ಸುಳ್ಳೆಗಾಳಿಯಲ್ಲಿ ಕಾಡಾನೆಗಳ ಸಾವು ಪ್ರಕರಣ | ಚುರುಕುಗೊಂಡ ತನಿಖೆ; ರೈತನ ಬಂಧನ, ಮತ್ತೋರ್ವ ನಾಪತ್ತೆ

ಸಾಂದರ್ಭಿಕ ಚಿತ್ರ
ಖಾನಾಪುರ : ತಾಲೂಕಿನ ಸುಳ್ಳೆಗಾಳಿ ಗ್ರಾಮದ ಬಳಿ ರವಿವಾರ ರಾತ್ರಿ ವಿದ್ಯುತ್ ತಗುಲಿ ಮೃತಪಟ್ಟ ಎರಡು ಕಾಡಾನೆಗಳ ಸಾವಿನ ಪ್ರಕರಣ ರಾಜ್ಯ ಸರಕಾರದ ಮಟ್ಟದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ.
ಈ ಕುರಿತು ಅರಣ್ಯ ಸಚಿವ ಈಶ್ವರ ಖಂಡ್ರೆ ಅವರು, ‘‘ಆನೆಗಳ ಸಾವು ಘಟನೆಯನ್ನು ಸರಕಾರ ಅತ್ಯಂತ ಗಂಭೀರವಾಗಿ ಪರಿಗಣಿಸಿದೆ. ಅರಣ್ಯ ಇಲಾಖೆಯ ಅಧಿಕಾರಿಗಳು ಕರ್ತವ್ಯಲೋಪ ಎಸಗಿದ್ದರೆ ಅವರ ಮೇಲೂ ಕ್ರಮ ಕೈಗೊಳ್ಳಲಾಗುವುದು. ಪ್ರಕರಣದ ಸಂಪೂರ್ಣ ತನಿಖೆ ನಡೆಸಿ ಐದು ದಿನಗಳಲ್ಲಿ ವರದಿ ಸಲ್ಲಿಸುವಂತೆ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗೆ ಸೂಚಿಸಲಾಗಿದೆ’’ ಎಂದು ತಿಳಿಸಿದ್ದಾರೆ.
ಅರಣ್ಯ ಇಲಾಖೆಯ ವೇಗದ ಕ್ರಮ: ಆನೆಗಳ ಸಾವಿನ ಹಿನ್ನೆಲೆ, ನಾಗರಗಾಳಿ ವಲಯ ಅರಣ್ಯಾಧಿಕಾರಿಗಳ ಕಯಲ್ಲಿ ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಅರಣ್ಯ ಇಲಾಖೆಯ ತನಿಖೆ ಚುರುಕುಗೊಂಡಿದ್ದು, ಗಣಪತಿ ಸಾತೇರಿ ಗುರವ ಎಂಬ ರೈತನನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ. ಮತ್ತೋರ್ವ ರೈತ ಶಿವಾಜಿ ಗಣಪತಿ ಗುರವ ನಾಪತ್ತೆಯಾಗಿದ್ದು, ಅವರಿಗಾಗಿ ಶೋಧ ಕಾರ್ಯ ಮುಂದುವರಿದಿದೆ.
ಹೆಸ್ಕಾಂ ವಿರುದ್ಧ ನೋಟಿಸ್: ಕೃಷಿ ಜಮೀನಿನಲ್ಲಿದ್ದ ವಿದ್ಯುತ್ ತಂತಿಗಳು ಹರಿದುಬಿದ್ದ ಹಿನ್ನೆಲೆಯಲ್ಲಿ ಹೆಸ್ಕಾಂ ಇಲಾಖೆಗೆ ನೋಟಿಸ್ ನೀಡಲಾಗಿದೆ. ಆದರೆ, ‘‘ಅರಣ್ಯ ಕಾಯ್ದೆಯ ಪ್ರಕಾರ ಸರಕಾರಿ ಅಧಿಕಾರಿಗಳ ವಿರುದ್ಧ ನೇರವಾಗಿ ಪ್ರಕರಣ ದಾಖಲಿಸಲು ಕಾನೂನು ಅವಕಾಶ ಇಲ್ಲ’’ ಎಂದು ಅಧಿಕಾರಿಗಳು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.
ವಿಜಿಲೆನ್ಸ್ ತಂಡದ ಪರಿಶೀಲನೆ: ಬೆಳಗಾವಿಯಿಂದ ಬಂದ ಹೆಸ್ಕಾಂ ವಿಜಿಲೆನ್ಸ್ ತಂಡ ಸೋಮವಾರ ಘಟನಾ ಸ್ಥಳಕ್ಕೆ ಭೇಟಿ ನೀಡಿ ಸಂಪೂರ್ಣ ಪರಿಶೀಲನೆ ನಡೆಸಿತು. ಪ್ರಾಥಮಿಕ ತನಿಖೆಯಲ್ಲಿ, ವಿದ್ಯುತ್ ತಂತಿಗಳು ಆನೆಗಳ ಸಾವು ಬಳಿಕ ಕಿತ್ತು ಎಸೆಯಲ್ಪಟ್ಟಿವೆ ಎಂಬ ಅನುಮಾನ ವ್ಯಕ್ತವಾಗಿದೆ. ಇದು ಹೆಸ್ಕಾಂ ಅಧಿಕಾರಿಗಳನ್ನು ಹೊಣೆಗಾರರನ್ನಾಗಿಸಲು ರೈತರು ತಂತ್ರ ರೂಪಿಸಿದ್ದು ಇರಬಹುದು ಎಂಬ ಶಂಕೆ ವಿಜಿಲೆನ್ಸ್ ತಂಡದಿಂದ ವ್ಯಕ್ತವಾಗಿದೆ.
ಸೋಲಾರ್ ಬೇಲಿಗೆ ಅಕ್ರಮ ವಿದ್ಯುತ್ ಸಂಪರ್ಕ: ಗಣಪತಿ ಸಾತೇರಿ ಗುರವ ಅವರ ಹೊಲದಲ್ಲಿ ಐಬಾಕ್ಸ್ ಸೋಲಾರ್ ತಂತಿಬೇಲಿ ಅಳವಡಿಸಲಾಗಿತ್ತು. ಇತ್ತೀಚಿನ ದಿನಗಳಲ್ಲಿ ಸೂರ್ಯನ ಕಿರಣಗಳ ತೀವ್ರತೆ ಕಡಿಮೆಯಾಗಿದ್ದರಿಂದ ಸೋಲಾರ್ ಬೇಲಿಗೆ ಸಾಕಷ್ಟು ವಿದ್ಯುತ್ ಸಿಗುತ್ತಿರಲಿಲ್ಲ. ಈ ಹಿನ್ನೆಲೆಯಲ್ಲಿ ಹೆಸ್ಕಾಂನ ವಿದ್ಯುತ್ ಲೈನ್ನಿಂದ ವೈರ್ ಮೂಲಕ ನೇರ ಸಂಪರ್ಕ ನೀಡಲಾಗಿದ್ದು, ಅದೇ ಆನೆಗಳ ಸಾವಿಗೆ ಕಾರಣವಾಗಿದೆ ಎಂಬುದು ಹೆಸ್ಕಾಂ ಹಾಗೂ ಅರಣ್ಯ ಇಲಾಖೆಯ ಜಂಟಿ ತನಿಖಾ ತಂಡದ ಪ್ರಾಥಮಿಕ ವರದಿಯಿಂದ ತಿಳಿದುಬಂದಿದೆ.
ಮರಣೋತ್ತರ ಪರೀಕ್ಷೆ ಹಾಗೂ ಅಂತ್ಯಕ್ರಿಯೆ: ನಾಗರಗಾಳಿ ಅರಣ್ಯದಲ್ಲಿ ಪಶುವೈದ್ಯಾಧಿಕಾರಿಗಳಾದ ಡಾ.ಅಯಾಝ್, ಡಾ. ನಾಗರಾಜ ಹುಯಿಲಗೋಳ ಮತ್ತು ಡಾ.ಮಧುಸೂದನ್ ಅವರ ತಂಡ ಸೋಮವಾರ ಎರಡೂ ಆನೆಗಳ ಮರಣೋತ್ತರ ಪರೀಕ್ಷೆ ನಡೆಸಿತು. ನಂತರ ಅರಣ್ಯ ಇಲಾಖೆ ಕಾನೂನಿನಂತೆ ಅಂತ್ಯಕ್ರಿಯೆ ನೆರವೇರಿಸಲಾಯಿತು. ಈ ವೇಳೆ ಸಿಸಿಎಫ್ ಮಂಜುನಾಥ ಚವಾಣ, ಡಿಸಿಎಫ್ ಎನ್.ಇ. ಕ್ರಾಂತಿ, ಅರಣ್ಯ ಅಧಿಕಾರಿಗಳು, ವನ್ಯಜೀವಿ ತಜ್ಞರು, ಪರಿಸರವಾದಿಗಳು, ಸ್ಥಳೀಯ ಅಧಿಕಾರಿಗಳು ಉಪಸ್ಥಿತರಿದ್ದರು.







