ಮೂಡುಬಿದಿರೆ, ಮುಲ್ಕಿ ಪೊಲೀಸ್ ಠಾಣೆಗಳಿಗೆ ಸಿಬ್ಬಂದಿ ಒದಗಿಸಲು ಕ್ರಮ: ಗೃಹ ಸಚಿವ ಪರಮೇಶ್ವರ್

ಗೃಹ ಸಚಿವ ಡಾ.ಜಿ.ಪರಮೇಶ್ವರ್
ಬೆಳಗಾವಿ, ಡಿ. 9: ದ.ಕ. ಜಿಲ್ಲೆಯ ಮೂಡುಬಿದಿರೆ ಮತ್ತು ಮುಲ್ಕಿ ಪೊಲೀಸ್ ಠಾಣೆಗಳಲ್ಲಿ ಪಿಎಸ್ಸೈ ಮತ್ತು ಪೊಲೀಸ್ ಸಿಬ್ಬಂದಿ ಭರ್ತಿಗೆ ಕ್ರಮ ವಹಿಸಲಾಗುವುದು. ಪ್ರಸಕ್ತ 545 ಪಿಎಸ್ಸೈ ಮತ್ತು 3500 ಪೊಲೀಸ್ ಕಾನ್ಸ್ಟೇಬಲ್ ನೇಮಕಾತಿ ಪ್ರಕ್ರಿಯೆ ಚಾಲ್ತಿಯಲ್ಲಿದ್ದು, ಶೀಘ್ರದಲ್ಲೇ ಎರಡೂ ಠಾಣೆಗಳಿಗೆ ಅಧಿಕಾರಿ-ಸಿಬ್ಬಂದಿ ಒದಗಿಸಲು ಸರಕಾರ ಕ್ರಮ ಕೈಗೊಳ್ಳಲಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಭರವಸೆ ನೀಡಿದ್ದಾರೆ.
ಮಂಗಳವಾರ ವಿಧಾನಸಭೆ ಪ್ರಶ್ನೋತ್ತರ ಅವಧಿಯಲ್ಲಿ ಬಿಜೆಪಿ ಸದಸ್ಯ ಉಮಾನಾಥ್ ಕೋಟ್ಯಾನ್ ಕೇಳಿದ ಪ್ರಶ್ನೆಗೆ ಉತ್ತರ ನೀಡಿದ ಅವರು, ಮೇಲ್ಕಂಡ ಎರಡೂ ಪೊಲೀಸ್ ಠಾಣೆಗಳಿಗೆ ಮಂಜೂರಾದ ಹುದ್ದೆಗಳ ಪೈಕಿ ಕೆಲ ಅಧಿಕಾರಿ ಮತ್ತು ಸಿಬ್ಬಂದಿ ಹುದ್ದೆಗಳು ಖಾಲಿ ಇವೆ. ಕಳೆದ ಐದು ವರ್ಷಗಳಿಂದ ಪಿಸ್ಸೈ ಅಧಿಕಾರಿಗಳ ಹುದ್ದೆ ನೇಮಕ ಸಂಬಂಧ ಇದ್ದ ಗೊಂದಲವನ್ನು ಪರಿಹರಿಸಿದ್ದು, 545 ಪಿಎಸ್ಸೈ ನೇಮಕಾತಿ ಆಗಿದ್ದು ತರಬೇತಿ ಹಂತದಲ್ಲಿದ್ದು ಇನ್ನೂ ಮೂರು ತಿಂಗಳಲ್ಲಿ ಠಾಣೆಗಳಿಗೆ ಸಿಬ್ಬಂದಿ ಒದಗಿಸಲಾಗುವುದು ಎಂದರು.
ಅಪರಾಧ ಪ್ರಮಾಣ ಇಳಿಕೆ: ಕರಾವಳಿ ಜಿಲ್ಲೆಗಳಲ್ಲಿ ವಿಶೇಷ ಕಾರ್ಯಪಡೆ ಸ್ಥಾಪಿಸಿದ್ದು, ಮನೆಗೆ ಮನೆಗೆ ಪೊಲೀಸ್ಎಂಬ ದೇಶದಲ್ಲೇ ಮಾದರಿ ಯೋಜನೆ ರೂಪಿಸಿದ್ದು, ಪ್ರತೀ 50 ಮನೆಗೆ ಒಬ್ಬ ಪೊಲೀಸ್ ಸಿಬ್ಬಂದಿ ನೀಡಲಾಗಿದೆ. ಆ ಸಿಬ್ಬಂದಿ ಆ ವ್ಯಾಪ್ತಿಯಲ್ಲಿನ ಮನೆಗಳ ಮಾಹಿತಿಯನ್ನು ಸಂಗ್ರಹಿಸಿ ಡೆಟಾವನ್ನು ಇಲಾಖೆಗೆ ನೀಡಲಿದ್ದಾರೆ. ಇದರಿಂದ ಅಪರಾಧಗಳ ಪ್ರಯಾಣ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಿದೆ ಎಂದು ಪರಮೇಶ್ವರ್ ತಿಳಿಸಿದರು.
ಮೂಡುಬಿದಿರೆ ಪೊಲೀಸ್ ಠಾಣೆಯಲ್ಲಿ 2023ರಲ್ಲಿ 202 ಪ್ರಕರಣಗಳು ದಾಖಲಾಗಿದ್ದು, 2024ರಲ್ಲಿ 224 ಪ್ರಕರಣಗಳು ದಾಖಲಾಗಿದ್ದವು. ಇದೀಗ 2025ರಲ್ಲಿ 174ಕ್ಕೆ ಪ್ರಕರಣಗಳ ಸಂಖ್ಯೆ ಇಳಿಕೆಯಾಗಿದೆ. ಅದೇ ರೀತಿಯಲ್ಲಿ ಮುಲ್ಕಿ ಪೊಲೀಸ್ ಠಾಣೆಯಲ್ಲಿ 2023ರಲ್ಲಿ 120, 2024ರಲ್ಲಿ 149 ಇದ್ದದ್ದು, ಇದೀಗ 2025ರಲ್ಲಿ 121ಕ್ಕೆ ಇಳಿಕೆಯಾಗಿವೆ. ಅಲ್ಲದೆ, ಮಹಿಳೆಯರ ಸುರಕ್ಷತೆಗಾಗಿ ಅಕ್ಕ ಪಡೆ ಸ್ಥಾಪಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.







