ಮೂರು ತಿಂಗಳ ಬಾಕಿ ವೇತನ ಪಾವತಿಗೆ ಆಗ್ರಹಿಸಿ ಅಂಗನವಾಡಿ ನೌಕರರ ಧರಣಿ

ಬೆಳಗಾವಿ, ಅ.19: ಮೂರು ತಿಂಗಳಿಂದ ವೇತನ ಪಾವತಿಯಾಗದೆ ಸಂಕಷ್ಟ ಎದುರಿಸುತ್ತಿರುವ ಅಂಗನವಾಡಿ ನೌಕರರಿಗೆ ಕೂಡಲೇ ಬಾಕಿ ವೇತನ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿ, ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘದ ನೇತೃತ್ವದಲ್ಲಿ ನೂರಾರು ನೌಕರರು ಧರಣಿ ನಡೆಸಿದರು. ಬಳಿಕ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ಕಾರ್ಮಿಕ ಮುಖಂಡ ಜಿ.ಎಂ. ಜೈನಖಾನ್, ಮಾಸಿಕ ವೇತನವನ್ನೇ ಅವಲಂಬಿಸಿ ಜೀವನ ನಡೆಸುತ್ತಿರುವ ಅನೇಕ ಅಂಗನವಾಡಿ ನೌಕರರಿಗೆ ಮೂರು ತಿಂಗಳಿಂದ ವೇತನ ದೊರೆತಿಲ್ಲ. ಇದರಿಂದ ಕುಟುಂಬ ನಿರ್ವಹಣೆ ಕಷ್ಟಕರವಾಗಿದೆ. ನೌಕರರ ಸಂಕಷ್ಟವನ್ನು ಸರಕಾರ ಅರ್ಥಮಾಡಿಕೊಳ್ಳಬೇಕು ಎಂದು ಒತ್ತಾಯಿಸಿದರು.
ಸ್ಥಳೀಯ ಅಧಿಕಾರಿಗಳು ಕೂಡಲೇ ಮೇಲಧಿಕಾರಿಗಳಿಗೆ ಪತ್ರ ಬರೆದು, ಅಂಗನವಾಡಿ ನೌಕರರಿಗೆ ಕಾಲಕಾಲಕ್ಕೆ ವೇತನ ಪಾವತಿಯಾಗುವಂತೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಬಾಕಿ ವೇತನವನ್ನು ಕೂಡಲೇ ಪಾವತಿಸದಿದ್ದರೆ ಮುಂದಿನ ದಿನಗಳಲ್ಲಿ ಅಂಗನವಾಡಿ ಕೇಂದ್ರಗಳನ್ನು ಬಂದ್ ಮಾಡಿ, ಸಂಬಂಧಪಟ್ಟ ಕಚೇರಿ ಎದುರು ಹೋರಾಟ ನಡೆಸಲಾಗುವುದು ಎಂದು ಜೈನಖಾನ್ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ಕಟ್ಟಡ ಕಾರ್ಮಿಕರ ಮುಖಂಡ ನಾಗಪ್ಪ ಸಂಗೊಳ್ಳಿ ಮಾತನಾಡಿದರು.
ಧರಣಿನಿರತರಿಂದ ಮನವಿ ಸ್ವೀಕರಿಸಿ ಮಾತನಾಡಿದ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶಂಕರ ಕುಂಬಾರ, ವೇತನ ಪಾವತಿಗೆ ಅಗತ್ಯವಾದ ಅನುದಾನ ಬಿಡುಗಡೆಯಾಗಿದೆ. ಮುಂದಿನ ಎರಡು-ಮೂರು ದಿನಗಳಲ್ಲಿ ನೌಕರರ ಖಾತೆಗಳಿಗೆ ವೇತನ ಜಮೆ ಮಾಡಲಾಗುವುದು ಎಂದು ಭರವಸೆ ನೀಡಿದರು.
ಧರಣಿಯಲ್ಲಿ ಸಂಘದ ತಾಲೂಕು ಅಧ್ಯಕ್ಷೆ ಸರಸ್ವತಿ ಮಾಳಶೆಟ್ಟಿ, ಕಾರ್ಯದರ್ಶಿ ಸಾವಿತ್ರಿ ಹೊಸಮನಿ, ಖಜಾಂಚಿ ವಿಜಯಲಕ್ಷ್ಮೀ ನರಗುಂದ, ತಾಲೂಕು ಮುಖಂಡರಾದ ಬೋರವ್ವ ತೆಕ್ಕಿ, ಶಕೀಲಾ ಮುಜಾವರ, ಯಶೋಧಾ ಹೊಸಕೋಟೆ, ಶಾರದಾ ಲಮಾಣಿ, ಕಲ್ಪನಾ ಮರಡಿಮಠ, ಸುಶೀಲಾ ಲಂಕೇನ್ನವರ ಮತ್ತಿತರರು ಉಪಸ್ಥಿತರಿದ್ದರು.






