ ಬಸುರಿಯರು ಪೌಷ್ಟಿಕ ಆಹಾರ ಸಿಗದೆ ಅಸು ನೀಗಿದ್ದೂ ಇದೆ. ಆರೋಗ್ಯದಲ್ಲಿ ಏರುಪೇರಾದಾಗ ಸೂಕ್ತ ವೈದ್ಯಕೀಯ ಸೇವೆ ಸಕಾಲದಲ್ಲಿ ಲಭಿಸದೆ ಮರಣವನ್ನಪ್ಪಿದವರು ಇದ್ದಾರೆ. ಇವಲ್ಲದೆ ಹಲವು ಕ್ಷುಲ್ಲಕ ಕಾರಣಗಳಿಗಾಗಿ ಗಂಡನ ಮನೆಯವರಿಂದ ಕೊಲೆಯಾದ ಮಹಿಳೆಯರಿಗೂ ಕೊರತೆ ಇಲ್ಲ. ಇವೆಲ್ಲ ಆ ಕಾಲದ ಮಾತಾಯಿತು. ಇಂದು ಪರಿಸ್ಥಿತಿ ಬದಲಾಗಿದೆ. ಈ ರೀತಿ ಅವಜ್ಞೆಗೆ ಒಳಗಾಗಿ ಮಹಿಳೆಯರು ಸಾವನ್ನಪ್ಪುತ್ತಿಲ್ಲ ಎಂದು ವಾದಿಸುವವರು ಇಲ್ಲದಿಲ್ಲ. ಈ ವಾದ ಅರ್ಧ ಸತ್ಯವಾಗಿದೆ. ಬಸುರಿ, ಬಾಣಂತಿಯರ ಸಾವಿನ ಪ್ರಮಾಣ ಕಡಿಮೆ ಇದೆಯಾದರೂ ಇವೆಲ್ಲವುಗಳ ಸೇಡು ಒಂದೇ ಕಲ್ಲಿನಲ್ಲಿ ತೀರಿಸುವಂತೆ ಹೆಣ್ಣು ಭ್ರೂಣ ಹತ್ಯೆ ರೂಪದಲ್ಲಿ ದಾಂಗುಡಿಯಿಟ್ಟಿದೆ. ಕಳೆದ ಹತ್ತಾರು ವರ್ಷಗಳಿಂದಲೂ ಹೆಣ್ಣ ಭ್ರೂಣ ಹತ್ಯೆ ಎಗ್ಗಿಲ್ಲದೆ ನಡೆದು ಲಿಂಗಾನುಪಾತದಲ್ಲಿ ಭಯಾವಹ ಅಂತರ ಕಂಡು ಬಂದಿತು. ಹೆಣ್ಣಮಕ್ಕಳ ಸಂಖ್ಯೆಯಲ್ಲಿ ಅದೂ ಮದುವೆ ವಯಸ್ಸಿಗೆ ಬಂದ ವಧುಗಳ ಸಂಖ್ಯೆಯಲ್ಲಿ ನಿರ್ದಿಷ್ಟ ಜನಸಮುದಾಯಗಳಲ್ಲಿ ಗಣನೀಯ ಇಳಿಕೆ ಕಂಡು ಬಂದು ತಲ್ಲಣವನ್ನುಂಟು ಮಾಡಿತು. ‘‘ಊರು ಸೂರೆ ಹೋದ ನಂತರ ಕೋಟೆ ಬಾಗಿಲು ಭದ್ರ ಪಡಿಸಿದರು’’ ಎಂಬಂತೆ ಹೆಣ್ಣುಭ್ರೂಣ ಹತ್ಯೆ ಕುರಿತು ಇತ್ತೀಚೆಗೆ ಸಮಾಜ ಮತ್ತು ಸರಕಾರ ಎಚ್ಚೆತ್ತುಕೊಂಡು ಒಂದಷ್ಟು ಕಾನೂನು, ಪ್ರಚಾರಾಂದೋಲನ ಮಾಡುತ್ತಿದೆಯಾದರೂ ಕದ್ದು ಮಚ್ಚಿ ನಡೆಯುತ್ತಿರುವ ಸ್ತ್ರೀ ಭ್ರೂಣ ಹತ್ಯೆ ಸಂಪೂರ್ಣ ನಿಲ್ಲಿಸಲು ಇದುವರೆಗೂ ಸಾಧ್ಯವಾಗಿಲ್ಲ.

ಆಧುನಿಕೋತ್ತರ ಕಾಲಘಟ್ಟದಲ್ಲಿ ಮುಂದುವರಿಯುತ್ತಿದ್ದೇವೆ ಎನ್ನುವಾಗಲೂ ಸಾಮಾಜಿಕ ಬದುಕು ಮಾತ್ರ ಹಿಂಚಲನೆಗೆ ಸಂದುತ್ತಿರುವುದು ಸೂರ್ಯ ಸ್ಪಷ್ಟವಾಗುತ್ತಿದೆ. ಒಂದೆಡೆ ಆಧುನಿಕೋತ್ತರ ವಿದ್ಯಮಾನಗಳಾದ ತಂತ್ರಜ್ಞಾನ, ಡಿಜಿಟಲ್, ಎಐ ವರೆಗಿನ ನಾಗಾಲೋಟ ಕಾಲವೆಂಬ ಕಾಲವನ್ನೇ ನಾಚಿಸುವಂತಿವೆ. ಎಐ ಎಂಬ ತಂತ್ರಜ್ಞಾನವು ಮನುಷ್ಯ ಪ್ರಯತ್ನವನ್ನು ಅವರ ಅಸ್ಮಿತೆಯನ್ನೇ ಕೆಣಕುವಂತೆ ಎದ್ದು ನಿಂತಿದೆ. ಮನುಷ್ಯರ ಸೃಜನ ಲೋಕವನ್ನೂ ಅದು ಆಪೋಷನ ತೆಗೆದುಕೊಳ್ಳುತ್ತದೆ ಎನ್ನುವಷ್ಟು ಭಯಾಶ್ಚರ್ಯಗಳನ್ನು ಮೂಡಿಸುತ್ತಿದೆ. ದೀಪಾವಳಿ ಕವಿಗೋಷ್ಠಿಗಾಗಿ ಒಂದು ಹೊಸ ಕವನ ಬರೆದುಕೊಡಲು ಕೇಳಿದರೆ ಎಐ ಎಂಬ ಮಾಯಾವಿ ಜಾಲ ಥಟ್ಟನೆ ಕವನ ಒಂದನ್ನು ಬರೆದುಕೊಟ್ಟು ಕವಿಗಳ ಜಂಘಾಬಲವನ್ನೇ ಉಡುಗಿಸಿ ಬಿಡುತ್ತಿದೆ. ಅದು ಕೃತಕವೋ ಸೃಜನವೋ ಎಂಬುದನ್ನು ನಿರ್ಧರಿಸಬೇಕಾದ ಮಾನದಂಡಗಳನ್ನು ಇನ್ನೂ ರೂಪಿಸಿಕೊಂಡಿಲ್ಲವಷ್ಟೆ. ಆದರೂ ನಾವು ತಂತ್ರಜ್ಞಾನದಲ್ಲಿ ಮುಂದುವರಿದಷ್ಟೇ ಪ್ರಮಾಣದಲ್ಲಿ ವೈಚಾರಿಕತೆ, ವೈಜ್ಞಾನಿಕತೆಗಳಲ್ಲಿ ಮುಂದುವರಿಯುತ್ತಿಲ್ಲ ಎಂಬುದೇ ದುರಂತದ ಸಂಗತಿ.

ಹೆಣ್ಣು ಭ್ರೂಣ ಹತ್ಯೆ, ವಧುಹತ್ಯೆ, ಅತ್ಯಾಚಾರ, ಜಾತೀಯತೆ ಮುಂತಾಗಿ ನಮ್ಮ ತಲೆತಲಾಂತರದ ಸಾಮಾಜಿಕ ಅನಿಷ್ಟಗಳು ಇನ್ನುವರೆಗೂ ನಿಂತಿಲ್ಲ ಮಾತ್ರವಲ್ಲ; ಅವೆಲ್ಲವೂ ಕಾಲ ಕಳೆದಂತೆ ಹೊಸ ರೂಪ ಮತ್ತು ಪರಿಭಾಷೆಯಲ್ಲಿ ಮುನ್ನೆಲೆಗೆ ಬರುತ್ತಿವೆ. ಮಹಿಳೆಯರ ವಿಷಯದಲ್ಲಂತೂ ನಮ್ಮ ಮಡಿವಂತ ಸಮಾಜ ಇನ್ನಷ್ಟು ಕ್ರೂರವಾಗುತ್ತಿದೆ ಪರಂತು ಸೃಜನವಾಗುತ್ತಿಲ್ಲ. ಸಂಸ್ಕೃತಿ ಹೆಸರಿನಲ್ಲಿ ಮತ್ತೆ ಸ್ತ್ರೀಯರ ವೇಷ-ಭೂಷಣ, ಅವರ ಆಚಾರ-ವಿಚಾರಗಳು ಅವಹೇಳನಕ್ಕೆ, ಟೀಕೆಗೆ ಗುರಿಯಾಗುತ್ತಿವೆ. ಕೆಲವು ವರ್ಷಗಳ ಹಿಂದೆ ಕಾಲೇಜಿನ ಕೆಲವು ಉಪನ್ಯಾಸಕಿಯರು ಪರವೂರಿಗೆ ವಿಚಾರ ಸಂಕಿರಣಕ್ಕೆಂದು ಹೋಗಿದ್ದೆವು. ಯಥಾ ಪ್ರಕಾರ ಮುಂಜಾನೆ ಉಪಾಹಾರಕ್ಕೆಂದು ಉತ್ತರ ಕರ್ನಾಟಕದ ಕೆಲವು ಉಪನ್ಯಾಸಕಿಯರು ಮೈ ತುಂಬ ಸೀರೆ ಹೊದ್ದು ಟಿಪಿಕಲ್ ಶೈಲಿಯಲ್ಲಿ ಉಪಾಹಾರ ಸೇವಿಸುತ್ತ ನಿಂತಿದ್ದೆವು. ನಮ್ಮ ಬಳಿಯಲ್ಲಿಯೇ ಪುರುಷ ಪುಂಗವರು ಠಾಕು ಠೀಕಾಗಿ ಸೂಟು, ಬೂಟು, ಜೀನ್ಸ್‌ಗಳನ್ನು ಧರಿಸಿ ನಿಂತಿದ್ದರು. ಅಷ್ಟರಲ್ಲಿ ದೂರದ ಪಂಜಾಬ್‌ನಿಂದ ಕೆಲವು ತರುಣಿ ಉಪನ್ಯಾಸಕಿಯರು ಜೀನ್ಸ್ ಪ್ಯಾಂಟ್ ಮತ್ತು ಟೀಶರ್ಟ್ ಧರಿಸಿ ಪ್ರಯಾಣದಿಂದ ನೇರವಾಗಿ ನಾವಿರುವ ಸ್ಥಳಕ್ಕೆ ಬಂದು ವಸತಿಗಾಗಿ ವಿಚಾರಿಸಿದರು. ಸರಿ. ನಾವು ಅವರಿಗೆ ವಿಳಾಸ ಹೇಳಿ ಫ್ರೆಶ್ ಆಗಿ ಬರುವಂತೆ ಹೇಳಿದೆವು. ಅಷ್ಟರಲ್ಲಿ ನಮ್ಮ ಘನವೆತ್ತ ಪುರುಷ ಉಪನ್ಯಾಸಕರ ಸಾಂಸ್ಕೃತಿಕ ಕಾಳಜಿ ಗರಿಗೆದರಿತ್ತೆಂದು ತೋರುತ್ತದೆ. ಅವರಲೊಬ್ಬ ಆಯಾಚಿತ ವಿದ್ವಾಂಸರು ನಮ್ಮ ಬಳಿ ಬಂದವರೇ ‘‘ನೋಡಿ ಮೇಡಂ ನಮ್ಮ ಭಾರತೀಯ ಸಂಸ್ಕೃತಿ ನಿಜಕ್ಕೂ ಶ್ರೇಷ್ಠ ಅಲ್ಲವೆ?’’ ಎಂದರು. ನಾವು ಹಿಂದು ಮುಂದು ತಿಳಿಯದೆ ‘‘ಹೌದು ಸರ್’’ ಎಂದು ಗೋಣು ಹಾಕಿದೆವು. ನಮ್ಮ ಸಕಾರಾತ್ಮಕ ಸೊಲ್ಲುಗಳಿಂದ ಉತ್ತೇಜಿತರಾದ ಆ ಮಹಾಶಯರು ತಮ್ಮ ಸಂಸ್ಕೃತಿ ಶ್ರೇಷ್ಠತೆಯ ವ್ಯಸನವನ್ನು ಮತ್ತಷ್ಟು ಮೊನಚುಗೊಳಿಸಿ ‘‘ನೋಡಿ ನೀವೀಗ ಎಷ್ಟು ಚಂದ ಸೀರೆ ಧರಿಸಿ ಮೈ ತುಂಬ ಸೆರಗು ಹೊದ್ದು ನಿಂತಿದ್ದೀರಿ. ನಿಮ್ಮನ್ನು ನೋಡಿದರೆ ಸಾಕು ಗೌರವ ತಾನಾಗಿಯೇ ಉಕ್ಕಿ ಬರುತ್ತದೆ. ಆದರೆ ಆ ಪಾಶ್ಚಾತ್ಯ ದಿರುಸುಗಳು ನೋಡಿ ಅದೆಂಥ ಗೌರವ ಬರಲಿಕ್ಕೆ ಸಾಧ್ಯ?’’ ಎಂದು ಹಾಗೇ ಮುಂದುವರಿಯತೊಡಗಿದರು. ಆತನ ಹಾವ ಭಾವಗಳನ್ನು ಹಾಗೂ ಮಾತಿನ ವರಸೆಗಳನ್ನು ಸೂಕ್ಷ್ಮವಾಗಿ ಅವಲೋಕಿಸಿದ ನಾವು ಇವರು ಮುಂದೆಲ್ಲಿ ಹೋಗಬಹುದು ಎಂದು ಗ್ರಹಿಸಿದವರೇ ‘‘ಅಲ್‌ಸರ್ ನಾವೇನೋ ಸೀರೆ ಧರಿಸಿ ಭಾರತೀಯ ಸಂಸ್ಕೃತಿಯನ್ನು ಅನೇಕರಾದರೂ ಕಾಪಾಡಿಕೊಂಡು ಬರುತ್ತಿದ್ದೇವೆ. ನೀವು ಗಂಡಸರು ಏಕೆ ಪಂಚೆ, ಜುಬ್ಬಾ, ರುಮಾಲು, ಲುಂಗಿ ಬಿಟ್ಟು ಪ್ಯಾಂಟ್, ಸೂಟುಗಳಿಗೆ ಮುಗಿ ಬಿದ್ದಿರುವಿರಿ ಸರ್? ಸಂಸ್ಕೃತಿ ನಮಗೆ ಮಾತ್ರ ಗುತ್ತಿಗೆ ಕೊಟ್ಟಿದ್ದೀರಾ?’’ ಎಂದು ದಬಾಯಿಸಲು ತೊಡಗಿದಾಗಲೇ ಆ ಮಹಾಶಯರ ಸಂಸ್ಕೃತಿಯ ಅಮಲು ಇಳಿಯಿತೆಂದು ತೋರುತ್ತದೆ ಅಥವಾ ನಮ್ಮೊಂದಿಗೆ ವಾದ ಮಾಡುವ ಮೆಟಿರಿಯಲ್ ಕೊರತೆ ಕಾಣಿಸಿಕೊಳ್ಳಲು ಅಲ್ಲಿಂದ ಕಾಲು ಕಿತ್ತಿದ್ದರು. ಇಂಥ ಅನೇಕ ಪ್ರಸಂಗಗಳು ಸ್ತ್ರೀಯರ ಬದುಕಿನಲ್ಲಿ ನಿತ್ಯವೂ ಎದುರಾಗುತ್ತವೆ.

ಪರಂಪರೆಯ ಪುನರುತ್ಥಾನದ ನೆಪದಲ್ಲಿ ಸಂಪ್ರದಾಯಗಳನ್ನು, ದೇಸಿಯತೆ ಹೆಸರಲ್ಲಿ ಅಂಧಾನುಕರಣೆಯನ್ನು, ಮೌಲ್ಯಗಳ ನೆಪದಲ್ಲಿ ಕರ್ಮಠತೆಯನ್ನು ವೈಭವೀಕರಿಸಲಾಗುತ್ತಿದೆ. ಸಂತೋಷ-ಸಂಭ್ರಮಗಳ ಉಕ್ಕಿಸಬೇಕಾದ ಹಬ್ಬಗಳು ದ್ವೇಷ-ರೋಷವನ್ನು, ಸಹನೆ-ಸೌಹಾರ್ದವನ್ನು ಮೂಡಿಸಬೇಕಾದ ಸಾಂಸ್ಕೃತಿಕ ಪಲಕುಗಳು ಅಸಹನೆ, ಅಸಹ್ಯವನ್ನು ಹುಟ್ಟಿಸುತ್ತಿರುವುದು ಭಾರತದ ಆತ್ಮವನ್ನು ಘಾಸಿಗೊಳಿಸುತ್ತಿವೆ. ಮೌಢ್ಯ-ಅಂಧಾನುಕರಣೆಗಳನ್ನೇ ನಮ್ಮ ಸಂಸ್ಕೃತಿಯ ಶ್ರೇಷ್ಠತೆಯೆಂದು ಬೊಗಳೆ ಕೊಚ್ಚಿಕೊಳ್ಳುವವರ ಮಧ್ಯೆ ಮಹಿಳೆಯರಂತೂ ಪ್ರತಿಯೊಂದು ವಿಷಯಕ್ಕೂ ಕಾದಾಡಬೇಕಾದ ಅನಿವಾರ್ಯತೆ ನಿರ್ಮಾಣವಾಗುತ್ತಿದೆ. ಪ್ರಗತಿಪರ ಮಹಿಳೆಯರು ಉಗ್ರ ಹಿಂದುತ್ವವಾದಿಗಳನ್ನು ಅವರ ನೀಚತೆಗಾಗಿ ವಿರ್ಮಶಿಸಿದರೆ ಅವರು ಥಟ್ಟನೆ ಮಹಿಳೆಯರು ಹಚ್ಚಿಕೊಳ್ಳುವ ಪ್ರಸಾಧನಗಳಾದ ಕುಂಕುಮ, ಬಳೆ, ಹೂ, ಸೀರೆ, ಆಭರಣಗಳ ಮೇಲೆ ಮುಗಿ ಬೀಳುತ್ತಾರೆ. ಸನಾತನಿಗಳ ಲೆಕ್ಕದಲ್ಲಿ ಕುಂಕುಮ, ಬಳೆ, ಹೂ, ಮಂಗಳ ಸೂತ್ರ, ಕಾಲುಂಗರ ಇವೆಲ್ಲವು ಅವರ ಹಿಂದುತ್ವದ ದೇಣಿಗೆಗಳಂತೆ. ಹೋಮ-ಹವನ, ಜಾತಿ-ಕಂದಾಚಾರಗಳನ್ನು ವಿಮರ್ಶಿಸುವವರು ಈ ಮೇಲಿನ ಎಲ್ಲ ಶೃಂಗಾರ ಸಾಧನಗಳನ್ನು ಬಿಡಬೇಕಂತೆ.

ಮಹಿಳೆಯರು ಸಾಮಾನ್ಯವಾಗಿ ಬಳಸುವ ಕುಂಕುಮ, ಹೂ, ಆಭರಣ, ಕಾಲುಂಗರ, ಮಂಗಳಸೂತ್ರ ಇತ್ಯಾದಿ ಶೃಂಗಾರ ಸಾಧನಗಳು ಅದ್ಯಾವಾಗ ಧಾರ್ಮಿಕ ಸಂಕೇತಗಳಾದವೋ ಗೊತ್ತಿಲ್ಲ. ಇವೆಲ್ಲವನ್ನು ಅವರು ಗುತ್ತಿಗೆ ಹಿಡಿದಂತೆ ಒದರಾಡುತ್ತಾರೆ. ಅದರಂತೆ ಧಾರ್ಮಿಕ ಲಾಂಛನಗಳಾದ ರುದ್ರಾಕ್ಷಿ, ವಿಭೂತಿ, ಕಾವಿ ವಸ್ತ್ರ, ಚೀವರ ಮುಂತಾದವುಗಳನ್ನು ಕೂಡ ಅವರು ತಮ್ಮದೇ ಪೇಟೆಂಟ್ ಎಂಬಂತೆ ಒದರಾಡಲು ಸುರುವಿಟ್ಟುಕೊಳ್ಳುತ್ತಾರೆ. ಅಸಲಿಗೆ ಮಾನವರು ನಡೆದು ಬಂದ ಸುದೀರ್ಘ ದಾರಿಯ ಬಗೆಗೆ ನಿಚ್ಚಳ ಪರಿಜ್ಞಾನವಿಲ್ಲದಿರುವುದೇ ಸಮಸ್ಯೆಯಾಗಿದೆ ಹೊರತು ಅವರ ಒದರಾಟ ಸಮಸ್ಯೆಯಲ್ಲ. ಈ ಮೇಲಿನ ಎಲ್ಲ ವಸ್ತುಗಳು ಆದಿ ಕಾಲದಿಂದಲೂ ಅಂದರೆ ಸಾಂಸ್ಥಿಕ ಧರ್ಮಗಳು ತಲೆ ಎತ್ತದೆ ಇರುವ ಕಾಲದಿಂದಲೂ ಜನರ ನಡುವೆ ಆಲಂಕಾರಿಕ ಮತ್ತು ನಂಬಿಕೆಯ ವಸ್ತುಗಳಾಗಿ ಬಳಕೆಯಲ್ಲಿವೆ.

ಕುಂಕುಮ ಎಂಬ ವಸ್ತುವು ಜೈನ, ಬೌದ್ಧ, ಸಿಖ್ ಸಮುದಾಯದ ಮಹಿಳೆಯರು ಧರಿಸುತ್ತಾರೆ. ಇತ್ತೀಚಿನ ಎಲ್ಲ ಧರ್ಮದಲ್ಲಿನ ಹುಡುಗಿಯರು ಇಷ್ಟವಾದರೆ ಕುಂಕುಮ ಹಚ್ಚಿಕೊಳ್ಳುತ್ತಾರೆ. ಇಲ್ಲವಾದರೆ ಹಾಗೇ ಹೊರಟು ಬಿಡುತ್ತಾರೆ. ಸ್ತ್ರೀಯರ ಪ್ರಸಾಧನಗಳಿಗೆ ಯಾವುದೇ ಧರ್ಮಗಳ ಪೇಟೆಂಟ್‌ಇಲ್ಲ. ಅದು ಅವರವರ ಸ್ವಾತಂತ್ರ್ಯ. ಅದನ್ನು ಪ್ರಶ್ನಿಸುವ ಅಥವಾ ನಿರ್ಬಂಧಿಸುವ ಉಪದ್ಯ್ವಾಪ ಯಾರೂ ಮಾಡಬಾರದು. ಅದರಂತೆ ಕುಂಕುಮ ಧರಿಸುವಿಕೆಗೆ ಲಿಂಗ ವಿವಕ್ಷೆಯೂ ಇಲ್ಲ. ಲಿಂಗಾತೀತವಾಗಿ ಯಾರಾದರೂ ಧರಿಸುತ್ತಿರುವುದು ಇದೆ. ಇನ್ನೂ ಧಾರ್ಮಿಕ ಸಂಕೇತಗಳಾದ ನಾಮಗಳಂತೂ ಭಾರತದಲ್ಲಿ ವೈವಿಧ್ಯಮಯವಾಗಿವೆ. ಲಾಂಛನಗಳು ನಮ್ಮ ಅಸ್ಮಿತೆ ಸಾರುವ ಬದಲು ದ್ವೇಷ ಕಾರುತ್ತಿರುವುದೇ ಹೆಚ್ಚು. ಕರಿ, ಕೆಂಪು, ಬಿಳಿ, ನೀಲಿ, ಹಳದಿ, ಕೇಸರಿ ಎಷ್ಟೊಂದು ಬಣ್ಣದ ನಾಮಗಳು. ಉದ್ದ, ಅಡ್ಡ, ವೃತ್ತ, ಹಲವು ಆಕಾರಗಳು. ಹಣೆಯ ಮೇಲೆ, ಕಿವಿ ಮೇಲೆ, ಮೆಲಕಿನ ಮೇಲೆ, ತಲೆಯ ಮೇಲೆ, ಎದೆ-ಹೊಟ್ಟೆ ಮೇಲೆ ದೇಹದ ನಾನಾ ಭಾಗಗಳಲ್ಲಿ ನಾನಾ ವಿಧದಲ್ಲಿ ಧರಿಸುವ ಲಾಂಛನಗಳ ವೈವಿಧ್ಯವಿದೆಯಲ್ಲ! ಇವೆಲ್ಲವೂ ಬಹುತ್ವದ ಸಂಕೇತಗಳೇ ಹೊರತು ಶ್ರೇಷ್ಠತೆಯ ವ್ಯಸನಗಳಲ್ಲ. ಈ ಎಲ್ಲ ಲಾಂಛನಗಳ ಬಗೆಗೆ ವೈಷಮ್ಯವಂತೂ ಇದ್ದೇ ಇದೆ. ಆದರೆ ಸ್ತ್ರೀಯರ ವಿಷಯಕ್ಕೆ ಬಂದಾಗ ಈ ಸಂಕೇತಗಳು ಅತ್ಯುಗ್ರ ರೂಪ ತಾಳುತ್ತವೆ ಮಾತ್ರವಲ್ಲ; ಅವರ ಮೇಲೆ ಹಲ್ಲೆ ಮಾಡುವ ಮಟ್ಟಕ್ಕೂ ಹೋಗುತ್ತವೆ.

ಇತ್ತೀಚೆಗಂತೂ ಸಂಸ್ಕೃತಿ ಹೆಸರಿನ ಇಂಥ ವಿಕೃತ ದಾಳಿಗಳು ನೈತಿಕ ಪೊಲೀಸ್‌ಗಿರಿಯಾಗಿ ಕ್ರೌರ್ಯದ ಪರಮಾವಧಿಗೆ ತಲುಪಿರುವುದನ್ನು ನಿತ್ಯ ನೋಡುತ್ತಿದ್ದೇವೆ. ಎಲ್ಲ ಧರ್ಮಗಳಲ್ಲಿನ ಧಾರ್ಮಿಕ ಉಗ್ರವಾದ ತನ್ನ ಸಮುದಾಯದ ಮಹಿಳೆಯರನ್ನು ಸಂಸ್ಕೃತಿ ರಕ್ಷಣೆ ಹೆಸರಿನಲ್ಲಿ ಬಲಿ ಪಡೆಯುತ್ತದೆ. ಹೃದಯಹೀನರ ಹೃದಯವೆಂದೇ ಹೇಳಿಕೊಂಡು ಬರುತ್ತಿರುವ ನಿಜವಾದ ಧರ್ಮ ಜಿಜ್ಞಾಸೆಯನ್ನು ಉಗ್ರ ಧಾರ್ಮಿಕತೆಯಿಂದ ಬೇರ್ಪಡಿಸದ ಹೊರತು ಯಾವುದೇ ಧರ್ಮಗಳಿಗೂ ಉಳಿಗಾಲವಿಲ್ಲ ಎಂಬುದನ್ನು ಅರಿವಾಗಿಸಬೇಕಿದೆ. ಸ್ತ್ರೀಯರ ನೈಸರ್ಗಿಕ ವಿದ್ಯಮಾನಗಳು, ಅವರು ಖುಷಿಗಾಗಿಯೋ, ಪರಂಪರೆಯ ಪ್ರೀತಿಗಾಗಿಯೋ ಬಳಸುವ ಪ್ರಸಾಧನಗಳು, ಅವರ ಮಾತು-ಕತೆ ಪ್ರತಿಯೊಂದು ಪುರುಷಪ್ರಧಾನ ಕಟಕಟೆಯಲ್ಲಿ ನಿಲ್ಲಿಸಲ್ಪಡುತ್ತವೆ. ಒಟ್ಟಾರೆ ಸ್ತ್ರೀ ಬದುಕೇ ದಾರುಣವಾದದ್ದರ ಪ್ರತೀಕವಾಗಿ ಈ ಮೇಲಿನಂಥ ಜನಪದ ಹಾಡುಗಳು ಜನ್ಮ ತಾಳುತ್ತವೆ. ಔಪಚಾರಿಕ ಇತಿಹಾಸದಲ್ಲಿ ದಾಖಲಾಗದ ದಾರುಣ ಮುಖಗಳು ಇಂಥ ಹಾಡು-ಹಸೆಗಳಲ್ಲಿ ವ್ಯಕ್ತವಾಗುತ್ತವೆ.

(ಲೇಖಕರು: ಪ್ರಾಧ್ಯಾಪಕರು ಮತ್ತು ಸಾಮಾಜಿಕ ಹೋರಾಟಗಾರರು)

Tags

WomenReligionCulture
share
ಡಾ. ಮೀನಾಕ್ಷಿ ಬಾಳಿ
ಡಾ. ಮೀನಾಕ್ಷಿ ಬಾಳಿ
Next Story
X