ಮತದಾರರ ಹೆಸರು ಡಿಲೀಟ್ಗೆ ಪತ್ರ ಬರೆದಿಲ್ಲ : ಅಭಯ್ ಪಾಟೀಲ್

ಅಭಯ್ ಪಾಟೀಲ್
ಬೆಳಗಾವಿ : ಅಲ್ಪಸಂಖ್ಯಾತ ಮತದಾರರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕಲು ಬಿಜೆಪಿ ನಾಯಕರು ಪ್ರಯತ್ನಿಸುತ್ತಿದ್ದಾರೆ ಎಂಬ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಆರೋಪಕ್ಕೆ ಬೆಳಗಾವಿ ದಕ್ಷಿಣ ಕ್ಷೇತ್ರದ ಶಾಸಕ ಅಭಯ್ ಪಾಟೀಲ್ ತಿರುಗೇಟು ನೀಡಿದ್ದಾರೆ.
ಬೆಳಗಾವಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ಯಾವುದೇ ಮತದಾರರ ಹೆಸರನ್ನು ತೆಗೆದುಹಾಕುವಂತೆ ನಾನು ಪತ್ರ ಬರೆದಿಲ್ಲ. ಬೂತ್ ಮಟ್ಟದ ಅಧಿಕಾರಿಗಳು (ಬಿಎಲ್ಒ) ನೀಡಿರುವ ವರದಿಯನ್ನು ಪರಿಶೀಲಿಸುವಂತೆ ಮಹಾನಗರ ಪಾಲಿಕೆ ಆಯುಕ್ತರಿಗೆ ಪತ್ರ ಬರೆದಿದ್ದೇನೆ” ಎಂದು ಸ್ಪಷ್ಟಪಡಿಸಿದರು.
ಬೋಗಸ್ ಅಥವಾ ಅನರ್ಹ ಮತದಾರರ ಕುರಿತು ಪರಿಶೀಲನೆ ನಡೆಸಿ, ಯಾರಾದರೂ ನಕಲಿ ಮತದಾರರು ಎಂದು ದೃಢಪಟ್ಟರೆ ಚುನಾವಣಾ ನಿಯಮಗಳ ಪ್ರಕಾರ ಕ್ರಮ ಕೈಗೊಳ್ಳಬೇಕು ಎಂಬುದು ತಮ್ಮ ಮನವಿಯ ಉದ್ದೇಶವಾಗಿತ್ತು ಎಂದು ಅವರು ಹೇಳಿದರು.
ಈ ವಿಚಾರವನ್ನು ಕಾಂಗ್ರೆಸ್ ನಾಯಕರು ರಾಜಕೀಯವಾಗಿ ಬಳಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದ ಅಭಯ್ ಪಾಟೀಲ್, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ತಪ್ಪು ಮಾಹಿತಿ ನೀಡಿ ಜನರನ್ನು ದಾರಿ ತಪ್ಪಿಸುತ್ತಿದ್ದಾರೆ ಎಂದು ದೂರಿದರು.
ಬಿಎಲ್ಒಗಳು ಸರ್ಕಾರದ ಅಧೀನದಲ್ಲಿ ಕಾರ್ಯನಿರ್ವಹಿಸುವ ಅಧಿಕಾರಿಗಳಾಗಿದ್ದು, ಅವರಿಂದ ಬಂದಿರುವ ವರದಿಗಳನ್ನು ಪರಿಶೀಲಿಸುವಂತೆ ಮಾತ್ರ ತಾವು ಸೂಚಿಸಿದ್ದಾಗಿ ಅವರು ಹೇಳಿದರು. ಬಿಎಲ್ಎ, ಬಿಎಲ್ಒಗಳ ಕಾರ್ಯವ್ಯಾಪ್ತಿ ಹಾಗೂ ಚುನಾವಣಾ ಆಯೋಗದ ನಿಯಮಗಳ ಕುರಿತು ಮುಖ್ಯಮಂತ್ರಿಗಳಿಗೆ ಸ್ಪಷ್ಟತೆ ಇಲ್ಲ ಎಂದು ಟೀಕಿಸಿದರು.
ಬೆಳಗಾವಿಯಲ್ಲಿ ಅಧಿಕಾರಿಗಳ ವರ್ಗಾವಣೆ ವಿಚಾರವನ್ನೂ ಪ್ರಸ್ತಾಪಿಸಿದ ಅವರು, ಕಾಂಗ್ರೆಸ್ ನಾಯಕರು ತಮ್ಮ ರಾಜಕೀಯ ಅನುಕೂಲಕ್ಕೆ ತಕ್ಕಂತೆ ಅಧಿಕಾರಿಗಳನ್ನು ವರ್ಗಾವಣೆ ಮಾಡಿಕೊಂಡು ಬಂದಿದ್ದಾರೆ ಎಂದು ಆರೋಪಿಸಿದರು. “ಇವರ ಅಧಿಕಾರಿಗಳು, ಇವರ ಬಿಎಲ್ಎ ಮತ್ತು ಬಿಎಲ್ಒಗಳೇ ಇದ್ದರೂ ನಮ್ಮ ಮೇಲೆ ಗೂಬೆ ಕೂರಿಸುವ ಕೆಲಸ ಮಾಡುತ್ತಿದ್ದಾರೆ” ಎಂದು ವಾಗ್ದಾಳಿ ನಡೆಸಿದರು.






