‘ಕಬ್ಬಿಗೆ ಬೆಲೆ ನಿಗದಿ’ ಸರಕಾರಕ್ಕೆ ಗಡುವು ನೀಡಿದ ಬೆಳೆಗಾರರು; ‘ಕರ್ನಾಟಕ ಬಂದ್ʼ ಕರೆ ನೀಡುವ ಎಚ್ಚರಿಕೆ

ಬೆಂಗಳೂರು/ಬೆಳಗಾವಿ : ಕಬ್ಬಿಗೆ ಬೆಲೆ ನಿಗದಿಪಡಿಸಬೇಕು ಎಂದು ಆಗ್ರಹಿಸಿ ಬೆಳಗಾವಿ, ಬಾಗಲಕೋಟೆ, ವಿಜಯಪುರ ಸೇರಿದಂತೆ ವಿವಿಧೆಡೆಗಳಲ್ಲಿನ ರೈತರ ಹೋರಾಟ ತೀವ್ರಗೊಂಡಿದೆ. ಕಬ್ಬು ಬೆಳೆಗಾರರ ಸಮಸ್ಯೆಗೆ ಸ್ಪಂದಿಸದಿದ್ದರೆ ‘ಕರ್ನಾಟಕ ಬಂದ್’ ಕರೆ ನೀಡಬೇಕಾಗುತ್ತದೆ ಎಂದು ರೈತ ಮುಖಂಡರು ಎಚ್ಚರಿಕೆ ನೀಡಿದ್ದಾರೆ.
ಪ್ರತಿಟನ್ ಕಬ್ಬಿಗೆ 3500 ರೂ.ಬೆಲೆ ನಿಗದಿಪಡಿಸಬೇಕೆಂದು ಆಗ್ರಹಿಸಿ ವಾರದಿಂದ ರೈತರು ಹೋರಾಟ ನಡೆಯುತ್ತಿದ್ದರೂ, ಸರಕಾರದ ಪ್ರತಿನಿಧಿಗಳು ಸ್ಥಳಕ್ಕೆ ಆಗಮಿಸಿಲ್ಲ. ಹೀಗಾಗಿ ಆಕ್ರೋಶಗೊಂಡಿರುವ ರೈತರು, ಜಿಲ್ಲೆಯ ಹಲವು ಗ್ರಾಮಗಳು ಹಾಗೂ ಪಟ್ಟಣದ ಪ್ರಮುಖ ರಸ್ತೆಗಳನ್ನು ಬಂದ್ ಮಾಡಿದ್ದಾರೆ. ಕೂಡಲೇ ಬೆಲೆ ನಿಗದಿಪಡಿಸಬೇಕು ಎಂದು ಒತ್ತಾಯಿಸಿದ್ದಾರೆ.
ಸಂಧಾನ ವಿಫಲ: ಬೆಳಗಾವಿ ಜಿಲ್ಲೆಯ ಗುರ್ಲಾಪುರ ಕ್ರಾಸ್‍ನಲ್ಲಿ ರೈತರು ನಡೆಸುತ್ತಿರುವ ಹೋರಾಟದ ಸ್ಥಳಕ್ಕೆ ರಾಜ್ಯ ಸರಕಾರದ ಪರವಾಗಿ ಕಾನೂನು ಮತ್ತು ಸಂಸದೀಯ ವ್ಯವಹಾರ ಸಚಿವ ಎಚ್.ಕೆ.ಪಾಟೀಲ್ ಖುದ್ದು ಭೇಟಿ ನೀಡಿ ರೈತ ಮುಖಂಡರು, ‘ಸರಕಾರದೊಂದಿಗೆ ಮಾತುಕತೆಗೆ ನಾಳೆ ಬೆಂಗಳೂರಿಗೆ ಬನ್ನಿ’ ಎಂದು ಆಹ್ವಾನ ನೀಡಿದರು.
ಇದಕ್ಕೆ ಆಕ್ಷೇಪಿಸಿದ ಬೆಳೆಗಾರರು, ‘ನಾವು ಯಾವುದೇ ಕಾರಣಕ್ಕೂ ಬೆಂಗಳೂರಿಗೆ ಬರುವುದಿಲ್ಲ, ನಾಳೆ ಸಂಜೆ ವರೆಗೆ ಗಡುವು ನೀಡುತ್ತೇವೆ. ಅಷ್ಟರೊಳಗೆ ನಮ್ಮ ಬೇಡಿಕೆ ಈಡೇರಿಸಿದರೆ, ಹೋರಾಟ ಹಿಂಪಡೆಯುತ್ತೇವೆ. ಇಲ್ಲವಾದರೆ ಚಳವಳಿ ಮತ್ತಷ್ಟು ತೀವ್ರಗೊಳಿಸುತ್ತೇವೆ’ ಎಂದು ಎಚ್ಚರಿಕೆ ನೀಡಿದರು. ಇದರಿಂದ ರೈತ ಮುಖಂಡರೊಂದಿಗಿನ ಸರಕಾರದ ಸಂಧಾನ ವಿಫಲವಾಗಿದೆ.
‘ಕರ್ನಾಟಕ ಬಂದ್’ ಎಚ್ಚರಿಕೆ: ರೈತರ ಹೋರಾಟಕ್ಕೆ ಪಕ್ಷಾತೀತವಾಗಿ ಬೆಂಬಲ ನೀಡಿದ್ದಾರೆ. ಸರಕಾರದ ಪ್ರತಿನಿಧಿಗಳು ರೈತರ ಬೇಡಿಕೆ ಈಡೇರಿಸಿದರೆ ಮಾತ್ರ ಹೋರಾಟ ಕೈಬಿಡುತ್ತೇವೆ. ಬೇಡಿಕೆ ಈಡೇರದಿದ್ದರೆ, ನ.7ರಂದು ನಾವು ಕರ್ನಾಟಕ ಬಂದ್ ಮಾಡುತ್ತೇವೆ. ಹೆದ್ದಾರಿಗಳು ಸೇರಿದಂತೆ ಪ್ರಮುಖ ರಸ್ತೆಗಳನ್ನು ಬಂದ್ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಮಾತನಾಡಿ, ರೈತರ ಹೋರಾಟಕ್ಕೆ ನ್ಯಾಯ ಸಿಕ್ಕೇ ಸಿಗಲಿದೆ. ಸಚಿವರು ಬಂದು ಕೇಂದ್ರ ಸರಕಾರದ ಮೇಲೆ ಗೂಬೆ ಕೂರಿಸಬಾರದು. ಕಬ್ಬಿನ ತೂಕದಲ್ಲಿ ವಿಚಾರದಲ್ಲಿ ಬೆಳೆಗಾರರಿಗೆ ಮೋಸ ಆಗುತ್ತಿದೆ. ಬಿಸಿಲಿನಲ್ಲಿ ಹೋರಾಟ ಮಾಡುತ್ತಿರುವ ರೈತರ ಸಮಸ್ಯೆಗೆ ಸರಕಾರ ಕೂಡಲೇ ಇತಿಶ್ರೀ ಹಾಡಬೇಕು ಎಂದು ಒತ್ತಾಯಿಸಿದರು.
20 ಕಿಮೀ ದೂರದಲ್ಲಿರುವ ಜಿಲ್ಲಾ ಉಸ್ತುವಾರಿ ಸಚಿವರು, 50 ಕಿಮೀ ದೂರದಲ್ಲಿರುವ ಸಕ್ಕರೆ ಸಚಿವರು ಕಬ್ಬು ಬೆಳೆಗಾರರ ಹೋರಾಟ ನೋಡಿ ತಕ್ಷಣ ಬಂದು ಅಹವಾಲು ಸ್ವೀಕರಿಸಿ, ಸಮಸ್ಯೆಗೆ ಸ್ಪಂದಿಸಬಹುದು ಎಂದು ಕಾತರದಿಂದ ನೋಡುತ್ತಿದ್ದೆ. ರೈತರು ಸುಡು ಬಿಸಿಲನ್ನೂ ಲೆಕ್ಕಿಸದೇ ಹೋರಾಟ ಮಾಡುತ್ತಿದ್ದರೂ ಈ ಸರಕಾರಕ್ಕೆ ಅವರ ಕೂಗು ಕೇಳಿಸಿಲ್ಲ. ಹೀಗಾಗಿ ಈ ಹೋರಾಟದಲ್ಲಿ ಪಾಲ್ಗೊಂಡು ಸರಕಾರದ ಕಿವಿ ಹಿಂಡುವ ಕೆಲಸ ಮಾಡಿದ್ದೇವೆ ಎಂದು ಅವರು ಹೇಳಿದರು.
ನಾನು ಈ ವೇದಿಕೆಗೆ ರಾಜಕಾರಣಿ, ಶಾಸಕನಾಗಿ ಕಾಲಿಟ್ಟಿಲ್ಲ, ನಾಡು ಕಂಡ ಧೀಮಂತ ಹೋರಾಟಗಾರ, ರೈತನಾಯಕ ಯಡಿಯೂರಪ್ಪರ ಮಗನಾಗಿ ಈ ಹೋರಾಟಕ್ಕೆ ಬಂದಿದ್ದೇನೆ. ರೈತ ಚಳವಳಿಯ ಬಿಸಿ ಸರಕಾರಕ್ಕೆ ಮುಟ್ಟಿದೆ. ಬೆಳಗಾವಿ ಜಿಲ್ಲಾಧಿಕಾರಿ, ಸಚಿವರು, ಸಕ್ಕರೆ ಇಲಾಖೆ ಆಯುಕ್ತರ ಜೊತೆ ಚರ್ಚೆ ಮಾಡಿದ್ದೇನೆ. ಕಬ್ಬು ಬೆಳೆಗಾರರ ತಾಳ್ಮೆ ಪರೀಕ್ಷೆ ಮಾಡಬೇಡಿ ಎಂದು ಮನವಿ ಮಾಡಿದ್ದೇನೆ ಎಂದರು.







