ಬೆಳೆ ಸಮೀಕ್ಷೆ ವ್ಯತ್ಯಾಸವಿದ್ದಲ್ಲಿ ಆಕ್ಷೇಪ ಸಲ್ಲಿಸಿ ಇತ್ಯರ್ಥಪಡಿಸಲು ರೈತರಿಗೆ ಅವಕಾಶ : ಕೃಷಿ ಸಚಿವ ಚಲುವರಾಯಸ್ವಾಮಿ

ಚಲುವರಾಯಸ್ವಾಮಿ
ಬೆಳಗಾವಿ : ಕೃಷಿ ಜಮೀನುಗಳಲ್ಲಿ ಬೆಳೆ ಸಮೀಕ್ಷೆಯನ್ನು ಸ್ವತಃ ರೈತರೇ “ಬೆಳೆ ಸಮೀಕ್ಷೆ ರೈತರ ಆ್ಯಪ್” ನಲ್ಲಿ ಬೆಳೆ ಮಾಹಿತಿ ನಮೂದಿಸಲು ಅವಕಾಶ ಕಲ್ಪಿಸಲಾಗಿದ್ದು, ಯಾವುದೇ ವ್ಯತ್ಯಾಸಗಳು ಕಂಡುಬಂದಲ್ಲಿ ರೈತರು ನಿಗದಿತ ಸಮಯದಲ್ಲಿ ಆಕ್ಷೇಪಣೆ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ಕೃಷಿ ಸಚಿವ ಚಲುವರಾಯಸ್ವಾಮಿ ಹೇಳಿದರು.
ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ವಿಧಾನಸಭೆಯ ಪ್ರಶ್ನೋತ್ತರ ವೇಳೆಯಲ್ಲಿ ತರೀಕೆರೆ ವಿಧಾನಸಭಾ ಕ್ಷೇತ್ರದ ಶಾಸಕ ಜಿ.ಹೆಚ್. ಶ್ರೀನಿವಾಸ್ ಅವರ ಪ್ರಶ್ನೆಗೆ ಸದನದಲ್ಲಿ ಉತ್ತರಿಸಿದರು.
ರಾಜ್ಯದ ಎಲ್ಲ ರೈತರ ತಾಕುಗಳ ಬೆಳೆ ಮಾಹಿತಿ ದಾಖಲಿಸುವ ಸಲುವಾಗಿ ಆದ್ಯತೆ ಮೇರೆಗೆ ಪ್ರಥಮವಾಗಿ ಸ್ವತಃ ರೈತರೇ “ಬೆಳೆ ಸಮೀಕ್ಷೆ ರೈತರ ಆ್ಯಪ್” ನಲ್ಲಿ ಬೆಳೆ ಮಾಹಿತಿ ನಮೂದಿಸಲು ಅವಕಾಶ ಕಲ್ಪಿಸಲಾಗಿದೆ.
ಸಕಾಲದಲ್ಲಿ ರೈತರು ಬೆಳೆ ಸಮೀಕ್ಷೆ ಮಾಡದೇ ಇದ್ದಲ್ಲಿ ಖಾಸಗಿ ನಿವಾಸಿಗಳ ಮೂಲಕ ಬೆಳೆ ಸಮೀಕ್ಷೆ ಕೈಗೊಳ್ಳಲಾಗುತ್ತಿದೆ. ಖಾಸಗಿ ನಿವಾಸಿಗಳ ಬದಲಿಗೆ ಸಂಘ ಸಂಸ್ಥೆಗಳ ಮೂಲಕ ಬೆಳೆ ಸಮೀಕ್ಷೆ ಮಾಡಿಸಲು ಅವಕಾಶ ಕಲ್ಪಿಸಿಲ್ಲ. ಬೆಳೆ ಮಾಹಿತಿ ಕುರಿತಂತೆ ಯಾವುದೇ ವ್ಯತ್ಯಾಸಗಳು ಕಂಡುಬಂದಲ್ಲಿ ರೈತರು ನಿಗದಿತ ಸಮಯದಲ್ಲಿ ಆಕ್ಷೇಪಣೆ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ ಎಂದರು.
ರಾಜ್ಯದಲ್ಲಿ ಪ್ರತಿ ವರ್ಷ ಸುಮಾರು 4.40 ಕೋಟಿ ತಾಕುಗಳ ಬೆಳೆ ಸಮೀಕ್ಷೆ ಕೈಗೊಳ್ಳಲಾಗುತ್ತಿದ್ದು, ಸುಮಾರು 2 ಲಕ್ಷ ಆಕ್ಷೇಪಣೆಗಳೂ ಕೂಡ ಸಲ್ಲಿಕೆಯಾಗುತ್ತಿದೆ. ಇಂತಹ ಪ್ರಕರಣಗಳಲ್ಲಿ ಮರು ಸಮೀಕ್ಷೆ ಮಾಡಿಸಿದ್ದೇವೆ. ಅಧಿಕಾರಿ, ಸಿಬ್ಬಂದಿಗಳು ಎಲ್ಲಿಯೋ ಕುಳಿತು ಬೆಳೆ ಸಮೀಕ್ಷೆ ಮಾಡಲು ಅವಕಾಶ ಇರುವುದಿಲ್ಲ ಎಂದರು.
ದಟ್ಟ ಅರಣ್ಯ ಹಾಗೂ ಅಭಯಾರಣ್ಯ ಪ್ರದೇಶಗಳಲ್ಲಿ ಬೆಳೆ ಸಮೀಕ್ಷೆ ಕೈಗೊಳ್ಳಲಾಗುತ್ತಿಲ್ಲ. ಅಭಯಾರಣ್ಯ ಪ್ರದೇಶಗಳ ಅಂಚಿನ ಗ್ರಾಮಗಳಲ್ಲಿ ಬೆಳೆ ಸಮೀಕ್ಷೆ ಕಾರ್ಯ ಕೈಗೊಳ್ಳಲು ತೊಂದರೆಯಾಗುತ್ತಿರುವ ಕುರಿತಂತೆ ಯಾವುದೇ ದೂರು ಸಲ್ಲಿಕೆಯಾಗಿಲ್ಲ. ರೈತರೇ ಸ್ವತಃ ಬೆಳೆ ಸಮೀಕ್ಷೆಗೆ ಅವಕಾಶ ಕಲ್ಪಿಸಿರುವುದರಿಂದ ಈ ಸಮಸ್ಯೆ ಉದ್ಭವಿಸಿಲ್ಲ ಎಂದು ಸಚಿವರು ಹೇಳಿದರು.
ಮಲೆನಾಡು ಪ್ರದೇಶದ ಕೆಲವೆಡೆ ನೆಟ್ ವರ್ಕ್ ಸಮಸ್ಯೆಯಿಂದಾಗಿ ಮೊಬೈಲ್ ಆ್ಯಪ್ ಮೂಲಕ ಬೆಳೆ ಸಮೀಕ್ಷೆ ಕಷ್ಟಕರವಾಗಿದೆ, ಹೀಗಾಗಿ ಮ್ಯಾನುವಲ್ ಮೂಲಕವೂ ಸಮೀಕ್ಷೆಗೆ ಅವಕಾಶ ಮಾಡಿಕೊಡಿ ಎಂದು ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರ ಸಲಹೆ ನೀಡಿದರು. ಇದೀಗ ಮಲೆನಾಡಿನ ಗ್ರಾಮೀಣ ಪ್ರದೇಶಗಳಲ್ಲಿಯೂ ನೆಟ್ ವರ್ಕ್ ಸುಧಾರಣೆಗೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಸಚಿವ ಚಲುವರಾಯಸ್ವಾಮಿ ಉತ್ತರಿಸಿದರು.







