Belagavi | ಪ್ರಚೋದನಕಾರಿ ಕೈಸನ್ನೆ, ದ್ವೇಷ ಭಾಷಣ ಆರೋಪ; ಹರ್ಷಿತಾ ಠಾಕೂರ್ ಸೇರಿ 7 ಜನರ ವಿರುದ್ಧ ಪ್ರಕರಣ ದಾಖಲು

ಬೆಳಗಾವಿ : ಇಲ್ಲಿನ ಮಚ್ಚೆ ಗ್ರಾಮದಲ್ಲಿ ಜನವರಿ 18 ರಂದು ನಡೆದ ಅಖಂಡ ಹಿಂದೂ ಸಮ್ಮೇಳನದ ವೇಳೆ ವ್ಯಕ್ತವಾದ ಪ್ರಚೋದನಕಾರಿ ಭಾಷಣ ಹಾಗೂ ವರ್ತನೆ ವಿವಾದಕ್ಕೆ ಕಾರಣವಾಗಿದ್ದು, ಹರ್ಷಿತಾ ಠಾಕೂರ್ ಸೇರಿದಂತೆ ಏಳು ಜನರ ವಿರುದ್ಧ ಮಚ್ಚೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದೂರುದಾರ ಆಬ್ದುಲ್ ಖಾದರ್ ಮುಜಾವರ ಅವರ ದೂರಿನ ಮೇರೆಗೆ ತನಿಖೆ ಆರಂಭವಾಗಿದೆ.
ಆರೋಪಿಗಳಾದ ಹರ್ಷಿತಾ ಠಾಕೂರ್, ಸುಪ್ರಿತ ಸಿಂಪಿ, ಶ್ರೀಕಾಂತ ಕಾಂಬ್ಳೆ, ಬಿಟ್ಟಪ್ಪಾ ತಾರಿಹಾಳ, ಶಿವಾಜಿ ಷಾಪುರಕರ, ಗಂಗಾರಾಮ ತಾರಿಹಾಳ ಹಾಗೂ ಮಲ್ಲಪ್ಪ ಸಮ್ಮೇಳನದ ವೇದಿಕೆಯಲ್ಲಿ ಇನ್ನೊಂದು ಸಮುದಾಯದ ವಿರುದ್ಧ ದ್ವೇಷ ಭರಿತ ಹಾಗೂ ಧಾರ್ಮಿಕ ಭಾವನೆ ಕೆರಳಿಸುವ ಭಾಷಣ ಮಾಡಿದ್ದು, ಅವಾಚ್ಯ ಪದಗಳ ಬಳಕೆ ಮತ್ತು ಪ್ರಚೋದನಕಾರಿ ಕೈಸನ್ನೆಗಳ ಮೂಲಕ ಶಾಂತಿ ಭಂಗಕ್ಕೆ ಯತ್ನಿಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಇದಕ್ಕೂ ಮುನ್ನ ಇದೇ ಗುಂಪು ಪಿರನಾವಾಡಿಯ ಅನ್ಸಾರಿ ದರ್ಗಾದ ಸಮೀಪ ಅನಧಿಕೃತವಾಗಿ ಶೋಭಾಯಾತ್ರೆಯ ಬ್ಯಾನರ್‌ಗಳನ್ನು ಹಾಕಲಾಗಿತ್ತು ಎಂದು ದೂರಿನಲ್ಲಿ ಹೇಳಲಾಗಿದೆ. ಧಾರ್ಮಿಕವಾಗಿ ಸಂವೇದನಾಶೀಲ ಪ್ರದೇಶದಲ್ಲಿ ಅನುಮತಿ ಇಲ್ಲದೆ ಬ್ಯಾನರ್ ಹಾಕಿರುವುದು ಉದ್ವಿಗ್ನತೆ ಹೆಚ್ಚಲು ಪ್ರಮುಖ ಕಾರಣವೆಂದು ಆರೋಪಿಸಲಾಗಿದೆ.
ಈ ಎಲ್ಲಾ ಆರೋಪಗಳ ಆಧಾರದಲ್ಲಿ ಪೊಲೀಸರು ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ (BNSS) ಸೆಕ್ಷನ್ 173 ಸೇರಿದಂತೆ ಸಂಬಂಧಿತ ಕಾನೂನು ವಿಧಿಗಳಡಿ ಪ್ರಕರಣ ದಾಖಲಿಸಿಕೊಂಡು, ವಿಡಿಯೋ ದೃಶ್ಯಗಳು, ಬ್ಯಾನರ್ ಸ್ಥಾಪನೆಯ ದಾಖಲೆಗಳು ಹಾಗೂ ಸಾಕ್ಷ್ಯಗಳನ್ನು ಸಂಗ್ರಹಿಸುತ್ತಿದ್ದಾರೆ. ಮಚ್ಚೆ–ಪಿರನಾವಾಡಿ ಭಾಗದಲ್ಲಿ ಹೆಚ್ಚುವರಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದ್ದು, ಸಾಮಾಜಿಕ ಶಾಂತಿ ಕಾಪಾಡಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ.







