5 ಕೋಟಿ ರೂ. ವೆಚ್ಚದಲ್ಲಿ ಉಡುಪಿ ಲೈಟ್ಹೌಸ್ ಬೀಚ್ ಅಭಿವೃದ್ಧಿ: ಸಚಿವ ಎಚ್.ಕೆ.ಪಾಟೀಲ್

ಎಚ್.ಕೆ.ಪಾಟೀಲ್
ಬೆಳಗಾವಿ (ಸುವರ್ಣ ವಿಧಾನಸೌಧ), ಡಿ.9: ಉಡುಪಿ ಜಿಲ್ಲೆಯ ಲೈಟ್ ಹೌಸ್ ಬೀಚ್ ಅಭಿವೃದ್ಧಿಗೆ 5 ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿಯನ್ನು ಕರ್ನಾಟಕ ಪ್ರವಾಸೋದ್ಯಮ ಮೂಲಸೌಕರ್ಯ ನಿಗಮದಿಂದ ಅನುಷ್ಠಾನಗೊಳಿಸಲಾಗುವುದು ಎಂದು ಪ್ರವಾಸೋದ್ಯಮ ಸಚಿವ ಎಚ್.ಕೆ.ಪಾಟೀಲ್ ಹೇಳಿದ್ದಾರೆ.
ಮಂಗಳವಾರ ವಿಧಾನಸಭೆ ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿ ಸದಸ್ಯ ಗುರ್ಮೆ ಸುರೇಶ್ ಶೆಟ್ಟಿ ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರ ನೀಡಿ ಅವರು ಮಾತನಾಡಿದರು. ಕಾಪು ಕ್ಷೇತ್ರದ ಪಡುಬಿದ್ರಿ ನಡಿಘಟ್ಟ ಬೀಚ್ ರಸ್ತೆಯ ಎಂಡ್ ಪಾಯಿಂಟ್ನಲ್ಲಿ ಸಂಪರ್ಕ ಸೇತುವೆ ಹಾಗೂ ಕೂಡು ರಸ್ತೆ ನಿಮಾರ್ಣ ಕಾಮಗಾರಿಯನ್ನು 75 ಲಕ್ಷ ರೂ. ನಲ್ಲಿ ಪೂರ್ಣಗೊಳಿಸಲಾಗಿದೆ. 2025-26ನೆ ಸಾಲಿಗೆ ಆಯವ್ಯಯದಲ್ಲಿ ಪ್ರವಾಸಿ ತಾಣಗಳ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ 86 ಕೋಟಿ ರೂ.ಗಳನ್ನು ಒದಗಿಸಲಾಗಿದೆ. ಇದರಲ್ಲಿ ಪ್ರವಾಸಿ ತಾಣಗಳ ಆದ್ಯತೆಗೆ ಅನುಗುಣವಾಗಿ ಪರಿಶೀಲಿಸಿ 14 ಕೋಟಿ ರೂ., ವೆಚ್ಚದ ನೂತನ ಕಾಮಗಾರಿಗಳನ್ನು ಕೈಗೊಳ್ಳಲಾಗುವುದು ಎಂದರು.
ಕರ್ನಾಟಕ ಪ್ರವಾಸೋದ್ಯಮ ನೀತಿ 2024-29 ರಲ್ಲಿ ಕಾಪು ತಾಲೂಕಿನ ಕಾಪು ಬೀಚ್, ಲೈಟ್ ಹೌಸ್, ಪಡುಬಿದ್ರೆ ಎಂಡ್ ಪಾಯಿಂಟ್, ಬ್ಲೂ ಫ್ಲಾಗ್ ಬೀಚ್, ಕಾಪು ಮಾರಿಗುಡಿ ದೇವಸ್ಥಾನ, ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನ, ಉಡುಪಿ ಕುಂಜರುಗಿರಿಯ ಶ್ರೀ ದುರ್ಗಾ ದೇವಿ ದೇವಸ್ಥಾನ ಹಾಗೂ ಮುಟ್ಟು ರಾಕ್ ದ್ವೀಪಗಳನ್ನು ಪ್ರವಾಸಿ ತಾಣಗಳಾಗಿ ಅಭಿವೃದ್ಧಿಗೊಳಿಸಲು ಗುರುತಿಸಲಾಗಿದೆ ಎಂದು ಸಚಿವರು ತಿಳಿಸಿದರು.





