1600 ಪಿಎಸ್ಸೈ ಹುದ್ದೆಗಳ ನೇಮಕಾತಿಗೆ ಆರ್ಥಿಕ ಇಲಾಖೆಗೆ ಪ್ರಸ್ತಾವ : ಗೃಹ ಸಚಿವ ಡಾ.ಜಿ.ಪರಮೇಶ್ವರ್

ಬೆಳಗಾವಿ : ಮಾನದಂಡಗಳನ್ನು ಆಧರಿಸಿ ಶಿವಮೊಗ್ಗ ನಗರ ವ್ಯಾಪ್ತಿಯಲ್ಲಿ ‘ಪೊಲೀಸ್ ಕಮಿಷನರೇಟ್’ ಸ್ಥಾಪಿಸುವ ಕುರಿತು ಕ್ರಮ ಕೈಗೊಳ್ಳಲಾಗುವುದು ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಭರವಸೆ ನೀಡಿದ್ದಾರೆ.
ಮಂಗಳವಾರ ವಿಧಾನಸಭೆಯಲ್ಲಿ ಬಿಜೆಪಿ ಸದಸ್ಯ ಚನ್ನಬಸಪ್ಪ(ಚೆನ್ನಿ) ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಜಿಲ್ಲೆಯಲ್ಲಿ ಅಪರಾಧ ಕೃತ್ಯಗಳನ್ನು ತಡೆಗಟ್ಟಲು ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡಲು ವಿಶೇಷ ಕಾರ್ಯಪಡೆಯನ್ನು ನಿಯೋಜಿಸಲಾಗಿದೆ. ಇದರಿಂದ ಜಿಲ್ಲೆಯಲ್ಲಿ ಅಪರಾಧ ಕೃತ್ಯಗಳು ನಿಯಂತ್ರಣಕ್ಕೆ ಬಂದಿವೆ. ಜಿಲ್ಲೆಗೆ ಒಂದು ಪೊಲೀಸ್ ಕಮಿಷನರೇಟ್ ಸ್ಥಾಪಿಸುವುದು ಕಷ್ಟ ಸಾಧ್ಯವಾದರೂ. ಮಾನದಂಡಗಳ ವ್ಯಾಪ್ತಿಗೆ ಬಂದರೆ ಶಿವಮೊಗ್ಗ ಕಮಿಷನರೇಟ್ ಸ್ಥಾಪಿಸಲಾಗುವುದು ಎಂದರು.
ಸಿಬ್ಬಂದಿ ನೇಮಕಕ್ಕೆ ಪ್ರಸ್ತಾವ: ಗೃಹ ಇಲಾಖೆಯಿಂದ 1600 ಪಿಎಸ್ಸೈ ಹುದ್ದೆಗಳ ನೇಮಕಾತಿಗೆ ಅನುಮತಿ ಕೋರಿ ಆರ್ಥಿಕ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಹಿಂದಿನ ಬಿಜೆಪಿ ಸರಕಾರದಲ್ಲಿ 545 ಪಿಎಸ್ಸೈ ಹುದ್ದೆಗಳ ನೇಮಕಾತಿ ವಿಚಾರದಲ್ಲಿ ಗೊಂದಲ ಉಂಟಾಗಿ ನೇಮಕಾತಿ ಪ್ರಕ್ರಿಯೆ ಸ್ಥಗಿತವಾಗಿತ್ತು. ಸದ್ಯ ನಮ್ಮ ಸರಕಾರ 947 ಪಿಎಸ್ಸೈ ಹುದ್ದೆಗಳನ್ನು ಭರ್ತಿ ಮಾಡಿದೆ. ಆಯ್ಕೆಗೊಂಡ ಅಭ್ಯರ್ಥಿಗಳು ತರಬೇತಿ ಪಡೆಯುತ್ತಿದ್ದಾರೆ.
ತರಬೇತಿ ಪೂರ್ಣಗೊಂಡ ನಂತರ ಶಿವಮೊಗ್ಗ ಜಿಲ್ಲೆಯಲ್ಲಿ ಖಾಲಿ ಇರುವ 42 ಪಿಎಸ್ಸೈ ಹುದ್ದೆಗಳ ಪೈಕಿ 32 ಹುದ್ದೆಗಳಿಗೆ ಅಭ್ಯರ್ಥಿಗಳನ್ನು ನೇಮಕ ಮಾಡಲಾಗುವುದು. ಶಿವಮೊಗ್ಗ ಜಿಲ್ಲೆಯಲ್ಲಿ ಒಟ್ಟು 33 ಪೊಲೀಸ್ ಠಾಣೆಗಳಿದ್ದು, 1549 ಹುದ್ದೆಗಳಲ್ಲಿ 1394 ಸಿಬ್ಬಂದಿಗಳು ಕರ್ತವ್ಯ ನಿರ್ವಹಿಸುತ್ತಿದ್ದಾರೆ. 155 ಹುದ್ದೆಗಳು ಖಾಲಿಯಿವೆ. ಪೊಲೀಸ್ ಠಾಣೆಗಳ ದಿನನಿತ್ಯದ ಕರ್ತವ್ಯಕ್ಕೆ ತೊಂದರೆಯಾಗದಂತೆ 103 ಗೃಹ ರಕ್ಷಕ ಸಿಬ್ಬಂದಿ ನೇಮಿಸಿಕೊಂಡು ಕರ್ತವ್ಯ ಭಾರವನ್ನು ಸರಿದೂಗಿಸಲಾಗಿದೆ ಎಂದರು.
ಪೊಲೀಸ್ ಠಾಣೆ ಮೇಲ್ದೆರ್ಜೆಗೆ: ಸಾಗರ ತಾಲೂಕಿನ ಕರೂರು ಹೋಬಳಿ ಪ್ರದೇಶದಲ್ಲಿನ ಶರಾವತಿ ಹಿನ್ನೀರಿನ ಕಾರ್ಗಲ್ ಪೊಲೀಸ್ ಠಾಣೆಯ ಅಧೀನದಲ್ಲಿನ ಬ್ಯಾಕೋಡು ಉಪಠಾಣೆಯನ್ನು ಪೂರ್ಣ ಪ್ರಮಾಣದ ಪೊಲೀಸ್ ಠಾಣೆಯನ್ನಾಗಿ ಮೇಲ್ದರ್ಜೆಗೇರಿಸಲು ಕ್ರಮ ವಹಿಸಲಾಗುವುದು. ಸಿಗಂಧೂರು ಸೇತುವೆ ಆಗಿರುವ ಹಿನ್ನೆಲೆಯಲ್ಲಿ ಈ ಠಾಣೆ ಅಗತ್ಯವಿದೆ ಎಂದು ಅವರು ಆಡಳಿತ ಪಕ್ಷದ ಸದಸ್ಯ ಗೋಪಾಲಕೃಷ್ಣ ಬೇಳೂರು ಅವರ ಪ್ರಶ್ನೆಗೆ ಉತ್ತರ ನೀಡಿದರು.







