Belagavi | ಅಕ್ಕೋಳ–ಸಿದ್ನಾಳ ಸೇತುವೆ ಜಲಾವೃತ; ನಿಪ್ಪಾಣಿ ತಾಲ್ಲೂಕಿನಲ್ಲಿ ಪ್ರವಾಹದ ಆತಂಕ ಹೆಚ್ಚಳ

ಬೆಳಗಾವಿ : ಮಹಾರಾಷ್ಟ್ರದ ಪಶ್ಚಿಮ ಘಟ್ಟ ಪ್ರದೇಶದಲ್ಲಿ ಕಳೆದ ನಾಲ್ಕೈದು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಭಾರೀ ಮಳೆಯ ಪರಿಣಾಮವಾಗಿ ನಿಪ್ಪಾಣಿ ತಾಲ್ಲೂಕಿನ ವೇದಗಂಗಾ ಹಾಗೂ ದೂಧಗಂಗಾ ನದಿಗಳ ನೀರಿನ ಮಟ್ಟ ಗಣನೀಯವಾಗಿ ಏರಿಕೆಯಾಗಿದೆ. ಇದರ ಪರಿಣಾಮವಾಗಿ ಅಕ್ಕೋಳ–ಸಿದ್ನಾಳ ಹಾಗೂ ಮಮದಾಪೂರ–ಹುನ್ನರಗಿ ಕಿರು ಸೇತುವೆಗಳು ಸೋಮವಾರ ಜಲಾವೃತಗೊಂಡಿದ್ದು, ಈ ಮಾರ್ಗಗಳಲ್ಲಿ ವಾಹನ ಸಂಚಾರವನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿದೆ.
ರವಿವಾರವೇ ಬಾರವಾಡ, ಕಾರದಗಾ ಹಾಗೂ ಖಡ್ಕೋಳ ಗ್ರಾಮದ ಸೇತುವೆಗಳು ನೀರಿನಲ್ಲಿ ಮುಳುಗಿದ್ದರಿಂದ ಆ ಮಾರ್ಗಗಳಲ್ಲೂ ಸಂಚಾರ ಬಂದ್ ಮಾಡಲಾಗಿದ್ದು, ವಾಹನಗಳನ್ನು ಪರ್ಯಾಯ ಮಾರ್ಗಗಳ ಮೂಲಕ ಸಂಚರಿಸಲು ವ್ಯವಸ್ಥೆ ಕಲ್ಪಿಸಲಾಗಿದೆ.
ನಿರಂತರ ಮಳೆಯಿಂದಾಗಿ ವೇದಗಂಗಾ ಮತ್ತು ದೂಧಗಂಗಾ ನದಿಗಳಲ್ಲಿ ನೀರಿನ ಹರಿವು ಹೆಚ್ಚುತ್ತಿದ್ದು, ನದಿಪಾತ್ರಗಳಿಗೆ ಭಾರೀ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ. ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ತಾಲ್ಲೂಕು ಆಡಳಿತವು ಗ್ರಾಮ ಪಂಚಾಯಿತಿಗಳಿಗೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಿದೆ.
ಭಾರೀ ಮಳೆಯ ಪರಿಣಾಮ ಹೊಳೆ, ಚರಂಡಿ ಹಾಗೂ ಬಾವಿಗಳ ನೀರಿನ ಮಟ್ಟವೂ ಏರಿಕೆಯಾಗಿದ್ದು, ಹಲವೆಡೆ ಕೃಷಿ ಪಂಪ್‌ಸೆಟ್‌ಗಳ ವಿದ್ಯುತ್ ಮೋಟಾರ್‌ಗಳು ನೀರಿನಲ್ಲಿ ಮುಳುಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದರಿಂದ ರೈತರು ಮೋಟಾರ್‌ಗಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ.
ಕಳೆದ ಕೆಲವು ದಿನಗಳಿಂದ ಬಿತ್ತನೆ ಪೂರ್ವ ಕೃಷಿ ಚಟುವಟಿಕೆಗಳು ನಡೆಯುತ್ತಿದ್ದರೂ, ನಿರಂತರ ಮಳೆಯಿಂದ ಹೊಲ-ಗದ್ದೆಗಳಲ್ಲಿ ನೀರು ನಿಂತಿರುವ ಕಾರಣ ಕೃಷಿ ಕಾರ್ಯ ಸಂಪೂರ್ಣ ಸ್ಥಗಿತಗೊಂಡಿದೆ.






