ಆರು ಸಾವಿರಕ್ಕೂ ಹೆಚ್ಚು ಪೌರಕಾರ್ಮಿಕರಿಗೆ ಗೃಹಭಾಗ್ಯ: ಬೈರತಿ ಸುರೇಶ್

ಬೆಳಗಾವಿ : ರಾಜ್ಯದ ಪೌರಕಾರ್ಮಿಕರು, ಲೋಡರ್ಸ್, ಯುಜಿಡಿ ಸಹಾಯಕರು, ಕ್ಲೀನರ್ ಗಳು ಸೇರಿದಂತೆ ನಗರ ಪ್ರದೇಶಗಳಲ್ಲಿ ಸಾರ್ವಜನಿಕ ಸೇವೆಯಲ್ಲಿ ತೊಡಗಿರುವ 6 ಸಾವಿರಕ್ಕೂ ಅಧಿಕ ಕಾರ್ಮಿಕರಿಗೆ ಮನೆಗಳನ್ನು ನಿರ್ಮಾಣ ಮಾಡಲಾಗುತ್ತಿದೆ ಎಂದು ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ತಿಳಿಸಿದ್ದಾರೆ.
ಗುರುವಾರ ಇಲ್ಲಿನ ಸುವರ್ಣಸೌಧದಲ್ಲಿ ನಗರಾಭಿವೃದ್ಧಿ ಇಲಾಖೆ, ಪೌರಾಡಳಿತ ನಿರ್ದೇಶನಾಲಯ ಹಾಗೂ ಬೆಳಗಾವಿ ಮಹಾನಗರಪಾಲಿಕೆ ಸಂಯುಕ್ತಾಶ್ರಯದಲ್ಲಿ ಇ-ಖಾತಾ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕ ಭಾಷಣ ಮಾಡಿದ ಅವರು, ಈ ಗೃಹಭಾಗ್ಯ ಯೋಜನೆಗೆ ಒಟ್ಟು 6,119 ಫಲಾನುಭವಿಗಳನ್ನು ಗುರುತಿಸಲಾಗಿದೆ. ರಾಜ್ಯ ಸರಕಾರ ಇದಕ್ಕಾಗಿ 326 ಕೋಟಿ ರೂ.ಗಳ ಅನುದಾನವನ್ನು ಬಿಡುಗಡೆ ಮಾಡಿದ್ದು, ಇದುವರೆಗೆ 4159 ಮನೆಗಳ ನಿರ್ಮಾಣ ಕಾರ್ಯ ಪೂರ್ಣಗೊಂಡಿದೆ. ಬೆಳಗಾವಿಯಲ್ಲಿ 172 ಮತ್ತು ವಿಜಯಪುರದಲ್ಲಿ 133 ಮನೆಗಳಿಗೆ ಅನುಮೋದನೆ ನೀಡಲಾಗಿದೆ ಎಂದು ಮಾಹಿತಿ ನೀಡಿದರು.
ಪೌರಕಾರ್ಮಿಕರ ವಿಶೇಷ ನೇಮಕಾತಿ
ಪೌರಕಾರ್ಮಿಕರ ಹೊರಗುತ್ತಿಗೆ ಪದ್ಧತಿಯನ್ನು 2017ರಲ್ಲಿ ಸ್ಥಗಿತಗೊಳಿಸಿ, ಪೌರಕಾರ್ಮಿಕರನ್ನು ನೇರ ನೇಮಕಾತಿ ಮಾಡಿಕೊಳ್ಳಲು ಆದೇಶಿಸಲಾಗಿದೆ. ಕನಿಷ್ಠ 2 ವರ್ಷ ಸೇವೆ ಸಲ್ಲಿಸಿದವರಿಗೆ ವಿಶೇಷ ನೇಮಕಾತಿಯಡಿ ಅವಕಾಶ ನೀಡಲಾಗುತ್ತಿದೆ. ವಿವಿಧ ಹಂತಗಳಲ್ಲಿ ಸಾವಿರಾರು ಪೌರಕಾರ್ಮಿಕರ ನೇಮಕಕ್ಕೆ ಅನುಮತಿ ನೀಡಲಾಗಿದೆ ಎಂದು ಸಚಿವ ಬೈರತಿ ಸುರೇಶ್ ತಿಳಿಸಿದರು.
ಕಾರ್ಯಕ್ರಮದಲ್ಲಿ ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ 127 ಮತ್ತು ವಿಜಯಪುರದಲ್ಲಿ 66 ಪೌರಕಾರ್ಮಿಕರಿಗೆ ನೇಮಕಾತಿ ಆದೇಶ ಪತ್ರಗಳನ್ನು ನೀಡಿರುವುದು ಸಂತಸದ ವಿಚಾರ. ಇನ್ನೂ ಖಾಲಿಯಿರುವ ಹುದ್ದೆಗಳನ್ನು ಭರ್ತಿ ಮಾಡಲು ಆಯಾ ಜಿಲ್ಲಾಧಿಕಾರಿಗೆ ಸೂಚನೆ ನೀಡಲಾಗಿದೆ ಎಂದು ಅವರು ಹೇಳಿದರು.
ರಾಜ್ಯದ ಮಹಾನಗರಪಾಲಿಕೆ ಮತ್ತು ನಗರ ಸ್ಥಳೀಯ ಸಂಸ್ಥೆಗಳಲ್ಲಿ ಗಣಿಕೀಕೃತ ಖಾತಾ ನೀಡುವ ಉದ್ದೇಶದಿಂದ 2016 ರಿಂದ ಇ-ಆಸ್ತಿ ತಂತ್ರಾಂಶದ ಮೂಲಕ ಇ-ಖಾತಾ ನೀಡುವ ಸೌಲಭ್ಯವನ್ನು ಜಾರಿಗೊಳಿಸಲಾಗಿದೆ. 2019 ರಿಂದ ಮಹಾನಗರಪಾಲಿಕೆಗಳಲ್ಲಿ ಇದನ್ನು ಕಡ್ಡಾಯಗೊಳಿಸಲಾಗಿದೆ. ಇದುವರೆಗೆ ರಾಜ್ಯಾದ್ಯಂತ ಸುಮಾರು 29 ಲಕ್ಷ ಇ-ಖಾತಾಗಳನ್ನು ಸೃಜಿಸಲಾಗಿದೆ. ಇದರಲ್ಲಿ 25,03,385 ಎ-ಖಾತಾ ಮತ್ತು 4,39,889 ಬಿ-ಖಾತಾಗಳು ಸೇರಿವೆ ಎಂದರು.
ಅಧಿಕೃತ ಆಸ್ತಿಗಳ ಜೊತೆಗೆ, ಕಂದಾಯ ಭೂಮಿ ಮತ್ತು ಅನುಮೋದನೆಯಾಗದ ಬಡಾವಣೆಗಳಲ್ಲಿನ ಆಸ್ತಿಗಳಿಗೂ ಇ-ಖಾತಾ ನೀಡಲು ಕಾಯ್ದೆಗೆ ತಿದ್ದುಪಡಿ ತಂದು ಬಿ-ಖಾತಾ ನೀಡಲು ಅವಕಾಶ ಕಲ್ಪಿಸಲಾಗಿದೆ. ದಿನಾಂಕ 10-09-2024ರ ಪೂರ್ವದಲ್ಲಿ ನೋಂದಣಿಯಾದ ಅನಧಿಕೃತ ಸ್ವತ್ತುಗಳಿಗೆ ಇ-ಖಾತಾ ಪಡೆಯಲು ಅವಕಾಶವಿದೆ. ನಾಗರಿಕರು ತಮ್ಮ ಆಸ್ತಿ ವಿವರಗಳನ್ನು ಆನ್ ಲೈನ್ ನಲ್ಲಿ ವೀಕ್ಷಿಸಿ, ವಿವರಗಳು ಸರಿಯಿದ್ದರೆ ನೇರವಾಗಿ ಅಂತಿಮ ಇ-ಖಾತೆಯನ್ನು ಪಡೆಯಬಹುದು. ವ್ಯತ್ಯಾಸಗಳಿದ್ದಲ್ಲಿ ಆನ್ಲೈನ್ ಮೂಲಕವೇ ಮಾಹಿತಿ ಸಲ್ಲಿಸಿ ಸರಿಪಡಿಸಿಕೊಳ್ಳಬಹುದು. ಇದರಿಂದ ಮಧ್ಯವರ್ತಿಗಳ ಹಾವಳಿ ತಪ್ಪಲಿದ್ದು, ಕಚೇರಿಗಳಿಗೆ ಅಲೆಯುವ ಅವಶ್ಯಕತೆ ಇರುವುದಿಲ್ಲ ಎಂದು ಬೈರತಿ ಸುರೇಶ್ ತಿಳಿಸಿದರು







