ಬೆಳಗಾವಿ | ಅಧಿವೇಶನಕ್ಕೆ ಪರ್ಯಾಯವಾಗಿ ಮಹಾಮೇಳಾವ್: ಎಂಇಎಸ್ ಮುಖಂಡರ ಬಂಧನ

ಬೆಳಗಾವಿ : ಚಳಿಗಾಲ ಅಧಿವೇಶನಕ್ಕೆ ವಿರುದ್ಧವಾಗಿ ಮಹಾಮೇಳಾವ್ ಆಚರಿಸಲು ಮುಂದಾದ ಎಂಇಎಸ್ ಮುಖಂಡರಿಗೆ ಬೆಳಗಾವಿ ಪೊಲೀಸರು ಬಿಸಿ ಮುಟ್ಟಿಸಿದ್ದಾರೆ. ಒಬ್ಬೊಬ್ಬರನ್ನೇ ಬಂಧಿಸಿ ಪೊಲೀಸ್ ವಾಹನದಲ್ಲಿ ಕರೆದೊಯ್ದಿದ್ದಾರೆ.
ಅಧಿವೇಶನ ನಡೆಯುವ ಮೊದಲ ದಿನವೇ ಮಹಾಮೇಳಾವ್ ಹೆಸರಿನಲ್ಲಿ ಎಂಇಎಸ್ ಮುಖಂಡರು ಈ ರೀತಿಯ ಚಟುವಟಿಕೆಗಳನ್ನು ನಡೆಸುತ್ತಾ ಬರುತ್ತಿದ್ದಾರೆ. ಇಲ್ಲಿನ ಟಿಳಕವಾಡಿಯ ವ್ಯಾಕ್ಸಿನ್ ಡಿಪೋದಲ್ಲಿ ಸಮಾವೇಶ ನಡೆಸಲು ಇಂದೂ ಕೂಡ ತಯಾರಿ ನಡೆಸಲಾಗಿತ್ತು. ಆದರೆ, ಜಿಲ್ಲಾಡಳಿತ ಅನುಮತಿ ಕೊಟ್ಟಿರಲಿಲ್ಲ. ಅಲ್ಲದೇ ಎಂಇಎಸ್ ಮುಖಂಡರು ಮನೆ ಬಿಟ್ಟು ಹೊರಬಾರದಂತೆ ಪೊಲೀಸರು ಬೆಳಿಗ್ಗೆಯಿಂದಲೇ ಕಟ್ಟೆಚ್ಚರ ವಹಿಸಿದ್ದರು. ಮನೆಯಿಂದ ಹೊರಬರುತ್ತಿದ್ದಂತೆ ಅವರನ್ನು ಪೊಲೀಸರು ವಶಕ್ಕೆ ಪಡೆಯುತ್ತಿದ್ದಾರೆ.
ಈಗಾಗಲೇ ಎಂಇಎಸ್ ಮುಖಂಡರಾದ ಮಾಳೋಜಿರಾವ್ ಅಷ್ಟೇಕರ್, ಶುಭಂ ಶೇಳಕೆ, ರಮಾಕಾಂತ ಕೊಂಡೂಸ್ಕರ್ ಸೇರಿದಂತೆ 20ಕ್ಕೂ ಹೆಚ್ಚು ಜನರನ್ನು ಪೊಲೀಸರು ಬಂಧಿಸಿದ್ದಾರೆ.
'ಜೈ ಮಹಾರಾಷ್ಟ್ರ' ಎಂದು ಸ್ಟೀಕರ್ ಅಂಟಿಸಿ ಉದ್ಧಟತನ :
ಮಹಾಮೇಳಾವ್‌ಗೆ ಅನುಮತಿ ನೀಡದ ಹಿನ್ನೆಲೆಯಲ್ಲಿ ಮಹಾರಾಷ್ಟ್ರದ ಕೊಲ್ಹಾಪುರದಲ್ಲಿ ಕರ್ನಾಟಕದ ಸಾರಿಗೆ ಬಸ್ ತಡೆದು 'ಜೈ ಮಹಾರಾಷ್ಟ್ರ' ಎಂದು ಸ್ಟೀಕರ್ ಅಂಟಿಸಿ ಉದ್ಧಟತನ ಪ್ರದರ್ಶಿಸಿದ್ದಾರೆ.





