Belagavi | ವೈ.ಮಂಜುನಾಥ ಮನೆ ಮೇಲಿನ ಈ.ಡಿ ದಾಳಿ ಅಂತ್ಯ: ದಾಖಲೆ, ವಸ್ತುಗಳನ್ನು ಬೆಂಗಳೂರಿಗೆ ಕೊಂಡೊಯ್ದ ಅಧಿಕಾರಿಗಳು

ಸಾಂದರ್ಭಿಕ ಚಿತ್ರ | Photo Credit : PTI
ಬೆಳಗಾವಿ : ಅಬಕಾರಿ ಇಲಾಖೆಯ ಸಹಾಯಕ ಆಯುಕ್ತ ಹಾಗೂ ಸಚಿವ ಸತೀಶ್ ಜಾರಕಿಹೊಳಿ ಅವರ ಬಾಮೈದ ವೈ. ಮಂಜುನಾಥ ಅವರ ನಿವಾಸದ ಮೇಲೆ ಜಾರಿ ನಿರ್ದೇಶನಾಲಯ ಅಧಿಕಾರಿಗಳು ನಡೆಸಿದ್ದ ದಾಳಿ ಸುಮಾರು 24 ಗಂಟೆಗಳ ಬಳಿಕ ಮುಕ್ತಾಯಗೊಂಡಿದೆ.
ಬುಧವಾರ ಆರಂಭಗೊಂಡಿದ್ದ ಶೋಧ ಕಾರ್ಯಾಚರಣೆ ಗುರುವಾರ ಬೆಳಿಗ್ಗೆ ಅಂತ್ಯಗೊಂಡಿದ್ದು, ಈ.ಡಿ. ಅಧಿಕಾರಿಗಳ ತಂಡ ಪರಿಶೀಲನೆಯ ವೇಳೆ ಸಂಗ್ರಹಿಸಿದ ದಾಖಲೆಗಳು ಹಾಗೂ ವಶಕ್ಕೆ ಪಡೆದ ವಸ್ತುಗಳೊಂದಿಗೆ ಬೆಂಗಳೂರಿಗೆ ತೆರಳಿದೆ.
ಮೂಲಗಳ ಪ್ರಕಾರ, ಶೋಧ ಕಾರ್ಯಾಚರಣೆಯ ವೇಳೆ ಚಿನ್ನಾಭರಣ, ವಿವಿಧ ದಾಖಲೆ ಪತ್ರಗಳು, ಬೇನಾಮಿ ಹೆಸರಿನ ಆಸ್ತಿಗಳಿಗೆ ಸಂಬಂಧಿಸಿದ ದಾಖಲೆಗಳು ಸೇರಿದಂತೆ ಹಣಕಾಸು ವ್ಯವಹಾರಗಳ ಮಾಹಿತಿಯನ್ನು ಅಧಿಕಾರಿಗಳು ಪರಿಶೀಲಿಸಿ ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ. ಆದರೆ ಈ ಕುರಿತು ಈ.ಡಿ.ಯಿಂದ ಅಧಿಕೃತ ಮಾಹಿತಿ ಪ್ರಕಟವಾಗಿಲ್ಲ.
ಪರಿಶೀಲನಾ ಕಾರ್ಯ ಪೂರ್ಣಗೊಂಡ ನಂತರ ವೈ. ಮಂಜುನಾಥ ಅವರು ತಮ್ಮ ಬೆಳಗಾವಿಯ ನಿವಾಸಕ್ಕೆ ಮರಳಿದ್ದಾರೆ.
ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ, ಮಂಜುನಾಥ ಅವರೊಂದಿಗೆ ಪಾಲುದಾರಿಕೆ ಹೊಂದಿದ್ದಾರೆ ಎನ್ನಲಾದ ಗೋವಾದ ಉದ್ಯಮಿ ಲೋಬೊ ಅವರ ನಿವಾಸದಲ್ಲಿಯೂ ಈ.ಡಿ. ಅಧಿಕಾರಿಗಳು ತಪಾಸಣೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಲೋಬೊ ಸದ್ಯ ತಲೆಮರೆಸಿಕೊಂಡಿದ್ದು, ಅವರ ಪತ್ತೆಗಾಗಿ ಎರಡು ವಿಶೇಷ ತಂಡಗಳನ್ನು ರಚಿಸಿ ಗೋವಾಗೆ ಕಳುಹಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಈ.ಡಿ. ದಾಳಿಯ ಹಿನ್ನೆಲೆ, ವಶಪಡಿಸಿಕೊಂಡ ದಾಖಲೆಗಳ ಸ್ವರೂಪ ಹಾಗೂ ಮುಂದಿನ ತನಿಖೆಯ ಕುರಿತಂತೆ ಹೆಚ್ಚಿನ ವಿವರಗಳು ಅಧಿಕಾರಿಗಳ ಅಧಿಕೃತ ಪ್ರಕಟಣೆಯ ಬಳಿಕವೇ ಸ್ಪಷ್ಟವಾಗುವ ಸಾಧ್ಯತೆಯಿದೆ.






