Belagavi | ಬಿರುಗಾಳಿಗೆ ಧರೆಗುರುಳಿದ ಬೃಹತ್ ಮರ; ನಾಲ್ಕು ಮನೆಗಳಿಗೆ ಹಾನಿ

ಬೆಳಗಾವಿ: ನಗರದಲ್ಲಿ ಕಳೆದ ಮೂರು–ನಾಲ್ಕು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆ ಹಾಗೂ ಬಿರುಗಾಳಿಯ ಆರ್ಭಟಕ್ಕೆ ಖಾಸಭಾಗದ ಉಪ್ಪಾರ ಗಲ್ಲಿಯಲ್ಲಿ ಬೃಹತ್ ಹುಣಸೆಮರವೊಂದು ಬುಡಸಮೇತ ಉರುಳಿ ಬಿದ್ದ ಪರಿಣಾಮ ನಾಲ್ಕು ಮನೆಗಳಿಗೆ ತೀವ್ರ ಹಾನಿಯಾಗಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ಅನಿಲ್ ಮುಟ್ಟೇಕರ್, ಆನಂದ ಭದ್ವಾಂಕರ್, ಏಕನಾಥ ಭದ್ವಾಂಕರ್ ಹಾಗೂ ಪ್ರಶಾಂತ ಗೋರ್ಲೆ ಅವರ ಮನೆಗಳ ಮೇಲೆ ಮರ ಉರುಳಿ ಬಿದ್ದಿದ್ದು, ಮನೆಯಲ್ಲಿದ್ದ ದಿನಸಿ ಸಾಮಗ್ರಿಗಳು, ಬಟ್ಟೆ-ಬರೆ ಹಾಗೂ ಇತರೆ ಅಗತ್ಯ ವಸ್ತುಗಳು ಮರದಡಿ ಸಿಲುಕಿ ಹಾನಿಗೊಳಗಾಗಿವೆ ಎನ್ನಲಾಗಿದೆ.
ಮಾಹಿತಿ ತಿಳಿಯುತ್ತಿದ್ದಂತೆ ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಪೊಲೀಸರು ಸ್ಥಳಕ್ಕೆ ಧಾವಿಸಿ ಮರ ತೆರವು ಕಾರ್ಯಾಚರಣೆ ಕೈಗೊಂಡರು. ಮನೆಗಳ ಮೇಲೆಯೇ ಬೃಹತ್ ಮರ ಬಿದ್ದಿರುವುದರಿಂದ ನಾಲ್ಕು ಕುಟುಂಬಗಳು ಸದ್ಯ ತಾತ್ಕಾಲಿಕ ಆಶ್ರಯಕ್ಕಾಗಿ ಪರದಾಡುವಂತಾಗಿದೆ.
ಮರ ಬೀಳುವ ಮುನ್ಸೂಚನೆ ಮೊದಲೇ ಗೋಚರಿಸಿದ್ದರಿಂದ ಮನೆಯಲ್ಲಿದ್ದವರು ತಕ್ಷಣ ಹೊರಗೆ ಓಡಿ ಬಂದ ಪರಿಣಾಮ ಯಾವುದೇ ಜೀವಹಾನಿ ಸಂಭವಿಸಿಲ್ಲ. ಆದರೆ ಮನೆಗಳಿಗೆ ತೀವ್ರ ಹಾನಿಯಾಗಿದೆ. ಸರಕಾರ ಹಾಗೂ ಜಿಲ್ಲಾಡಳಿತ ಸೂಕ್ತ ಪರಿಹಾರ ನೀಡಿ ಮನೆ ನಿರ್ಮಿಸಿಕೊಡಬೇಕು ಎಂದು ಸಂತ್ರಸ್ತರು ಮನವಿ ಮಾಡಿದ್ದಾರೆ.
ನಗರದಲ್ಲಿ ಶನಿವಾರದಿಂದಲೂ ಸುರಿಯುತ್ತಿರುವ ಮಳೆ ಮತ್ತು ಬಿರುಗಾಳಿಯಿಂದ ಪಿಡಬ್ಲ್ಯುಡಿ ಕ್ವಾಟರ್ಸ್, ವಡಗಾವಿ, ಕೋರ್ಟ್ ಸಮೀಪ, ಹನುಮಾನ್ ನಗರ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ 20ಕ್ಕೂ ಹೆಚ್ಚು ಮರಗಳು ಉರುಳಿ ಬಿದ್ದಿವೆ. ಮಹಾನಗರ ಪಾಲಿಕೆ ಸಿಬ್ಬಂದಿ ಹಾಗೂ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಮರಗಳನ್ನು ತೆರವುಗೊಳಿಸಿ ವಾಹನ ಸಂಚಾರ ಸುಗಮಗೊಳಿಸಿದ್ದಾರೆ. ರವಿವಾರ ಮಳೆಯ ಪ್ರಮಾಣ ಕಡಿಮೆಯಾಗಿದ್ದರೂ ಬಿರುಗಾಳಿ ಮುಂದುವರಿದಿದ್ದು, ಸಾರ್ವಜನಿಕರಲ್ಲಿ ಆತಂಕ ಮನೆ ಮಾಡಿದೆ.






