ಗಲ್ಫ್ ನಿಂದ ಡೀಸೆಲ್ ಕಳ್ಳ ಸಾಗಣೆ: ಬೆಳಗಾವಿಯಲ್ಲಿ ಬಯಲಾಯಿತು ಭಾರೀ ಜಾಲ

ಬೆಳಗಾವಿ: ಗಲ್ಫ್ ದೇಶಗಳಿಂದ ಡೀಸೆಲ್ ಕಳ್ಳ ಸಾಗಣೆ ಮಾಡಿ ದೇಶದೊಳಗೆ ಅಕ್ರಮವಾಗಿ ಮಾರಾಟ ಮಾಡುತ್ತಿದ್ದ ಜಾಲವೊಂದನ್ನು ಬೆಳಗಾವಿ ಪೊಲೀಸರು ಬಯಲಿಗೆಳೆದಿದ್ದಾರೆ. ಕೇಂದ್ರ ಮತ್ತು ರಾಜ್ಯ ಸರಕಾರಕ್ಕೆ ಕೋಟ್ಯಂತರ ರೂ. ತೆರಿಗೆ ವಂಚನೆ ಮಾಡುತ್ತಿದ್ದ ಖದೀಮರ ವಿರುದ್ಧ ಮಾಳಮಾರುತಿ ಠಾಣೆ ಪೊಲೀಸರು ಮಿಂಚಿನ ಕಾರ್ಯಾಚರಣೆ ನಡೆಸಿದ್ದಾರೆ.
ಮುಂಬೈನಿಂದ ಬೆಳಗಾವಿ ಮಾರ್ಗವಾಗಿ ಬೆಂಗಳೂರಿಗೆ ಅಕ್ರಮವಾಗಿ ಟ್ಯಾಂಕರ್ ಮೂಲಕ ಡೀಸೆಲ್ ಸಾಗಾಟ ಮಾಡುತ್ತಿರುವ ಬಗ್ಗೆ ದೊರೆತ ಖಚಿತ ಮಾಹಿತಿಯನ್ನು ಆಧರಿಸಿ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ.
ದಾಖಲೆಯಿಲ್ಲದೇ ಪೆಟ್ರೋಲಿಯಂ ಉತ್ಪನ್ನ ಸಾಗಿಸುತ್ತಿದ್ದ ಟ್ಯಾಂಕರ್ ಅನ್ನು ಇನ ಸ್ಪೆಕ್ಟರ್ ಬಿ.ಆರ್. ಗಡ್ಡೇಕರ್ ನೇತೃತ್ವದ ತಂಡ ಪತ್ತೆ ಹಚ್ಚಿದೆ. ದಾಳಿಯ ವೇಳೆ 17 ಲಕ್ಷ ರೂ. ಮೌಲ್ಯದ 17 ಸಾವಿರ ಲೀಟರ್ ಡೀಸೆಲ್ ಹಾಗೂ ಟ್ಯಾಂಕ್ ಅನ್ನು ಜಪ್ತಿ ಮಾಡಲಾಗಿದೆ. ಈ ಸಂಬಂಧ ಟ್ಯಾಂಕರ್ ಚಾಲಕ ರಾಜಸ್ಥಾನ ಮೂಲದ ದಿನೇಶ್ ಕುಮಾರ್ ಭಾಗಿರಥ್ ರಾಮಜಿ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ತುಮಕೂರು ಮೂಲದ ಟ್ಯಾಂಕರ್ ಮಾಲಕ ಅರಿಹಂತ್ ಸೇರಿದಂತೆ ಅತಿದೊಡ್ಡ ಜಾಲದ ಸುಳಿವು ಪತ್ತೆಯಾಗಿವೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ತನಿಖೆಯಲ್ಲಿ ಗಲ್ಫ್ ದೇಶಗಳಿಂದ ಖಾಸಗಿ ಶಿಪ್ ಗಳ ಮೂಲಕ ಭಾರತಕ್ಕೆ ತೈಲ ಉತ್ಪನ್ನಗಳನ್ನು ಅಕ್ರಮವಾಗಿ ತರಲಾಗುತ್ತಿದ್ದು, ಬಳಿಕ ಕಾಳಸಂತೆಯಲ್ಲಿ ಅರ್ಧ ದರಕ್ಕೆ ಮಾರಾಟ ಮಾಡುತ್ತಿರುವ ಶಂಕೆ ವ್ಯಕ್ತವಾಗಿದೆ. ಮಹಾರಾಷ್ಟ್ರ ಹಾಗೂ ರಾಜಸ್ಥಾನ ಮೂಲದ ಖದೀಮರು ಈ ಜಾಲದಲ್ಲಿ ಸಕ್ರಿಯರಾಗಿರುವ ಮಾಹಿತಿ ಲಭಿಸಿದೆ.
ಈ ಕುರಿತು ಮಾಧ್ಯಮಕ್ಕೆ ಮಾಹಿತಿ ನೀಡಿರುವ ಬೆಳಗಾವಿ ನಗರ ಪೊಲೀಸ್ ಕಮಿಷನರ್ ಭೂಷಣ ಬೊರಸೆ, "ಅಕ್ರಮವಾಗಿ ಇಂಧನ ತೈಲ ಸಾಗಾಟದ ಬಗ್ಗೆ ಪ್ರಕರಣ ದಾಖಲಿಸಲಾಗಿದ್ದು, ಟ್ಯಾಂಕರ್ ಚಾಲಕ ರಾಜಸ್ಥಾನ ಮೂಲದ ದಿನೇಶ್ ಕುಮಾರ್ ಭಾಗಿರಥ್ ರಾಮಜಿ ಎಂಬಾತನನ್ನು ಬಂಧಿಸಲಾಗಿದೆ. ಈ ಪ್ರಕರಣದಲ್ಲಿ ರಾಜಸ್ಥಾನ ಮೂಲದ ಸುಖದೇವ್ ಬಿಯಾರಾಮ್, ಮಹಾರಾಷ್ಟ್ರ ಮೂಲದ ಇಸ್ತಿಯಾಕ್ ಶೇಖ್, ಕುಂದನ್ ಮಾತ್ರೆ, ಸಮೀರ ಪರಾಂಗೆ, ಪ್ರವೀಣ ಔತಿ ಹಾಗೂ ಟ್ಯಾಂಕರ್ ಮಾಲಕ ತುಮಕೂರು ಮೂಲದ ಅರಿಹಂತ ಎಂಬಾತ ಕೂಡ ಭಾಗಿಯಾಗಿರುವುದು ಪತ್ತೆಯಾಗಿದೆ. ಅವರನ್ನು ವಿಚಾರಣೆ ನಡೆಸಲಾಗುವುದು'' ಎಂದರು.
''ಗಲ್ಫ್ ರಾಷ್ಟ್ರಗಳಿಂದ ಪೆಟ್ರೋಲಿಯಂ ಉತ್ಪನ್ನ ಆಮದು ಸಂದರ್ಭದಲ್ಲಿ ಅಕ್ರಮವಾಗಿ ಹೆಚ್ಚಿನ ಪ್ರಮಾಣದಲ್ಲಿ ತರಿಸಿಕೊಳ್ಳಲಾಗುತ್ತಿದೆ. ಹಾಗೆ ತರಿಸಿದ ಡೀಸೆಲ್ ಅನ್ನು ಕಾಳಸಂತೆಯಲ್ಲಿ ಅರ್ಧ ದರಕ್ಕೆ ಮಾರಾಟ ಮಾಡುತ್ತಿರುವುದು ಬೆಳಕಿಗೆ ಬಂದಿದೆ. ಡೀಸೆಲ್ ಎಲ್ಲೆಲ್ಲಿ ಮಾರಾಟ ಮಾಡುತ್ತಿದ್ದರು ಎಂಬುದು ತನಿಖೆಯಿಂದಲೇ ಗೊತ್ತಾಗಬೇಕಿದೆ" ಎಂದು ಹೇಳಿದ್ದಾರೆ.







