ಬೆಳಗಾವಿ | ರಮೇಶ್ ಕತ್ತಿ ವಿರುದ್ಧ ಜಾತಿ ನಿಂದನೆ ಪ್ರಕರಣ ದಾಖಲು

ಬೆಳಗಾವಿ : ವಾಲ್ಮೀಕಿ ಸಮುದಾಯಕ್ಕೆ ಅಶ್ಲೀಲ ಪದ ಬಳಸಿ ಅವಹೇಳನ ಮಾಡಿದ ಆರೋಪವನ್ನು ಎದುರಿಸುತ್ತಿರುವ ಮಾಜಿ ಸಂಸದ ಹಾಗೂ ಬೆಳಗಾವಿ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ನಿರ್ದೇಶಕ ರಮೇಶ್ ಕತ್ತಿ ವಿರುದ್ದ ಜಾತಿ ನಿಂದನೆ ಪ್ರಕರಣ ದಾಖಲಾಗಿದೆ.
ರವಿವಾರ ನಗರದಲ್ಲಿ ನಡೆದ ಡಿಸಿಸಿ ಬ್ಯಾಂಕ್ ನಿರ್ದೇಶಕ ಸ್ಥಾನಗಳ ಮತದಾನ ಸಂದರ್ಭದಲ್ಲಿ ತಮ್ಮ ಬೆಂಬಲಿಗರೊಂದಿಗೆ ಮಾತನಾಡುತ್ತಿದ್ದ ರಮೇಶ್ ಕತ್ತಿ, ಜಾರಕಿಹೊಳಿ ಸಹೋದರರನ್ನು ಟೀಕಿಸುವ ವೇಳೆ ವಾಲ್ಮೀಕಿ ಸಮುದಾಯದ ಬಗ್ಗೆ ಅವಾಚ್ಯ ಪದ ಬಳಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಈ ಘಟನೆಯ ವೀಡಿಯೊ ತುಣುಕುಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಅದನ್ನು ಆಧಾರವಾಗಿ ಸಮಾಜದ ಮುಖಂಡ ರಾಜಶೇಖರ ತಳವಾರ ಕ್ಯಾಂಪ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಆದರೆ, ರಮೇಶ್ ಕತ್ತಿ ತಮ್ಮ ಹೇಳಿಕೆಯನ್ನು ತಿರಸ್ಕರಿಸಿದ್ದಾರೆ. ಅವರು ಸ್ಪಷ್ಟಪಡಿಸಿರುವಂತೆ, “ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಗೆಲುವಿನ ನಂತರ ಅಭಿಮಾನಿಗಳು ಸಂಗೀತ ಹಚ್ಚಿ ಮೆರವಣಿಗೆ ಮಾಡಲು ಒತ್ತಾಯಿಸಿದರು. ಆಗ ನಾನು 'ಬ್ಯಾಡರೋ (ಬೇಡ)' ಎಂದೆ. ನನ್ನ ಹೇಳಿಕೆಯನ್ನು ತಿರುಚಿ, ಜಾತಿ ನಿಂದನೆ ಮಾಡಿದಂತೆ ವೈರಲ್ ಮಾಡಲಾಗಿದೆ. ನಾನು ಯಾರನ್ನೂ ಉದ್ದೇಶಿಸಿ ಮಾತನಾಡಿಲ್ಲ. ಆದರೂ ಯಾರಿಗಾದರೂ ನೋವಾಗಿದ್ದರೆ ವಿಷಾದ ವ್ಯಕ್ತಪಡಿಸುತ್ತೇನೆ' ಎಂದು ತಿಳಿಸಿದ್ದಾರೆ.







